Site icon Vistara News

ವಿಜ್ಞಾನ ಲೇಖನ | ಮೆದುಳಿಗೆ ಕೈಹಾಕುವ ಎಲಾನ್‌ ಮಸ್ಕ್‌ ಹಾಗೂ ಬುದ್ಧಿವಂತ ಅಕಶೇರುಕನ ಭಾವಸಂವಹನ! 

Scientific observation on Intelligent Invertebrates

ಸೋಮೇಶ್ವರ ಗುರುಮಠ
ವಿಜ್ಞಾನವೆಂಬುದು ನಿರಂತರವಾಗಿ ಅನ್ವೇಷಣೆಗೊಳಗಾಗಿ, ಹೊಸ ಸಂಶೋಧನೆಗಳಿಗೆ ಬಾಗಿಲು ತೆರೆದು, ನವಸೋಜಿಗ ಸಂಗತಿಗಳನ್ನು ನಿತ್ಯವೂ ಲೋಕಕೆ ಪರಿಚಯಿಸುವ ವಿಶೇಷ ವಿಭಾಗ. ಮಾನವಕೋಟಿ ಸಹಸ್ರಕೋಟಿಯಾಗುವತ್ತ ತೆರಳುತ್ತಿರುವ ಈ ಸಂದರ್ಭದಲ್ಲಿಯೂ ತನಗಿಂತ ಮುಂಚೆಯೇ ಅಥವಾ ತನ್ನ ನಂತರ ಜೀವಲೋಕದಲ್ಲಿ ವಿಕಸನ ಪ್ರಕ್ರಿಯೆಗೆ ಒಳಗಾಗುತ್ತಿರುವ ಜೀವಿಗಳ ಮೇಲೆ ವಿಶೇಷವಾದ ಕಣ್ಣೊಂದನ್ನು ಇಟ್ಟಿದ್ದಾನೆ.

ಈ ಕಣ್ಣೇ ಹಲವು ವಿಸ್ಮಯಗಳ ಪುಟಗಳನ್ನು ನಿರಂತರವಾಗಿ ತೆರೆಯ ಮೇಲೆ ತೆರೆಯುತ್ತಿದೆಯೆನ್ನುವುದು ಸೋಜಿಗದ ಸಂಗತಿ. ತಮಗೆಲ್ಲ ತಿಳಿದಿರುವಂತೆ ತಂತ್ರಜ್ಞಾನ ಲೋಕದಲ್ಲಿ ಮಾನವನ ಮೆದುಳಿಗೆ ಕೈ ಹಾಕುವ ಕೆಲಸವನ್ನು ಮಾಡುತ್ತಿರುವ ಸಾಹಸೋದ್ಯಮಿ ”ಎಲಾನ್ ಮಸ್ಕ್” ನ್ಯೂರೋಲಿಂಕ್ ಮೂಲಕ ನಮ್ಮ ಮೂಲಾಲೋಚನೆಗಳ ಡಾಟಾಗೆ ನೇರವಾಗಿ ಕೈ ಹಾಕುವ ಕೆಲಸವನ್ನು ಕೈಗೊಂಡಿದ್ದಾರೆ. ನಮ್ಮ ಬಾಲ್ಯ, ಯೌವ್ವನ, ಗೃಹಸ್ಥ ಸೇರಿ ಇತ್ಯಾದಿ ಹಂತಗಳಲ್ಲಿ ನಡೆದಿರುವ ಘಟನೆಗಳನ್ನು ಒಂದೆಡೆ ಸ್ಟೋರ್ ಮಾಡುವ ಸಾಮರ್ಥ್ಯ ಅದಕ್ಕಿರಬಹುದೇನೋ ಎಂಬ ನಿರೀಕ್ಷೆಯಂತೂ ಜನಮಾನಸದಲ್ಲಿ ಉಂಟಾಗಿರುವುದು ಸುಳ್ಳಲ್ಲ. ಅಂತೆಯೇ ಈ ಸ್ಮರಣೆ, ಅನುಭವಗಳಂತಹ ಸಂಗತಿ ಕೇವಲ ಮಾನವನಿಗೆ ಮಾತ್ರ ಉಂಟಾಗುವುದಿಲ್ಲ, ಇದರಲ್ಲಿ ನಮ್ಮ ಪಾಲೂ ಕೂಡ ಇರುವುದೆಂದು ಇತರೆ ಜೀವಿಗಳು ನುಡಿಯುತ್ತಿವೆ. ಸಸ್ತನಿಗಳಂತೂ ಹಲವಾರು ಭೌತಿಕ ವಿಚಾರಗಳಲ್ಲಿ ಮಾನವನಿಗೆ ಸಾಮ್ಯತೆಯನ್ನು ಹೊಂದಿವೆ. ಆದರೆ ಅಕಶೇರುಕ ಜೀವಿಗಳಲ್ಲಿ ನಮ್ಮಂತೆಯೇ ಆಲೋಚಿಸಬಲ್ಲ, ನಮ್ಮಷ್ಟೇ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಜೀವಿಯಿದೆಯೇ? ಹಾಗಿದ್ದಲ್ಲಿ ಅದರ ಮೆದುಳಿಗೆ ಕೈಹಾಕುವ ಅಥವಾ ಅದರ ಜೈವಿಕ ಲಹರಿಯನ್ನು ಅರಿಯುವ ಪ್ರಯತ್ನ ನಡೆದಿದೆಯೇ? ಖಂಡಿತಾ ಈ ನಿಟ್ಟಿನಲ್ಲಿ ವಿಜ್ಞಾನ ಲೋಕ ಹೆಜ್ಜ್ಜೆಯನ್ನಿಟ್ಟಾಗಿದೆ. ಅಂತೆಯೇ ಇತ್ತೀಚೆಗಷ್ಟೇ ಬಂದ ಮಗದೊಂದು ಅಧ್ಯಯನದ ವರದಿಯ ಪ್ರಕಾರ ಶರಧಿಜೀವಿ ಆಕ್ಟೋಪಸ್ ನ  ಮತ್ತು ಮಾನವನ ಮೆದುಳಿಗೂ  ಅಚ್ಚರಿಯೆನ್ನಿಸುವಷ್ಟು ಸಾಮ್ಯತೆಗಳಿವೆ ಎಂಬ ಸಂಗತಿ ಬಹಿರಂಗವಾಗಿದೆ!

ಇನ್ನು ಆಕ್ಟೊಪಸ್ ಆಕ್ಟೋಪೋಡಾ ಎಂದರೆ ಎಂಟು ಕಾಲುಗಳುಳ್ಳ ಜಾತಿಯ ಸೆಫಾಲೋಪೋಡಾ ವರ್ಗಕ್ಕೆ ಸೇರಿದ ಜಲಚರ. ಆಕ್ಟೊಪಸ್ ಗಳಿಗೆ ಎರಡು ಕಣ್ಣುಗಳು ಮತ್ತು ನಾಲ್ಕು ಜೊತೆ ಬಾಹುಗಳಿದ್ದು, ಇತರ ಆಕ್ಟೊಪಸ್ ಗಳಿಗೂ ಒಳಗಿನ ಅಥವಾ ಹೊರಗಿನ ಅಸ್ಥಿಪಂಜರವಿಲ್ಲದ ಕಾರಣ ಬಹಳ ಕಿರಿದಾದ ಜಾಗಗಳಲ್ಲೂ ಅದು ನುಸುಳಲು ಅನುಕೂಲವಾಗುತ್ತದೆ. ಆಕ್ಟೊಪಸ್ ಗಳು ಬಹಳ ಬುದ್ಧಿವಂತ ಜಲಚರಗಳು, ಪ್ರಾಯಶಃ ಸೆಫಾಲೋಪೋಡ್ ಗಳಂತೆಯೇ ದ್ವಿಪಾರ್ಶ್ವಸಮಾನತೆ ಕಂಡುಬರುತ್ತದೆ. ಆಕ್ಟೊಪಸ್ ಗೆ ಗಟ್ಟಿಯಾದ ಕೊಕ್ಕು ಇದ್ದು, ಅದರ ಬಾಯಿ ಬಾಹುಗಳ ಕೇಂದ್ರಭಾಗದಲ್ಲಿ ಇರುತ್ತದೆ. ಸಾಮಾನ್ಯವಾಗಿ ಎಲ್ಲಾ ಅಕಶೇರುಕಗಳಲ್ಲಿಯೇ ಅತ್ಯಂತ ಬುದ್ಧಿಯುಳ್ಳವು. ಆಕ್ಟೋಪಸ್ ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ. ಜೊತೆಗೆ ಆಕ್ರಮಣಕಾರರ ವಿರುದ್ಧ ರಕ್ಷಿಸಿಕೊಳ್ಳಲು, ಅವು ಅಡಗಿಕೊಳ್ಳುತ್ತವೆ, ತಲೆ ತಪ್ಪಿಸಿಕೊಳ್ಳುತ್ತವೆ, ಒಂದು ರೀತಿಯ ಇಂಕ್ ಅನ್ನು ಉಗುಳುತ್ತವೆ, ಅಥವಾ ಬಣ್ಣ ಬದಲಾಯಿಸಿ ತಪ್ಪಿಸಿಕೊಳ್ಳುತ್ತವೆ. ಒಂದು ಆಕ್ಟೋಪಸ್ ಈಜುತ್ತಾ ಹೋದಂತೆ ತನ್ನ ಎಂಟು ತೋಳುಗಳನ್ನು ತನ್ನ ಹಿಂದೆ ಎಳೆದುಕೊಂಡು ಹೋಗುತ್ತದೆ. ಇನ್ನುಳಿದಂತೆ ಎಲ್ಲಾ ಜಾತಿಯ  ಆಕ್ಟೋಪಸ್ ಗಳು ವಿಷಮಯವಾದವುಗಳು, ಆದರೆ ಕೇವಲ ನೀಲಿ-ಉಂಗುರದ ಆಕ್ಟೋಪಸ್ ಗಳು ಮಾತ್ರ  ಮಾನವರಿಗೆ ಪ್ರಾಣ ಘಾತುಕವಾದುವುಗಳು.

ಜೀವಲೋಕದ ಇತಿಹಾಸದಲ್ಲಿ ಅತಿ ಸಹಜವಾಗಿ ನಡೆದ ಪ್ರಕ್ರಿಯೆಯೇನೆಂದರೆ, ಕಶೇರುಕ (ಬೆನ್ನು ಮೂಳೆಯನ್ನು ಹೊಂದಿರುವ) ಜೀವಿಗಳ ಮೆದುಳಿನ ವಿನ್ಯಾಸ ಉಳಿದ ಜೀವಿಗಳಿಗೆ ಹೋಲಿಸಿದರೆ, ಅಂದರೆ ಅಕಶೇರುಕ (ಬೆನ್ನು ಮೂಳೆಯನ್ನು ಹೊಂದಿರದ) ಜೀವಿಗಳಿಗೆ ಹೋಲಿಸಿ ನೋಡಿದಾಗ ಅತ್ಯಂತ ಸಂಕೀರ್ಣವಾಗಿದೆ. ಆದರೆ ಸೆಫಾಲೋಪೋಡ್ ವರ್ಗಕ್ಕೆ ಸೇರಿದ ಜೀವಸಂಕುಲ ಮಾತ್ರ ಈ ಪ್ರಕ್ರಿಯೆಗೆ ಹೊರತಾಗಿ ನಿಂತಿದೆ.  ಜೆರ್ಮನಿಯ ಬೆರ್ಲಿನ್ನಿನ  ಮ್ಯಾಕ್ಸ್ ಡೆಲ್ಬರ್ಕ್ ಕೇಂದ್ರದಲ್ಲಿ ಸಂಶೋಧನಾ ತಂಡದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ನಿಕೋಲಾಸ್ ರಜಿವ್ಸ್ಕಿ ಹೇಳುವಂತೆ ಸೆಫಾಲೋಪೋಡ್ ವರ್ಗದ ವಿಕಸನವು ಅತ್ಯಂತ ರಚನಾತ್ಮಕವಾಗಿ ಅವುಗಳಲ್ಲಿನ ಮೈಕ್ರೋ ಆರ್.ಏನ್.ಏಗಳ ಮುಖಾಂತರ ಉಂಟಾಗಿದೆಯಂತೆ. ಸೆಫಾಲೋಪೋಡ್ ವರ್ಗದಲ್ಲೇ ಬರುವ  ಆಕ್ಟೋಪಸ್, ಸ್ಕ್ವಿಡ್ಸ್ ಮತ್ತು ಕಟಲ್ ಮೀನುಗಳ ಮೆದುಳಿನ ರಚನೆಯೂ ಮಾನವರಂತೆಯೇ ಸಂಕೀರ್ಣ ಸ್ವರೂಪದಲ್ಲಾಗಿದೆ. ಹೀಗಾಗಿಯೇ ಅವುಗಳನ್ನು ಅತ್ಯಂತ ಬುದ್ಧಿವಂತ ಪ್ರಾಣಿಗಳೆಂದು ಗುರುತಿಸಲಾಗುತ್ತದೆ. ಕೇವಲ ಈ ಮೃದ್ವಂಗಿಗಳಲ್ಲಿ ಮಾತ್ರ ಇಂತಹ ಸಂಕೀರ್ಣ ರಚನೆಯೇಕಾಯಿತೆಂಬ ಪ್ರಶ್ನೆ ವಿಜ್ಞಾನಿಗಳಲ್ಲಿ ಅಚ್ಚರಿಯನ್ನುಂಟುಮಾಡಿದೆ.

”ಸೈನ್ಸ್ ಅಡ್ವಾನ್ಸಸ್” ಎಂಬ ಪತ್ರಿಕೆಯಲ್ಲಿ ಪ್ರಬಂಧವನ್ನು ಪ್ರಕಟಿಸಿರುವ ಇದೇ ಮ್ಯಾಕ್ಸ್ ಡೆಲ್ಬರ್ಕ್ ನ ಅಮೇರಿಕೆಯ ಕೇಂದ್ರ ಉತ್ತರಿಸುವುದೇನೆಂದರೆ “ಆಕ್ಟೋಪಸ್ ಗಳಲ್ಲಿ ಇತರೆ ಕಶೇರುಕ ಜೀವಿಗಳಲ್ಲಿ ಆದಂತಹ ನರವ್ಯೂಹದ ಅಂಗಾಂಶಗಳಲ್ಲಿನ ಮೈಕ್ರೋ ಆರ್.ಏನ್.ಏ ಶ್ರೇಣಿಯ ಬಹುವಾದ ವಿಸ್ತಾರ ಯಥಾವತ್ ರೀತಿಯಲ್ಲಿ ಇವುಗಳಲ್ಲಿಯೂ ಉಂಟಾಗಿದೆಯಂತೆ. ಅದಕ್ಕೇ ನಮ್ಮ ಮತ್ತು ಅವುಗಳ ಮೆದುಳಿನ ರಚನೆಯಲ್ಲಿ ಸಾಮ್ಯತೆಗಳಿವೆಯೆಂದು ಬೆರ್ಲಿನ್ನಿನ ”ಜೀವಶಾಸ್ತ್ರದ ವೈದ್ಯಕೀಯ ವ್ಯವಸ್ಥೆಗಳ ಕೇಂದ್ರವಾದ ಮ್ಯಾಕ್ಸ್ ಡೆಲ್ಬರ್ಕ್ ಕೇಂದ್ರದ ಅನುವಂಶಿಕ ಧಾತು ನಿಯಂತ್ರಕ ಲ್ಯಾಬಿನ ಮುಖ್ಯ ನಿರ್ದೇಶಕರಾದ ನಿಕೋಲಾಸ್ ರಜಿವ್ಸ್ಕಿ ಹೇಳುತ್ತಾರೆ. ಮುಂದುವರಿದಂತೆ ಸೆಫಾಲೋಪೋಡ್ ವರ್ಗದ ಮೆದುಳಿನ ಸಂಕೀರ್ಣ ರಚನಾ ವ್ಯೂಹಕ್ಕೆ ಮೂಲಭೂತ ಕಾರಣವೇ ಈ ಮೈಕ್ರೋ ಆರ್.ಏನ್.ಏಗಳೆಂದು ಹೇಳುತ್ತಾರೆ.

ಈ ಆರ್‌ಎನ್‌ಎಗಳು ವಂಶವಾಹಿಗಳ ನೇರವಾದ ಉತ್ಪನ್ನಗಳಾಗಿವೆ. ಈ ಮೈಕ್ರೋ ಆರ್‌ಎನ್‌ಎಗಳು ನಿರ್ದಿಷ್ಟವಾದ ಇತರ ಆರ್‌ಎನ್‌ಎಗಳಿಂದ  ಬಂಧಿಸಲ್ಪಡುತ್ತವೆ. ಹೀಗಾಗಿಯೇ ಅವುಗಳು ಬಂಧಿಸಿದ ಆರ್.ಏನ್.ಏಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚಾಗಿಸುವಲ್ಲಿ ಅಥವಾ ಕಡಿಮೆಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ, ಒಂದು ಸಂದೇಶವಾಹಕ ಆರ್‌.ಏನ್.ಏಯನ್ನು  ಒಂದು ಪ್ರೋಟೀನ್  ಉತ್ಪತ್ತಿ ಮಾಡುವುದರಿಂದ ತಡೆಯುವುದು. ಹೀಗಾಗಿ ಆರ್‌ಎನ್‌ಎ ಹಸ್ತಕ್ಷೇಪವು ಪರಾವಲಂಬಿ ವಂಶವಾಹಿಗಳನ್ನು ವೈರಸ್‌ಗಳಿಂದ  ಮತ್ತು ಟ್ರಾನ್ಸ್‌ಪೋಸಾನ್‌ಗಳಿಂದ  ಸಂರಕ್ಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆನ್ನಬಹುದು.  

ಇದೇ ನಿಕೋಲಾಸ್ ರಜಿವ್ಸ್ಕಿ ೨೦೧೯ರಲ್ಲಿ ಪ್ರಕಟಗೊಂಡ ಆಕ್ಟೋಪಸ್ ಗಳ ಅನುವಂಶಿಕತೆಯ ಸಂಶೋಧನಾ ಪ್ರಬಂಧವನ್ನೊಮ್ಮೆ ಗಮನಿಸಿದ್ದರಂತೆ. ಅಲ್ಲಿನ  ಸಂಶೋಧನೆಯ ಪ್ರಕಾರ  ಸೆಫಾಲೋಪೋಡ್ ಗಳಲ್ಲಿ ಆರ್.ಏನ್.ಏ ತಿದ್ದುಪಡಿಯಾಗಿದೆಯಂತೆ. ಅಂದರೆ ತಮ್ಮಲ್ಲಿನ ಆರ್.ಏನ್.ಏಗೆ ಮರುರೂಪ ನೀಡಬಲ್ಲ ಕೆಲ ಕಿಣ್ವಗಳನ್ನು ಅತಿಯಾಗಿ ಬಳಸಿರುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಲಾಗಿತ್ತಂತೆ. ಹೀಗಾಗಿಯೇ ರಜಿವ್ಸ್ಕಿ ನ್ಯಾಪ್ಲೇಸ್ನ ”ಸ್ಟಾಜಿಯೋನ್ ಜ್ಯೂಲೊಜಿಕಾ ಅಂಟೊನ್ ಡೋಹರನ್ ಮರೀನ್ ರಿಸರ್ಚ್ ಸೆಂಟರ್” ಜೊತೆ ಕೈಜೋಡಿಸಿ, ಮೃತ ಆಕ್ಟೋಪಸ್ ನ ದೇಹದ ೧೮ ವಿವಿಧ ಅಂಗಾಂಶಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದ್ದರಂತೆ.  ಆದರೆ ಈ ಅಧ್ಯಯನದಲ್ಲಿ ಅವರ ತಂಡಕ್ಕೆ ಮತ್ತೊಂದು ಅಚ್ಚರಿ ಕಾದಿತ್ತು. ಏನೆಂದರೆ, ಆರ್.ಏನ್.ಏಗಳಲ್ಲಿ  ತಿದ್ದುಪಡಿಯಂತೂ ಎಂದಿನಂತೆಯೇ ಸಾಗಿತ್ತು, ಆದರೆ ಇವರು ನಿರೀಕ್ಷಿಸಿದ ದೇಹದ ಭಾಗದಲ್ಲಲ್ಲ. ಬದಲಾಗಿ ಮೈಕ್ರೋ ಆರ್.ಏನ್.ಏಗಳ ಹಸ್ತಕ್ಷೇಪ ಭರದಿಂದ ಸಾಗಿ ಒಟ್ಟಾರೆ ೪೨ ಸದಸ್ಯರುಗಳ  ಸಂಖ್ಯೆ,  ಜೀವಿಯ ಮೆದುಳಿನ ನರವ್ಯೂಹದ ಅಂಗಾಂಶಗಳಲ್ಲಿ ಕಂಡು ಬಂದಿತಂತೆ. ಇದಕ್ಕೆ ಪ್ರಮುಖ ಕಾರಣವೇ ಸೆಫಾಲೋಪೋಡ್ ಗಳ ವಿಕಸನದ ಸಂದರ್ಭದಲ್ಲಿ ಸಂರಕ್ಷಿಸಲ್ಪಟ್ಟ ಅನುವಂಶಿಕತೆಯೆಂದೆನ್ನಬಹುದೆನ್ನುತ್ತಾರೆ. ಇವೇ ಜೀವಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಜಿವ್ಸ್ಕಿ ಹೇಳುವಂತೆ ”ದೇಹದ ಕೋಶಗಳಲ್ಲಿ ಪ್ರೋಟೀನ್ ಉತ್ಪಾದನೆಗೆ ಸಹಕರಿಸಲೆಂದು ಸಂದೇಶ ರವಾನಿಸುವ ಮೆಸ್ಸೆಂಜರ್ ಆರ್.ಏನ್.ಏಗಳು ಈ ಮೈಕ್ರೋ ಆರ್.ಏನ್.ಏಗಳ ಪ್ರಭಾವಕ್ಕೊಳಗಾಗಿ ಸಂದೇಶ ರವಾನಿಸುವ ಜೊತೆಜೊತೆಗೆ ಆರ್.ಏನ್.ಏಗಳ ಜೊತೆಯಂಟಿಕೊಂಡು ಪ್ರೋಟೀನ್ ಉತ್ಪಾದನೆಯ ಮೇಲೆ ಪ್ರಭಾವ ಬೀರಬಲ್ಲ ಕಾರ್ಯಕ್ಷಮತೆಯನ್ನು ತಮ್ಮ ವಿಕಸನದ ಪಯಣದುದ್ದಕ್ಕೂ ಸಂರಕ್ಷಿಸಿಕೊಂಡು ಬಂದಿರುವುದೇ ವಿಶೇಷವೆನ್ನುತ್ತಾರೆ.

ಉಕ್ರೇನಿನ ಲೇಖಕ ಗ್ರಿಗೋರಿ ವಿವರಿಸುವಂತೆ ಈ ವಿಸ್ತರಣಾ ವ್ಯಾಪ್ತಿಯು ಜೀವಜಗತ್ತಿನ ಮೈಕ್ರೋ ಆರ್.ಏನ್.ಏಗಳಲ್ಲೇ ಮೂರನೇಯ ಕ್ರಮಾಂಕವನ್ನಲಂಕರಿಸಿದೆ. ಕಶೇರುಕಗಳನ್ನು ಹೊರತುಪಡಿಸಿ್ದರೆ ಇದೇ ಪ್ರಥಮ ಸಾಲಿನಲ್ಲಿ ನಿಲ್ಲುತ್ತದೆನ್ನುತ್ತಾರೆ. ಒಮ್ಮೆ ರಜಿವ್ಸ್ಕಿ ಕ್ಯಾಲಿಫೋರ್ನಿಯಾದ ಮತ್ಸ್ಯಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾಗ ತಮ್ಮೆದುರು ಕಂಡ, ಟ್ಯಾಂಕ್ ನ ಕೆಳಭಾಗದಲ್ಲಿ ಕುಳಿತಿದ್ದ ಆಕ್ಟೋಪಸ್ ಅನ್ನೇ ದಿಟ್ಟಿಸಿ ನೋಡಿದರಂತೆ. ಸರಳ ಮತ್ಸ್ಯ ದೃಷ್ಟಿಗೂ ಆಕ್ಟೋಪಸ್ ದೃಷ್ಟಿಗೂ ಅಜಗಜಾಂತರ ವ್ಯತಾಸವನ್ನಿಲ್ಲಿ ಕಾಣಬಹುದೆನ್ನುತ್ತಾರೆ. ಅದರ ಕಣ್ಣುಗಳು ಥೇಟ್ ಕ್ಯಾಮೆರಾ ಕಣ್ಣಿನಂತೆಯೇ ಎಂದು ಹೇಳುತ್ತಾರೆ. ಅಂದಿನಿಂದ ಅದರ ಬುದ್ಧಿವಂತಿಕೆಯ ಜಾಡನ್ನು ಹಿಡಿದು ಅಧ್ಯಯನಕ್ಕೆ ಧುಮುಕಿದ್ದು ಎನ್ನುತ್ತಾರೆ.

ಅಕಶೇರುಕ ಜೀವಿಗಳಲ್ಲೇ ಆಕ್ಟೋಪಸ್ ವಿಶೇಷವೆನ್ನಿಸಲು ಮತ್ತೊಂದು ಕಾರಣವೇನೆಂದರೆ, ಅದು ಹೊಂದಿರುವ ಮೆದುಳಿನ ಕೇಂದ್ರ ಸ್ಥಾನ ಮತ್ತು ಬಾಹ್ಯ ನರಮಂಡಲದ ವ್ಯವಸ್ಥೆ. ಇದರ ಕಾರಣವಾಗಿಯೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನದು ಪಡೆದಿದೆ. ಅದರ  ಗ್ರಹಣಾಂಗಗಳು ಬೇರ್ಪಟ್ಟರೂ ಸ್ಪರ್ಶಪ್ರಜ್ಞೆಯನ್ನವು ಅವಲೋಕಿಸಬಲ್ಲವು. ತಮ್ಮ ತೋಳುಗಳನ್ನು ಬಲವಾಗಿ ಪ್ರಯೋಗಿಸುವ ಶಕ್ತಿಯನ್ನು ಅವುಗಳು ಪ್ರಾಯಶಃ ನರಮಂಡಲದ ಸಂಕೀರ್ಣತೆಯಿಂದಲೇ  ಪಡೆದಿರಬಹುದೆಂದು  ವಿಜ್ಞಾನಿಗಳು ಅವಲೋಕಿಸುತ್ತಾರೆ. ಕುತೂಹಲಕಾರಿ ಮನಸ್ಥಿತಿಯನ್ನು  ಹೊಂದಿರುವ ಅವುಗಳು  ನಮ್ಮಂತೆಯೇ ಗ್ರಹಿಸುವ ಮತ್ತು ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆಯಂತೆ . ಇನ್ನೂ ಕೆಲ ವಿಜ್ಞಾನಿಗಳು ಆಕ್ಟೋಪಸ್ ತನ್ನ ನಿದ್ರಾ ಸಮಯದಲ್ಲಿ ನಿರಂತರವಾಗಿ ಬಣ್ಣವನ್ನು ಮತ್ತು ಚರ್ಮದ ವಿನ್ಯಾಸವನ್ನು ಬದಲಿಸುವುದು ಕಂಡರೆ ಅದು ನಮ್ಮಂತೆಯೇ ಕನಸನ್ನು ಕಾಣುತ್ತಿರಬಹುದಾದ ಎಲ್ಲಾ ಸಾಧ್ಯತೆಗಳೂ ಇವೆಯೆಂದು ತರ್ಕಿಸುತ್ತಾರೆ. ಅಂತೆಯೇ  ವಿಜ್ಞಾನಿಗಳು ಆಕ್ಟೋಪಸ್ ದೇಹದ ಅಂಗಾಂಶಗಳನ್ನು ಮೊಲಿಕ್ಯುಲರ್ ಹಂತದಲ್ಲಿ ನೋಡಲು ಸಹಾಯ ಮಾಡಬಲ್ಲ ಯಂತ್ರವೊಂದನ್ನು ತಯಾರಿಸುವ ಭರದಲ್ಲಿದ್ದಾರಂತೆ. ಆದರೆ ತನ್ನಷ್ಟೇ ಜೀವಕುಲದೇಳಿಗೆಗೆ ಸಹಕಾರಿಯಾಗಿರುವ ಜೀವಿಗಳ ಸಂರಕ್ಷಣೆಯ ಹೊಣೆಯರಿವೂ ಅಷ್ಟೇ ಭರದಲ್ಲಿ ಬರಲಿ. ಬುದ್ಧಿವಂತ ಅಕಶೇರುಕನ ಭಾವಸಂವಹನಕ್ಕೆ ವೇದಿಕೆಯೂ ಸಜ್ಜಾಗಲಿ! 

ಇದನ್ನೂ ಓದಿ | Mahima Swamy | ಬೆಂಗಳೂರಿನ ವಿಜ್ಞಾನಿ ಮಹಿಮಾ ಸ್ವಾಮಿಗೆ ಯುರೋಪಿನ ಉನ್ನತ ಪ್ರಶಸ್ತಿ

Exit mobile version