Site icon Vistara News

Modern Locks | ನಿಮ್ಮ ಮನೆಯ ಭದ್ರತೆಗೆ ಬಂದಿವೆ ಸ್ಮಾರ್ಟ್‌ ಬೀಗಗಳು!

Modern Locks

ಮನೆಯನ್ನು ಭದ್ರ ಪಡಿಸುವುದಕ್ಕೆ ಬಾಗಿಲು ಬೇಕು. ಬಾಗಿಲು ಭದ್ರ ಪಡಿಸುವುದಕ್ಕೆ ಚಿಲಕ ಮತ್ತು ಬೀಗ ಬೇಕೇ ಬೇಕು! ಮನೆಯ ಮತ್ತು ಮನೆಯೊಳಗಿನವರ ರಕ್ಷಣೆಗೆ ಭದ್ರತೆಯಂತೂ ಬೇಕೇಬೇಕಲ್ಲ, ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಹಲವಾರು ಆವಿಷ್ಕಾರ, ಸುಧಾರಣೆಗಳು ನಡೆದಿವೆ. ಹಳೆಯ ಕಾಲದ ಕೋಟೆ ಬಾಗಿಲುಗಳಿಂದ ಹಿಡಿದು ಇಂದಿನ ಕಾಲದ ಸ್ಮಾರ್ಟ್‌ ಬಾಗಿಲುಗಳವರೆಗೆ ನಾನಾ ಮಜಲುಗಳನ್ನು ಬಾಗಿಲ ಬೀಗಗಳು ದಾಟಿ ಬಂದಿವೆ. ಇಂದಿನ ಕಾಲಕ್ಕೆ ತಕ್ಕಂತೆ ಹೈಟೆಕ್‌ ಬೀಗಗಳು (Modern Locks) ಬಂದಿದ್ದು, ಈಗ ಎಲ್ಲರ ಗಮನ ಸೆಳೆಯುತ್ತಿವೆ. ಅವುಗಳ ಕಿರು ಪರಿಚಯ ಇಲ್ಲಿದೆ.

ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌
ಚಾವಿಯಿಲ್ಲದೆಯೇ ಕೆಲಸ ಮಾಡುವ ಬೀಗಗಳ ಪೈಕಿ ಇದೊಂದು ಉತ್ತಮ ಆಯ್ಕೆ. ನೋಡುವುದಕ್ಕೆ ಆಡಂಬರವಿಲ್ಲದೆ, ಸರಳ ಮತ್ತು ಸಪೂರವಾಗಿ ಕಾಣುವ ಈ ಬೀಗಗಳು ಒಂದಕ್ಕಿಂತ ಹೆಚ್ಚು ಬೆರಳಚ್ಚುಗಳನ್ನು ನೆನಪಿಟ್ಟುಕೊಳ್ಳಬಲ್ಲವು. ಹಾಗಾಗಿ ಮನೆಮಂದಿಯೆಲ್ಲಾ ಬಳಸಬಹುದಾದ ಆಯ್ಕೆಯಿದು. ಈ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಫೋನಿನ ಮೂಲಕವೂ ಕಾರ್ಯನಿರ್ವಹಿಸುವುದರಿಂದ ದೂರದಿಂದಲೂ ಬಾಗಿಲು ತೆಗೆದು-ಹಾಕಿ ಮಾಡುವ ಅವಕಾಶವಿದೆ.

Modern Locks

ಪಾಸ್ವರ್ಡ್‌ ಹೊಂದಿರುವ ಬೀಗ
ಇದೊಂಥರಾ ಹೊಸ ಚಿಗುರು- ಹಳೆಬೇರಿನ ಮಾದರಿಯ ಆಯ್ಕೆ. ಹಳೆಯ ಪದ್ಧತಿಯ ಚಾವಿ ಮತ್ತು ಈಗಿನಂತೆ ಗುಪ್ತ ಸಂಖ್ಯೆ- ಎರಡನ್ನೂ ಹೊಂದಿರುವ ಬೀಗವಿದು. ಪಾಸ್ವರ್ಡ್‌ ಮರೆತಿರೇ? ಬೀಗ ಒಡೆಯಬೇಕಿಲ್ಲ, ಚಾವಿ ಇದೆಯಲ್ಲ. ನೋಡುವುದಕ್ಕೆ ಹಳತು-ಹೊಸತರ ಸಂಯೋಗದಂತೆಯೇ ಕಾಣುತ್ತದೆ. ಇರುವ ಬೀಗವೇ ಪಾಸ್‌ವರ್ಡ್‌ ಮೂಲಕ ಕಾರ್ಯನಿರ್ವಹಿಸುವಂತೆ ಇದರಲ್ಲಿ ಮಾಡಲಾಗಿರುತ್ತದೆ.

ಫೋನ್‌ ನಿಂದ ನಿರ್ವಹಿಸುವ ಸ್ಮಾರ್ಟ್‌ ಬೀಗ
ಬ್ಲೂಟೂತ್‌ ಮೂಲಕ ಮೊಬೈಲ್‌ ಫೋನ್‌ ಜೊತೆ ಸಂಪರ್ಕ ಸಾಧಿಸುವ ಈ ಭದ್ರತಾ ಸಾಧನ, ನೋಡುವುದಕ್ಕೆ ಬಹಳ ಸರಳ. ಆದರೆ ಮುರಿಯುವುದಕ್ಕೆ ಅಷ್ಟೇ ಕ್ಲಿಷ್ಟ. ನಾವು ಒಳಗೆ-ಹೊರಗೆ ಹೋಗುತ್ತಿದ್ದಂತೆ ತನ್ನಷ್ಟಕ್ಕೆ ಮುಚ್ಚಿ-ತೆರೆದು ಮಾಡಿಕೊಳ್ಳುವ ಸವಲತ್ತೂ ಇದರಲ್ಲಿದೆ. ಬಾಗಿಲು ಮುಚ್ಚಿ-ಬೀಗ ಹಾಕುವುದನ್ನೂ ಮರೆಯುವ ಮರೆಗುಳಿಗಳಿಗೆ ಹೇಳಿ ಮಾಡಿಸಿದಂತಿದೆ.

ವೀಡಿಯೊ ಇಂಟರ್‌ಕಾಂ
ಯಾವುದೇ ತುರ್ತು ಕೆಲಸದಲ್ಲಿ ಇರುವಾಗಲೇ ಬಾಗಿಲ ಕರೆಗಂಟೆ ಸದ್ದು ಮಾಡುತ್ತದೆ. ಮಾಡುತ್ತಿರುವ ಕೆಲಸ ಬಿಟ್ಟು ಬಂದು ನೋಡಿದರೆ, ಯಾರೋ ಬೇಡದ ಅತಿಥಿ. ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ ವೀಡಿಯೊ ಇಂಟರ್‌ಕಾಂ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಹೊಂದಿಕೊಂಡಂತೆ ಇರುವ ಬೀಗಗಳು ಉತ್ತಮ ಸುರಕ್ಷತೆಯನ್ನೂ ನೀಡಬಲ್ಲವು. ಅವುಗಳನ್ನು ವೈರ್‌ಲೆಸ್‌ ಸಾಧನಗಳಿಗೆ ಜೋಡಿಸಿದಲ್ಲಿ, ಬಂದವರಾರು ಎಂಬುದನ್ನು ಇರುವಲ್ಲಿಂದಲೇ ವೀಡಿಯೊ ಮೂಲಕ ನೋಡಿ, ಬೇಕಾದವರಾದರೆ ಬಾಗಿಲು ತೆರೆಯುವಂತೆ ಅಲ್ಲಿಂದಲೇ ಸೂಚಿಸಬಹುದು.

ಪುಷ್-ಪುಲ್‌ ವಿನ್ಯಾಸ
ಇದನ್ನು ಹಲವಾರು ರೀತಿಗಳಲ್ಲಿ ಬಳಸಬಹುದು. ಕಾರ್ಡ್‌ ಹಾಕಿ, ಬೆರಳಚ್ಚು ನೀಡಿ ಅಥವಾ ಪಾಸ್‌ಕೋಡ್‌ ಮೂಲಕವೂ ಇದನ್ನು ಉಪಯೋಗಿಸಬಹುದು. ಒಳಗೆ ತಳ್ಳಿದರೆ, ಹೊರಗೆ ಎಳೆದರೆ- ಎರಡೂ ರೀತಿಯಲ್ಲಿ ಈ ಬಾಗಿಲು ತೆರೆದುಕೊಳ್ಳುತ್ತದೆ.

ಚೈನ್‌ ಹಾಕುವ ಪದ್ಧತಿ
ಇದು ಸಾಕಷ್ಟು ಹಳೆಯದಾದರು, ಇನ್ನೂ ಚಾಲ್ತಿಯಲ್ಲಿದೆ. ಸಣ್ಣದಾದರೂ ಭದ್ರವಾದ ಸರಪಳಿಯನ್ನು ಬಾಗಿಲು ಮತ್ತು ಚೌಕಟ್ಟಿನ ನಡುವೆ ಅಳವಡಿಸಲಾಗುತ್ತದೆ. ಸರಪಳಿಯ ಕೊಂಡಿಯನ್ನು ಹಾಕಿಯೇ ಇದ್ದರೆ, ಬಾಗಿಲು ತೆರೆಯುವ ಮುನ್ನ ಬಂದವರಾರು ಎಂಬುದನ್ನು ನೋಡಿಕೊಳ್ಳಬಹುದು. ಚಿಕ್ಕ ಮಕ್ಕಳಿರುವ ಹಲವಾರು ಮನೆಗಳಲ್ಲಿ ಇದರ ಬಳಕೆ ಮುಂದುವರಿದಿದೆ.

ಹಲವು ಚಿಲಕಗಳ ಬೀಗ
ಇದೇನು ಚಾವಿ ರಹಿತ ಮಾದರಿಯಲ್ಲ. ಆದರೆ ನಾಲ್ಕಾರು ಚಿಲಕಗಳು ಒಟ್ಟಿಗೆ ಹಾಕಿ-ತೆಗೆದು ಮಾಡುವ ಮೂಲಕ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ. ಬೀಗ ಒಡೆಯುವವರಿಗೆ ಸುಲಭಕ್ಕಂತೂ ಖಂಡಿತ ಇಲ್ಲ. ನೋಡುವುದಕ್ಕೂ ಅಂದಗಾಣಿಸಿ ಕೊಡುವ ಈ ಬೀಗಗಳು ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯವಿವೆ.

ತಿರುಗಿಸುವ ಹಿಡಿಕೆಯ ಬೀಗಗಳು
ಇವುಗಳೂ ಸಹ ನವೀನ ವಿನ್ಯಾಸದವಲ್ಲ, ಸ್ಮಾರ್ಟ್‌ ಅಂತೂ ಅಲ್ಲವೇ ಅಲ್ಲ. ಹಿಡಿಕೆಗೊಂದು ತಿರುಗಿಸುವ ಸಾಧನವನ್ನು ನೀಡುವ ಇವು, ಚಾವಿಯಿಂದ ಮಾತ್ರವೇ ತೆರೆದುಕೊಳ್ಳುತ್ತವೆ. ಹಳತೂ ಅಲ್ಲದ, ಹೊಸತೂ ಅಲ್ಲದ, ಒಂದು ಕಾಲದಲ್ಲಿ ಆಧುನಿಕ ಎನಿಸಿದ್ದ ಮನೆಗಳಲ್ಲಿ ಇಂಥ ಬೀಗಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ಸರಿಸುವ ಬಾಗಿಲುಗಳು: ಒಳಗೆ-ಹೊರಗೆ ತೆರೆದುಕೊಳ್ಳುವ ಬಾಗಿಲುಗಳ ಬದಲಿಗೆ, ಒಂದು ಚಾನೆಲ್‌ ಮೇಲೆ ಸರಿದಾಡುತ್ತ ಮುಚ್ಚಿ-ತೆರೆದು ಮಾಡುವ ಬಾಗಿಲುಗಳಿಗೆ ಬೇರೆಯದೇ ರೀತಿಯ ಬೀಗಗಳ ಅಗತ್ಯವಿದೆ. ಬಾಲ್ಕನಿ, ಶಯನಾಗೃಹ ಅಥವಾ ಸ್ನಾನದ ಕೋಣೆಗಳಿಗೆ ಇಂಥ ಬಾಗಿಲುಗಳ ಬಳಕೆ ಮಾಡುವುದಿದೆ. ತೋರು ಬೆರಳಲ್ಲಿ ಒತ್ತಿ-ಬಿಟ್ಟು ಮಾಡುವ ಸರಳ ತಂತ್ರಜ್ಞಾನದಿಂದ ಈ ಬಾಗಿಲು ಕೆಲಸ ಮಾಡುತ್ತದೆ.

ಡೆಡ್‌ಬೋಲ್ಟ್:‌ ಹಳೆಯ ಕಾಲದಿಂದಲೂ ಅತ್ಯಂತ ಜಿಗುಟು ಚಿಲಕ ಎಂದೇ ಇದು ಪ್ರಸಿದ್ಧ. ಮೊದಲಿನಿಂದಲೂ ಇದನ್ನು ಘನವಾದ ಮರ, ಸ್ಟೀಲ್ ಅಥವಾ ಕಬ್ಬಿಣದ‌ ಬಾಗಿಲುಗಳಿಗೆ ಅಳವಡಿಸಲಾಗುತ್ತಿತ್ತು. ಹಾಗಾಗಿಯೇ ಚಾವಿ ಇಲ್ಲದಿದ್ದರೆ ಇದನ್ನು ಒಡೆಯುವುದೂ ದುಸ್ತರ ಎನ್ನುವಷ್ಟು ಗಟ್ಟಿ ಬೀಗವಿದು. ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚಿನ ಸುರಕ್ಷತೆ ನೀಡುವ ಚಿಲಕಗಳ ಪೈಕಿ ಇದೂ ಒಂದು. ಆದರೆ ಚಾವಿ ಕಳೆದರೆ ಮಾತ್ರ ಹರೋಹರ!

ಬಿಗಗಳ ಆಯ್ಕೆ ಹೇಗೆ?
ಇಷ್ಟೆಲ್ಲಾ ರೀತಿಯ ಬಾಗಿಲ ಬೀಗಗಳನ್ನು ನೋಡಿದ್ದಾಯಿತು. ಆದರೆ ನಮಗೆ ಬೇಕಾದ್ದು ಯಾವುದು ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ. ನಿಜ, ಆಯ್ಕೆ ಹೆಚ್ಚಾದಷ್ಟೂ ಗೊಂದಲವೂ ಹೆಚ್ಚು. ಸಾಮಾನ್ಯವಾಗಿ ಸರಳ ಬೀಗದ ಆಯ್ಕೆ ಅತ್ಯಂತ ಜನಪ್ರಿಯ. ಅದರಲ್ಲೂ ಒಂದೇ ಬೀಗಕ್ಕೆ ಹೆಚ್ಚಿನ ಚಾವಿಗಳನ್ನು ಹೊಂದುವಂಥ ಆಯ್ಕೆ ಇವತ್ತಿಗೂ ಅವಶ್ಯಕ ಎನಿಸಿದೆ. ಮನೆಯಲ್ಲಿ ಹೆಚ್ಚಿನ ಜನರಿದ್ದರೆ ಅಥವಾ ಶೇರ್‌ ಮಾಡುವ ರೂಂಮೇಟ್‌ಗಳಿದ್ದರೆ ಇವೆಲ್ಲ ಸುಲಭ ಆಯ್ಕೆಗಳು.

ಈಗಿನ ಕಾಲದ ಬೀಗಗಳಿಗೆ ಅದರದ್ದೇ ಆದ ಆಯಸ್ಸಿರುತ್ತದೆ. ಸಾಮಾನ್ಯವಾಗಿ ʻಲಾಕ್‌ ಸೈಕಲ್ಸ್‌ʼ ಎಂದು ಇದನ್ನು ಹೇಳಲಾಗುತ್ತದೆ. ಹೆಚ್ಚಿನ ಲಾಕ್‌ ಸೈಕಲ್ಸ್‌ ಹೊಂದಿದ ಬೀಗಗಳ ಆಯಸ್ಸು ಹೆಚ್ಚಾಗಿರುತ್ತದೆ, ಮಾತ್ರವಲ್ಲ ಬೆಲೆಯೂ ಹೆಚ್ಚಾಗಿರುತ್ತದೆ. ಇಂತಿಷ್ಟು ಸಾವಿರ ಬಾರಿ, ಉದಾಹರಣೆಗೆ ಹತ್ತೊ ಅಥವಾ ಇಪ್ಪತ್ತೋ ಸಾವಿರ ಬಾರಿ ಬೀಗವನ್ನು ಬಳಸಬಹುದು ಎಂಬುದು ತಯಾರಕರ ಅಂದಾಜು. ಇದನ್ನು ಪರಿಶೀಲಿಸಿ ಖರೀದಿಸಬೇಕಾಗುತ್ತದೆ. ಹಳೆಯ ಕಾಲದವು ಇಷ್ಟೊಂದು ನಾಜೂಕಲ್ಲದೆ ಇದ್ದಿದ್ದರಿಂದ ಇಂಥ ಸಮಸ್ಯೆಗಳು ಇರಲಿಲ್ಲ ಬಿಡಿ. ಓಲ್ಡ್‌ ಈಸ್‌ ಗೋಲ್ಡ್‌ ಎನ್ನುವಿರೇ? ಆದರೆ ಮನೆಯಲ್ಲಿ ಗೋಲ್ಡ್‌ ಹೆಚ್ಚಿದ್ದರೆ ಓಲ್ಡ್‌ ಸಾಕಾಗುವುದಿಲ್ಲ!

ಇದನ್ನೂ ಓದಿ| Home Decor Ideas| ನಿಮ್ಮ ಮನೆಯ ಅಂದ ಹೆಚ್ಚಿಸಲು ಸಿಂಪಲ್ಲಾದ 5 ಟಿಪ್ಸ್‌

Exit mobile version