Site icon Vistara News

ನಾಲ್ಕು ಸಾವಿರ ವರ್ಷದ ಹಿಂದಿನ ತಾಮ್ರಯುಗದ ಮಹಿಳೆ ಬಿಂಬದ ಮರುಸೃಷ್ಟಿ

bronz age woman

ಪುರಾಣ ಕಾಲದ ವ್ಯಕ್ತಿಗಳ ಬಗ್ಗೆ ಕೇಳುತ್ತಾ, ಆ ಕಾಲಕ್ಕೆ ಹೋಗಿಯೇ ನೋಡುವಂತಿದ್ದರೆ ಎಂದು ಒಮ್ಮೆಯಾದರೂ ಯೋಚಿಸಿರಬಹುದು. ಕಾಲಚಕ್ರದಲ್ಲಿ ಹಿಮ್ಮುಖ ಯಾನ ಸಾಧ್ಯವಿಲ್ಲದಿದ್ದರೂ, ಹಿಂದೆ ಬದುಕಿದ್ದವರ ಬಿಂಬಗಳನ್ನು ಈಗ ನಮ್ಮೆದುರು ನಿಲ್ಲಿಸುವ ತಂತ್ರಜ್ಞಾನ ಲಭ್ಯವಿದೆ. ಇದರ ನೆರವಿನಿಂದ ಪ್ರಾಕ್ತನ ಶಾಸ್ತ್ರಜ್ಞರ ತಂಡವೊಂದು 4000 ವರ್ಷ ಹಿಂದೆ ಬದುಕಿದ್ದ ಮಹಿಳೆಯ ಮುಖವನ್ನು ಮರುಸೃಷ್ಟಿ ಮಾಡಿದೆ.

ಲೈವ್‌ ಸೈನ್ಸ್‌ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಜೆಕ್‌ ಗಣರಾಜ್ಯದ ಸೈನ್ಸ್‌ ಅಕಾಡೆಮಿಯ ಪುರಾತತ್ವ ಶಾಸ್ತ್ರ ಸಂಸ್ಥೆಯ ತಜ್ಞರ ತಂಡವೊಂದು ಸಮಾಧಿಯಿಂದ ದೊರಕಿದ್ದ ಅವಶೇಷಗಳನ್ನು ಬಳಸಿ ಮಹಿಳೆಯ ಮುಖವನ್ನು ಮರುಸೃಷ್ಟಿ ಮಾಡಿದೆ.

ತಾಮ್ರ ಯುಗದ ಆರಂಭದ ಕಾಲಕ್ಕೆ ಸೇರಿದ, ಅಂದರೆ ಕ್ರಿಸ್ತಪೂರ್ವ 1880ರಿಂದ 1750ರ ಅವಧಿಯಲ್ಲಿ ಈ ಮಹಿಳೆ ಬದುಕಿದ್ದಳು ಎಂಬುದು ರೇಡಿಯೊ ಕಾರ್ಬನ್‌ ಡೇಟಿಂಗ್‌ನಿಂದಾಗಿ ತಿಳಿದುಬಂದಿದೆ. ಆಕೆಯ ಸಮಾಧಿಯಲ್ಲಿ ತಾಮ್ರದ ಐದು ಬಳೆಗಳು, ಎರಡು ಚಿನ್ನದ ಕಿವಿಯೋಲೆಗಳು ಮತ್ತು ಹಳದಿ-ಕಿತ್ತಳೆ ಮಿಶ್ರಿತ ಅಂಬರ್‌ ಬಣ್ಣದ 400 ಮಣಿಗಳ ಮೂರೆಳೆಯ ಹಾರ ದೊರೆತಿದೆಯಂತೆ. ಮಾತ್ರವಲ್ಲ, ತಾಮ್ರದ ಮೂರು ಸೂಜಿಗಳೂ ಇದ್ದವಂತೆ. ಜೆಕ್‌ ಗಣರಾಜ್ಯದ ಉತ್ತರ ಭಾಗದ ಬೊಹೀಮಿಯ ಪ್ರಾಂತ್ಯದ ಅನೆಟಿಸ್‌ (Únětice) ನಾಗರಿಕತೆಗೆ ಸೇರಿದ ಮಹಿಳೆಯಿರಬಹುದು ಈಕೆ ಎಂದು ತರ್ಕಿಸಲಾಗಿದೆ. ಈ ಭಾಗದಲ್ಲಿ ಒಟ್ಟು 27 ಸಮಾಧಿಗಳು ಉತ್ಖನನದ ಹೊತ್ತಿಗೆ ದೊರೆತಿದ್ದು, ಸುಮಾರು 900ರಷ್ಟು ಅಪೂರ್ವ ಅಂಬರ್ ಕಲಾಕೃತಿಗಳು, ಆಭರಣಗಳು ಪತ್ತೆಯಾಗಿವೆ.

ಮರುಸೃಷ್ಟಿ ಮಾಡಿದ ಚಿತ್ರದ ಪ್ರಕಾರ ಕಂದು ಕುರುಳಿನ ಈ ಕೃಶಾಂಗಿ, ತಾಮ್ರಯುಗದಲ್ಲಿ ಬೊಹೀಮಿಯ ಪ್ರಾಂತ್ಯದ ಶ್ರೀಮಂತ ಮಹಿಳೆಯಿರಬಹುದು ಎಂದು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಕೆಯ ಮೂಳೆಗಳು ಸಮಾಧಿಯೊಳಗೆ ಉತ್ತಮ ರೀತಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದವು. ಈ ಮೂಳೆಗಳಿಂದ ಆಕೆಯ ಡಿಎನ್‌ಎ ಸಹ ದೊರೆತಿದೆ. ಇದರಿಂದಾಗಿ ಆಕೆಯ ಮುಖವನ್ನು ಮರುಸೃಷ್ಟಿಸಲು ಅನುಕೂಲವಾಗಿದ್ದು, ಕಂದು ಬಣ್ಣದ ಕೂದಲು ಮತ್ತು ಕಣ್ಣುಗಳಿದ್ದ ಆಕೆ ಗೌರವರ್ಣದಲ್ಲಿದ್ದಳು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಮೊದಲ ಬಾರಿಗೆ 3ಡಿ ಕಿವಿ ಯಶಸ್ವಿ ಕಸಿ, ಚೆನ್ನಾಗಿ ಸೆಟ್ ಆಗುತ್ತೆ ಅಂತ ಮಹಿಳೆಗೆ ಖುಷಿ!

Exit mobile version