ಬೆಂಗಳೂರು: ಸೂರ್ಯನ ಅಧ್ಯಯನಕ್ಕೆ (Sun Study) ಕೈಗೊಳ್ಳಲಾಗಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಯಶಸ್ಸಿನ ಹಾದಿಯಲ್ಲಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ (Aditya L1 Spacecraft) ಜನವರಿಯಲ್ಲಿ ಹಾಲೋ ಕ್ಷಕೆಯನ್ನು (Halo Orbit) ಸೇರಲಿದೆ ಎಂದು ಇಸ್ರೋ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ (S Somanath) ಅವರು, ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸುಗಮವಾಗಿ ಸಾಗುತ್ತಿದೆ ಮತ್ತು ಜನವರಿ ಮಧ್ಯದ ವೇಳೆಗೆ ಲಾಗ್ರೇಂಜ್ ಪಾಯಿಂಟ್ 1 (L1) ತಲುಪಲಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಮದುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, ಮಿಷನ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಭೂಮಿಯಿಂದ ಎಲ್1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ಮಧ್ಯದ ವೇಳೆಗೆ, ಬಾಹ್ಯಾಕಾಶ ನೌಕೆ ಎಲ್1 ಹಂತವನ್ನು ತಲುಪಲಿದೆ. ನಂತರ ಆ ಹಂತದಲ್ಲಿ, ನಾವು ಲಗ್ರೇಂಜ್ ಪಾಯಿಂಟ್‌ಗೆ ಅಳವಡಿಕೆ ಮಾಡುತ್ತೇವೆ. ಅದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಅದೊಂದು ದೊಡ್ಡ ಕಕ್ಷೆ. ಆದ್ದರಿಂದ ಅದು ಜನವರಿ ಮಧ್ಯದ ವೇಳೆಗೆ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ಶ್ರಿಹರಿಕೋಟ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಕೆಲವು ದಿನಗಳ ಬಳಿಕ ಈ ಆದಿತ್ಯ ಎಲ್ 1 ಮಿಷನ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿತು.
ಈ ಸುದ್ದಿಯನ್ನೂ ಓದಿ : Aditya L1 Mission: ಸುಸ್ಥಿತಿಯಲ್ಲಿದೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ, ನಿರ್ದಿಷ್ಟ ಗುರಿಯತ್ತ ದಾಪುಗಾಲು; ಇಸ್ರೋ
ಈ ಮಿಷನ್ ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಪೇಲೋಡ್‌ಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ. ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿವೆ ಎಂದು ಇಸ್ರೋ ಹೇಳಿದೆ.
ಸೂರ್ಯನ ಹೊರಗಿನ ಪದರವಾದ ಸೌರ ಕರೋನಾವನ್ನು ಅಧ್ಯಯನ ಮಾಡುವುದು ಮತ್ತು ಸೂರ್ಯ-ಭೂಮಿಯ ಸಂಬಂಧದ ವಿವಿಧ ಅಂಶಗಳನ್ನು ತನಿಖೆ ಮಾಡುವುದು ಆದಿತ್ಯ ಎಲ್ 1 ಮಿಷನ್ ಪ್ರಮುಖ ಉದ್ದೇಶವಾಗಿದೆ. ಭೂಮಿ ಮತ್ತು ಸೂರ್ಯನ ನಡುವೆ ಇರುವ ಬಾಹ್ಯಾಕಾಶದಲ್ಲಿ ಸ್ಥಿರವಾದ ಬಿಂದುವಾಗಿರುವ ಮೊದಲ ಲಾಗ್ರಾಂಜಿಯನ್ ಪಾಯಿಂಟ್ ಸುತ್ತ ಹಾಲೋ ಕಕ್ಷೆಗೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಈ ಕಕ್ಷೆಯು ಭೂಮಿಯ ಅಡೆತಡೆಯಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.