ಬೆಂಗಳೂರು: ಎಲ್ಲರೂ ಚಂದ್ರಯಾನ 2 (Chandrayaan 2) ವಿಫಲವಾಗಿದೆ ಎಂದೇ ಹೇಳುತ್ತಿದ್ದಾರೆ. ಆದರೆ, ನಿಜವಾಗಿಯೂ ಇದು ವಿಫಲ ಆಗಿಲ್ಲ. ಚಂದ್ರಯಾನ 3ರ (Chandrayaan 3) ಸಾಧನೆಗೆ ಇದುವೇ ಮೆಟ್ಟಿಲಾಗಿದೆ. ಅದು ಕಳುಹಿಸಿಕೊಟ್ಟ ಅನೇಕ ಚಿತ್ರಸಹಿತ ಮಾಹಿತಿಗಳನ್ನು ಮಿಷನ್ ಮೂರರಲ್ಲಿ ಅಳವಡಿಸಿಕೊಳ್ಳಲು ಸಹಾಯವಾಯಿತು ಎಂದು ಇಸ್ರೋ ಮಾಜಿ ಹಿರಿಯ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಬಿ.ಆರ್. ಗುರುಪ್ರಸಾದ್ (Dr BR Guruprasad) ಹೇಳಿದರು.
ಅವರು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಚಂದ್ರಯಾನ 2 ವಿಫಲ ಆಗಿಲ್ಲ. ಇದರ ಕಕ್ಷಾ ನೌಕೆ (ಆರ್ಬಿಟರ್ ಮಾಡ್ಯೂಲ್) 4 ವರ್ಷಗಳಿಂದ ಚಂದ್ರನ ಸುತ್ತುತ್ತಾ ಬಂದಿದೆ. ಇದು 8 ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ. ಆ ವೈಜ್ಞಾನಿಕ ಉಪಕರಣಗಳ ಮೂಲಕ ಚಂದ್ರನ ವಿವಿಧ ಮುಖಗಳ ಬಗ್ಗೆ ಅತ್ಯಮೂಲ್ಯವಾದ ಮಾಹಿತಿಯನ್ನು ಒದಗಿಸಿದೆ. ಜತೆಗೆ ಚಂದ್ರಯಾನ 3ರ ಯಶಸ್ಸಿಗೆ ಇದರ ಸಹಾಯವೂ ಆಗಿದೆ. ಇದಕ್ಕೆ ಉಪಯುಕ್ತ ಮಾಹಿತಿಯನ್ನು ಒದಿಗಿಸಿರುವುದೇ ಆ ಕೋಶವಾಗಿದೆ. ಚಂದ್ರಯಾನ 2 ಕಳುಹಿಸಿದ ಚಿತ್ರಸಹಿತ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ 3ರ ಲ್ಯಾಂಡಿಂಗ್‌ನಲ್ಲಿ ಬಳಸಿಕೊಳ್ಳಲಾಗಿದೆ. ಸುಮಾರು 30 ಸೆಂ.ಮೀ.ನಷ್ಟು ಚಂದ್ರನ ಪ್ರದೇಶದ ಚಿತ್ರಗಳನ್ನು ಅದು ಕಳುಹಿಸಿಕೊಟ್ಟಿತ್ತು ಎಂದು ಡಾ. ಬಿ.ಆರ್. ಗುರುಪ್ರಸಾದ್ ವಿವರಿಸಿದರು.
ಚಂದ್ರಯಾನ 3ರ ಇಳಿಕೆ ದೃಶ್ಯವೇ ರೋಚಕವಾಗಿತ್ತು. ವಿಕ್ರಮ್ ಲ್ಯಾಂಡರ್ ಇಳಿಕೆಗೂ ಮುನ್ನ ತನ್ನ ಜಾಗವನ್ನು ವೀಕ್ಷಿಸಿಕೊಂಡಿತು. ಎಲ್ಲಿಯಾದರೂ ಕಲ್ಲು, ಮಣ್ಣುಗಳು ಇವೆಯೇ ಎಂಬ ಬಗ್ಗೆ ನೋಡಿಕೊಂಡು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದು ಭಾರತದಲ್ಲಿ ಸುವರ್ಣಾಕ್ಷರದಲ್ಲಿ ಬರದಿಡಬೇಕಾದ ದಿನವಾಗಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ಬಣ್ಣಿಸಿದರು.
ಭಾರತ ಸರ್ಕಾರದ ನೆರವು ಸ್ಮರಣೀಯ
ಇಸ್ರೋ ದಿನ ನಿತ್ಯ ಜೀವನಕ್ಕೆ ಸಂಬಂಧಪಟ್ಟ ರಾಕೆಟ್‌ಗಳನ್ನು ಉಡಾವಣೆ ಮಾಡುತ್ತಿರುವುದು, ಒಂದೇ ಬಗೆಯ ಉಪಕ್ರಮಗಳನ್ನು ನಿರ್ಮಾಣ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದರೆ ಇದರ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ಆಗದು ಎಂಬ ನಿಟ್ಟಿನಲ್ಲಿ ಭಾರತ ಸರ್ಕಾರ ತೀರ್ಮಾನವನ್ನು ಮಾಡಿತು. ಜತೆಗೆ ಜಗತ್ತಿನ ಅಂತರಿಕ್ಷ ಆರ್ಥಿಕತೆಯಲ್ಲಿ ಶೇಕಡಾ 2ರಷ್ಟು ಮಾತ್ರ ಭಾರತ ಹೊಂದಿದೆ. ಆದರೆ, ಈ ಆರ್ಥಿಕತೆಯನ್ನು ಮುಟ್ಟಲು ನಮಗೆ ಸಾಮರ್ಥ್ಯ ಇದೆ. ಇದನ್ನು ಬೆಳೆಸಿಕೊಳ್ಳಲು ನಮಗೆ ಕೇಂದ್ರ ಸರ್ಕಾರ ನೆರವಾಗಿದೆ. ಇಸ್ರೋದ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಖಾಸಗಿಗೆ ವಹಿಸಿ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ರೂಪಿಸುವಂತಹ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಲಭ್ಯ ಸಂಪನ್ಮೂಲಗಳ ಮೂಲಕ ಭಾರತ ತನ್ನ ಗುರಿಯನ್ನು ತಲುಪಿ ಮಾಡಿದ ಸಾಧನೆ ಮಹತ್ತರವಾದದ್ದು. ಇದು ಯಾವುದೇ ಒಂದು ಉಪಗ್ರಹ, ರಾಕೆಟ್‌ಗೆ ಸಂಬಂಧಪಟ್ಟಿದ್ದಿರಬಹುದು. 2008ರಲ್ಲಿ ನಾವು ಚಂದ್ರಯಾನ 1 ಅನ್ನು ಸಾಕಷ್ಟು ಕಡಿಮೆ ವೆಚ್ಚದಲ್ಲಿ ಕಳುಹಿಸಿದ್ದೇವೆ. ಅಲ್ಲಿ ಚಂದ್ರನನ್ನು ಸುತ್ತುವುದಕ್ಕೆ ಪ್ರಾರಂಭಿಸಿದ ನಂತರ ಆ ನೌಕೆಯು ತನ್ನಲ್ಲಿದ್ದ ಒಂದು ಕೋಶವನ್ನು ಚಂದ್ರನಿಗೆ ಅಪ್ಪಳಿಸುವಂತೆ ಮಾಡಿತು. ಆಗ ಭಾರತವು ಚಂದ್ರನ ಮೇಲ್ಮೈಯನ್ನು ತಲುಪಿದ ನಾಲ್ಕನೇ ವೈಯಕ್ತಿಕ ರಾಷ್ಟ್ರವಾಯಿತು. ಅದಕ್ಕೇನು ಹೆಚ್ಚಿನ ವೆಚ್ಚವನ್ನು ಮಾಡದೆಯೇ ಚಂದ್ರನ ಮೇಲೆ ನೀರಿದೆ ಎಂಬ ಖಚಿತ ಮಾಹಿತಿಯನ್ನು ಕಂಡು ಹಿಡಿದಿದ್ದೇ ಭಾರತ. ಇದು ಇಡೀ ಜಗತ್ತಿನ ಶ್ಲಾಘನೆಗೆ ಪಾತ್ರವಾಯಿತು ಎಂದು ಡಾ. ಬಿ.ಆರ್. ಗುರುಪ್ರಸಾದ್ ಹೇಳಿದರು.
ಭವಿಷ್ಯದ ದೃಷ್ಟಿಯಿಂದ ಇದು ಮಹತ್ತರ ಹೆಜ್ಜೆ
ಅಂತರಿಕ್ಷ ತಂತ್ರಜ್ಞಾನವನ್ನು ತನ್ನ ತ್ವರಿತ, ಸರ್ವತೋಮುಖ ಅಭಿವೃದ್ಧಿಗಾಗಿ ವ್ಯಾಪಕವಾಗಿ ಬಳಸಿಕೊಂಡ ರಾಷ್ಟ್ರವೆಂದರೆ ಅದುವೇ ಭಾರತ. ಚಂದ್ರನ ಕಷ್ಟಕರವಾದ ಪ್ರದೇಶಕ್ಕೆ ಹೋಗಿ ಇಳಿದ ಮೊದಲ ರಾಷ್ಟ್ರ ಭಾರತವಾಗಿದೆ. ಇದೇ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಈ ಚಂದ್ರಯಾನ 3ರ ಯಶಸ್ಸು ಇಂದಿನದ್ದು ಮಾತ್ರವಲ್ಲ, ಭಾರತದ ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ಮಹತ್ತರವಾಗಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Power Point with HPK : ಶಾಸಕರಿಗೆ ಹೆಚ್ಚಿನ ಅನುದಾನ ಬೇಕಿದ್ದರೆ ಮುಂದಿನ ಬಜೆಟ್‌ವರೆಗೆ ಕಾಯಬೇಕೆಂದ ಜಾರ್ಜ್!
ಭಾರತ ಬದಲಾಗಿದೆ, ಟೀಕಿಸುವವರ ಮನಸ್ಥಿತಿ ಬದಲಾಗಬೇಕಿದೆ
ಬಡತನದ ದೃಷ್ಟಿಯಿಂದ ಭಾರತವನ್ನು ನೋಡುವುದಾದರೆ ಈ ಹಿಂದೆಂದಿಗಿಂತಲೂ ಸಾಕಷ್ಟು ಮುಂದುವರಿದಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯಬಾರದು ಎಂಬುದು ಏನೂ ಇಲ್ಲ. ಇನ್ನು ಕಡಿಮೆ ವೆಚ್ಚದಲ್ಲಿ ಅದ್ಭುತವಾದ ವೈಜ್ಞಾನಿಕ ಸಾಧನೆಯನ್ನು ಮಾಡಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದೇವೆ. ಭಾರತ ಎಂದರೆ ಹಿಂದುಳಿದ ರಾಷ್ಟ್ರ, ತಾಂತ್ರಿಕ ಸಾಮರ್ಥ್ಯ ಇಲ್ಲ ಎಂದು ಹೇಳುತ್ತಿದ್ದ ಕಾಲ ಇತ್ತು. ಆದರೆ, ಇದನ್ನೇ ಕೆಲವು ರಾಷ್ಟ್ರಗಳು ಇನ್ನೂ ಹೇಳಿಕೊಂಡು ಬರುತ್ತಿವೆ. ಈಗ ಭಾರತ ಸಾಕಷ್ಟು ಮುಂದುವರಿದಿದೆ. ಭಾರತ ಬದಲಾಗಿದೆ, ಟೀಕಿಸುವವರ ಮನಸ್ಥಿತಿ ಬದಲಾಗಬೇಕಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.