ನವ ದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಆಗಲಿದೆ. ಸೀಟು ಹಂಚಿಕೆ ಸೂತ್ರವೂ ಸಿದ್ಧವಾಗಿದೆ. ಜೆಡಿಎಸ್‌ಗೆ 4 ಸೀಟು ಬಿಟ್ಟುಕೊಟ್ಟು ಉಳಿದ 24 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಎಂಬ ಸ್ಫೋಟಕ ಸುದ್ದಿ ಹೇಳಿದ್ದ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಈಗ ಉಲ್ಟಾ ಹೊಡೆದಿದ್ದಾರೆ. ಮೈತ್ರಿ ವಿಚಾರವಾಗಿ ಈ ಹಿಂದೆ ನಾನು ಮಾಹಿತಿ ಇಲ್ಲದೆ ಮಾತನಾಡಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ಗೊಂದಲವನ್ನು ಹುಟ್ಟುಹಾಕಿದೆ.
ಈ ಬಗ್ಗೆ ನವ ದೆಹಲಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಈ ಹಿಂದೆ ನನಗೆ ಮಾಹಿತಿ ಇಲ್ಲದೆ ಹೇಳಿದ್ದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರನ್ನು ಭೇಟಿ ಮಾಡಿದ್ದ ಆಧಾರದ ಮೇಲೆ ನಾನು ಆ ಹೇಳಿಕೆಯನ್ನು ನೀಡಿದ್ದೆ ಎಂದು ಈಗ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Ganesha Chaturthi 2023 : ಗಣೇಶ ಚತುರ್ಥಿ ಸೆ.18ಕ್ಕೋ 19ಕ್ಕೋ?; ವಿದ್ವಾಂಸರು ಹೇಳೋದೇನು?
ಸೀಟ್ ಹಂಚಿಕೆ ಬಗ್ಗೆ ಸಂದೇಶ ನೀಡಿದ್ದ ಎಚ್.ಡಿ. ದೇವೇಗೌಡ
ಈ ಮೂಲಕ ಇನ್ನೂ ಮೈತ್ರಿ ವಿಚಾರವಾಗಿ ಸೀಟು ಹಂಚಿಕೆಯ ಬಗ್ಗೆ ಯಾವುದೇ ರೀತಿಯ ಬೆಳವಣಿಗೆ ನಡೆದಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ಈ ರೀತಿಯಾಗಿ ಹೇಳಿಕೆ ನೀಡಲು ಏನು ಕಾರಣ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಏಕೆಂದರೆ, ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್‌ವೈ ಹೇಳಿಕೆ ನೀಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿತ್ತು. ಅಲ್ಲದೆ, ಎಚ್.ಡಿ. ದೇವೇಗೌಡ ಅವರು ಸಹ ಪಕ್ಷದ ಸಮಾವೇಶದಲ್ಲಿ ಮೈತ್ರಿ ಮಾತುಕತೆಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಆದರೆ, ಸೀಟು ಹಂಚಿಕೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ ಎಂದು ಹೇಳಿದ್ದರು. ಅದನ್ನು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಸಹ ಹೇಳಿದ್ದರು.
ಇದರ ಜತೆಗೆ ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಗಟ್ಟಿಯಾಗಿರುವುದಲ್ಲ. ಉತ್ತರ ಕರ್ನಾಟಕ ಭಾಗದಲ್ಲಿಯೂ ಜೆಡಿಎಸ್ ಮತದಾರರು ಇದ್ದಾರೆ. ಅಲ್ಲಿ ಸಹ ಜೆಡಿಎಸ್ ಬೆಂಬಲ ಇಲ್ಲದೆ ಬಿಜೆಪಿ ಗೆಲ್ಲಲಾರದು. ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮತದಾರರು, ಕಾರ್ಯಕರ್ತರು ಇಲ್ಲವೇ? ಅಲ್ಲಿ ಬಿಜೆಪಿ ಪ್ರಭಾವ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದರು. ಈ ನಿಟ್ಟಿನಲ್ಲಿ ಕೇವಲ ನಾಲ್ಕು ಸೀಟಿಗೆ ತಾವು ಒಪ್ಪಿಕೊಳ್ಳುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನು ಸಹ ಅವರು ರವಾನೆ ಮಾಡಿದ್ದರು. ಆದರೆ, ಈಗ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಸ್ವಲ್ಪ ಗೊಂದಲ ಹುಟ್ಟಿಸಿದೆ.
ಹೇಳಿಕೆ ಬದಲಾವಣೆ ಏಕೆ ಎಂಬುದು ನಿಗೂಢ
ನವ ದೆಹಲಿಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಮೋದಿ, ಅಮಿತ್ ಶಾ ಅವರನ್ನು ಎಚ್.ಡಿ. ದೇವೆಗೌಡರು ಭೇಟಿ ಮಾಡಿದ್ದರ ಆಧಾರದ ಮೇಲೆ ತಾವೇ ಊಹಿಸಿ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ. ಈ ರೀತಿಯಾಗಿ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿರುವುದು ಯಾವ ಕಾರಣಕ್ಕೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ (ಸಿಇಸಿ) ಹಿನ್ನೆಲೆಯಲ್ಲಿ ನಾನು ದೆಹಲಿಗೆ ಬಂದಿದ್ದೇನೆ. ಚುನಾವಣೆಯ ವಿಚಾರವಾಗಿ ಚರ್ಚೆ ನಡೆಸಲಾಗುತ್ತದೆ. ಇದೇ ವೇಳೆ ಹೈಕಮಾಂಡ್ ನಾಯಕರು ಸಭೆಯಲ್ಲಿಯೇ ಸಿಗುತ್ತಾರೆ. ಅಲ್ಲಿಯೇ ಅವರ ಜತೆ ಮಾತುಕತೆ ನಡೆಸುತ್ತೇನೆ. ಇಂದಿನ ಸಭೆಯಲ್ಲಿ ನಾನಾಗಿಯೇ ಜೆಡಿಎಸ್- ಬಿಜೆಪಿ ಮೈತ್ರಿಯ ಬಗ್ಗೆ ಚರ್ಚೆ ಮಾಡೋದಿಲ್ಲ. ಅವರಾಗಿಯೇ ಕೇಳಿದರೆ ನನ್ನ ಅಭಿಪ್ರಾಯ ತಿಳಿಸುವೆ. ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡುವೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಸಭೆಯಲ್ಲಿ ಅವಕಾಶ ಸಿಕ್ಕರೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾವೇರಿ ಬಗ್ಗೆ ರಾಜ್ಯ ಕ್ರಮ ಕೈಗೊಳ್ಳಬೇಕು
ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ನನ್ನ ವಿರೋಧ ಇದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರಧಾನಿಗೆ ಪತ್ರ ಬರೆದರೆ ಏನಾಗುತ್ತದೆ? ಸರ್ವಪಕ್ಷ ನಿಯೋಗವನ್ನು ಕೇಂದ್ರ ಸರ್ಕಾರಕ್ಕೆ ತಂದು ಏನು ಮಾಡ್ತಾರೆ? ಎಂದು ಬಿ.ಎಸ್. ಯಡಿಯೂರಪ್ಪ ಪ್ರಶ್ನೆ ಮಾಡಿದರು.