ಕೋವಿಡ್-19 ಸಾಂಕ್ರಾಮಿಕ ಬಳಿಕ ಕೆಲವರಿಗೆ ತಮ್ಮ ಮನೆಯೇ ಕಚೇರಿಯೂ ಆಗಿಬಿಟ್ಟಿದೆ. ಹೆಚ್ಚಿನ ಸಮಯವನ್ನು ಮನೆಯೊಳಗೇ ಕಳೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ತಮ್ಮ ಮನೆ ಪ್ರಶಾಂತವಾಗಿ, ಸುಂದರವಾಗಿ ಇರಬೇಕೆಂದು ಬಯಸುವವರ ಸಂಖ್ಯೆ ಹೆಚ್ಚಿದೆ.
ನಿಮ್ಮ ಮನೆ ಹೇಗೇ ಇರಲಿ, ಅದರಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡುವುದರ ಮೂಲಕ ಮನೆಯ ಅಂದವನ್ನು ಹೆಚ್ಚಿಸಬಹುದು. ಮನೆಯಲ್ಲಿ ಪ್ರಶಾಂತ ವಾತಾವರಣ ಸೃಷ್ಟಿಯಾಗುವಂತೆ ನೋಡಿಕೊಳ್ಳಬಹುದು. ಇದಕ್ಕೆ ಒಂದಿಷ್ಟು ಸಲಹೆಗಳು (home decor ideas) ಇಲ್ಲಿವೆ.
1. ಬೆಳಕಿನಿಂದ ಅಂದ ಹೆಚ್ಚಲಿ
ಮನೆಯ ಅಲಂಕಾರದ ವಿಷಯಕ್ಕೆ ಬಂದಾಗ ಬೆಳಕಿನ ವ್ಯವಸ್ಥೆಯು ಗೇಮ್ ಚೇಂಜರ್. ದೀಪಗಳು ಮನೆಗೆ ಬೆಳಕು ನೀಡುವುದರ ಜತೆಗೆ ಅಂದವನ್ನೂ ಹೆಚ್ಚಿಸುವ ಕೆಲಸ ಮಾಡುತ್ತವೆ. ನಿಮ್ಮ ಮನೆಗೆ ಹೊಸ ಲುಕ್ ನೀಡಬೇಕೆಂದರೆ, ಮೊದಲಿಗೆ ಎಲ್ಲೆಲ್ಲಿ ಹೆಚ್ಚು ಬೆಳಕಿನ ಅವಶ್ಯಕತೆ ಇದೆ, ಎಲ್ಲಿ ವಿದ್ಯುತ್ ದೀಪ ಬೆಳಗಿದರೆ ಮನೆಯ ಅಂದ ಹೆಚ್ಚಲಿದೆ ಎಂಬುದನ್ನು ನೋಡಿ, ಬೆಳಕಿನ ವ್ಯವಸ್ಥೆ ಮಾಡಿ.
ಬೆಳಕಿನಿಂದ ಮನೆಯು ಚೆನ್ನಾಗಿ ಕಾಣಲು ಮನೆಯ ಗೋಡೆಯ ಪೇಟಿಂಗ್ ಕೂಡ ಪೂರಕವಾಗಿರಬೇಕು. ಒಂದು ಪೇಟಿಂಗ್ ಸೂಕ್ತವಾಗಿಲ್ಲ ಎನಿಸಿದರೆ, ಉದ್ದದ ಬಿಳಿ ಪರದೆಗಳನ್ನು ಹಾಕುವುದರಿಂದ ಮನೆಗೆ ಇನ್ನಷ್ಟು ಪ್ರಕಾಶಮಾನವಾದ ಮೆರುಗನ್ನು ನೀಡಬಹುದು. ನಿಮ್ಮ ಮನೆಯೊಳಗೆ ಸಾಕಷ್ಟು ಸೂರ್ಯನ ಬೆಳಕು ಬೀಳದಿದ್ದರೆ, ನಿಮಗೆ ಹಿತವಾದ ಪರಿಣಾಮವನ್ನು ನೀಡುವ ವಿವಿಧ ಛಾಯೆಗಳ ಬೆಳಕಿನ ಫಿಕ್ಸ್‌ಚರ್‌ಗಳನ್ನು ಆರಿಸಿಕೊಳ್ಳಿ. ಫೇರಿ ಲೈಟ್‌ಗಳು, ಸಣ್ಣ ನೈಟ್‌ಶೇಡ್‌ಗಳು ಮತ್ತು ಲೈಟ್ ಡಿಮ್ಮರ್‌ಗಳ ಬಳಕೆ ನಿಮ್ಮ ತೀವ್ರವಾದ ಕೆಲಸದ ಒತ್ತಡಗಳನ್ನು ನಿವಾರಿಸಿ ಮನಸ್ಸಿಗೆ ಮುದ ನೀಡುತ್ತವೆ!
2. ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ
ನೀವಿರಬೇಕಾದದು ಮನೆಯಲ್ಲಿಯೇ ಹೊರತು ಗೋಡನ್‌ನಲ್ಲಿ ಅಲ್ಲ! ಇದನ್ನು ನಿಮ್ಮ ಮನೆಯ ಸದಸ್ಯರಿಗೂಮನವರಿಕೆ ಮಾಡಿಕೊಡಿ. ಎಲ್ಲರೂ ಸೇರಿ ಮನೆಯಲ್ಲಿನ ಸಾಮಾನುಗಳನ್ನು ಸರಿಯಾಗಿ ಜೋಡಿಸಿಡಿ. ದಿನ ನಿತ್ಯ ಬಳಸುವ ಸಾಮಗ್ರಿಗಳನ್ನು ಬಳಸಿದ ನಂತರ ಮತ್ತದೇ ಸ್ಥಳದಲ್ಲಿ ಇಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ನಿಮ್ಮ ಮನೆಯ ಸುತ್ತಮುತ್ತ ನಿಮಗೆ ಅಗತ್ಯವಿಲ್ಲದ ಯಾವುದೇ ವಸ್ತು ಇಟ್ಟುಕೊಳ್ಳಬೇಡಿ. ನಮ್ಮಲ್ಲಿ ಅನೇಕರಿಗೆ ಒಂದು ಅಭ್ಯಾಸವಿದೆ, ಅದು ಏನೆಂದರೆ, ಹೆಚ್ಚಿನ ಅಗತ್ಯ ಇಲ್ಲದೇ ಇದ್ದರೂ ಕೆಲವೊಂದು ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು. ಈ ರೀತಿಯ ವಸ್ತುಗಳಿಂದ ಕೊನೆಗೆ ನಿಮಗೆ ಆಗುವ ಉಪಕಾರವೆಂದರೆ, ನೀವು ಬೇರೆ ಯಾವುದನ್ನಾದರೂ ಇಡಲು ಬಳಸಬಹುದಾದ ಜಾಗವನ್ನು ಇವು ತಿಂದಿರುತ್ತವೆ, ಅಷ್ಟೇ!
ಹೀಗಾಗಿ ಮೊದಲಿಗೆ ನಿಮಗೆ ಅನಗತ್ಯವಾದ ವಸ್ತುಗಳನ್ನು ಬಿಸಾಕಿ, ಅಗತ್ಯವಾದ ವಸ್ತುಗಳನ್ನು ನೀಟಾಗಿ ಜೋಡಿಸಿಡಿ. ನೀವು ಧರಿಸದ ಮತ್ತು ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಯಾರಿಗಾದರೂ ಅವಶ್ಯಕತೆ ಇದ್ದವರಿಗೆ ದಾನ ಮಾಡಿ. ನೀವು ಮನೆಯಲ್ಲಿ ಕುಳಿತು ಕೆಲಸ ಮಾಡುವ ನಿಮ್ಮ ಹೋಮ್ ಆಫೀಸ್ ಅನ್ನು, ಕಚೇರಿಯಂತೆಯೇ ಸಜ್ಜು ಮಾಡಿ. ಇಲ್ಲಿರುವ ಅನಗತ್ಯ ಪೇಪರ್‌ಗಳು, ಫೈಲ್‌ಗಳು, ಬಳಕೆಯಾಗದ ಸ್ಟೇಷನರಿ ಇತ್ಯಾದಿಗಳನ್ನು ಎಸೆಯಿರಿ. ಇದರಿಂದ ಜಾಗವೂ ಹೆಚ್ಚುತ್ತದೆ. ಮನೆಯನ್ನು ಕ್ಲೀನ್ ಮಾಡಲು ಅನುಕೂಲವಾಗುತ್ತದೆ.
3. ನಿಮ್ಮ ಮನೆಗೆ ಹಸಿರಿನ ಟಚ್ ಇರಲಿ
ಮನೆಯ ಒಳಾಂಗಣದ ಅಂದ ಹೆಚ್ಚಬೇಕೆಂದರೆ ಮನೆಗೆ ಹಸಿರಿನ ಟಚ್ ನೀಡಲೇಬೇಕು. ಹಸಿರೆಂದರೆ ಹಸಿರು ಬಣ್ಣ ಬಳಿಯುವುದಲ್ಲ! ನಿಮ್ಮ ಮನೆಯೊಳಗೆ ಕೆಲವು ಆಲಂಕಾರಿಕ ಸಸ್ಯಗಳನ್ನು ಬೆಳೆಸುವುದು. ಇವುಗಳು ನಿಮ್ಮ ಕಣ್ಣಿಗೆ ಬೀಳುತ್ತಿದ್ದರೆ ಕೆಲಸದ ಒತ್ತಡ ಅಥವಾ ದೈನಂದಿನ ಜೀವನದ ಜಂಜಾಟದಿಂದ ಒಂದಿಷ್ಟು ರಿಲ್ಯಾಕ್ಸ್ ಸಿಗುತ್ತದೆ.
ನಿಮಗೆ ಗೊತ್ತಿದೆ, ಜನರು ಕೆಲಸದ ಒತ್ತಡದಿಂದ ಪಾರಾಗಲು ವೀಕೆಂಡ್‌ಗಳಲ್ಲಿ ಪ್ರಕೃತಿ ತಾಣಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಹೊರಗಡೆ ಪ್ರಕೃತಿಯ ಮಡಿಲಲ್ಲಿ ಸಿಗುವ ಆನಂದವನ್ನು ಮನೆಯಲ್ಲೇ ಸಿಗುವಂತೆ ಮಾಡಿಕೊಳ್ಳಬಹುದು. ಇದಕ್ಕಾಗಿ ಸುಂದರವಾದ ಗಿಡಗಳನ್ನು ಮನೆಯಲ್ಲಿ ಬೆಳೆಸಬಹುದು. ನಿಮ್ಮ ಮನೆಯಲ್ಲಿ ದೊಡ್ಡ ಗಿಡಗಳನ್ನು ಇಡಲು ಜಾಗವಿಲ್ಲದಿದ್ದರೆ, ಚಿಕ್ಕ ಚಿಕ್ಕ ಬಳ್ಳಿಯಂತಹ ಸ್ನೇಕ್ ಪ್ಲಾಂಟ್‌ಗಳು, ಲಿಲ್ಲಿ ಹೂಗಳು, ಕಿರು ಬಿದಿರಿನ ಸಸ್ಯಗಳು, ಮನಿಪ್ಲಾಂಟ್, ಜರೀಗಿಡಗಳು ಮುಂತಾದ ಸುಲಭವಾಗಿ ನಿರ್ವಹಿಸಬಹುದಾದ ಸಸ್ಯಗಳನ್ನು ಬೆಳೆಸುವ ಮೂಲಕ ಮನೆಯನ್ನು ಹಸಿರಿನ ತಾಣವಾಗಿಸಬಹುದು.
4. ಮನೆ ಸುಗಂಧ ಬರಿತವಾಗಿರಲಿ
ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಸಾಕಷ್ಟು ಬದಲಾವಣೆ ಮಾಡಬೇಕಿದೆ, ಅದಕ್ಕೆ ಸಮಯವಿಲ್ಲ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ, ಈಗ ಸದ್ಯಕ್ಕೆ ಮನೆಯ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ಮನಸ್ಸಿಗೆ ಮುದ ನೀಡುವಂತಹ ಪರಿಮಳ ದ್ರವ್ಯಗಳನ್ನು ಬಳಸಬಹುದು. ಕೆಲವು ಸುಗಂಧ ದ್ರವ್ಯಗಳ ಸಿಂಪಡಣೆಯು ನಿಮ್ಮ ನರ ಮಂಡಲವನ್ನು ಸಡಿಲಗೊಳಿಸಿ ಒತ್ತಡದಿಂದ ಮುಕ್ತರಾಗಲು ನೆರವಾಗುತ್ತವೆ. ಲ್ಯಾವೆಂಡರ್, ಲೆಮನ್ ಗ್ರಾಸ್ ಮತ್ತು ಪಚೌಲಿಯಂತಹ ಹಿತಕರ ಸುಗಂಧವು ದಿನದ ಸುದೀರ್ಘ ಕೆಲಸದ ಒತ್ತಡಗಳನ್ನು ನಿವಾರಿಸಲು ಮತ್ತು ವಿಶ್ರಾಂತಿ ಪಡೆಯಲು ನೆರವಾಗುತ್ತದೆ.
ಇಂದು ಮನಸ್ಸಿಗೆ ಹಿತ ನೀಡುವ, ನಿಮ್ಮ ಅಭಿರುಚಿಗಳನ್ನು ಉತ್ತೇಜಿಸುವ ಹಲವು ರೀತಿಯ ಸುಗಂಧ ದ್ರವ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳಿಂದ ನಿಮಗೆ ಬೇಕಾದುದನ್ನು ನೀವು ಆರಿಸಿಕೊಳ್ಳಬಹುದು. ಡಿಫ್ಯೂಸರ್‌ಗಳು, ಧೂಪದ್ರವ್ಯ, ಏರ್ ಫ್ರೆಶ್‌ನರ್‌ಗಳನ್ನೂ ಬಳಸಿ, ನಿಮಗೆ ನಿಮ್ಮ ಮನೆ ಹೊಸ ಅನುಭವ ನೀಡುವಂತೆ ಮಾಡಿಕೊಳ್ಳಬಹುದು.
5. ಪೀಠೋಪಕರಣಗಳನ್ನು ನವೀಕರಿಸಿ
ನಿಮ್ಮ ಮನೆಯಲ್ಲಿರುವ ಪೀಠೋಪಕರಣಗಳನ್ನು ಇಡುವ ಜಾಗವನ್ನು ಬದಲಾಯಿಸುವ ಮೂಲಕ ಮನೆಗೆ ಹೊಸ ಲುಕ್ ನೀಡಬಹುದು. ಕೆಲವು ಪೀಠೋಪಕರಣಗಳು ಟ್ರೆಂಡಿಯಾಗಿರುವುದಿಲ್ಲ, ಹಳೇಯದು ಎಂಬ ಕಾರಣಕ್ಕೆ ಅವುಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಅವುಗಳನ್ನು ಬದಲಾಯಿಸಿ, ಹೊಸತನ್ನು ತರುವ ಮೂಲಕ ನಿಮ್ಮ ಮನೆಯ ಆಕರ್ಷಣೆಯನ್ನು ಹೆಚ್ಚಿಸಬಹುದು.
ಇನ್ನು ಸೋಫಾಸೆಟ್‌ನ ಕವರ್, ಟೇಬಲ್ ಕ್ಲಾತ್‌ಗಳನ್ನು ಬದಲಾಯಿಸಿ. ಹಳೆಯಾದದಾದ ಮರದ ಪೀಠೋಪಕರಣಗಳಿಗೆ ಪಾಲಿಶ್ ಮಾಡಿ, ಹೊಸದರಂತೆ ಮಾಡಿ. ಇದೂ ಸಹ ಕಡಿಮೆ ವೆಚ್ಚದಾಯಕ. ಹೀಗೆ ಮಾಡುವುದರಿಂದ ಅವುಗಳಿಗೆ ಹೊಸ ಲುಕ್ ನೀಡಿದಂತಾಗುತ್ತದೆ ಅಲ್ಲದೆ, ಅವುಗಳ ಬಾಳಿಕೆ ಇನ್ನಷ್ಟು ಹೆಚ್ಚುತ್ತದೆ. ಅಗತ್ಯವೆನಿಸಿದರೆ ನಿಮ್ಮ ಮನಸ್ಸಿಗೆ ಹಿತ ನೀಡುವ, ಮನೆಯ ಅಂದವನ್ನು ಹೆಚ್ಚಿಸುವ ಹೊಸ ಪೀಠೋಪಕರಣಗಳನ್ನು ಕೊಳ್ಳಿ. ಮನೆ ಅಂದವಾಗಿದ್ದರಷ್ಟೇ ಸಾಲದು, ನಿಮ್ಮ ಮನಸ್ಸೂ ಚೆನ್ನಾಗಿರಬೇಕು. ಅದಕ್ಕೆ ಏನು ಬೇಕೋ ಅದನ್ನು ಮಾಡಿ.
ಇದನ್ನೂ ಓದಿ|Home loan: ಮನೆಕೊಳ್ಳಲು ಇದು ಸೂಕ್ತ ಸಮಯ, ಆದರೆ ಈ ವಿಷಯಗಳನ್ನು ಮರೆಯಬೇಡಿ!