Site icon Vistara News

Sound Of Earth | ಭೂಮಿಯ ಅಯಸ್ಕಾಂತೀಯ ಕ್ಷೇತ್ರ ಹೇಗೆ ಕೇಳಿಸುತ್ತದೆ?

Sound of Earth

ಭೂಮಿಯ ಅಯಸ್ಕಾಂತೀಯ ಕ್ಷೇತ್ರವನ್ನು ಅನುಭವಕ್ಕೆ ದಕ್ಕುವಂತೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿರುವ ಐರೋಪ್ಯ ಖಗೋಳ ಸಂಸ್ಥೆ, ಭೂಮಿಯ ಅಯಸ್ಕಾಂತ ಕ್ಷೇತ್ರದ ತರಂಗಗಳನ್ನು ಶಬ್ದರೂಪದಲ್ಲಿ (Sound Of Earth) ಬಿಡುಗಡೆ ಮಾಡಿದೆ. ಪ್ರಯೋಗಗಳ ಮೂಲಕ ಮಾತ್ರವೇ ಇರುವಿಕೆಯನ್ನು ಸಾಬೀತು ಮಾಡಲು ಸಾಧ್ಯವಿರುವ ಅಮೂರ್ತ ಅಯಸ್ಕಾಂತ ಕ್ಷೇತ್ರ, ಈಗ ಕೇಳುವಷ್ಟು ಮೂರ್ತವಾಗಿ ಲಭ್ಯವಿದೆ. ಸೂರ್ಯನಿಂದ ಧಾವಿಸುವ ಅಪಾಯಕಾರಿ ಸೌರ ಜ್ವಾಲೆಗಳಿಂದ ಭೂಮಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಯಸ್ಕಾಂತೀಯ ವಲಯದಿಂದ ಹೊರಹೊಮ್ಮುವ ತರಂಗಗಳನ್ನು ಸೆರೆ ಹಿಡಿದು, ಅದಕ್ಕೆ ಶಬ್ದ ರೂಪವನ್ನು ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯದ ತಜ್ಞರು ನೀಡಿದ್ದಾರೆ. ಸುಮಾರು ಐದು ನಿಮಿಷಗಳಷ್ಟು ದೀರ್ಘವಾಗಿರುವ ಈ ಆಡಿಯೋ ಕೇಳುವುದಕ್ಕೆ ವಿಚಿತ್ರ ಮತ್ತು ಭಯಾನಕ ಎಂಬುದು ಸಂಶೋಧಕರ ಅಭಿಪ್ರಾಯ. ಏನನ್ನೋ ಮುರಿದ, ತಿರುಚಿದ, ಒಡೆದ ಮತ್ತು ದೀರ್ಘವಾಗಿ ಶ್ವಾಸ ತೆಗೆದುಕೊಂಡಂತೆ ನಾನಾ ರೀತಿಯ ಭಯ ಹುಟ್ಟಿಸುವಂಥ ಶಬ್ದಗಳು ಇದರಲ್ಲಿ ಕೇಳಿಬರುತ್ತವೆ.

ಐರೋಪ್ಯ ಖಗೋಳ ಸಂಸ್ಥೆಯ ಸಮೂಹ ಉಪಗ್ರಹಗಳಿಂದ ದತ್ತಾಂಶವನ್ನು ಸಂಶೋಧಕರು ತೆಗೆದುಕೊಂಡಿದ್ದಾರೆ. ಇದರಿಂದ ಈ ಅಯಸ್ಕಾಂತೀಯ ತರಂಗಗಳನ್ನು ಶಬ್ದರೂಪದಲ್ಲಿ ನೀಡುವುದು ಸಾಧ್ಯವಾಗಿದೆ. ಕೊಪೆನ್‌ಹೇಗನ್‌ ಬಳಿ ಸುಮಾರು ೩೦ ಧ್ವನಿವರ್ಧಕಗಳನ್ನು ಭೂಮಿಯೊಳಗೆ ಹುದುಗಿಸಿ ಇಟ್ಟಿದ್ದೇವೆ. ಈ ಪ್ರಯೋಗದಿಂದ ಕಳೆದ ಒಂದು ಲಕ್ಷ ವರ್ಷಗಳಲ್ಲಿ ಭೂಮಿಯ ಅಯಸ್ಕಾಂತೀಯ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯನ್ನು ಅರಿಯಲು ಸಾಧ್ಯವಾಗಿದೆ. ಸಂಗೀತ ಮತ್ತು ವಿಜ್ಞಾನವನ್ನು ಈ ಮೂಲಕ ಒಂದುಗೂಡಿಸಲಾಗಿದೆ ಎಂದು ಸಂಗೀತಜ್ಞ ಮತ್ತು ಈ ಪ್ರಯೋಗದ ಭಾಗವಾಗಿರುವ ಡೆನ್ಮಾಕ್‌ ತಾಂತ್ರಿಕ ವಿಶ್ವವಿದ್ಯಾಲಯದ ಕ್ಲಾಸ್‌ ನೀಲ್ಸನ್‌ ತಿಳಿಸಿದ್ದಾರೆ.

ಡೆನ್ಮಾರ್ಕ್‌ನ ಕೊಪೆನ್‌ಹೇಗನ್‌ನಲ್ಲಿರುವ ಸೋಲ್ಬರ್ಗ್‌ ಚೌಕದಲ್ಲಿ ಧ್ವನಿವರ್ಧಕಗಳ ಮೂಲಕ ಈ ಶಬ್ದಗಳನ್ನು ದಿನಕ್ಕೆ ಮೂರು ಬಾರಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಜನರನ್ನು ಹೆದರಿಸುವ ಉದ್ದೇಶವಿಲ್ಲ. ಆದರೆ ಅಯಸ್ಕಾಂತೀಯ ಕ್ಷೇತ್ರ ಎಂಬುದು ಭೂಮಿಗೆ ಇದೆ ಮತ್ತು ಈ ಗ್ರಹದ ಮೇಲಿನ ಜೀವಿಗಳ ಅಸ್ತಿತ್ವ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಇದನ್ನು ಮಾಡಲಾಗುತ್ತಿದೆ ಎಂದು ಐರೋಪ್ಯ ಖಗೋಳ ಸಂಸ್ಥೆ ಹೇಳಿದೆ.

ಭೂ ಗರ್ಭಗಳಾದ ಕೋರ್‌, ಮ್ಯಾಂಟಲ್‌ ಮತ್ತು ಮೇಲ್ಪದರ ಕ್ರಸ್ಟ್‌ನಿಂದ ಹಾಗೂ ಸಾಗರಗಳಿಂದ ಹೊರಹೊಮ್ಮುವ ಅಯಸ್ಕಾಂತೀಯ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ದತ್ತಾಂಶಗಳನ್ನು ಸಮೂಹ ಉಪಗ್ರಹಗಳಿಂದ ಮಾತ್ರವೇ ಅಲ್ಲದೆ, ಅನ್ಯ ಮೂಲಗಳಿಂದ ನೆರವು ಪಡೆಯಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ | Ants Count | ಭೂಮಿ ಮೇಲೆ ಎಷ್ಟಿವೆ ಇರುವೆ? 20,000,000,000,000,000 ಇಷ್ಟಿವೆ ನೋಡಿ!

Exit mobile version