ಪ್ರತಿಯೊಬ್ಬರ ಜೀವನದಲ್ಲಿ ಹೊಸ ಮನೆ ಅಥವಾ ಫ್ಲಾಟ್ ಖರೀದಿ ಅತ್ಯಂತ ಮಹತ್ವದ ಘಟ್ಟ. ಇದು ನೀವು ಚಿಕ್ಕ ವಯಸ್ಸಿನಿಂದಲೂ ಕಾಣುತ್ತಿರುವ ಕನಸಾಗಿರಬಹುದು. ಇದಕ್ಕಾಗಿ ನೀವು ಜೀವನದಲ್ಲಿ ಉಳಿಸಿದ ಎಲ್ಲ ಹಣವನ್ನೂ ವಿನಿಯೋಗಿಸುತ್ತಿರಬಹುದು. ಅಲ್ಲದೆ ಮುಂದೆ ಜೀವನ ಪರ್ಯಂತ ನೀವು ಈ ಮನೆಯಲ್ಲಿಯೇ ಇರಬೇಕಿರುತ್ತದೆ. ಹೀಗಾಗಿ ನೀವು ಮನೆ ಅಥವಾ ಫ್ಲಾಟ್ ಖರೀದಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕಾದದು ಅವಶ್ಯಕ.
ಹೊಸ ಫ್ಲಾಟ್ ಅಥವಾ ಮನೆಯನ್ನು ಕೊಳ್ಳುವಾಗ ಗಮನಿಸಬೇಕಾದ ಕೆಲವು ಪ್ರಮುಖ ವಿಷಯಗಳೆಂದರೆ ನೀವು ಖರೀದಿಸಲು ಹೊರಟಿರುವ ಮನೆ ಯಾವ ಸ್ಥಳದಲ್ಲಿದೆ, ದಾಖಲೆಗಳು ಸರಿಯಾಗಿವೆಯೇ? ನಿರ್ಮಾಣಗೋಂಡಿದ್ದು ಯಾವಾಗ ಮತ್ತು ಅದರ ಬೆಲೆ ಎಷ್ಟಿದೆ ಎಂಬುದಾಗಿದೆ. ಇದಲ್ಲದೆ ಇನ್ನೂ ಹಲವು ವಿಚಾರಗಳನ್ನು ಗಮನಿಸಬೇಕಿರುತ್ತದೆ. ಅವುಗಳೇನೆಂದು ನೋಡೋಣ.
೧. ಆಸ್ತಿಯ ಬೆಲೆ ಎಷ್ಟು?, ನಿಮ್ಮ ಬಜೆಟ್‌ಗೆ ಹೊಂದಾಣಿಕೆಯಾಗುತ್ತಾ?
ಮನೆ ಅಥವಾ ಫ್ಲಾಟ್ ಆಯ್ಕೆಯಲ್ಲಿ ಮೊದಲ ಹಂತವೆಂದರೆ ಬಜೆಟ್ ಅನ್ನು ನಿಗದಿಪಡಿಸುವುದು. ನೀವು ಮನೆ ಕೊಳ್ಳಲು ಎಷ್ಟು ಖರ್ಚು ಮಾಡಲು ಸಿದ್ಧರಿದ್ದೀರಿ ಎಂಬುದು ನಿಮಗೆ ತಿಳಿದಿದ್ದರೆ ಅದನ್ನು ಶಾರ್ಟ್‌ಲಿಸ್ಟ್ ಮಾಡಲು ಸುಲಭವಾಗುತ್ತದೆ. ನೀವು ಸಂಪರ್ಕಿಸಿದ ಬಿಲ್ಡರ್ ನಿಮಗೆ ಸರಿಯಾದ ಕೊಟೇಷನ್ ನೀಡಿದ್ದಾರೆಯೇ ಎಂಬದನ್ನು ತಿಳಿದುಕೊಳ್ಳಲು, ಸುತ್ತಲೂ ಇರುವ ಪ್ರಾಪರ್ಟಿಗಳ ಬೆಲೆಯನ್ನು ವಿವಿಧ ಬಿಲ್ಡರ್‌ಗಳಿಂದ ಪಡೆದು ತುಲನಾತ್ಮಕವಾಗಿ ಅಧ್ಯಯನ ಮಾಡಿ. ನಂತರ ನಿಮಗೆ ಯಾವ ಯಾವ ವಿಷಯಗಳ ಬಗ್ಗೆ ಅನುಮಾನಗಳಿವೆಯೋ ಈ ಬಗ್ಗೆ ನಿಮ್ಮ ಬಿಲ್ಡರ್ ಜತೆಗೆ ಚರ್ಚಿಸಿ.
ನೀವು ಮನೆ ಕೊಳ್ಳಲು ಹೊರಟಿರುವ ಪ್ರದೇಶದಲ್ಲಿ ಮನೆಯ ಬೆಲೆ ಹೇಗಿದೆ, ಈ ಜಾಗದಲ್ಲಿರುವ ನಿಮ್ಮ ಮನೆಗೆ ಮುಂದೆ ಬೆಲೆ ಹೆಚ್ಚುತ್ತದೆಯೇ? ಪ್ರದೇಶದಲ್ಲಿ ಮೂಲಸೌಕರ್ಯ ಹೇಗಿದೆ? ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತವೆಯೇ ಎಂಬೆಲ್ಲಾ ಮಾಹಿತಿ ಪಡೆದುಕೊಂಡೇ ನಿಮ್ಮ ಮನೆಗೆ ಸರಿಯಾದ ಮೌಲ್ಯವನ್ನು ನಿಗದಿಪಡಿಸಿ.
೨. ಫ್ಲಾಟ್‌ನ ಕಾರ್ಪೆಟ್ ಏರಿಯಾ ಎಷ್ಟಿದೆ?
ನೀವು ಅಪಾರ್ಟ್ ಮೆಂಟ್ ಕೊಳ್ಳಲು ಮುಂದಾಗಿದ್ದರೆ, ಬಿಲ್ಡ್‌ಅಪ್ ಏರಿಕಾಯ, ಕಾರ್ಪೆಟ್ ಏರಿಯಾ, ಅನ್‌ಡಿವೆಡೆಟ್ ಏರಿಯಾ ಮತ್ತಿತರ ವಿಷಯಗಳ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಿ. ಅಪಾರ್ಟ್‌ಮೆಂಟ್‌ನ ಪಿಲ್ಲರ್, ಎಲಿವೇಟರ್, ಮೆಟ್ಟಿಲುಗಳು, ಗೋಡೆ ಇರುವ ಎಲ್ಲ ಪ್ರದೇಶವನ್ನು ಸೇರಿಸಿ ಸೂಪರ್ ಬಿಲ್ಡ್‌ಅಪ್ ಪ್ರದೇಶ ಎಂದು ಕರೆಯಲಾಗುತ್ತದೆ.
ಕಾರ್ಪೆಟ್ ಏರಿಯಾ ಎಂದರೆ ನೀವು ವಾಸ ಮಾಡಲು ಬಳಸಬಹುದಾದದ ಜಾಗ. ಅಂದರೆ ಬೆಡ್‌ರೂಮ್, ಲೀವಿಂಗ್ ರೂಮ್, ಬಾಲ್ಕನಿ, ಟಾಯ್ಲೆಟ್, ಕಿಚನ್ ಇರುವ ಜಾಗ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮನೆಯೊಳಗಿರುವ (ಗೋಡೆಗಳೂ ಸೇರಿದಂತೆ) ಜಾಗವಾಗಿದೆ. ನಿಮ್ಮ ಫ್ಲಾಟ್‌ನ ಬಿಲ್ಡಪ್ ಏರಿಯಾ ೧,೫೦೦ ಚದರ ಅಡಿ ಎಂದರೆ ನಿಮ್ಮ ಕಾರ್ಪೆಟ್ ಏರಿಯಾ ಹೆಚ್ಚು ಕಡಿಮೆ ೧೦೫೦ ಚದರ ಅಡಿ ಇರಬಹುದು. ನೀವು ಕೊಡುವ ಹಣ ಯಾವ ಜಾಗಕ್ಕೆ ನಿಗದಿಪಡಿಸಲಾಗಿದೆ, ಇದು ಸೂಕ್ತವಾಗಿದೆಯೇ? ಕಾರ್ಪೆಟ್ ಏರಿಯಾಕ್ಕೆ ಎಷ್ಟು ಬೆಲೆ ಕೊಟ್ಟಂತಾಗಲಿದೆ ಎಂಬೆಲ್ಲಾ ಲೆಕ್ಕಚಾರಗಳನ್ನು ಹಾಕಿಕೊಂಡೇ ವ್ಯವಹಾರದಲ್ಲಿ ಮುಂದುವರಿಯಿರಿ.
೩. ಭೂ ದಾಖಲೆ ಪರಿಶೀಲಿಸಿಕೊಳ್ಳಿ
ಭೂಮಿಗೆ ಬೆಲೆ ಇರುವ ಬೆಂಗಳೂರಿನಂತಹ ನಗರಗಳಲ್ಲಿ ಭೂವಂಚನೆ ಸಾಮಾನ್ಯವಾಗಿಗೆ. ಹೀಗಾಗಿ ನೀವು ಯಾವುದೇ ಆಸ್ತಿಕೊಳ್ಳುವುದಿದ್ದರೂ ಅದು ಕಾನೂನು ಬದ್ಧವಾದ ದಾಖಲೆಗಳನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕಾದದು ಅಗತ್ಯ.
ಅಪಾರ್ಟ್‌ಮೆಂಟ್ ನಿರ್ಮಾಣಗೊಂಡ ಜಾಗ ಯಾವ ಖಾತೆಯನ್ನು ಹೊಂದಿದೆ, ರಸ್ತೆ, ಸಾರ್ವಜನಿಕ ಸ್ಥಳದಿಂದ ಎಷ್ಟು ದೂರದಲ್ಲಿದೆ, ರಾಜಕಾಲುವೆ,ಕೆರೆ ಮತ್ತಿತರ ಪ್ರದೇಶಗಳಿಂದ ದೂರವಿದೆಯೇ ಎಂದು ನೋಡಬೇಕು. ಮಾತ್ರವಲ್ಲದೆ, ಈ ಜಾಗಕ್ಕೆ ಸಂಬಂಧಿಸಿದ ಹಕ್ಕು ಪತ್ರವನ್ನು ಎಲ್ಲ ರೀತಿಯಿಂದಲೂ ತಪಾಸಣೆ ಮಾಡಬೇಕು ಮತ್ತು ವಿವರವಾಗಿ ಪರಿಶೀಲಿಸಬೇಕು. ಪತ್ರವು ಆಸ್ತಿಯ ಮೇಲಿನ ಹಕ್ಕುಗಳು, ಮಾಲೀಕತ್ವ ಮತ್ತು ಕಟ್ಟುಪಾಡುಗಳ ಎಲ್ಲಾ ವಿವರಗಳನ್ನು ನೀಡುತ್ತದೆ.
ಮನೆ ನಿರ್ಮಿಸಿದ ಭೂಮಿಯ ಮಣ್ಣಿನ ಗುಣಮಟ್ಟ ಮತ್ತು ಭೂಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕು. ನಿವೇಶನವು ಎಲ್ಲಾ ಋಣಬಾಧ್ಯತೆಗಳಿಂದ ಮುಕ್ತವಾಗಿರಬೇಕು ಮತ್ತು ನೋಂದಾಯಿಸಲ್ಪಟ್ಟಿರಬೇಕು. ಈ ಎಲ್ಲ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಫ್ಲಾಟ್ ಖರೀದಿಸಲು ಮುಂದಾಗಬೇಕು.
೪.ಪರವಾನಿಗೆಗಳನ್ನು ಚೆಕ್ ಮಾಡಿ
ಅಪಾರ್ಟ್‌ಮೆಂಟ್ ಕಟ್ಟುವಾಗ ಎಲ್ಲ ಸ್ಥಳೀಯ ಪ್ರಾಧಿಕಾರಗಳ ಪರವಾನಿಗೆ ಪಡೆಯಲಾಗಿದೆಯೇ, ನಿಗದಿ ನೀಲಿ ನಕ್ಷೆಯಲ್ಲಿರುವಂತೆಯೇ ನಿರ್ಮಾಣ ಗೊಂಡಿದೆಯೇ ಎಂದು ನೋಡಬೇಕು. ಡೆವಲಪರ್, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಮಂಡಳಿ ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಅನುಮೋದನೆಗಳು ಮತ್ತು ನಿರಾಕ್ಷೇಪಣಾ ಪತ್ರಗಳನ್ನು (ಎನ್‌ಓಸಿ) ಪಡೆದಿರಬೇಕು. ಆದಾಗ್ಯೂ ನೀವು ಗೃಹ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಸಾಲ ಮಂಜೂರಾತಿಗೆ ಮುನ್ನ ಸಂಬಂಧಪಟ್ಟ ಬ್ಯಾಂಕ್ ನಿಮ್ಮ ಆಸ್ತಿ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸುತ್ತವೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ನಿಮಗೆ ಗೃಹ ಸಾಲ ನೀರಾಕರಿಸಬಹುದು.
ಅಪಾರ್ಟ್‌ಮೆಂಟ್ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ದ ಅನುಮೋದನೆ ಪಡೆದುಕೊಂಡಿದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ.
೫. ಬಿಲ್ಡರ್ ಬಗ್ಗೆ ವಿಚಾರಿಸಿಕೊಳ್ಳಿ
ನೀವು ಕೊಳ್ಳಲು ಹೊರಟಿರುವ ಅಪಾರ್ಟ್‌ಮೆಂಟ್ ಕಟ್ಟಿದ ಬಿಲ್ದರ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಅವರಿಗೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಹೆಸರಿದೆ. ನಿಗದಿತ ಸಮಯದಲ್ಲಿ ಫ್ಲಾಟ್ ಅನ್ನು ನಿಮಗೆ ಒಪ್ಪಿಸುತ್ತಾರೆಯೇ, ಕಟ್ಟಡದ ಗುಣಮಟ್ಟ ಹೇಗಿರುತ್ತದೆ… ಎಂಬೆಲ್ಲಾ ಮಾಹಿತಿ ಪಡೆದುಕೊಳ್ಳಿ.
ಬಿಲ್ಡರ್‌ನ ಆರ್ಥಿಕ ಸ್ಥಿತಿ ಹೇಗಿದೆ, ಅವರು ಯಾವೆಲ್ಲಾ ಕಂಪನಿಯ ಸಾಮಗ್ರಿಗಳನ್ನು ಬಳಸಿ (ಸಿಮೆಂಟ್, ಟೈಲ್ಸ್ ಇತ್ಯಾದಿ) ಈ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಿ.
೬. ಹಣಕಾಸು ವ್ಯವಹಾರ ಹೇಗೆ?
ನಿರ್ದಿಷ್ಟ ಬಿಲ್ಡರ್‌ಗಳಿಗೆ ಹಣಕಾಸು ನೀಡಲು ಸಿದ್ಧರಿರುವ ಅಥವಾ ಸಿದ್ಧರಿಲ್ಲದ ಬ್ಯಾಂಕ್‌ಗಳ ಬಗ್ಗೆಯೂ ನೀವು ತಿಳಿದಿರಬೇಕು. ಕೆಲವು ಬಿಲ್ಡರ್‌ಗಳು ಹೆಸರು ಕೆಡಿಸಿಕೊಂಡಿರುವ ಕಾರಣದಿಂದ, ಕೆಲವು ಬ್ಯಾಂಕ್‌ಗಳು ಅಂಥವರ ಪ್ರಾಜೆಕ್ಟ್‌ನಲ್ಲಿನ ಮನೆಗಳಿಗೆ ಸಾಲ ನೀಡುವುದಿಲ್ಲ. ಆದ್ದರಿಂದ, ನೀವು ಕೊಳ್ಳಲು ಹೊರಟಿರುವ ಮನೆಯನ್ನು ನಿರ್ಮಿಸುತ್ತಿರುವ ಬಿಲ್ಡರ್‌ನ ಆರ್ಥಿಕ ಸ್ಥಿತಿ, ನಿಮಗೆ ಸಾಲ ದೊರೆಯುತ್ತದೆಯೇ ಎಂಬ ಮಾಹಿತಿಯನ್ನೂ ಪಡೆದುಕೊಳ್ಳಿ.
೭. ಬಿಲ್ಡರ್-ಖರೀದಿದಾರರ ಒಪ್ಪಂದ
ನಿಮ್ಮ ಮನಸಿಗೊಪ್ಪುವ ಫ್ಲಾಟ್ ಅಥವಾ ಮನೆಯನ್ನು ನೀವು ಆಯ್ಕೆ ಮಾಡಿದಾಗ, ನೀವು ಟೋಕನ್ ಮೊತ್ತವನ್ನು ನೀಡಿ ಅದನ್ನು ಬುಕ್ ಮಾಡಬಹುದು, ಅದಕ್ಕೆ ಪ್ರತಿಯಾಗಿ ನೀವು ಹಂಚಿಕೆ ಪತ್ರವನ್ನು ಪಡೆಯುತ್ತೀರಿ. ನಂತರ, ಉಳಿದ ಮೊತ್ತಕ್ಕೆ ಖರೀದಿದಾರ, ಬ್ಯಾಂಕ್ ಮತ್ತು ಬಿಲ್ಡರ್ ನಡುವೆ ತ್ರಿಪಕ್ಷೀಯ ಒಪ್ಪಂದವನ್ನು ನಮೂದಿಸಲಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಅದನ್ನು ವಿವರವಾಗಿ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಷರತ್ತುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಯಾವುದೇ ಸಂದೇಹಗಳಿದ್ದಲ್ಲಿ, ಈ ಹಂತದಲ್ಲಿಯೇ ಪ್ರಶ್ನಿಸಬೇಕು.
ಇದನ್ನೂ ಓದಿ| Home loan: ಮನೆಕೊಳ್ಳಲು ಇದು ಸೂಕ್ತ ಸಮಯ, ಆದರೆ ಈ ವಿಷಯಗಳನ್ನು ಮರೆಯಬೇಡಿ!
೮. ಫ್ಲಾಟ್ ಇರುವ ಜಾಗ ಹೇಗಿದೆ?
ನೀವು ನೆಲೆಸುವ ಪ್ರದೇಶದ ಸುತ್ತಮುತ್ತ ಹೇಗಿದೆ ಎಂದು ನೋಡುವುದು ಮುಖ್ಯವಾಗಿದೆ. ಅದನ್ನು ಮರೆಯಲೇಬಾರದು. ಸೌಕರ್ಯಗಳು, ಮೂಲಸೌಕರ್ಯ ಮತ್ತು ಬಸ್, ಮೆಟ್ರೋ ಸಂಪರ್ಕ ವ್ಯವಸ್ಥೆ, ಆ ಭಾಗದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿ, ಗಾಳಿಯ ಮಾಲಿನ್ಯ ಎಲ್ಲವನ್ನೂ ತಿಳಿದುಕೊಳ್ಳಿ. ಕೆಲವು ವಿಷಯಗಳು ನೀವು ಮನೆಯಲ್ಲಿ ನೆಮ್ಮದಿಯ ಜೀವನ ಮಾಡಲು ಸಹಾಯ ಮಾಡುತ್ತದೆ. ಫ್ಲಾಟ್ ಸುರಕ್ಷಿತ ಮತ್ತು ಸುಭದ್ರ ಸ್ಥಳದಲ್ಲಿರಬೇಕು, ಫ್ಲಾಟ್‌ನಲ್ಲಿ ವಾಸಿಸುವ ಕುಟುಂಬಗಳಿಗೆ ಇದು ಭದ್ರತೆಯನ್ನು ನೀಡುವಂತಿರಬೇಕು.
೯. ಗುಪ್ತ ಮತ್ತು ಹೆಚ್ಚುವರಿ ಶುಲ್ಕಗಳು
ಮನೆಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನಾದರೂ ಸರಿಯಾಗಿ ಓದಿ ಅರ್ಥಮಾಡಿಕೊಳ್ಳದೆ ಸಹಿ ಮಾಡಬೇಡಿ. ದಾಖಲೆಗಳಲ್ಲಿ ಇರುವ ಎಲ್ಲಾ ಷರತ್ತುಗಳನ್ನು ವಿವರವಾಗಿ ಓದಿ ಮತ್ತು ದಂಡದ ಷರತ್ತುಗಳನ್ನು ಅರ್ಥಮಾಡಿಕೊಳ್ಳಿ. ಗ್ರೇಸ್ ಅವಧಿಯೊಳಗೆ ನೀವು ಫ್ಲಾಟ್‌ನ ಸ್ವಾಧೀನವನ್ನು ಪಡೆಯದಿದ್ದಲ್ಲಿ ಬಿಲ್ಡರ್ ನಿಮಗೆ ಮಾಸಿಕ ದಂಡವನ್ನು ಪಾವತಿಸಬೇಕಾಗುತ್ತದೆ. ಜಿಎಸ್‌ಟಿ, ಸ್ಟ್ಯಾಂಪ್ ಡ್ಯೂಟಿ, ಗೃಹ ಸಾಲ ಪ್ರಕ್ರಿಯೆ ಶುಲ್ಕ, ನೋಂದಣಿ ಶುಲ್ಕಗಳು ಮತ್ತು ಇತರ ಎಲ್ಲಾ ಶುಲ್ಕಗಳಂತಹ ಹೆಚ್ಚುವರಿ ಮತ್ತು ಮರೆ ಮಾಚಿದ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ.
ಸ್ವಂತ ಮನೆಕೊಳ್ಳುವ ನಿಮ್ಮ ಕನಸು ಬಹುಬೇಗನೆ ಈಡೇರಲಿ.