Site icon Vistara News

Chandrayaan 3: ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್, ಹೊಸ ಯುಗದ ಉದಯ ಎಂದ ಪ್ರಧಾನಿ ಮೋದಿ

PM Narendra Modi

ಬೆಂಗಳೂರು: ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ (Chandrayaan3 Mission Soft-landing) ಮಾಡುತ್ತಿದ್ದಂತೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ (ISRO President S Somanath) ಅವರು, ”ನಾವೀಗ ಚಂದ್ರನ ಮೇಲಿದ್ದೇವೆ” ಎಂದು ಹೇಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶವಾಸಿಗಳನ್ನು ಉದ್ದೇಶಿ ವರ್ಚುವಲ್ ಆಗಿ ಮಾತನಾಡಿದರು. ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳಲು ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಒಂದು ಕ್ಷಣ ಅಮೂಲ್ಯ ಮತ್ತು ಅಭೂತಪೂರ್ವವಾಗಿದೆ. ಈ ಕ್ಷಣ ನವ ಭಾರತದ ಜೈಘೋಷವಾಗಿದೆ. ಈ ಕ್ಷಣ 140 ಕೋಟಿ ಜನರ ಹೃದಯ ಬಡಿತಗಳ ಶಕ್ತಿಯಾಗಿದೆ. ಅಮೃತ ಕಾಲದ ಈ ಹಂತದಲ್ಲಿ ಅಮೃತ ವರ್ಷ ಯಶಸ್ವಿಯಾಗಿದೆ. ಹೊಸ ಯುಗದ ಆರಂಭವಾಗಿದೆ ಎಂದು ಹೇಳಿದರು.

ನಾನು ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ್ದರೂ, ಎಲ್ಲ ಭಾರತೀಯರಂತೆ ನನ್ನ ಮನಸ್ಸೂ ಇಸ್ರೋ ಮೇಲೆ ಇದೆ. ಈ ಸಂತೋಷದಲ್ಲಿ ನಾನು ಭಾಗಿಯಾಗಿದ್ದೇನೆ. ಪ್ರತಿ ಭಾರತೀಯ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ. ಪ್ರತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾನು ಕೂಡ ದೇಶದ ಈ ಹೆಮ್ಮೆಯ ಕ್ಷಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇದು ಹೊಸ ಯುಗದ ಆರಂಭ ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೇ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಯಾವ ರಾಷ್ಟ್ರವೂ ಇದುವರೆಗೆ ಚಂದ್ರನ ದಕ್ಷಿಣ ಧ್ರುವನ್ನು ತಲುಪಿಲ್ಲ. ಆ ಕ್ಷೇತ್ರಕ್ಕೆ ನಾವು ಹೋಗಿದ್ದೇವೆ. ವಿಜ್ಞಾನಿಗಳ ಕಠಿಣ ಪರಿಶ್ರಮವು ಅಲ್ಲಿಗೆ ತಲುಪಲು ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version