Site icon Vistara News

Dr. C R Sathya : ಇಸ್ರೊದ ಹಳೆಯ ಫೋಟೊಗಳಲ್ಲಿ ಮಿಂಚಿದ ವಿಜ್ಞಾನಿ ಡಾ. ಸಿ.ಆರ್‌. ಸತ್ಯ ಇನ್ನಿಲ್ಲ

former isro scientist dr c r sathya no more

isro

ಬೆಂಗಳೂರು: 60ರ ದಶಕದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಸಿದ್ಧಪಡಿಸಿದ ಮೊಟ್ಟಮೊದಲ ರಾಕೆಟ್‌ಗೆ ಬಳಸಲಾದ ನೋಸ್ ಕೊನ್ ಅನ್ನು ಸೈಕಲ್‌ನಲ್ಲಿ ಇಟ್ಟುಕೊಂಡು ಸಾಗಿಸುತ್ತಿರುವ ಈ ಚಿತ್ರ ಬಹಳ ಪ್ರಸಿದ್ಧವಾದದು. ವಿದೇಶಿ ಫೋಟೊಗ್ರಾಫರ್‌ ತೆಗೆದ ಈ ಚಿತ್ರದಲ್ಲಿ ಸೈಕಲ್‌ನಲ್ಲಿ ಹೀಗೆ ರಾಕೆಟ್‌ನ ನೋಸ್ ಕೊನ್ ಇಟ್ಟುಕೊಂಡು ಹೋಗುತ್ತಿರುವವರಲ್ಲಿ, ಬಲಬದಿಯಲ್ಲಿರುವವರು ಇನ್ನಿಲ್ಲ.

ಹೌದು, ಇಸ್ರೊದ ಮಾಜಿ ವಿಜ್ಞಾನಿ, ಲೇಖಕ ಡಾ. ಸಿ. ಆರ್‌. ಸತ್ಯ (Dr. C R Sathya) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 80ವರ್ಷ ವಯಸ್ಸಾಗಿತ್ತು. ರಾಕೆಟ್‌ ತಂತ್ರಜ್ಞಾನದಲ್ಲಿ ಇಂದು ಇಸ್ರೊ ಬಹುದೊಡ್ಡ ಹೆಸರು ಮಾಡಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಡಿಗಲ್ಲು ಹಾಕಿದವರಲ್ಲಿ ಸಿ. ಆರ್‌. ಸತ್ಯ ಕೂಡ ಒಬ್ಬರು. ಭಾರತದ ಕ್ಷಿಪಣಿ ಪಿತಾಮಾಹ, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಜತೆ ಕೆಲಸ ಮಾಡಿ ರಾಕೆಟ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಸಾಕಷ್ಟು ಶ್ರಮಿಸಿದ್ದರು.

ಎತ್ತಿನಗಾಡಿಯಲ್ಲಿ ರಾಕೆಟ್‌ನ ಭಾಗಗಳನ್ನು ಡಾ. ಅಬ್ದುಲ್‌ ಕಲಾಂ ಸಾಗಿಸುತ್ತಿದ್ದಾಗಲೂ ಸತ್ಯ ಅವರ ಜತೆಗಿದ್ದರು. ಈ ಚಿತ್ರ ಕೂಡ ಇಸ್ರೊದ ಅವಿಸ್ಮರಣೀಯ ಚಿತ್ರಗಳಲ್ಲಿ ಒಂದಾಗಿದೆ.

1942 ಆಗಸ್ಟ್‌ 15 ರಂದು ಮೈಸೂರಿನಲ್ಲಿ ಜನಿಸಿದ ಡಾ. ಸಿ.ಅರ್‌. ಸತ್ಯ ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮಗ. ಸತ್ಯ ಅವರ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಸತ್ಯ ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಬಾಂಬೆಯ ಅಣು ಸಂಶೋಧನಾ ಸಂಸ್ಥೆ ಸೇರಿದ್ದರು.

ಈ ಫೋಟೊದ ಕತೆಯೇನು?
ರಾಕೆಟ್‌ನ ನೋಸ್‌ಕೊನ್‌ ಅನ್ನು ಡಾ. ಸಿ.ಆರ್. ಸತ್ಯ ಸಾಗಿಸುತ್ತಿರುವ ಈ ಫೋಟೊದ ಹಿಂದಿನ ಕತೆ ರೋಚಕವಾದದ್ದು. ಆಗಿನ್ನು ರಾಕೆಟ್‌ ಉಡಾವಣೆಯ ತಂತ್ರಜ್ಞಾನದಲ್ಲಿ ಕಣ್ಣು ಬಿಡಲು ಭಾರತೀಯ ವಿಜ್ಞಾನಿಗಳು, ತಂತ್ರಜ್ಞರು ಸಾಹಸ ಪಡುತ್ತಿದ್ದರು. ಅದೊಂದು ದಿನ ರಾಕೆಟ್‌ ಉಡಾವಣೆಗೆ ದಿನ ನಿಗದಿಯಾಗಿತ್ತು. ಸಂಜೆ 6.30ಕ್ಕೆ ಉಡಾವಣೆ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದರು. ಇದನ್ನು ನೋಡಲು ಅನೇಕ ಗಣ್ಯರು, ಇನ್ನೂ ಯಾವುದೇ ಮೂಲ ಸೌಕರ್ಯಗಳಿಲ್ಲದ ಥಂಬಾ ರಾಕೆಟ್ ಉಡಾವಣಾ ಕೇಂದ್ರಕ್ಕೆ ಆಗಮಿಸಿದ್ದರು.
ರಾಕೆಟ್‌ನ ನೋಸ್‌ಕೊನ್‌ನಲ್ಲಿ ಅಗತ್ಯ ಎಲ್ಲ ಉಪಕರಣಗಳನ್ನು ಅಳವಡಿಸಲಾಗಿತ್ತು. ಅದರೆ ಕೆಲವು ಅಂತಿಮ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ರಾಕೆಟ್‌ ಅನ್ನು ಪೂರ್ಣಗೊಳಿಸುವಾಗ ಕೆಲವು ರಾಸಾಯನಿಕಗಳನ್ನು (ಮುಖ್ಯವಾಗಿ ಸೋಡಿಯಂ) ಸೇರಿಸಬೇಕಿತ್ತು. ಈ ಕೆಲಸವನ್ನು ಉಡಾವಣಾ ಕೇಂದ್ರದಲ್ಲಿ ಮಾಡುವಾಗ ಅದು ಸ್ಫೋಟಗೊಂಡರೆ ಅಪಾಯವಾದೀತು (ಅನೇಕ ಗಣ್ಯರೂ ಆಗಲೇ ಆಗಮಿಸಿದ್ದರಿಂದ) ಎಂದು ಹೆದರಿದ ವಿಜ್ಞಾನಿ ಡಾ. ಅಬ್ದುಲ್‌ ಕಲಾಂ, ಇದನ್ನು ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಬೆಸ್ತರ ಮನೆಯೊಂದರಲ್ಲಿ ಸಿದ್ಧಮಾಡಿಕೊಂಡು ತರುವಂತೆ ಸಿ. ಆರ್‌. ಸತ್ಯ ಮತ್ತು ಇನ್ನೊಬ್ಬರಿಗೆ ಸೂಚಿಸಿದ್ದರು. ಅದರಂತೆಯೇ ಕೇಂದ್ರದ ಜೀಪಿನಲ್ಲಿ ಇದನ್ನು ಬೆಸ್ತರ ಮನೆಗೆ ತೆಗೆದುಕೊಂಡು ಹೋಗಲಾಗಿತ್ತು.
ಆಗ ಉಡಾವಣಾ ಕೇಂದ್ರದಲ್ಲಿ ಇದ್ದಿದ್ದು ಒಂದೇ ಜೀಪು. ಅನೇಕ ಗಣ್ಯರು ಆಗಮಿಸಿದ್ದರಿಂದ ಈ ಜೀಪಿನ ಚಾಲಕ ಇವರನ್ನು ಬೆಸ್ತರ ಮನೆಯಲ್ಲಿ ಬಿಟ್ಟು ಹೋದವನು ಮತ್ತೆ ಕರೆದುಕೊಂಡು ಹೋಗಲು ಬರಲೇ ಇಲ್ಲ. ಡಾ.ಸತ್ಯ ಅವರು ಕಾದು ಕಾದು ಸುಸ್ತಾಗಿ, ಇನ್ನು ತಡ ಮಾಡಿದರೆ, ಸಂಜೆ ಉಡಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ, ಅಲ್ಲಿಯೇ ಇದ್ದ ಬೆಸ್ತರಿಗೆ ಸೇರಿದ್ದ ಸೈಕಲ್‌ನಲ್ಲಿ ಈ ರಾಕೆಟ್‌ ನೋಸ್‌ಕೊನ್‌ ಇಟ್ಟುಕೊಂಡು ಉಡಾವಣಾ ಕೇಂದ್ರಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಫ್ರಾನ್ಸ್‌ನ ಫೋಟೊಗ್ರಾಫರ್‌ ಈ ಚಿತ್ರವನ್ನು ತೆಗೆದಿದ್ದರು ಎಂದು ಸತ್ಯ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.

ಅಲ್ಲಿ ಒಂದು ವರ್ಷ ತರಬೇತಿಯ ನಂತರ ಕೇರಳದ ಥಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಡಾ. ಅಬ್ದುಲ್‌ ಕಲಾಂ ಅವರ ಕೈಕೆಳಗೆ ನೇರವಾಗಿ ಕೆಲಸ ಮಾಡುತ್ತಿದ್ದ ಅವರು ರಾಕೆಟ್‌ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಬಹಳಷ್ಟು ಕೊಡುಗೆ ನೀಡಿದ್ದಾರೆ. ಉಡಾವಣಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಇದ್ದಾಗಲೂ ತಂತ್ರಜ್ಞರ ತಂಡವೊಂದರ ಮುಖ್ಯಸ್ಥರಾಗಿ ಇಸ್ರೊ ಪ್ರಪಂಚದ ಗಮನ ಸೆಳೆಯುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ.

ಸುಮಾರು 25 ವರ್ಷ ಇಸ್ರೊದಲ್ಲಿ ಸೇವೆ ಸಲ್ಲಿಸಿದ ಅವರನ್ನು ಗುರುತಿಸಿದ ಖ್ಯಾತ ಉದ್ಯಮಿ ರತನ್‌ ಟಾಟಾ, ಅವರನ್ನು ಬೆಂಗಳೂರಿನಲ್ಲಿ ತಾವು ಆರಂಭಿಸುತ್ತಿದ್ದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಸಂಸ್ಥೆಗೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ನಂತರ ಬೆಂಗಳೂರಿನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಇದರ ಜತೆ ಜತೆಗೆ ಸಾಹಿತ್ಯ, ವಿಜ್ಞಾನ ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಸಿದ್ಧ ಹಾಸ್ಯ ಪತ್ರಿಕೆ ʻಅಪರಂಜಿʼಗೆ ಸತತ 30 ವರ್ಷ ಹಾಸ್ಯ ಲೇಖನಗಳನ್ನು ಬರೆದಿದ್ದಾರೆ.

ತಿರುವನಂತಪುರದಲ್ಲಿ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸಿ.ಆರ್‌. ಸತ್ಯ ಸಂಶೋಧನೆ ಮಾಡಿದ್ದು, ಕುರಿತು ಬರೆದ ‘ಅಳಿವಿಲ್ಲದ ಸ್ಥಾವರ’ ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡಮಿಯಿಂದ ಹಾಗೂ ಇವರೇ ಬರೆದಿರುವ ಪುಸ್ತಕದ ಇಂಗ್ಲಿಷ್ ಅನುವಾದ ‘ಸೆಂಟಿನಲ್ಸ್ ಆಫ್ ಗ್ಲೋರಿ’ ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರಗಳು ದೊರೆತಿವೆ.

ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಂದಿಗಿನ ತಮ್ಮ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸ, ಜೀವನದ ಕುತೂಹಲಕಾರಿ ಅನುಭವಗಳನ್ನು ‘ತ್ರಿಮುಖಿ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದುವರೆಗೆ ಒಟ್ಟು 11 ಕೃತಿಗಳನ್ನು ಬರೆದಿರುವ ಅವರು ಶಿಶು ಸಾಹಿತಿಯಾಗಿಯೂ ಹೆಸರು ಮಾಡಿದ್ದಾರೆ. ʻಸುಬ್ಬಮ್ಮನ ಏಕಾದಶಿʼ ಪದ್ಯವು ಈಗಲೂ ಜನಪ್ರಿಯವಾಗಿದೆ.

ಕೇರಳದ ಥಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ಕನ್ನಡ ಸಂಘ ಸ್ಥಾಪಿಸಿದ್ದಲ್ಲದೆ, ಪುರಂದರ ದಾಸರ ಸಾಹಿತ್ಯವನ್ನು ಮಲೆಯಾಳಂಗೆ ಅನುವಾದಗೊಂಡು, ಸಂಗೀತ ಕಚೇರಿಗಳು ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕನ್ನಡ ಸೇನಾನಿ ತಮ್ಮ ತಾತ ಪ್ರೊ ಎ.ಆರ್‌. ಕೃಷ್ಣಶಾಸ್ತ್ರಿ ರಚಿಸಿರುವ ಹಲವು ಕೃತಿಗಳನ್ನು ಗಣಕೀಕರಣಗೊಳಿಸಿ ಇಂಟರ್‌ನೆಟ್‌ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ಪರಿಸರದ ಕುರಿತು ಜಾಗೃತಿ ಮೂಡಿಸುವಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಹೆಬ್ಬಾಳ ಕೆರೆಯ ಅಭಿವೃದ್ಧಿಗೆ ಕಾರಣರಾಗಿದ್ದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಗುರುವಾರ ಅವರ ಅಂತಿಮ ಸಂಸ್ಕಾರಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Weekend With Ramesh: ಈ ವಾರ ವೀಕೆಂಡ್‌ ವಿತ್‌ ರಮೇಶ್‌ಗೆ ಬರುತ್ತಿದ್ದಾರೆ ಎಲ್ಲರ ಹೃದಯಕ್ಕೆ ಹತ್ತಿರ ಆದ ಸಾಧಕರು!

Exit mobile version