ಇಂದು (National Science Day 2023) ರಾಷ್ಟ್ರೀಯ ವಿಜ್ಞಾನ ದಿನ. ಭಾರತದ ಹೆಮ್ಮೆಯ ಭೌತ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟರಾಮನ್ ಅಥವಾ ಸರ್ ಸಿ.ವಿ. ರಾಮನ್ ಅವರು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿನ ತಮ್ಮ ಮಹತ್ವದ ಆವಿಷ್ಕಾರವನ್ನು ಜಗತ್ತಿಗೆ ನೀಡಿದ ದಿನ. 1928ರ ಇದೇ ದಿನದಂದು ಅವರು ನೀಡಿದ ಈ ಕೊಡುಗೆ ನಂತರ, ಈ ಸಂಶೋಧನೆಯು ʻರಾಮನ್ ಪರಿಣಾಮʼ ಎಂದೇ ಪ್ರಸಿದ್ಧವಾಯಿತು. ಈ ಆವಿಷ್ಕಾರಕ್ಕಾಗಿ ಅವರಿಗೆ 1930ರಲ್ಲಿ ನೊಬೆಲ್ ಪುರಸ್ಕಾರವನ್ನೂ ನೀಡಲಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಗೌರವವಿದು.
ರಾಮನ್ ಪರಿಣಾಮ ಜಗತ್ತಿಗೆ ಪ್ರಕಟಗೊಂಡ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ ತಿಂಗಳ 28ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ, “ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ” (Global Science for Global Wellbeing). ಭಾರತ ಜಿ20 ಶೃಂಗ ಸಭೆಯ ನೇತೃತ್ವ ವಹಿಸಿರುವ ಹಿನ್ನೆಲೆಯಲ್ಲಿ ಈ ಘೋಷವಾಕ್ಯ ಇನ್ನಷ್ಟು ಮಹತ್ವ ಪಡೆದಿದೆ.
1921ರಲ್ಲಿ, ಇಂಗ್ಲೆಂಡ್‌ನಿಂದ ಭಾರತಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ರಾಮನ್ ಅವರು, ಸಮುದ್ರದ ನೀರಿನ ಬಣ್ಣ ಏಕೆ ನೀಲಿಯಾಗಿದೆ ಎಂಬ ಬಗ್ಗೆ ಕುತೂಹಲ ತಾಳಿ, ಆ ಕುತೂಹಲದ ಮುಂದುವರಿದ ಭಾಗವಾಗಿ ನಡೆಸಿದ ಅಧ್ಯಯನದಿಂದ, ತಮ್ಮ ಮಹತ್ವದ ಸಂಶೋಧನೆಯನ್ನು ಪ್ರಕಟಿಸಿದರು. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ, ಅದರಿಂದ ಹೊರಬರುವ ಕಿರಣಗಳು ಹೊರಳಿ, ಒಂದಿಷ್ಟು ಕಿರಣಗಳು ಮೂಲ ತರಂಗಾಂತರದಿಂದ ಭಿನ್ನವಾಗುತ್ತವೆ. ಹಾಗಾಗಿ, ಸಮುದ್ರದ ನೀರಿನಲ್ಲಿ ಸೂರ್ಯನ ಬೆಳಕಿನ ಒಂದಿಷ್ಟು ಭಾಗ ಚದುರಿ ಹೋಗಿ ಸಮುದ್ರದ ನೀಲಿ ಬಣ್ಣಕ್ಕೆ ಕಾರಣವಾಗುತ್ತದೆ ಎಂಬ ಸಂಶೋಧನೆಯನ್ನು ಜಗತ್ತಿಗೆ ತಿಳಿಸಿದ್ದರು. ಈ ಆವಿಷ್ಕಾರದ ಆಧಾರದ ಮೇಲೆ, ಮುಂದಿನ ಏಳು ವರ್ಷಗಳಲ್ಲಿ ಸುಮಾರು 700 ವಿಜ್ಞಾನ ಪ್ರಬಂಧಗಳು ವಿಶ್ವದ ವಿವಿಧೆಡೆಗಳಲ್ಲಿ ಮಂಡನೆಯಾಗಿದ್ದವು ಎಂದರೆ, ರಾಮನ್ ಪರಿಣಾಮದ ಮಹತ್ವ ನಮಗೆ ಅರಿವಾಗಬೇಕು.
ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 1888ರಲ್ಲಿ, ಸಂಸ್ಕೃತ ವಿದ್ವಾಂಸರ ಕುಟುಂಬದಲ್ಲಿ ರಾಮನ್ ಜನಿಸಿದವರು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಮತ್ತು ವಿಜ್ಞಾನದ ಶಿಕ್ಷಕರಾಗಿದ್ದರು. ತಮ್ಮ 19ನೇ ವಯಸ್ಸಿನಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದ ರಾಮನ್, ಇನ್ನೆರಡು ವರ್ಷಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. 1902ರಲ್ಲಿ ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಕೋಲ್ಕತಾದಲ್ಲಿ ನೇಮಕಗೊಂಡರು. ಆದರೆ ವಿಜ್ಞಾನದ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಕೆಲಸದ ಅವಧಿ ಮುಗಿದ ನಂತರ ಅಲ್ಲಿನ ಐಎಸಿಎಸ್ ಪ್ರಯೋಗಾಲಯದಲ್ಲಿ ರಾಮನ್ ವ್ಯಸ್ತರಾಗುತ್ತಿದ್ದರು. ಕಡೆಗೆ ತಮ್ಮ 29ನೇ ವಯಸ್ಸಿನಲ್ಲಿ, ಆ ಕೆಲಸಕ್ಕೆ ರಾಜೀನಾಮೆ ನೀಡಿ ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹೊಸ ಅಧ್ಯಾಯ ಪ್ರಾರಂಭಿಸಿದರು. ಆ ನಂತರದಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡರು ಸಿ.ವಿ. ರಾಮನ್. ಪಾಶ್ಚಾತ್ಯ ದೇಶಗಳ ವಿಜ್ಞಾನಿಗಳೂ ಭಾರತೀಯ ವಿಜ್ಞಾನಿಯ ಸಂಶೋಧನೆಗಳ ಬಗ್ಗೆ ಹೆಮ್ಮೆ ಪಡುವಂತಾಗಿತ್ತು. ವಿಶ್ವದ ಘನ ವಿಜ್ಞಾನಿಗಳ ಸಾಲಿನಲ್ಲಿ ರಾಮನ್ ಅವರ ಹೆಸರು ಇಂದಿಗೂ ಅಚ್ಚಳಿಯದಂತಿದೆ.
ಇದನ್ನೂ ಓದಿ: Science Festival in Bhopal: ಜನರಿಗೆ ತಾಯ್ನುಡಿಯಲ್ಲೇ ವಿಜ್ಞಾನ ತಲುಪಿಸಬೇಕು: ಡಾ. ಎನ್. ಕಲೈ ಸೆಲ್ವಿ