ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್, ಆದಿತ್ಯ ಎಲ್ 1 ಬಾಹ್ಯಾಕಾಶನೌಕೆ ಸುಸ್ಥಿತಿಯಲ್ಲಿದ್ದು, ಸೂರ್ಯ-ಭೂಮಿಯ ಲ್ಯಾಗ್ರೇಂಜ್ ಪಾಯಿಂಟ್ 1 (Lagrange Point L1) ಕಡೆ ಸಾಗುತ್ತಿದೆ ಎಂದು ಹೇಳಿದೆ. ಈ ಪಾಯಿಂಟ್ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದೆ. ಅಕ್ಟೋಬರ್ 6ರಂದು ವ್ಯೂಮನೌಕೆಯು 16 ಸೆಕೆಂಡ್ ಕಾಲ ಪಥದ ತಿದ್ದುಪಡಿ ಪ್ರಕ್ರಿಯೆ(TCM) ಪೂರೈಸಿದೆ ಎಂದು ಇಸ್ರೋ ಹೇಳಿದೆ.
2023ರ ಸೆಪ್ಟೆಂಬರ್ 19ರಂದು ನಡೆಸಿದ ಟ್ರಾನ್ಸ್-ಲಗ್ರೇಂಜಿಯನ್ ಪಾಯಿಂಟ್ 1 ಅಳವಡಿಕೆ (TL1I) ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಿದ ನಂತರ ಮೌಲ್ಯಮಾಪನ ಮಾಡಿದ ಪಥವನ್ನು ಸರಿಪಡಿಸಲು ಈ ಚಟುವಟಿಕೆ ಅಗತ್ಯವಾಗಿತ್ತು. ಬಾಹ್ಯಾಕಾಶ ನೌಕೆಯು ಎಲ್1 ಸುತ್ತ ಹಾಲೋ ಕಕ್ಷೆಯ ಅಳವಡಿಕೆಯ ಕಡೆಗೆ ಅದರ ಉದ್ದೇಶಿತ ಹಾದಿಯಲ್ಲಿದೆ ಎಂದು ಟಿಸಿಎಂ ಖಚಿತಪಡಿಸುತ್ತದೆ ಎಂದು ಇಸ್ರೋ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದೆ.
ಆದಿತ್ಯ-L1 ಬಾಹ್ಯಾಕಾಶ ನೌಕೆಯು ಮುಂದಕ್ಕೆ ಚಲಿಸುವುದನ್ನು ನಿರಂತರವಾಗಿ ಮುಂದುವರೆಸಿದೆ ಮತ್ತು ಕೆಲವೇ ದಿನಗಳಲ್ಲಿ ಮ್ಯಾಗ್ನೆಟೋಮೀಟರ್ ಅನ್ನು ಮತ್ತೆ ಆನ್ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿಕೊಂಡಿದೆ. ಇಲ್ಲಿಯವರೆಗೂ ಬಾಹ್ಯಾಕಾಶ ನೌಕೆಯು ಭೂಮಿಯಿಂದ ಸುತ್ತುವರಿದ ಮತ್ತು ಟ್ರಾನ್ಸ್-ಲಗ್ರೇಂಜಿಯನ್ ಪಾಯಿಂಟ್ 1 ಅಳವಡಿಕೆ (TL1I) ಸಂಬಂಧ ನಾಲ್ಕು ಬಾರಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ. ಆ ಮೂಲಕ ಬಾಹ್ಯಾಕಾಶ ನೌಕೆಯು ಭೂಮಿಯ ಪ್ರಭಾವದ ಗೋಳದಿಂದ ಯಶಸ್ವಿಯಾಗಿ ಪಾರಾಗಿದೆ ಎಂದು ಇಸ್ರೋ ಹೇಳಿದೆ.
ಈ ಸುದ್ದಿಯನ್ನೂ ಓದಿ: Aditya L1 Mission: 9.2 ಲಕ್ಷ ಕಿ.ಮೀ ಕ್ರಮಿಸಿದ ಆದಿತ್ಯ ಎಲ್ 1; ಗುರಿ ತಲುಪಲು ಇನ್ನೆಷ್ಟು ಕಿ.ಮೀ ಬಾಕಿ?
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಿಷನ್ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ಸೆಪ್ಟೆಂಬರ್ 2ರಂದು ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್ 1 ಮಿಷನ್ ಬೇರ್ಪಟ್ಟಿತು. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.
ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ. ಆದಿತ್ಯ ಎಲ್ 1 ಮಿಷನ್ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಸೂರ್ಯಯಾನವಾಗಿದೆ. ಹಾಗಾಗಿ, ಮಿಷನ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.