| ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಪ್ರತಿ ವರ್ಷ ನವೆಂಬರ್ 10ರಂದು ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ(World Science Day for Peace and Development). ಇದು ಸಮಾಜದಲ್ಲಿ ವಿಜ್ಞಾನ ಬೀರುವ ಮಹತ್ವದ ಪಾತ್ರ, ಹಾಗೂ ಹೆಚ್ಚಿನ ಜನತೆಯನ್ನು ನೂತನ ವೈಜ್ಞಾನಿಕ ವಿಚಾರಗಳ ಕುರಿತ ಚರ್ಚೆಯಲ್ಲಿ ಒಳಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆಯನ್ನೂ ಇದು ಸೂಚಿಸುತ್ತದೆ. ವಿಜ್ಞಾನವನ್ನು ಸಮಾಜಕ್ಕೆ ಇನ್ನಷ್ಟು ಹತ್ತಿರಕ್ಕೆ ಕರೆತರುವ ಮೂಲಕ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ಸಾಮಾನ್ಯ ಜನತೆಗೂ ಸಹ ವೈಜ್ಞಾನಿಕ ಅಭಿವೃದ್ಧಿಗಳ ಕುರಿತು ಸೂಕ್ತ ಮಾಹಿತಿ ಲಭಿಸಬೇಕು ಎಂದು ಬಯಸುತ್ತದೆ. ಆ ಮೂಲಕ ನಮ್ಮೆಲ್ಲರ ಮನೆಯಾದ ಈ ಭೂಮಿಯನ್ನು ನಾವು ಇನ್ನಷ್ಟು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತಿರುವ ವಿಜ್ಞಾನಿಗಳ ಪಾತ್ರವನ್ನೂ ನೆನೆಯುವಂತೆ ಮಾಡುತ್ತದೆ.
1999ರಲ್ಲಿ ಯುನೆಸ್ಕೋ ಮತ್ತು ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಜೊತೆಯಾಗಿ ಬುಡಾಪೆಸ್ಟ್ ನಲ್ಲಿ ವರ್ಲ್ಡ್ ಸೈಂಟಿಫಿಕ್ ಕಾನ್ಫರೆನ್ಸ್ ಆಯೋಜಿಸಿದರು. ಆ ಸಂದರ್ಭದಲ್ಲಿ ಭಾಗವಹಿಸಿದ್ದ ಹಲವು ಗಣ್ಯರು ಸಮಾಜಕ್ಕೆ ವಿಜ್ಞಾನದ ಕುರಿತು ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿದೆ ಎಂದು ಒಪ್ಪಿಕೊಂಡರು. ಆ ಬಳಿಕ ಎಲ್ಲರೂ ಒಕ್ಕೊರಲಿನಿಂದ ವಿಜ್ಞಾನಕ್ಕಾಗಿ ವರ್ಷದಲ್ಲಿ ಒಂದು ದಿನ ಅಥವಾ ವಾರವನ್ನು ಮೀಸಲಿಡಬೇಕೆಂದು ನಿರ್ಧರಿಸಿದರು. ಅದಾಗಿ ಒಂದು ವರ್ಷದ ಬಳಿಕ ಯುನೆಸ್ಕೋದ ಕಾರ್ಯನಿರ್ವಾಹಕ ಅಂಗ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನವನ್ನು ಆರಂಭಿಸಿತು. ಈ ದಿನವನ್ನು ಜಗತ್ತಿನಾದ್ಯಂತ ನವೆಂಬರ್ 10ರಂದು ಆಚರಿಸುವಂತೆ ಕರೆ ನೀಡಲಾಯಿತು.
2001ರಲ್ಲಿ ನಡೆದ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನದಂದು ಜಗತ್ತಿನಾದ್ಯಂತ ವಿಜ್ಞಾನಕ್ಕಾಗಿ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಹಣ ಹೂಡಿಕೆಯನ್ನು ಗಳಿಸಲಾಯಿತು. ಅದರೊಡನೆ, ಪರಸ್ಪರ ಸೌಹಾರ್ದ ಸಂಬಂಧ ಹೊಂದಿರದ ಪ್ರದೇಶಗಳಲ್ಲಿರುವ ವಿಜ್ಞಾನಿಗಳ ಮಧ್ಯ ಸಹಕಾರ ಹೊಂದುವಂತೆ ಮಾಡುವ ಗುರಿಯನ್ನೂ ಹಮ್ಮಿಕೊಳ್ಳಲಾಯಿತು. ಅದರಂತೆ ಯುನೆಸ್ಕೋ ಇಸ್ರೇಲ್ – ಪ್ಯಾಲೆಸ್ತೀನ್ ಸೈನ್ಸ್ ಆರ್ಗನೈಸೇಶನ್ (ಐಪಿಎಸ್ಓ) ಸ್ಥಾಪನೆಗೂ ಬೆಂಬಲ ನೀಡಿತು.
ವೈದ್ಯಕೀಯ, ಉದ್ಯಮ, ಕೃಷಿ, ಜಲ ಸಂಪನ್ಮೂಲ, ಶಕ್ತಿ ಮೂಲಗಳು, ಪರಿಸರ, ಸಂವಹನ ಮತ್ತು ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮೂಲ ವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಡಿಸೆಂಬರ್ 2, 2021ರಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಸುಸ್ಥಿರ ಅಭಿವೃದ್ಧಿಗಾಗಿ ಮೂಲ ವಿಜ್ಞಾನಗಳ ಅಂತಾರಾಷ್ಟ್ರೀಯ ವರ್ಷದ ಆಚರಣೆಯ ಕುರಿತಾದ ಕೋರಿಕೆಗೆ ಪ್ರತಿಕ್ರಿಯಿಸುತ್ತಾ ಸಾಮಾನ್ಯ ಸಭೆ ಈ ಅಭಿಪ್ರಾಯ ತಿಳಿಸಿತ್ತು. ಈ ವರ್ಷದ ವಿಶ್ವ ವಿಜ್ಞಾನ ದಿನವನ್ನೂ ಇದೇ ವಿಚಾರದಲ್ಲಿ ಆಚರಿಸಲಾಗುತ್ತಿದೆ.
ವಿಶ್ವ ವಿಜ್ಞಾನ ದಿನದ ಗುರಿಗಳು
| ಶಾಂತಿಯುತ ಮತ್ತು ಸುಸ್ಥಿರ ಸಮಾಜದಲ್ಲಿ ವಿಜ್ಞಾನದ ಪಾತ್ರದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು.
| ರಾಷ್ಟ್ರ ರಾಷ್ಟ್ರಗಳ ಮಧ್ಯ ವಿಜ್ಞಾನವನ್ನು ಹಂಚಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸುವುದು.
| ಸಾಮಾಜಿಕ ಲಾಭಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬದ್ಧತೆಯನ್ನು ಬಲಪಡಿಸುವುದು.
| ವಿಜ್ಞಾನ ಎದುರಿಸುವ ಸವಾಲುಗಳ ಕುರಿತು ಜನರ ಗಮನ ಸೆಳೆದು, ಆ ಮೂಲಕ ವೈಜ್ಞಾನಿಕ ಪ್ರಯತ್ನಗಳಿಗೆ ಬೆಂಬಲ ಗಳಿಸುವುದು.
| ಅದರೊಡನೆ ಈ ದಿನವನ್ನು ಆಚರಿಸುವ ಮೂಲಕ ಜನರಲ್ಲಿ ನಮ್ಮ ಭೂಮಿಯನ್ನು ಇನ್ನಷ್ಟು ಸುಸ್ಥಿರಗೊಳಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ | ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ