ಬೆಂಗಳೂರು: ಹೊಸ ನಿರೀಕ್ಷೆ, ಭರವಸೆಯೊಂದಿಗೆ ನೂತನ ವರ್ಷಕ್ಕೆ ಕಾಲಿಟ್ಟಿದ್ದೇವೆ. 2024 ಹಲವು ರೀತಿಯಲ್ಲಿ ವಿಶೇಷ ಎನಿಸಲಿದೆ. ಅದರಲ್ಲೊಂದು ಅಧಿಕ ವರ್ಷ (Leap Year). ಅಂದರೆ ಈ ವರ್ಷ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ. ಸಾಮಾನ್ಯವಾಗಿ ವರ್ಷದ ಎರಡನೇ ತಿಂಗಳು ಅಂದರೆ ಫೆಬ್ರವರಿಯಲ್ಲಿ 28 ದಿನ ಇರುವುದು ವಾಡಿಕೆ. ಆದರೆ ಪ್ರತಿ 4 ವರ್ಷಗಳಿಗೊಮ್ಮೆ 29 ದಿನ ಬರುತ್ತದೆ. ಇದನ್ನೇ ಲೀಪ್ ಇಯರ್ ಅಥವಾ ಅಧಿಕ ವರ್ಷ ಎಂದ ಕರೆಯಲಾಗುತ್ತದೆ. ಇದರ ವಿಶೇಷತೆ ಏನು? ಎನ್ನುವ ವಿವರ ಇಲ್ಲಿದೆ.
366 ದಿನಗಳು
ಸಾಮಾನ್ಯವಾಗಿ ಒಂದು ಒಂದು ವರ್ಷಕ್ಕೆ 365 ದಿನಗಳು. ಫೆಬ್ರವರಿ ಹೊರತಾಗಿ ಉಳಿದ ತಿಂಗಳಲ್ಲಿ 30 ಅಥವಾ 31 ದಿನಗಳಿರುತ್ತವೆ. ಫೆಬ್ರವರಿಯಲ್ಲಿ 28 ದಿನಗಳಿರುತ್ತವೆ. ಆದರೆ ಪ್ರತಿ 4 ವರ್ಷಕ್ಕೊಮ್ಮೆ ಈ ಲೆಕ್ಕಾಚಾರ ಬದಲಾಗಿ ವರ್ಷಕ್ಕೆ 366 ದಿನ ಬರುತ್ತದೆ. ಅಂದರೆ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ.
ಯಾವಾಗ ಪರಿಚಯಿಸಲಾಯಿತು?
ಕ್ರಿ.ಪೂ. 46ರಲ್ಲಿ ಜೂಲಿಯಸ್ ಸೀಸರ್ ನೇಮಿಸಿದ್ದ ವಿದ್ವಾಂಸರು ಲೀಪ್ ಇಯರ್ ಅನ್ನು ಪರಿಚಯಿಸಿದರು. ಕ್ರಿ.ಶ. 12ರಿಂದ ಇದು ಇನ್ನಷ್ಟು ಜನಪ್ರಿಯವಾಯಿತು. ಜೂಲಿಯನ್ ಕ್ಯಾಲೆಂಡರ್ 365 ದಿನಗಳ ಸುದೀರ್ಘ ವರ್ಷವನ್ನು ಹೊಂದಿತ್ತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 366ನೇ ದಿನವನ್ನು ಸೇರಿಸಲಾಯಿತು. ರಾಯಲ್ ಮ್ಯೂಸಿಯಂ ಗ್ರೀನ್ವಿಚ್ ವೆಬ್‌ಸೈಟ್ ಪ್ರಕಾರ, ಇಸ್ಲಾಮಿಕ್ ಕ್ಯಾಲೆಂಡರ್ ಅಲ್-ಹಿಜ್ರಾ 12ನೇ ತಿಂಗಳ ಜುಲ್ ಹಿಜ್ಜಾಗೆ ಹೆಚ್ಚುವರಿ ದಿನವನ್ನು ಸೇರಿಸಿತ್ತು. ಆದಾಗ್ಯೂ, ಈ ವಿಧಾನವು ದೋಷ-ಮುಕ್ತವಾಗಿರಲಿಲ್ಲ. 1582ರಲ್ಲಿ ಪೋಪ್ ಗ್ರೆಗೊರಿ-8 ಕ್ಯಾಲೆಂಡರ್‌ನಿಂದ 10 ದಿನಗಳನ್ನು ಕೈಬಿಡುವ ತೀರ್ಮಾನಕ್ಕೆ ಬಂದರು. ಅವರು ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯಿಸಿದರು. ಇದೇ ಕ್ಯಾಲೆಂಡರ್ ಅನ್ನೇ ನಾವಿಂದು ಬಳಸುತ್ತಿದ್ದೇವೆ.
ಅಧಿಕ ವರ್ಷ ಲೆಕ್ಕಾಚಾರ ಹೇಗೆ?
ಭೂಮಿಯು ಸೂರ್ಯನ ಸುತ್ತ ಸುತ್ತಲು ತೆಗೆದುಕೊಳ್ಳುವ ಒಟ್ಟು ಸಮಯವನ್ನು ಒಂದು ವರ್ಷ ಎಂದು ಪರಿಗಣಿಸಲಾಗುತ್ತದೆ. ಅಂದರೆ ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಹಾಕಲು 365.242189 ದಿನಗಳು ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡ್ ಸಮಯ ಬೇಕು ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಆದರೆ ಉಳಿದ 0.242 ದಿನಗಳನ್ನು ಸೇರಿಸಿದರೆ 4 ವರ್ಷಗಳಿಗೊಮ್ಮೆ ಒಂದು ದಿನ ಹೆಚ್ಚುವರಿಯಾಗಿ ಬರುತ್ತದೆ. ಆದ್ದರಿಂದ ಆ ವರ್ಷವನ್ನು ಅಧಿಕ ವರ್ಷ ಎಂದು ಕರೆಯುತ್ತಾರೆ. ಅಧಿಕ ವರ್ಷ ಜಾರಿಗೆ ಬಂದಿಲ್ಲ ಎಂದಿದ್ದರೆ ಋತುಗಳ ಬಗ್ಗೆ ಗೊಂದಲ ಮೂಡುವ ಸಾಧ್ಯತೆ ಇತ್ತು. ಒಂದು ವೇಳೆ ಲೀಪ್ ಇಯರ್ ಇಲ್ಲದೇ ಹೋದಲ್ಲಿ ನಾವು ಪ್ರತಿ ವರ್ಷ ಸೌರ ಮಂಡಲದ ಕಾಲಮಾನಕ್ಕಿಂತ 6 ಗಂಟೆ ಮುಂದಕ್ಕೆ ಹೋಗುತ್ತೇವೆ. ಅಂದರೆ 10 ವರ್ಷಗಳ ಬಳಿಕ 25 ದಿನ ಮುಂದೆ ಹೋಗುತ್ತೇವೆ. ಆಗ ಹವಾಮಾನ ಬದಲಾವಣೆಯ ಕುರಿತು ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಲೀಪ್ ಇಯರ್ ಆಚರಿಸಲಾಗುತ್ತದೆ.
ಇದನ್ನೂ ಓದಿ: XPoSAT: ಜ.1ಕ್ಕೆ ಇಸ್ರೋದಿಂದ ದೇಶದ ಎಕ್ಸ್-ರೇ ಪೋಲರಿಮೀಟರ್ ಉಪಗ್ರಹ ಉಡಾವಣೆ!