Site icon Vistara News

ಏಲಿಯೆನ್ಸ್‌ ಸೆಳೆಯಲು ಕಾಮಸೂತ್ರ ಬಳಕೆ, ಅನ್ಯಗ್ರಹಕ್ಕೆ ಗಂಡು-ಹೆಣ್ಣಿನ ನಗ್ನ ಚಿತ್ರ ರವಾನೆ!

ನ್ಯೂಯಾರ್ಕ್:‌ ಅನ್ಯಗ್ರಹದಲ್ಲಿ ಜೀವಿಗಳಿದ್ದಾರೆಯೇ ಎನ್ನುವ ಕುತೂಹಲ ಇವತ್ತು ನಿನ್ನೆಯದಲ್ಲ. ಜಗತ್ತಿನ ಕೆಲವು ಭಾಗಗಳಿಗೆ ಏಲಿಯನ್ಸ್‌ಗಳು ಬಂದು ಹೋಗಿದ್ದಾರೆ ಎಂದೆಲ್ಲ ಹಿಂದೆ ಸುದ್ದಿಯಾಗಿತ್ತು. ವಿಶ್ವದ ಬೇರೆ ಭಾಗದಲ್ಲಿ ನಮಗಿಂತಲೂ ಬುದ್ಧಿವಂತರಾದ ಜನ ಇದ್ದಾರಂತೆ ಎಂಬ ಚರ್ಚೆಯೂ ಇದೆ.

ನಮ್ಮ ವಿಜ್ಞಾನಿಗಳು ಕಳೆದ 150 ವರ್ಷಗಳಿಂದ ಏಲಿಯನ್ಸ್‌ ಬಗ್ಗೆ ಹುಡುಕಾಟ ನಡೆಸುತ್ತಲೇ ಇದ್ದಾರೆ. ನಾನಾ ಸಂದೇಶಗಳನ್ನು ಕಳುಹಿಸುವ ಮೂಲಕ, ಚಿತ್ರಗಳನ್ನು ರವಾನಿಸುವ ಮೂಲಕ ಇನ್ನೊಂದು ಲೋಕದಲ್ಲಿ ಮನುಷ್ಯರು ಅಥವಾ ಜೀವ ಸಂಕುಲ ಇದೆಯೇ ಎನ್ನುವುದನ್ನು ತಿಳಿಯುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ.

ಇದೀಗ ನಾಸಾ ವಿಜ್ಞಾನಿಗಳು ಮನುಷ್ಯರ ಸಹಜ ಕಾಮನೆಯನ್ನು ದಾಳವಾಗಿಟ್ಟುಕೊಂಡು ಅನ್ಯಗ್ರಹ ಜೀವಿಗಳನ್ನು ಸೆಳೆಯಬಹುದೇ ಎನ್ನುವ ಹೊಸ ಚಿಂತನೆಯಲ್ಲಿದ್ದಾರೆ. ಜಗತ್ತಿನ ಯಾವುದೇ ಜೀವ ಸಂಕುಲ ಲೈಂಗಿಕ ಆಸಕ್ತಿಯಿಂದ ಮುಕ್ತವಾಗಿಲ್ಲ ಎನ್ನುವುದು ನಂಬಿಕೆ. ಹೀಗಾಗಿ ಇದನ್ನು ಬಳಸಿಕೊಂಡು ಏಲಿಯನ್ಸ್‌ನ್ನೂ ಸೆಳೆಯಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ. ಭೂಮಿಯ ಗಂಡು- ಹೆಣ್ಣಿನ ನಗ್ನ ಚಿತ್ರಗಳನ್ನು ಅನ್ಯ ಗ್ರಹಗಳಿಗೆ ಕಳುಹಿಸಿ ಅಲ್ಲಿಂದ ಪ್ರತಿಕ್ರಿಯೆ ನಿರೀಕ್ಷಿಸಲು ಚಿಂತಿಸಲಾಗುತ್ತಿದೆ. ಭೂಮಿಯಲ್ಲಿ ಇಂಥ ಜೀವಿಗಳಿದ್ದಾರೆ ಎಂಬ ಆಸೆಯಿಂದಲಾದರೂ ಅವರು ಸಂಪರ್ಕ ಸಾಧಿಸಲು ಯತ್ನಿಸಬಹುದು ಎನ್ನುವ ಆಲೋಚನೆ ಅವರದು.

ಯಾರ ಚಿತ್ರ ಕಳುಹಿಸಬಹುದು?

ವಿಜ್ಞಾನಿಗಳು ಯುವಕ-ಯುವತಿಯರ ನಗ್ನ ಚಿತ್ರಗಳನ್ನು ಕಳುಹಿಸಲು ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಯಾರ ಚಿತ್ರ ಕಳುಹಿಸಬಹುದು ಎಂಬ ಚರ್ಚೆಯೂ ಶುರುವಾಗಿದೆ. ಭಾರತದ ಕೆಲವು ಚಿತ್ರ ನಟ-ನಟಿಯರ ಹೆಸರೂ ಮುನ್ನೆಲೆಗೆ ಬಂದಿದೆ. ಕೆಲವು ಪೋರ್ನ್‌ ತಾರೆಯರ ಚಿತ್ರ ಕಳುಹಿಸಿದರೆ ಯಾರೇ ಆದರೂ ಇಳಿದು ಬಂದೇ ಬರುತ್ತಾರೆ ಎಂದು ಜನರು ಕುತೂಹಲದಿಂದ ಮಾತನಾಡುತ್ತಿದ್ದಾರೆ.

ಕಳುಹಿಸುವುದು ಚಿತ್ರವಲ್ಲ, ಇಲ್ಲಸ್ಟ್ರೇಷನ್‌

ಅನ್ಯ ಗ್ರಹ ಜೀವಿಗಳಲ್ಲಿ ಇರಬಹುದಾದ ಮನುಷ್ಯರನ್ನು ಸೆಳೆಯಲು ವಿಜ್ಞಾನಿಗಳು ಸೆಕ್ಸ್‌ ಮಂತ್ರ ಬಳಸಲು ಚಿಂತನೆ ನಡೆಸಿದ್ದು ನಿಜವಾದರೂ ಕಳುಹಿಸುವುದು ಮಾನವರ ನೇರ ನಗ್ನ ಚಿತ್ರಗಳನ್ನು ಅಲ್ಲ. ಬದಲಾಗಿ, ಗಂಡು-ಹೆಣ್ಣಿನ ದೇಹ ರಚನೆಯನ್ನು ಆಧರಿಸಿದ ಇಲ್ಲಸ್ಟ್ರೇಷನ್‌ ಗಳನ್ನು.

ಗಂಡು-ಹೆಣ್ಣಿನ ದೇಹ ರಚನೆ ಹೀಗಿರುತ್ತದೆ ಎಂದು ತಿಳಿಸುವ ಚಿತ್ರದಲ್ಲಿ ಅವರು ಕೈ ಬೀಸಿ ಕರೆಯವಂತೆ ಭಂಗಿ ಇರುತ್ತದೆ. ಜತೆಗೆ ಅದರಲ್ಲಿ ಡಿಎನ್‌ ಎ ಆಧಾರಿತ ವಂಶವಾಹಿ ವಿವರಣೆಗಳು ಕೂಡಾ ಇರುತ್ತವಂತೆ.

ಬೀಕಾನ್‌ ಆಫ್‌ ಗ್ಯಾಲಕ್ಸಿ ಎಂಬ ಅಧ್ಯಯನದ ಭಾಗವಾಗಿ ನಾಸಾ ಈ ಕಾರ್ಯಾಚರಣೆ ನಡೆಯುತ್ತಿದೆ. ಕಳುಹಿಸುವ ಚಿತ್ರಗಳಲ್ಲಿ ದೇಹರಚನೆ, ಡಿಎನ್‌ಎ ಮಾತ್ರವಲ್ಲ, ಜಾಗತಿಕ ಸಂವಹನಕ್ಕೆ ಪೂರಕವಾಗಿರುವ ಗಣಿತ ಶಾಸ್ತ್ರೀಯ ಮತ್ತು ಭೌತ ಶಾಸ್ತ್ರೀಯ ಸಿದ್ಧಾಂತಗಳನ್ನು ಕಳುಹಿಸಲಾಗುತ್ತದೆ. ಇದರ ಜತೆಗೆ ಭೂಮಿಯ ಮೇಲಿನ ಜೀವ ರಾಸಾಯನಿಕ ವಿನ್ಯಾಸಗಳು, ಕ್ಷೀರಪಥದಲ್ಲಿ ಸೌರ ವ್ಯೂಹದ ಸ್ಥಾನವನ್ನು ವಿವರಿಸುವ ಚಿತ್ರಗಳಿರುತ್ತವೆ. ಅಂದರೆ, ಈ ಮಾಹಿತಿಗಳು ಅಲ್ಲಿ ತಲುಪಿದಾಗ ಈ ಮಾಹಿತಿಗಳು ಎಲ್ಲಿಂದ ಬಂದಿವೆ, ಭೂಮಿ ಎಲ್ಲಿದೆ ಎನ್ನುವುದರ ಅರಿವು ಏಲಿಯನ್ಸ್‌ಗಳಿಗೆ ಆಗಬೇಕು ಎನ್ನುವುದು ಇದರ ಉದ್ದೇಶ.

ದ್ವಿಮಾನ ಪದ್ಧತಿಯಲ್ಲಿ ಮಾಹಿತಿ

ಏಲಿಯನ್ಸ್‌ಗಳಿದ್ದರೂ ಅವರನ್ನು ಸಂಪರ್ಕಿಸುವುದು ಸುಲಭದ ಮಾತೇನೂ ಅಲ್ಲ. ಯಾಕೆಂದರೆ, ಅವರಿಗೆ ಯಾವ ಭಾಷೆಯಲ್ಲಿ ಸಂದೇಶ ನೀಡಬೇಕು ಎನ್ನುವುದು ಗೊಂದಲಕಾರಿ. ಹೀಗಾಗಿ ಸದ್ಯಕ್ಕೆ ಯುನಿವರ್ಸಲ್‌ ಲಾಂಗ್ವೇಜ್‌ ಎಂದೇ ಗುರುತಿಸಲಾಗಿರುವ ದ್ವಿಮಾನ ಪದ್ಧತಿಯಲ್ಲಿ ಸಂದೇಶಗಳನ್ನು ರವಾನಿಸಲಾಗುತ್ತದೆ. ಬಿಟ್ಜ್‌ ಮೆಸೇಜ್‌ಗಳೆಂದು ಕರೆಯಲಾಗುವ ಇವುಗಳನ್ನು ಚೀನಾದಲ್ಲಿ ಸ್ಥಾಪಿಸಲಾಗಿರುವ 500 ಮೀಟರ್‌ ಅಪಾರ್ಚರ್‌ ಇರುವ ಸ್ಫೆರಿಕಲ್‌ ರೇಡಿಯೊ ಟೆಲಿಸ್ಕೋಪ್‌ ಮೂಲಕ ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಸೆಟಿ ಸಂಸ್ಥೆಯ ಅಲೆನ್‌ ಟೆಲಿಸ್ಕೋಪ್‌ ಅರೇ ಕೂಡಾ ಈ ಕೆಲಸಕ್ಕೆ ನಿಯೋಜಿತವಾಗಿದೆ.

ಪ್ರಯತ್ನ ಹೊಸದೇನೂ ಅಲ್ಲ!

ಯುವಕ-ಯುವತಿಯರ ನಗ್ನ ಚಿತ್ರಗಳನ್ನು ಅನ್ಯ ಲೋಕಕ್ಕೆ ಕಳುಹಿಸಿ ಅಲ್ಲಿನ ಜನರನ್ನು ಸೆಳೆಯುವ ಪ್ರಯತ್ನ ಹೊಸದೇನೂ ಅಲ್ಲ. 1972ರಲ್ಲಿ ಪಯೊನಿಯರ್‌ 10 ಮಿಷನ್‌ನಡಿಯಲ್ಲಿ ಕಳುಹಿಸಲಾಗಿತ್ತು. 1973ರಲ್ಲಿ ಪಯೊನಿಯರ್‌ 11 ಮಿಷನ್‌ನಲ್ಲೂ ಚಿತ್ರಗಳನ್ನು ರವಾನಿಸಲಾಗಿತ್ತು. ಆದರೆ, ಇದುವರೆಗೂ ಎಲ್ಲಿಂದಲೂ ಪ್ರತಿಕ್ರಿಯೆ ಬಂದಿರಲಿಲ್ಲ.

ಸ್ವಲ್ಪ ಅಪಾಯವೂ ಇದೆ

ಅನ್ಯ ಗ್ರಹದಲ್ಲಿ ಜೀವಿಗಳಿದ್ದಾರೆಯೇ ಎಂಬ ಕುತೂಹಲ ಮಾನವ ಸಹಜವಾದರೂ ಈ ರೀತಿಯ ಹುಡುಕಾಟ ಅಪಾಯಕ್ಕೂ ಕಾರಣವಾಗಬಹುದು ಎನ್ನುವ ಚರ್ಚೆಯೂ ಇದೆ. ಅನ್ಯ ಗ್ರಹಗಳಲ್ಲಿ ಮನುಷ್ಯರಿಗಿಂತ ಅಪಾಯಕಾರಿಯಾದ ಜೀವಿಗಳಿದ್ದು, ಅವುಗಳ ಜತೆ ಭೂಮಿಯ ಮಾಹಿತಿಯನ್ನು ಹಂಚಿಕೊಳ್ಳುವುದು ಅಪಾಯಕ್ಕೆ ಬಾಗಿಲು ತೆರೆದೀತೆ ಎಂಬ ಮಾತೂ ಇದೆ. ಒಂದೊಮ್ಮೆ ಸಹಕಾರಿ ಮನೋಭಾವದ ಜೀವಿಗಳಿದ್ದರೆ ಸಂಬಂಧವೂ ಕುದುರಬಹುದು!

Exit mobile version