Site icon Vistara News

Prafulla Chandra Ray : ಪ್ರಫುಲ್ಲ ಚಂದ್ರ ರೇ; ಇವರು ರಸಾಯನ ಶಾಸ್ತ್ರದ ಪಿತಾಮಹರೂ ಹೌದು, ಜನಪರ ಆಚಾರ್ಯರೂ ಹೌದು!

prafulla Chandra Ray

ಸೋಮೇಶ್ವರ ಗುರುಮಠ

‘ದೇಶೀಯ ರಾಸಾಯನಿಕ ಉದ್ಯಮಗಳು ಬೆಳೆಯದೇ ಹೋದರೆ, ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ರಸಾಯನ ಶಾಸ್ತ್ರದ ಬೋಧನೆಯಾಗಲಿ ಅಥವಾ ಸಂಶೋಧನೆಯಾಗಲಿ ಅಭಿವೃದ್ಧಿಯಾಗುವುದಿಲ್ಲ ಎಂದು ತರ್ಕಿಸಿದ್ದ ದೇಶದ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು ಪ್ರಫುಲ್ಲ ಚಂದ್ರ ರೇ (Prafulla Chandra Ray). ಅವರನ್ನು ಭಾರತದ ರಸಾಯನ ಶಾಸ್ತ್ರ ಪಿತಾಮಹ (Father of Indian Chemistry) ಎಂದು ಕರೆಯುತ್ತಾರೆ.

ಮಹಾತ್ಮಾ ಗಾಂಧೀಜಿಯವರು (Mahathma Gandhi) 1931ರಲ್ಲಿ ತಮ್ಮ ಮತ್ತು ರೇ ಅವರ ನಡುವಿನ 1901ರ ಭೇಟಿಯ ಕುರಿತಾಗಿ ಈ ರೀತಿ ಬರೆದಿದ್ದರು. “ಸರಳ ಭಾರತೀಯ ಉಡುಪಿನ, ಸರಳ ನಡೆನುಡಿಯ ಈ ಮನುಷ್ಯ ಆಗಲೇ ದೊಡ್ಡ ವಿಜ್ಞಾನಿ ಎನಿಸಿಕೊಂಡಿದ್ದರು ಎಂಬುದನ್ನು ನಂಬುವುದು ಕಷ್ಟ. ಅವರಿಗೆ ದೊರೆಯುತ್ತಿದ್ದ ಭಾರಿ ಸಂಬಳದಲ್ಲಿ ಹತ್ತಿಪ್ಪತ್ತು ರೂಪಾಯಿಗಳನ್ನು ತಮಗಾಗಿ ಇಟ್ಟುಕೊಂಡು ಉಳಿದುದನ್ನೆಲ್ಲ ಬಡ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಕೊಡುತ್ತಿದ್ದರೆಂಬುದನ್ನು ಕೇಳಿ ನನ್ನ ಉಸಿರು ನಿಂತಿತು. ಆಚಾರ್ಯ ರೇಯವರು ತಮ್ಮ ಅವಿರತ ಸೇವೆ, ಉತ್ಸಾಹ ಮತ್ತು ಆಶಾ ಭಾವನೆಗಳಿಂದ ನಮಗೆ ಮೇಲ್ಪಂಕ್ತಿಯಾಗಿದ್ದಾರೆ. ಅವರು ನಮ್ಮವರೆಂಬುದೇ ನಮಗೆ ಹೆಮ್ಮೆ”.

13 ವರ್ಷಕ್ಕೇ ಇಂಗ್ಲಿಷ್‌, ಬಂಗಾಳಿ ಸಾಹಿತ್ಯ ಜ್ಞಾನ

ಇಂತಹ ವಿಜ್ಞಾನಿ, ಸಾಹಸೋದ್ಯಮಿ, ಕೈಗಾರಿಕಾ ಸಂಸ್ಥಾಪಕರು ಹುಟ್ಟಿದ್ದು 1861ರ ಆಗಸ್ಟ್ 2ರಂದು ಬಾಂಗ್ಲಾ ದೇಶದ ಜೆಸ್ಸೂರ್ ಜಿಲ್ಲೆಯ ರರೂಲಿ ಎಂಬ ಹಳ್ಳಿಯಲ್ಲಿ. 1870ರಲ್ಲಿ ಅವರ ಕುಟುಂಬ ಕೋಲ್ಕೊತಾಗೆ ಬಂದು ನೆಲೆಸಿತು. ಬ್ರಹ್ಮ ಸಮಾಜದ ಸಂಸ್ಥಾಪಕರಾದ ಕೇಶಬ್ ಚಂದ್ರಸೇನ್ ಆಗ ತಾನೇ ಆಲ್ಬರ್ಟ್ ಎಂಬ ಶಾಲೆಯನ್ನು ಪ್ರಾರಂಭಿಸಿದ್ದರು. ಅವರ ಬೋಧನೆಗಳಿಂದ ಆಕರ್ಷಿತರಾಗಿದ್ದ ಪ್ರಫುಲ್ಲರು 1874ರಲ್ಲಿ ಆ ಶಾಲೆಯನ್ನು ಸೇರಿದರು. ಕೇವಲ 13 ವರ್ಷದವರಾಗಿದ್ದ ಪ್ರಫುಲ್ಲ ಚಂದ್ರರಿಗೆ ಆ ವೇಳೆಗಾಗಲೇ ಇಂಗ್ಲಿಷ್ ಮತ್ತು ಬಂಗಾಳಿ ಸಾಹಿತ್ಯದಲ್ಲಿ ಆಳವಾದ ಜ್ಞಾನವಿದ್ದುದೂ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚೆನ್ನಾಗಿ ಬರುತ್ತಿದ್ದುದೂ ಆ ಶಾಲೆಯ ಉಪಾಧ್ಯಾಯ ವರ್ಗದವರನ್ನು ಬೆರಗುಗೊಳಿಸಿದ್ದವು.

ಆದರೆ ಶಾಲೆಯ ಅಂತಿಮ ಪರೀಕ್ಷೆಯಲ್ಲಿ ಅವರು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವರೆಂಬ ನಿರೀಕ್ಷೆ ಹೊಂದಿದ್ದ ಉಪಾಧ್ಯಾಯರಿಗೆಲ್ಲ ನಿರಾಸೆಯಾಯಿತು. ಪ್ರಫುಲ್ಲರು ಪರೀಕ್ಷೆಗೆ ಕೂಡದೆ, ತಮ್ಮ ಹಳ್ಳಿಗೆ ಹೊರಟುಹೋದರು. ಅಲ್ಲಿ ಹಳ್ಳಿಗರೊಂದಿಗೆ ನಿಕಟವಾಗಿ ಬೆರೆತು, ಅವರ ಜೊತೆಗೆ ಸರಳ ಜೀವನ ನಡೆಸಿ, ಅವರ ಸುಖ ದುಃಖಗಳ ಪರಿಚಯ ಮಾಡಿಕೊಂಡರು. ಜನಸಾಮಾನ್ಯರ ವಿಷಯದಲ್ಲಿ ಸಾಕಷ್ಟು ಸಹಾನುಭೂತಿ ಬೆಳೆಸಿಕೊಂಡರು.

ಪೆಡ್ಲೆರ್‌ ಉಪನ್ಯಾಸಗಳಿಂದ ಪ್ರಭಾವಿತ

1876ರಲ್ಲಿ ಕೋಲ್ಕೊತಾಗೆ ಹಿಂದಿರುಗಿ ಆಲ್ಬರ್ಟ್ ಶಾಲೆಗೆ ಸೇರಿ 1878ರಲ್ಲಿ ಅಂತಿಮ ಪರೀಕ್ಷೆ ಮುಗಿಸಿದರು. ಆನಂತರ ಈಶ್ವರಚಂದ್ರ ವಿದ್ಯಾಸಾಗರರು ಸ್ಥಾಪಿಸಿದ್ದ ‘ವಿದ್ಯಾಸಾಗರ’ ಕಾಲೇಜಿಗೆ ಸೇರಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಈ ಅವಧಿಯಲ್ಲಿ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ಅಲೆಕ್ಸಾಂಡರ್ ಪೆಡ್ಲೆರ್ ಅವರ ಉಪನ್ಯಾಸಗಳನ್ನು ಕೇಳಿ ಅದರಿಂದ ತುಂಬಾ ಪ್ರಭಾವಿತರಾದರು.

ಮುಂದೆ, ಗಿಲ್ಕ್ರೈಸ್ಟ್ ಪರೀಕ್ಷೆ ತೇರ್ಗಡೆಯಾಗಿ ಬಹುಮಾನವನ್ನು ಪಡೆದು, ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿ 1882ರಲ್ಲಿ ವಿದೇಶಕ್ಕೆ ತೆರಳಿ ಎಡಿನ್‌ಬರೋ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ತರಗತಿಗೆ ಸೇರಿದರು. 1885ರಲ್ಲಿ ಡಿಗ್ರಿ ಪಡೆದು ಸಂಶೋಧನೆಯನ್ನು ಕೈಗೊಂಡ ಎರಡೇ ವರ್ಷಗಳಲ್ಲಿ ಡಿ.ಎಸ್.ಸಿ ಡಿಗ್ರಿಗಾಗಿ ಪ್ರೌಢ ಪ್ರಬಂಧವೊಂದನ್ನು ಸಲ್ಲಿಸಿದರು. ಅವರಿನ್ನೂ ಇಪ್ಪತ್ತಾರು ವರ್ಷದವರಾಗಿದ್ದಾಗಲೇ ಡಿ.ಎಸ್.ಸಿ ಡಿಗ್ರಿ ಗಳಿಸಿದರು. ತಮಗೆ ಬಹುಮಾನವಾಗಿ ದೊರೆತಿದ್ದ ಹೋಪ್ ವಿದ್ಯಾರ್ಥಿವೇತನವನ್ನು ಉಪಯೋಗಿಸಿಕೊಂಡು ಇನ್ನೊಂದು ವರ್ಷ ಅಲ್ಲಿಯೇ ಸಂಶೋಧನೆಯಲ್ಲಿ ನಿರತರಾಗಿ ಆನಂತರ ಭಾರತಕ್ಕೆ ಹಿಂದಿರುಗಿದರು.

ಸಂಶೋಧನಾ ವಿದ್ಯಾರ್ಥಿಗಳ ತಯಾರಿ

1889ರಲ್ಲಿ ರೇ ಕೋಲ್ಕೊತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ವಿಜ್ಞಾನದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡರು. ಅವರಿಗೆ ಆಗ ದೊರೆತ ಮಾಸಿಕ ವೇತನ 250 ರೂಪಾಯಿಗಳು. ಆ ಹುದ್ದೆಯನ್ನು ವಹಿಸಿಕೊಂಡ ಮೇಲೆ ಅವರು ಗಮನ ನೀಡಿದ ಮೊಟ್ಟಮೊದಲ ಕೆಲಸವೆಂದರೆ, ರಸಾಯನ ವಿಜ್ಞಾನದಲ್ಲಿ ಸಂಶೋಧನೆ ನಡೆಸುವುದಕ್ಕೂ ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ತಯಾರು ಮಾಡುವುದಕ್ಕೂ ಅಗತ್ಯವಾದ ಏರ್ಪಾಟುಗಳನ್ನು ಮಾಡಿದ್ದು. ಕೆಲವೇ ತಿಂಗಳುಗಳಲ್ಲಿ ಬಿರುಸಿನ ಸಂಶೋಧನಾ ಚಟುವಟಿಕೆ ಪ್ರಾರಂಭವಾಯಿತು. ಅದರ ಫಲವಾಗಿ ಆಧುನಿಕ ರಸಾಯನ ವಿಜ್ಞಾನದಲ್ಲಿ ಸಂಶೋಧನೆ ನಡೆಸುವ ವಿಜ್ಞಾನಿಗಳ ತಂಡ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿತು.

ಹರಳು ರೂಪದಲ್ಲಿ ಪಾದರಸದ ನೈಟ್ರೇಟ್‌

1896ರಲ್ಲಿ ಪ್ರಫುಲ್ಲ ಚಂದ್ರ ರೇ ಮರ್ಕ್ಯೂರಸ್ ನೈಟ್ರೇಟ್ ಅನ್ನು ಸ್ಥಿರವಾದ ಹರಳುಗಳ ರೂಪದಲ್ಲಿ (Mercurus nitrate in Crystal form) ತಯಾರಿಸಿ ಜಗತ್ತಿನ ರಸಾಯನ ವಿಜ್ಞಾನಿಗಳ ಗಮನ ಸೆಳೆದರು. ಪಾದರಸವು ಇತರ ಧಾತುಗಳೊಡನೆ ಸಂಯೋಗವಾಗುವಾಗ ಸಾಮಾನ್ಯವಾಗಿ ಅದರ ವೇಲೆನ್ಸಿ ಎರಡಾಗಿರುತ್ತದೆ. ಆ ಸಂಯುಕ್ತಗಳನ್ನು ಮರ್ಕ್ಯೂರಿಕ್ ಸಂಯುಕ್ತಗಳೆಂದು ಕರೆಯುತ್ತಾರೆ.

ಕೆಲವೊಮ್ಮೆ ವೇಲೆನ್ಸಿ 1 ಇರಬಹುದಾದ ಮರ್ಕ್ಯೂರಸ್ ಸಂಯುಕ್ತಗಳನ್ನು ಅದು ಉತ್ಪತ್ತಿ ಮಾಡುತ್ತದೆ. ಆದರೆ ಅವುಗಳು ಮರ್ಕ್ಯೂರಿಕ್ ಸಂಯುಕ್ತಗಳಷ್ಟು ಸ್ಥಿರತೆಯನ್ನು ಹೊಂದಿರುವುದಿಲ್ಲ. ಅದೇ ರೀತಿ ನೈಟ್ರೋಜನ್ ಉತ್ಪತ್ತಿ ಮಾಡುವ ಎರಡು ಮುಖ್ಯ ಆಮ್ಲಗಳ ಪೈಕಿ HNO3 ಸೂತ್ರವುಳ್ಳ ನೈಟ್ರಿಕ್ ಆಮ್ಲವು ಅದರ ಲವಣಗಳು ಸ್ಥಿರ. HNO2 ಸೂತ್ರವುಳ್ಳ ನೈಟ್ರಸ್ ಆಮ್ಲವೂ ಮತ್ತದರ ಲವಣಗಳು ಅಷ್ಟು ಸ್ಥಿರವಲ್ಲ. ಸಹಜವಾಗಿ ಏಕ ವೇಲೆನ್ಸಿಯ ಪಾದರಸದ ಮತ್ತು ನೈಟ್ರಸ್ ಆಮ್ಲದ ಲವಣವಾದ ಮರ್ಕ್ಯೂರಸ್ ನೈಟ್ರೇಟ್ ತುಂಬಾ ಅಸ್ಥಿರವಾಗಿರಬೇಕಷ್ಟೆ. ಆದುದರಿಂದ ಅದನ್ನು ಅಲ್ಲಿಯವರೆಗೆ ಯಾರೂ ತಯಾರಿಸಿರಲಿಲ್ಲ. ಅದರ ಅಸ್ಥಿರತೆಯ ಕಾರಣಕ್ಕಾಗಿ ಅದರ ಅಸ್ತಿತ್ವವೇ ಅಸಾಧ್ಯವೆಂಬ ಸಂದೇಹ ವಿಜ್ಞಾನಿಗಳಿಗಿತ್ತು. ಅದನ್ನು ತಯಾರಿಸುವ ಒಂದು ವಿಧಾನವನ್ನು ರೂಪಿಸಿ ಮೊಟ್ಟಮೊದಲ ಬಾರಿಗೆ ಸ್ಥಿರವಾದ ಹರಳುಗಳ ರೂಪದಲ್ಲಿ ರೇ ಪಡೆದಿದ್ದರು.

ಕಿಂಗ್‌ ಆಫ್‌ ನೈಟ್ರೇಟ್‌ ಪ್ರಫುಲ್ಲಚಂದ್ರ ರೇ

ಆಗ, ಅಂದಿನ ಜಗತ್ಪ್ರಸಿದ್ದ ರಸಾಯನ ವಿಜ್ಞಾನಿಗಳಾದ ಬರ್ತೇಲೋ, ವಿಕ್ಟರ್ ಮೇಯರ್, ವೊಲ್ಹಾರ್ಡ್ ಮುಂತಾದವರು ರೇ ಅವರಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದರು. ಈ ಸಾಧನೆಯನ್ನು ಅನುಸರಿಸಿ ಅವರು ಮರ್ಕ್ಯೂರಸ್ ನೈಟ್ರೇಟಿನ ಜನ್ಯ ಸಂಯುಕ್ತಗಳ ಬಗ್ಗೆ ಮತ್ತು ಇತರೆ ನೈಟ್ರೇಟುಗಳ ಬಗ್ಗೆ ಗಮನಾರ್ಹ ಸಂಶೋಧನೆ ನಡೆಸಿದರು. 1914ರಲ್ಲಿ ಇಂಗ್ಲೆಂಡಿನ ಪ್ರಸಿದ್ಧ ರಸಾಯನ ವಿಜ್ಞಾನಿ ಆರ್ಮ್‌ಸ್ಟ್ರಾಂಗ್‌ ಅವರು, ರೇ ಅವರನ್ನು ‘ನೈಟ್ರೇಟ್‌ಗಳ ಪ್ರಭು’ (King of Nitrates) ಎಂದು ಶ್ಲಾಘಿಸಿದ್ದರು.

ದೇಶದಲ್ಲಿ ರಾಸಾಯನಿಕ ಉದ್ಯಮಗಳನ್ನು ಸ್ಥಾಪಿಸಬೇಕೆಂಬ ಛಲ ಹೊಂದಿದ್ದ ರೇ ಅವರು ರಸಾಯನ ವಿಜ್ಞಾನದಲ್ಲಿ ಮತ್ತು ವೈದ್ಯಕೀಯ ರಂಗದಲ್ಲಿ ಶಿಕ್ಷಣ ಪಡೆದ ಕೆಲವು ಮಿತ್ರರನ್ನು ಕಲೆ ಹಾಕಿ ತಮ್ಮ ಮನೆಯಲ್ಲಿಯೇ ಕೆಲವು ರಾಸಾಯನಿಕ ಔಷಧ ಸಾಮಗ್ರಿಗಳನ್ನು ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡತೊಡಗಿದರು. 1901ರ ವೇಳೆಗೆ ಅದು ಬೆಂಗಾಲ್ ಕೆಮಿಕಲ್ ಅಂಡ್ ಫಾರ್ಮಾಸೂಟಿಕಲ್ ವರ್ಕ್ಸ್ ಎಂಬ ಕಂಪನಿಯಾಗಿ ಬೆಳೆಯಿತು.

ಹಿಂದೂ ರಸಾಯನ ವಿಜ್ಞಾನದ ಇತಿಹಾಸ!

ಪ್ರಫುಲ್ಲರ ಅಪಾರ ದೇಶ ಪ್ರೇಮ, ನಮ್ಮ ರಾಷ್ಟ್ರದ ಚರಿತ್ರೆಯಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಹಿಂದಿನ ಸಂಸ್ಕೃತ ಗ್ರಂಥಗಳ ನಿಕಟ ಪರಿಚಯ ‘ಹಿಂದೂ ರಸಾಯನ ವಿಜ್ಞಾನದ ಇತಿಹಾಸ’ (History of Hindu Chemistry) ಎಂಬ ಎರಡು ಸಂಪುಟಗಳ ಕೃತಿಯನ್ನು ಹೊರತರಲು ಅವರಿಗೆ ಪ್ರೇರಣೆಯನ್ನು ನೀಡಿತ್ತು. ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆಗಳಲ್ಲಿ ಆ ಗ್ರಂಥದ ದೀರ್ಘ ವಿಮರ್ಶೆಗಳು ಪ್ರಕಟವಾದವು.

1916ರಲ್ಲಿ ಸರ್ಕಾರಿ ಕಾಲೇಜಾದ ಪ್ರೆಸಿಡೆನ್ಸಿ ಕಾಲೇಜಿನಿಂದ ನಿಗದಿತ ಕಾಲಕ್ಕೆ ಮುಂಚೆಯೇ ನಿವೃತ್ತರಾಗಿ ಯೂನಿವರ್ಸಿಟಿ ವಿಜ್ಞಾನ ಕಾಲೇಜಿನ ರಸಾಯನ ಶಾಸ್ತ್ರ ಇಲಾಖೆಯ ಮುಖ್ಯಸ್ಥರಾಗಿ ಸೇರಿಕೊಂಡರು. ಜೀವನಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಪ್ರಫುಲ್ಲಚಂದ್ರರು ಯೂನಿವರ್ಸಿಟಿ ವಿಜ್ಞಾನ ಕಾಲೇಜಿನ ಮೊದಲ ಮಹಡಿಯ ಒಂದು ತುದಿಯಲ್ಲಿ ವಾಸವಾಗಿದ್ದರು. ವಿಶ್ವವಿದ್ಯಾನಿಲಯದಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ 1936 ರಲ್ಲಿ ತಮ್ಮ 75 ನೇ ವಯಸ್ಸಿನಲ್ಲಿ ನಿವೃತ್ತರಾದರು. 1944 ರಲ್ಲಿ ತಮ್ಮ 83ನೇ ವರ್ಷದಲ್ಲಿ ನಿಧನ ಹೊಂದಿದರು.

ಕೋಲ್ಕೊತಾ, ವಾರಾಣಸಿ, ಢಾಕಾ ಮತ್ತು ಡರ್ಹ್ಯಾಮ್ ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. 1920 ರಲ್ಲಿ ಅವರನ್ನು ಇಂಡಿಯನ್ ಸೈನ್ಸ್ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. 1924 ರಲ್ಲಿ ಸ್ಥಾಪಿಸಲಾದ ಇಂಡಿಯನ್ ಕೆಮಿಕಲ್ ಸೊಸೈಟಿಯ ಪ್ರಥಮ ಅಧ್ಯಕ್ಷರೂ ಅವರೇ ಆದರು. ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ 1935ರಲ್ಲಿ ಸ್ಥಾಪಿಸಲಾದ ಇಂಡಿಯನ್ ಸೈನ್ಸ್ ನ್ಯೂಸ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿ ಆ ಸಂಸ್ಥೆಯ ವತಿಯಿಂದ ಪ್ರಕಟಿಸತೊಡಗಿದ್ದ ‘ಸೈನ್ಸ್ ಅಂಡ್ ಕಲ್ಚರ್’ ಪತ್ರಿಕೆಗೆ ಯುಕ್ತ ಮಾರ್ಗದರ್ಶನ ನೀಡಿದರು.

ಪಕ್ಕಾ ರಾಷ್ಟ್ರೀಯವಾದಿ, ಆದರೂ ಸರ್‌ ಪದವಿ ದಕ್ಕಿತು!

ಪಕ್ಕಾ ರಾಷ್ಟ್ರೀಯತಾವಾದಿಯಾಗಿದ್ದು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಬಹಿರಂಗವಾಗಿ ಮತ್ತು ನಿಷ್ಠುರವಾಗಿ ಖಂಡಿಸುತ್ತರಿದ್ದರಾದರೂ ಅವರಿಗೆ ಯುಕ್ತ ಗೌರವ ಸಲ್ಲಿಸದಿರಲು ಆಗಿನ ಬ್ರಿಟಿಷ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. 1912 ರಲ್ಲಿ ಸರ್ ಪದವಿಯನ್ನೂ ನೀಡಿ ಗೌರವಿಸಿತು. ರೇ ಕಳೆದ ಶತಮಾನದಲ್ಲಿ ಬರೆದ ತಮ್ಮ ಲೇಖನಗಳಲ್ಲಿ ಮತ್ತು ನೀಡಿದ ಭಾಷಣಗಳಲ್ಲಿ ಅಸ್ಪೃಶ್ಯತೆ, ಜಾತಿಪದ್ಧತಿ, ಬಾಲ್ಯವಿವಾಹ, ವರದಕ್ಷಿಣೆ, ಕೋಮು ಭಾವನೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ಖಂಡಿಸಿದ್ದಾರೆ. ವಿಶ್ವವಿದ್ಯಾನಿಲಯದ ಉನ್ನತ ಮಟ್ಟದಲ್ಲಿ ಸಹ ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕೆಂಬುದು ಅವರ ಖಚಿತ ನಿಲುವಾಗಿತ್ತು.

1889ರಲ್ಲಿ ಅವರು ವಿದೇಶದಿಂದ ಹಿಂದಿರುಗಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪನ ಕೈಗೊಂಡ ಕೂಡಲೇ ಬಂಗಾಳಿ ಭಾಷೆಯಲ್ಲಿ ವಿಜ್ಞಾನ ಪಠ್ಯಪುಸ್ತಕಗಳನ್ನು ಬರೆಯತೊಡಗಿದ್ದರು. 1926ರಲ್ಲಿ ಅವರು ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣದಲ್ಲಿ ಈ ಕುರಿತಾಗಿ ದೀರ್ಘವಾಗಿ ಚರ್ಚಿಸಿದ್ದಾರೆ.

ಅವರು ಪ್ರವಾಹಗಳ ಡಾಕ್ಟರ್‌!

ಹಾಗೆಯೇ 1922 ಮತ್ತು 1931ರಲ್ಲಿ ಬಂಗಾಳದ ಉತ್ತರ ಮತ್ತು ಪೂರ್ವ ಭಾಗಗಳು ಪ್ರವಾಹದ ಹಾವಳಿಗೆ ಈಡಾದಾಗ, ರೇ ಸ್ವಯಂ ಪರಿಹಾರ ಕಾರ್ಯಕ್ಕೆ ಧುಮುಕಿದ್ದರು. ಪರಿಹಾರ ಸಮಿತಿಗೆ ಅವರೇ ಅಧ್ಯಕ್ಷರು. ಯೂನಿವರ್ಸಿಟಿಯ ಕಾಲೇಜಿನಲ್ಲಿನ ಅವರ ನಿವಾಸ ಮತ್ತು ಕೆಲಸದ ಕೊಠಡಿಗಳೇ ಪರಿಹಾರ ಸಮಿತಿಯ ಕಾರ್ಯಾಲಯ. ನಿದ್ದೆ ನೀರಡಿಕೆಗಳನ್ನು ಕಡೆಗಣಿಸಿ ಹಗಲೂ ರಾತ್ರಿ ದುಡಿದು, ಹಳ್ಳಿ ಹಳ್ಳಿಗಳಿಗೆ ಭೇಟಿಕೊಟ್ಟು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿ ಪರಿಹಾರ ಕಾರ್ಯ ನಡೆಸಿದರು. ಗಾಂಧೀಜಿ ಅವರನ್ನು ‘ಪ್ರವಾಹಗಳ ಡಾಕ್ಟರ್’ ಎಂದು ಕರೆದಿದ್ದರು. ಹೀಗೆ ವಿಜ್ಞಾನಿಯಾಗಿ ವಿಜ್ಞಾನಕ್ಕಾಗಿ ಮಾಡಿದ ಅವರ ಕಾರ್ಯಗಳೆಲ್ಲ ಸದಾ ಅವಿಸ್ಮರಣೀಯ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಪೋಲಿಯೊ ಲಸಿಕೆಯ ಪೇಟೆಂಟ್‌ ನಿರಾಕರಿಸಿ ಫ್ರೀ ಆಗಿ ಹಂಚಿದ ಮಾನವತಾವಾದಿ ಡಾ. ಸಾಕ್

Exit mobile version