Site icon Vistara News

Black Hole | ಕ್ಷಣಕ್ಕೊಂದು ಭೂಮಿ ನುಂಗುವ ಸಾಮರ್ಥ್ಯದ ಬೃಹತ್‌ ಕಪ್ಪು ರಂಧ್ರ ಪತ್ತೆ

Black Hole

ನವ ದೆಹಲಿ: ಬಾಹ್ಯಾಕಾಶದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ʼಕಪ್ಪುರಂಧ್ರʼ (Black Hole) ಪತ್ತೆಯಾಗಿದೆ. ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಅನ್ವೇಷಣೆ ಮಾಡಿದ್ದಾರೆ.

ಅತಿ ವೇಗದಲ್ಲಿ ಬೆಳೆಯುತ್ತಿರುವ ಕಪ್ಪುರಂಧ್ರವನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಪಟ್ಟಿದ್ದಾರೆ. ʼಇದು ಸಂಪೂರ್ಣ ಅನಿರೀಕ್ಷಿತʼ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕಪ್ಪುರಂಧ್ರ ಯಾವ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದರೆ ಭೂಮಿಯ ಗಾತ್ರಕ್ಕೆ ಸಮನಾದ ವಸ್ತುವನ್ನು ಒಂದು ಕ್ಷಣದಲ್ಲಿ ನುಂಗಿಹಾಕಬಹುದು.

ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶದಲ್ಲಿ ಅವಳಿ ನಕ್ಷತ್ರದ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕಪ್ಪುರಂಧ್ರದ ಅನ್ವೇಷಣೆ ನಡೆದಿದೆ. ಸಂಸ್ಥೆಯ ಮುಖ್ಯ ಸಂಶೋಧನಾಕಾರರಾದ ಡಾ. ಕ್ರಿಸ್ಟಫರ್‌ ಒಂಕೆನ್‌ ಈ ಬಗ್ಗೆ ಮಾತನಾಡಿ ʼʼಈ ರೀತಿಯ ವಿಸ್ಮಯಕ್ಕಾಗಿ ಕಳೆದ 50 ವರ್ಷಗಳಿಂದ ಹುಡುಕಾಟ ನಡೆದಿತ್ತು. ಆದರೆ ಈ ರೀತಿಯ ಪ್ರಕಾಶಮಾನವಾದ ಕಪ್ಪುರಂಧ್ರ ಈವರೆಗೆ ನಮ್ಮ ಗಮನದಿಂದ ದೂರವಿತ್ತುʼʼ ಎಂದು ತಿಳಿಸಿದರು.

ಏನಿದು ಕಪ್ಪುರಂಧ್ರ?

ಎರಡು ಗೆಲೆಕ್ಸಿಗಳು ಒಂದೊಕ್ಕೊಂದು ಡಿಕ್ಕಿ ಹೊಡೆದಾಗ ಉಂಟಾಗುವ ಫಲಿತಾಂಶವನ್ನು ಕಪ್ಪುರಂಧ್ರ ಎನ್ನಲಾಗುತ್ತದೆ. ಇದು ಒಂದು ನಕ್ಷತ್ರದ ಅಂತಿಮ ಸ್ಥಿತಿಯಾಗಿದೆ. ಒಂದು ನಕ್ಷತ್ರ ಮರಣ ಹೊಂದಿದಾಗ ಕೆಲವು ಅವಶೇಷಗಳು ಉಳಿಯುತ್ತವೆ. ಅವುಗಳಿಂದ ಉಂಟಾಗುವ ಪ್ರದೇಶವೇ ಕಪ್ಪುರಂಧ್ರ ಎಂದು ಗುರುತಿಸಲಾಗಿದೆ. ಈ ಕಪ್ಪುರಂಧ್ರದಲ್ಲಿ ಗುರುತ್ವ ಕ್ಷೇತ್ರಗಳು ಅತ್ಯಂತ ಪ್ರಬಲವಾಗಿರುತ್ತದೆ. ಇದರ ಗುರುತ್ವ ಶಕ್ತಿ ಊಹೆಗೂ ನಿಲುಕದ್ದು! ಈ ಗುರುತ್ವ ಶಕ್ತಿಯಿಂದ ಬೆಳಕು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಅತ್ಯುಚ್ಛವಾದ ಸಾಂದ್ರತೆ ಹೊಂದಿರುತ್ತದೆ.

ಈ ಕಪ್ಪುರಂಧ್ರದ ಗಾತ್ರ ಎಷ್ಟು?

ಹೊಸತಾಗಿ ಅನ್ವೇಷಣೆಯಾದ ಕಪ್ಪುರಂಧ್ರವು 14.5 ಪರಿಮಾಣ ಹೊಂದಿರುವುದಾಗಿ ಈ ಸದ್ಯ ತಿಳಿದು ಬಂದಿದೆ. ಅಂದರೆ ಇದು ಪ್ರಸ್ತುತ ನಮ್ಮ ಗೆಲೆಕ್ಸಿಯಲ್ಲಿ ಕಂಡುಬಂದ ಕಪ್ಪುರಂಧ್ರದ 500 ಪ್ರಮಾಣ ಅಧಿಕವಾಗಿದೆ. ನಮ್ಮ ಸೌರ ಮಂಡಲದ ಎಲ್ಲಾ ಗ್ರಹಗಳ ಕಕ್ಷೆಗಳು ಈ ಕಪ್ಪುರಂಧ್ರದ ಕೇವಲ ಒಂದು ಸಣ್ಣ ಭಾಗದಲ್ಲಿ ಹಿಡಿಯುತ್ತದೆ.
ಇದು ಎಷ್ಟು ಪ್ರಕಾಶಮಾನವಾಗಿದೆ ಎಂದರೆ ನಮ್ಮ ಗೆಲೆಕ್ಸಿಯ ಬೆಳಕಿಗಿಂತಲೂ 7,000 ಪಟ್ಟು ಅಧಿಕ ಪ್ರಮಾಣದಲ್ಲಿ ಹೊಳೆಯುತ್ತದೆ.

ಈ ಅನ್ವೇಷಣೆಯಲ್ಲಿ ಕಂಡುಬಂದ ಸಂಪೂರ್ಣ ವಿವರಗಳ ವರದಿಯನ್ನು ಆಸ್ಟ್ರೇಲಿಯಾದ ಆಸ್ಟ್ರೊನಾಮಿಕಲ್‌ ಸಂಸ್ಥೆಯಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ನಾಲ್ಕು ಸಾವಿರ ವರ್ಷದ ಹಿಂದಿನ ತಾಮ್ರಯುಗದ ಮಹಿಳೆ ಬಿಂಬದ ಮರುಸೃಷ್ಟಿ

Exit mobile version