ನ್ಯೂಯಾರ್ಕ್: ಮೌಂಟ್ ಎವರೆಸ್ಟ್‌ಗಿಂತ (Mount Everest) ಮೂರು ಪಟ್ಟು ದೊಡ್ಡದಾದ ಧೂಮಕೇತುವೊಂದು (12P/Pons-Brooks) ಭೂಮಿಯ ಕಡೆಗೆ ಧಾವಿಸಿ ಬರುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
12P/Pons-Brooks ಎಂದು ಹೆಸರಿಸಲಾದ ಈ ಧೂಮಕೇತು ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಸ್ಫೋಟಗೊಂಡಿದೆ ಮತ್ತು ಈಗ ಭೂಮಿಯ ಕಡೆಗೆ ನುಗ್ಗುತ್ತಿದೆ. ಇದೊಂದು ಕ್ರಯೋವೋಲ್ಕಾನಿಕ್- ಅಥವಾ ಶೀತ ಜ್ವಾಲಾಮುಖಿ- ಧೂಮಕೇತು. ಇದರ ಸುತ್ತಳತೆ ಸುಮಾರು 30 ಕಿಲೋಮೀಟರ್‌ಗಳಷ್ಟಿದೆ. ಅಕ್ಟೋಬರ್ 5ರಂದು ಸ್ಫೋಟಿಸಿತು.
ಕಳೆದ ನಾಲ್ಕು ತಿಂಗಳಲ್ಲಿ ಈ ಧೂಮಕೇತು ಎರಡನೇ ಬಾರಿಗೆ ಸ್ಫೋಟಿಸಿತು. ಮೊದಲ ಸ್ಫೋಟ ಜುಲೈನಲ್ಲಿ ಸಂಭವಿಸಿದೆ. 12Pಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬ್ರಿಟಿಷ್ ಖಗೋಳ ಸಂಘವು (BAA), ಅದರ ʼಕೋಮಾʼದಿಂದ ಪ್ರತಿಫಲಿಸುವ ಬೆಳಕು ಹತ್ತಾರು ಬಾರಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ನಂತರ ಸ್ಫೋಟವನ್ನು ಪತ್ತೆಹಚ್ಚಿದೆ. ಕೋಮಾ ಎಂದರೆ ಅದರ ಕೇಂದ್ರವನ್ನು ಸುತ್ತುವರಿದಿರುವ ಅನಿಲದ ಮೋಡ.
ಸ್ಫಟದ ಬಳಿಕ ಈ ಧೂಮಕೇತುವಿನ ಕೋಮಾ ಮತ್ತಷ್ಟು ವಿಸ್ತರಿಸಿದೆ. ಮತ್ತು “ವಿಚಿತ್ರವಾದ ಕೊಂಬುಗಳನ್ನು” ಸೃಷ್ಟಿಸಿಕೊಂಡಿದೆ. ಕೋಮಾದ ಅನಿಯಮಿತ ಆಕಾರ ಈ ಧೂಮಕೇತುವನ್ನು ಕಾಲ್ಪನಿಕ ಬಾಹ್ಯಾಕಾಶ ನೌಕೆಯಂತೆ ಕಾಣಿಸುತ್ತಿದೆ. ಉದಾಹರಣೆಗೆ ʻಸ್ಟಾರ್ ವಾರ್ಸ್’ ಫಿಲಂನ ಮಿಲೇನಿಯಮ್ ಫಾಲ್ಕನ್‌ನಂತೆ ಕಾಣಿಸುತ್ತಿದೆ ಎಂದು ಕೆಲವು ತಜ್ಞರು ತಮಾಷೆ ಮಾಡಿದ್ದಾರೆ.
ಕೊಂಬುಗಳ ಕಾರಣ ಅಸ್ಪಷ್ಟವಾಗಿದೆ. ತಜ್ಞರು ಇದು 12Pಯ ನ್ಯೂಕ್ಲಿಯಸ್‌ನ ಆಕಾರದಿಂದ ಉಂಟಾಗಿರಬಹುದು ಎಂದು ನಂಬುತ್ತಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಎರಡು ಕೊಂಬುಗಳು ವಿಚಿತ್ರವಾದ ಆಕಾರದ ಕ್ರಯೋವೊಲ್ಕಾನಿಕ್ ತೆರಪಿನಿಂದ ಉಂಟಾಗಿರಬಹುದು. ಇದು ಒಳಗಿನ ಅನಿಲವನ್ನು ಹೊರ ಚಿಮ್ಮಿಸಲು ಕಾರಣವಾಗಿದೆ ಎಂದಿದ್ದಾರೆ.
12Pಯ ಪಥ ಭೂಮಿಯತ್ತ ಇದ್ದರೂ, ಹೆಚ್ಚಿನ ಚಿಂತೆ ಅಗತ್ಯವಿಲ್ಲ. 2024ರವರೆಗೂ ಧೂಮಕೇತು ಭೂಮಿಗೆ ಸಮೀಪದ ಬಿಂದುವನ್ನು ತಲುಪುವುದಿಲ್ಲ. ಮತ್ತು ಅದು ಬರಿಗಣ್ಣಿಗೆ ಗೋಚರಿಸಲಿದೆ. ಈ ಧೂಮಕೇತುವನ್ನು ನಂತರ ಸೌರವ್ಯೂಹಕ್ಕೆ ಮರಳಿ ತಿರುಗುವಂತೆ ಘಾತಿಸಲಾಗುತ್ತದೆ. ಮತ್ತು 2095ರವರೆಗೂ ಅದು ಮರಳಿ ಬರುವುದಿಲ್ಲ.
ಇದು ಜುಲೈ 20ರಿಂದ 12Pಯ ಎರಡನೇ ಸ್ಫೋಟವಾಗಿದೆ. 69 ವರ್ಷಗಳಲ್ಲಿ ಮೊದಲ ಬಾರಿಗೆ ಇದು ಸ್ಫೋಟಿಸಿದೆ. ಸ್ಫೋಟದ ಸಮಯದಲ್ಲಿ ಹಾರ್ನ್ ತರಹದ ಹೊರಸೂಸುವಿಕೆಗಳು ಧೂಮಕೇತಿಗಿಂತ 7,000 ಪಟ್ಟು ಹೆಚ್ಚು ವಿಸ್ತಾರಸಿವೆ. ಈ ಧೂಮಕೇತು ಸ್ಫೋಟಗೊಳ್ಳುವುದನ್ನು ಮುಂದುವರೆಸಿದರೆ ಮುಂದಿನ ವರ್ಷ ಹೆಚ್ಚಿನ ಆಸಕ್ತಿ ಕೆರಳಿಸಲಿದೆ. ಇದನ್ನು ಮೊದಲು ಜುಲೈ 12, 1812ರಂದು ಜೀನ್-ಲೂಯಿಸ್ ಪೊನ್ಸ್ ಎಂಬ ವಿಜ್ಞಾನಿ ಕಂಡುಹಿಡಿದರು. ಇದು ಸಕ್ರಿಯ ಐಸ್ ಜ್ವಾಲಾಮುಖಿಗಳನ್ನು ಹೊಂದಿರುವ 20 ಧೂಮಕೇತುಗಳಲ್ಲಿ ಒಂದು.