ಡಾ. ಡಿ.ಸಿ. ರಾಮಚಂದ್ರ
ಜಗತ್ತಿಗೆ ಮಹಾನ್ ಕೊಡುಗೆಗಳನ್ನು ನೀಡಿದ ವಿಜ್ಞಾನಿಗಳಲ್ಲಿ ಪ್ರಮುಖ ಹೆಸರು ಥಾಮಸ್ ಆಲ್ವಾ ಎಡಿಸನ್ (Thomas Alva Edison). ಇಂದು ಅವರ ಜನ್ಮದಿನ. ಅವರ ಬಾಲ್ಯದ ಜೀವನ ಕಡು ಬಡತನದ ನಡೆದಿತ್ತು. ದಡ್ಡ ಹುಡುಗ ಎಂಬೆಲ್ಲಾ ಕೀಳರಿಮೆಗಳಿಂದ ಹೊರಬಂದು ಅವರು ಗಳಿಸಿದ ಕೀರ್ತಿ ಸದಾ ಅನುಕರಣೀಯ. ಥಾಮಸ್ ಆಲ್ವಾ ಎಡಿಸನ್ ಫೆಬ್ರವರಿ ೧೧, ೧೮೪೭ ರಂದು ಅಮೆರಿಕದ ಓಹಿಯೋದ ಮಿಲನ್ ಎಂಬ ಸಣ್ಣ ಪಟ್ಟಣದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.
೭ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಲೆಗೆ ಸೇರಿದ ಥಾಮಸ್ ಅವರ ಓದು ಕೇವಲ ೩ ತಿಂಗಳುಗಳ ಕಾಲ ಶಾಲೆಯಲ್ಲಿ ನಡೆಯಿತು. ಏಕೆಂದರೆ ಅವರಿಗೆ ಓದಿನಲ್ಲಿ ಸಂಪೂರ್ಣ ನಿರಾಸಕ್ತಿ ಮತ್ತು ದೊಡ್ಡ ಬೌದ್ಧಿಕ ವಿಕಾರತೆ ಇದ್ದುದರಿಂದ ಪ್ರಾಂಶುಪಾಲರು ಮತ್ತು ಶಿಕ್ಷಕರು ಅವರನ್ನು ಹೊರಹಾಕಲು ನಿರ್ಧರಿಸಿದರು. ಥಾಮಸ್ ಅನುಭವಿಸಿದ ಕಡುಗೆಂಪು ಜ್ವರದಿಂದ ಉಂಟಾದ ಸ್ವಲ್ಪ ಕಿವುಡುತನ, ಈ ಎಲ್ಲಾ ಗುಣಲಕ್ಷಣಗಳು ಅವನನ್ನು ಶಾಲೆಗೆ ಸೂಕ್ತವಲ್ಲವೆಂದು ಪರಿಗಣಿಸಲು ಕಾರಣವಾಯಿತು.
ಅದೃಷ್ಟವಶಾತ್, ಅವರ ತಾಯಿ ಈ ಹಿಂದೆ ಶಿಕ್ಷಕರಾಗಿದ್ದರು ಮತ್ತು ಅವರ ಶಿಕ್ಷಣವನ್ನು ವಹಿಸಿಕೊಂಡರು. ಅವನಿಗೆ ಗಣಿತ, ವಿಜ್ಞಾನ, ಇಂಗ್ಲಿಷ್, ಭೂಗೋಳ ಶಾಸ್ತ್ರಗಳನ್ನು ಕಲಿಸಿದರು. ಓದಲು ಸಾವಿರಾರು ವಿಜ್ಞಾನ ಪುಸ್ತಕಗಳನ್ನು ಮಗನಿಗೆ ತಂದುಕೊಟ್ಟರು. ಮನೆಯಲ್ಲಿಯೇ ಪ್ರಯೋಗ ಶಾಲೆಯನ್ನು ಮಾಡಿಕೊಟ್ಟರು. ಹುಡುಗನು ಅಮ್ಮನ ಕನಸಿನ ಪ್ರಕಾರ ಬೆಳೆದ. ಅವರು ಆತನನ್ನು ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬನಾಗಿಸಿದರು.
10 ವರ್ಷದಲ್ಲೇ ಲ್ಯಾಬ್ ಆರಂಭ
ಥಾಮಸ್ ಕೇವಲ ಹತ್ತು ವರ್ಷದವರಾಗಿದ್ದಾಗ, ಅವರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಪ್ರಯೋಗಾಲಯವನ್ನು ಸ್ಥಾಪಿಸಿದರು. ಒಮ್ಮೆ ಎಡಿಸನ್ ವಿದ್ಯುತ್ ಬಲ್ಬ್ ಒಳಗೆ ಅಳವಡಿಸಬಹುದಾದ ಲೋಹದ ತಂತಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅವರ ಬಳಿ ಹಲವಾರು ಸಹಾಯಕರೂ ಕೂಡ ಕೆಲಸ ಮಾಡುತ್ತಿದ್ದರು. ಹಲವಾರು ಸಂಶೋಧನೆಗಳ ವಿಫಲತೆಗಳ ನಂತರ ಕಡೆಗೊಮ್ಮೆ ಎಡಿಸನ್ ಮತ್ತು ತಂಡ ಸುಧಾರಿತ ವಿದ್ಯುತ್ ಬಲ್ಬ್ ತಯಾರಿಸುವಲ್ಲಿ ಸಫಲರಾಗುತ್ತಾರೆ.
ಆ ಬಲ್ಬನ್ನು ಒಡೆದು ಹೋಗದಂತೆ ಎತ್ತರವಾದ ಸ್ಥಳದಲ್ಲಿ ಇರಿಸಲು ಎಡಿಸನ್ ತನ್ನ ಸಹಾಯಕ ಹುಡುಗನಿಗೆ ಹೇಳುತ್ತಾರೆ. ಆ ಹುಡುಗನಿಗೋ ಒಂದು ರೀತಿಯ ಭಯ. ಎಲ್ಲಿ ತನ್ನ ಕೈಯಿಂದ ಆ ಬಲ್ಬ್ ಒಡೆದು ಹೋಗುವುದೋ ಎಂದು. ಅದೇ ಅಂಜಿಕೆಯಿಂದ ಆ ಬಲ್ಬನ್ನು ಮೇಲಿನ ಮಹಡಿಯಲ್ಲಿ ಇರಿಸಲು ಮೆಟ್ಟಿಲೇರುತ್ತಾನೆ. ಅವನ ಹೆದರಿಕೆಗೆ ಸರಿಯಾಗಿ ಅವನ ಕಾಲು ಜಾರುತ್ತದೆ ಮತ್ತು ಮೊದಲೇ ನಡುಗುತ್ತಿದ್ದ ಅವನ ಕೈಗಳಿಂದ ಆ ಬಲ್ಬ್ ಜಾರಿ ಕೆಳಗಡೆ ಬಿದ್ದು ಒಡೆದು ಚೂರಾಗಿ ಬಿಡುತ್ತದೆ. ನೋಡ ನೋಡುತ್ತಿದ್ದಂತೆ ಹಲವಾರು ಸಮಯದ ಸಂಶೋಧನೆ ಒಡೆದು ಚೂರು ಚೂರಾಗಿ ಹೋಗಿತ್ತು.
ಆತ್ಮ ವಿಶ್ವಾಸ ತುಂಬುವ ವಿಜ್ಞಾನಿಯಾಗಿ
ಎಡಿಸನ್ ಎದೆಗುಂದಲಿಲ್ಲ ಮತ್ತೆ ಸಂಗಡಿಗರ ಜೊತೆ ಸೇರಿ ಒಂದು ದಿನದಲ್ಲಿ ಮತ್ತೊಂದು ಬಲ್ಬ್ ತಯಾರು ಮಾಡಿದರು. ಆ ಬಲ್ಬನ್ನೂ ಮೇಲಿನ ಮಹಡಿಯಲ್ಲಿ ಇರಿಸಬೇಕಿತ್ತು. ಎಡಿಸನ್ ಮತ್ತೆ ಮೊದಲ ಬಲ್ಬ್ ಬೀಳಿಸಿದ ಆ ಹುಡುಗನನ್ನೇ ಕರೆದು “ಮೇಲೆ ಇರಿಸಿ ಬಾʼʼ ಎಂದು ಹೇಳಿದರು. ಉಳಿದ ಸಹಾಯಕರಿಗೆ ಸಿಟ್ಟು ಬಂತು, ಅದರ ಜೊತೆ ಆಶ್ಚರ್ಯವೂ ಆಯಿತು ಆದರೆ ಎಡಿಸನ್‌ಗೆ ಆ ಬಲ್ಬಿಗಿಂತಲೂ ಆ ಹುಡುಗನ ಆತ್ಮಸ್ಥೈರ್ಯ ಸದೃಢಗೊಳಿಸುವುದು ಮುಖ್ಯವಾಗಿತ್ತು. ಬಲ್ಬ್ ಒಡೆದು ಹೋದರೆ ಮತ್ತೊಂದನ್ನು ತಯಾರು ಮಾಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ಕುಂದಿ ಹೋದರೆ ಅವನ ಜೀವನವೇ ಹಾಳಾಗಿ ಹೋಗುವ ಸಂಭವವಿತ್ತು.
ಆ ಕಾರಣದಿಂದ ಎಡಿಸನ್ ಅವರು ಈ ನಿರ್ಧಾರ ತೆಗೆದುಕೊಂಡರು. ಅವರ ಅಚಲ ನಿರ್ಧಾರವನ್ನು ಆ ಹುಡುಗ ಸಮರ್ಥಿಸಿಕೊಂಡ. ಸರಿಯಾಗಿ ಆ ಬಲ್ಬನ್ನು ಮೇಲಿನ ಮಹಡಿಯ ಮೇಲೆ ಇರಿಸಿದ. ಇದರಿಂದ ಅವನ ಕೀಳಿರಿಮೆ ಹಾಗೂ ಭಯಗಳು ಬಹುತೇಕ ನಿವಾರಣೆಯಾಗಿ ಅವನಲ್ಲಿ ಆತ್ಮವಿಶ್ವಾಸ ಮೂಡಿತು.
ಎಡಿಸನ್ ಜೀವನದ ಮತ್ತೊಂದು ಪ್ರಸಂಗದಲ್ಲಿ ಇದೇ ವಿದ್ಯುತ್ ಬಲ್ಬ್ ಸಂಶೋಧಿಸಿದಕ್ಕೆ ಎಡಿಸನ್ ಅವರನ್ನು ಸಂಸ್ಥೆಯೊಂದು ಗೌರವಿಸಿ, ಸನ್ಮಾನ ಸಮಾರಂಭ ಇಟ್ಟುಕೊಂಡಿತ್ತು. ಆ ಸಮಾರಂಭದಲ್ಲಿ ಓರ್ವ ಮಹಿಳೆ ಎಡಿಸನ್ ಅವರಲ್ಲಿ ಪ್ರಶ್ನೆ ಮಾಡುತ್ತಾರೆ; “ನೀವು ವಿದ್ಯುತ್ ಬಲ್ಬ್ ಒಳಗಡೆ ಅಳವಡಿಸುವ ಸೂಕ್ತ ಲೋಹಕ್ಕಾಗಿ ಎಷ್ಟೊಂದು ಪ್ರಯೋಗಗಳನ್ನು ಮಾಡಿದ್ದೀರಿ, ನೀವು ಸುಮಾರು ಐವತ್ತಕ್ಕೂ ಅಧಿಕ ಬಗೆಯ ಲೋಹದ ತಂತಿಗಳನ್ನು ಬಳಸಿ ವಿಫಲರಾದಿರೆಂದು ತಿಳಿದುಕೊಂಡೆ. ಆ ಮೂಲಕ ನಿಮ್ಮ ಸಂಶೋಧನೆಗೆ ತೆಗೆದುಕೊಂಡ ಸಮಯ ಹಾಳು ಮಾಡಿದಂತೆ ಆಗಿಲ್ಲವೇ?’ʼ ಎಂದರು.
ಅದಕ್ಕೆ ಎಡಿಸನ್ ಹೇಳಿದರು; “ನಿಮ್ಮ ಮಾತು ಸತ್ಯವಲ್ಲ. ನಾನು ಯಾವ-ಯಾವ ಲೋಹದ ತಂತಿಯನ್ನು ವಿದ್ಯುತ್ ಬಲ್ಬ್ ಒಳಗೆ ಬಳಸಿ ವಿಫಲನಾದೆನೋ ಅವುಗಳ ಬಳಕೆ ವಿದ್ಯುತ್ ದೀಪಕ್ಕೆ ಆಗಲಾರದು ಎಂಬ ಸಂಶೋಧನೆ ಯಾಯಿತಲ್ವಾ? ಇದರಿಂದ ನಾನು ಬಲ್ಬ್ ಕಂಡು ಹಿಡಿಯಲು ಒಂದು ಪಕ್ಷ ವಿಫಲನಾಗುತ್ತಿದ್ದರೂ ಭವಿಷ್ಯದಲ್ಲಿ ಯಾರಾದರೂ ಸಂಶೋಧಕರು ನಾನು ಬಳಸಿ ವಿಫಲವಾದ ಲೋಹಗಳನ್ನು ಮತ್ತೊಮ್ಮೆ ತಮ್ಮ ಪ್ರಯೋಗಕ್ಕಾಗಿ ಬಳಸುವುದು ಅವಶ್ಯಕವಿಲ್ಲ ಎಂದು ತಿಳಿಯುತ್ತಿಲ್ಲವೇ?’ʼ
ಥಾಮಸ್ ಆಲ್ವಾ ಎಡಿಸನ್ ಅವರು ಎಷ್ಟು ದೊಡ್ಡ ವಿಜ್ಞಾನಿಯಾಗಿದ್ದರೋ, ಅಷ್ಟೇ ದೊಡ್ಡ ಆದರ್ಶ ವ್ಯಕ್ತಿಯಾಗಿದ್ದರು ಎಂದು ಈ ಎರಡು ಪ್ರಸಂಗಗಳಿಂದ ತಿಳಿದು ಬರುತ್ತದೆ. ಇಂತಹ ಹಲವಾರು ಪ್ರಸಂಗಗಳು ಎಡಿಸನ್ ಜೀವನದಲ್ಲಿ ನಡೆದಿವೆ.
ಎಡಿಸನ್ ಮಾಡಿದಷ್ಟು ಆವಿಷ್ಕಾರಗಳನ್ನು ಜಗತ್ತಿನಲ್ಲಿ ಇದುವರೆಗೆ ಬೇರೆ ಯಾವ ವಿಜ್ಞಾನಿಯೂ ಮಾಡಿಲ್ಲ. 1103ರಷ್ಟು ಆವಿಷ್ಕಾರಗಳು ಆತನ ಹೆಸರಲ್ಲಿ ಇವೆ! ಮುನ್ನೂರಕ್ಕೂ ಅಧಿಕ ಪೇಟೆಂಟನ್ನು ಪಡೆದ ಜಗತ್ತಿನ ಏಕೈಕ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್
ಇದನ್ನೂ ಓದಿ : ರಾಜ ಮಾರ್ಗ ಅಂಕಣ | ಆ ಮಹಾ ಮಾತೆ ಇಲ್ಲದೆ ಹೋಗಿದ್ದರೆ ಎಡಿಸನ್ ಮಹಾ ವಿಜ್ಞಾನಿ ಆಗುತ್ತಲೇ ಇರಲಿಲ್ಲ!