Site icon Vistara News

Fetus In Baby: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

Fetus In Baby

ಡೆಹ್ರಾಡೂನ್: ಏಳು ತಿಂಗಳ ಮಗುವಿನ (7 month baby) ಹೊಟ್ಟೆಯಲ್ಲಿ ಮಾನವನ ಭ್ರೂಣ (Fetus In Baby) ಪತ್ತೆಯಾಗಿರುವ ಅಪರೂಪದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ (Uttarakhand Dehradun) ನಡೆದಿದೆ. ಹಿಮಾಲಯನ್ ಆಸ್ಪತ್ರೆ (Himalayan Hospital) ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಏಳು ತಿಂಗಳ ಮಗುವಿನ ಹೊಟ್ಟೆ ಬೆಳೆಯುತ್ತಿರುವುದನ್ನು ತಾಯಿ ಗಮನಿಸಿದ್ದು, ಪ್ರಾರಂಭದಲ್ಲಿ ನಿರ್ಲಕ್ಷಿಸಿದ್ದಳು. ಆದರೆ ಹೊಟ್ಟೆಯ ಬೆಳವಣಿಗೆ ಹೆಚ್ಚಾಗುತ್ತಾ ಹೋದಂತೆ ಹಲವು ವೈದ್ಯರನ್ನು ಸಂಪರ್ಕಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಬಳಿಕ ಅವರು ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಿದರು. ಮಗುವಿನ ಆರಂಭಿಕ ಪರೀಕ್ಷೆಯಲ್ಲಿ ಡಾ. ಸಿಂಗ್ ಹೊಟ್ಟೆಯಲ್ಲಿ ಅಸಹಜ ದ್ರವ್ಯರಾಶಿಯನ್ನು ಶಂಕಿಸಿದ್ದರು. ಆದರೆ ಮಗುವಿನ ಹೊಟ್ಟೆಯೊಳಗೆ ಮಾನವ ಭ್ರೂಣವು ಬೆಳವಣಿಗೆಯಾಗುತ್ತಿರುವುದನ್ನು ಎಕ್ಸ್ ರೇ ಬಹಿರಂಗಪಡಿಸಿತು.

ಈ ಸ್ಥಿತಿಯನ್ನು ವೈದ್ಯಕೀಯವಾಗಿ “ಫೆಟಸ್-ಇನ್-ಫೀಟು” ಎಂದು ಹೇಳಿರುವ ಡಾ. ಸಂತೋಷ್ ಸಿಂಗ್, ಮಗುವಿನ ಪೋಷಕರಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಬೇಕಿರುವುದಾಗಿ ತಿಳಿಸಿದರು.

ಕಳೆದ ವಾರ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಭಾಗಶಃ ಅಭಿವೃದ್ಧಿ ಹೊಂದಿದ್ದ ಮಾನವ ಭ್ರೂಣವನ್ನು ಮಗುವಿನ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ನಾಲ್ಕು ದಿನಗಳ ಅನಂತರ ಮಗು ಚೇತರಿಸಿಕೊಂಡಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ. ಸಂತೋಷ್ ಸಿಂಗ್ ತಿಳಿಸಿದ್ದಾರೆ.


ಫೀಟಸ್-ಇನ್-ಫೀಟು ಎಂದರೇನು?

ಹಿಮಾಲಯನ್ ಆಸ್ಪತ್ರೆ ಜಾಲಿಗ್ರಾಂಟ್‌ನ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಸಿಂಗ್ ಅವರು “ಫಿಟಸ್-ಇನ್-ಫೀಟು” ಬಗ್ಗೆ ವಿವರಿಸಿದ್ದು, ಇದೊಂದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಅಜ್ಞಾತ ಕಾರಣಗಳಿಂದ ಒಂದು ಭ್ರೂಣವು ಇನ್ನೊಂದರೊಳಗೆ ಪರಾವಲಂಬಿಯಂತೆ ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ತಾಯಿಯ ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮೂಲಕ ಕಂಡುಹಿಡಿಯಬಹುದು. ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಇದು ಜನನದ ನಂತರ ಪತ್ತೆಯಾಗುತ್ತದೆ.

ಇದನ್ನೂ ಓದಿ: Viral Video: ಆಟಿಕೆ ಎಂದು ತಿಳಿದು ಹಾವನ್ನೇ ಕಚ್ಚಿದ ಮಗು! ಕಚ್ಚಿಸಿಕೊಂಡ ಹಾವು ಸಾವು!

5 ಲಕ್ಷದಲ್ಲಿ ಒಂದು ಪ್ರಕರಣ

ಡಾ. ಸಂತೋಷ್ ಕುಮಾರ್ ಅವರ ಪ್ರಕಾರ ಇದು 5 ಲಕ್ಷಕ್ಕಿಂತಲೂ ಹೆಚ್ಚು ಗರ್ಭಧಾರಣೆಗಳಲ್ಲಿ ಒಂದರಲ್ಲಿ ಉಂಟಾಗಬಹುದು. ವಿಶಿಷ್ಟವಾಗಿ, ಮಗುವಿನ ಹೊಟ್ಟೆಯು ಒಂದರಿಂದ ಎರಡು ವರ್ಷಗಳ ನಡುವೆ ಅಸಹಜವಾಗಿ ಹಿಗ್ಗಿದಾಗ ಈ ಪ್ರಕರಣಗಳನ್ನು ಗಮನಿಸಬಹುದು. ಈ ಸ್ಥಿತಿಯು ಸಾಮಾನ್ಯವಾಗಿ ಮಗುವಿನ ಜೀವಕ್ಕೆ ತೊಂದರೆಯನ್ನು ಉಂಟು ಮಾಡುವುದಿಲ್ಲವಾದರೂ ಇದು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸ್ಥಿತಿಯ ಏಕೈಕ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯಾಗಿದೆ. ಇದನ್ನು ಸಾಧ್ಯವಾದಷ್ಟು ಬೇಗ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

Exit mobile version