ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ದೇಶಾದ್ಯಂತ ಬೀಫ್ ಸೇವನೆ ಹಕ್ಕನ್ನು ನೀಡುವುದೇ ಅದರ ಪ್ರಮುಖ ಗುರಿಯಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ (Yogi Adityanath) ಆರೋಪಿಸಿದ್ದಾರೆ. ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ(Congress Manifesto)ಗೆ ಬಗ್ಗೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಅವ್ರು, ಬೀಫ್ ಸೇವನೆಗೆ(Beef consumption) ಪ್ರೋತ್ಸಾಹ ಕೊಡುವುದೇ ಇಂಡಿಯಾ ಒಕ್ಕೂಟದ(INDIA) ಪ್ರಮುಖ ಉದ್ದೇಶ. ಗೋವನ್ನು ತಾಯಿ ಎಂಬಂತೆ ಪೂಜಿಸುವ ಹಿಂದೂಗಳು ಬೀಫ್ ಸೇವನೆಯನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಮುಸ್ಲಿಮರಿಗೆ ವಿನಾಯಿತಿಯನ್ನು ಕೊಡುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಶುಕ್ರವಾರ ನಡೆದ ಚುನಾವಣಾ ಪ್ರಚಾರದಲ್ಲೂ ಕಾಂಗ್ರೆಸ್ ವಿರುದ್ಧ ಗುಡುಗಿದ್ದ ಯೋಗಿ, ಅಲ್ಪಸಂಖ್ಯಾತರಿಗೆ ಬೀಫ್ ಸೇವನೆಯ ಹಕ್ಕನ್ನು ನೀಡಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಗಮನಾರ್ಹ ವಿಚಾರ ಅಂದರೆ, ಉತ್ತರಪ್ರದೇಶದಲ್ಲಿ ಈಗಾಗಲೇ ಗೋಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಗೋವುಗಳ ಮೇಲೆ ಹಿಂಸಾಕೃತ್ಯಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹ 3 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.
ಯೋಗಿ ಆದಿತ್ಯನಾಥ್ ಅವರು, ದೇಶದ ಮೇಲೆ ಶರಿಯಾ ಕಾನೂನನ್ನು ಹೇರಲು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ್ದರು. “ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ. ಮತ್ತೊಮ್ಮೆ ತಮ್ಮ ಸುಳ್ಳು ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ನೋಡಿದರೆ, ಅವರು ಸರ್ಕಾರ ರಚಿಸಿದರೆ ಶರಿಯಾ ಕಾನೂನನ್ನು ಜಾರಿಗೆ ತರಲು ಉದ್ದೇಶಿಸಿರುವುದು ಗೊತ್ತಾಗುತ್ತದೆ” ಎಂದು ಯೋಗಿ ಆರೋಪಿಸಿದ್ದರು.
ಉತ್ತರ ಪ್ರದೇಶ ಸರ್ಕಾರವು 2020 ರಲ್ಲಿ ಗೋಹತ್ಯೆ ಕುರಿತು ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮೂಲಕ ಕಾನೂನನ್ನು ರೂಪಿಸಿತು. ಗೋಹತ್ಯೆ ತಡೆ (ತಿದ್ದುಪಡಿ) ಕಾಯಿದೆ 2020 ರ ಮೂಲಕ, ಗೋ ಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತಹ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಯಿತು. ಈ ಹೊಸ ಕಾನೂನಿನ ಪ್ರಕಾರ ಹಸುಗಳ ಕಳ್ಳಸಾಗಣಿಕೆ ಪ್ರಕರಣಗಳಲ್ಲಿ ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಬಹುದು ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದು.
ಇದನ್ನೂ ಓದಿ: Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ
ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ಕಳ್ಳಸಾಗಣೆ ಮಾಡುತ್ತಿದ್ದ ಹಸು ಕಂಡುಬಂದರೆ, ಒಂದು ವರ್ಷದವರೆಗೆ ಅದರ ನಿರ್ವಹಣೆಗೆ ತಗಲುವ ವೆಚ್ಚವನ್ನು ಆರೋಪಿಯಿಂದ ವಸೂಲಿ ಮಾಡಲಾಗುತ್ತದೆ. ಹಸುಗಳು ಅಥವಾ ಅವುಗಳ ಮಾಂಸವನ್ನು ಸಾಗಿಸುವ ವಾಹನಗಳು, ಅವುಗಳ ಮಾಲೀಕರು ಅಥವಾ ಚಾಲಕರ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಹಿಂದಿನ ಕಾನೂನಿಗೆ ಸ್ಪಷ್ಟತೆ ಇರಲಿಲ್ಲ. ತಿದ್ದುಪಡಿ ಮಾಡಲಾದ ಕಾನೂನಿನ ಅಡಿಯಲ್ಲಿ, ಅವರನ್ನು ಸಹ ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಚಾಲಕ ಮತ್ತು ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಅವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ಎಲ್ಲಾ ಅಪರಾಧಗಳು ಜಾಮೀನು ರಹಿತವಾಗಿರುತ್ತದೆ.