ಭೂಮಿಯ ಮೇಲೆ ಮನುಷ್ಯ ಎಂಬ ಜೀವಿಯ ಆಯುಸ್ಸು ಎಷ್ಟು ಎಂದರೆ ನಾವು ಸುಲಭವಾಗಿ ನೂರು ವರ್ಷ ಎಂದುಬಿಡುತ್ತೇವೆ. ಆದರೆ ಮನುಷ್ಯ ಹೆಚ್ಚೆಂದರೆ ಎಷ್ಟು ಕಾಲ ಬದುಕಬಹುದು ಎಂಬುದಕ್ಕೆ ಬೇರೆ ಉತ್ತರಗಳೂ ಸಿಕ್ಕಿವೆ. ಯಾಕೆಂದರೆ ಈವರೆಗಿನ ದಾಖಲೆಗಳ ಪ್ರಕಾರ ಮನುಷ್ಯ 122 ವರ್ಷಗಳ ಕಾಲ ಬದುಕಿದ ದಾಖಲೆಯಿದೆ. ಆದರೆ, ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈಗ ಅಂತಹ ಆಶಾವಾದಕ್ಕೊಂದು ಹೊಸ ಆಶಾಕಿರಣ ಸಿಕ್ಕಿದೆ. ಈಗ ನಡೆಸಿರುವ ಹೊಸ ಸಂಶೋಧನೆಯೊಂದರ ಪ್ರಕಾರ ಮನುಷ್ಯ ಅತೀ ಹೆಚ್ಚು ಎಂದರೆ 141 ವರ್ಷಗಳ ಕಾಲ ಬದುಕಬಹುದಂತೆ!
ಹೌದು. ಜಾರ್ಜಿಯಾದ ವಿಶ್ವವಿದ್ಯಾನಿಲಯವೊಂದು ಮನುಷ್ಯನ ಜೀವಿತಾವಧಿಯ ಬಗ್ಗೆ ಕುತೂಲಹಕರ ಸಂಶೋಧನೆಗಳನ್ನು ನಡೆಸಿದ್ದು ಅದಕ್ಕೆ ಸಂಬಂಧಿಸಿದ ಹೊಸ ವಾದವನ್ನು ಮಂಡಿಸಿದೆ. ಈ ಸಂಶೋಧನೆಯ ಪ್ರಕಾರ ಪುರುಷರು ಹೆಚ್ಚೆಂದರೆ 141 ವರ್ಷಗಳ ಕಾಲವೂ, ಮಹಿಳೆಯರು ಹೆಚ್ಚೆಂದರೆ 130 ವರ್ಷಗಳ ಕಾಲವೂ ಜೀವಿಸಬಹುದಂತೆ.
ಜಾರ್ಜಿಯಾ ವಿಶ್ವವಿದ್ಯಾನಿಲಯದ ಉಪನ್ಯಾಸಕರ ತಂಡವೊಂದು ಈ ಸಂಶೋದನೆ ನಡೆಸಿದ್ದು, ಅವರು ತಮ್ಮ ಸಂಶೋಧನೆಗೆ 19 ದೇಶಗಳ ಹಿರಿಯ ನಾಗರಿಕರ ಜೀವಿತಾವಧಿಯ ವಿವರಗಳನ್ನು ಬಳಸಿಕೊಂಡಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಹೇಗೆ ಆಯುಸ್ಸೂ ಬದಲಾಗುತ್ತಾ ಬಂದಿದೆ ಎಂಬುದನ್ನು ಅಧ್ಯಯನ ನಡೆಸಿದ್ದಾರೆ. ಬೇರೆ ಬೇರೆ ಇಸವಿಗಳಲ್ಲಿ ಜನಿಸಿದ ಮಂದಿಯ ಆಯಸ್ಸು ಅದಕ್ಕೆ ಅನುಗುಣವಾಗಿ ಬದಲಾವಣೆ ಕಂಡಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ವಿವರಿಸಿದ್ದಾರೆ.
ಇವರ ಸಂಶೋದನೆಯ ಪ್ರಕಾರ, 1900ರ ನಂತರ ಮೊದಲರ್ಧ ದಶಕದಲ್ಲಿ ಹುಟ್ಟಿದ ಮಂದಿಯಲ್ಲಿ ಮರಣ ಹೊಂದಿದವರ ಪೈಕಿ ಮರಣದ ವಯಸ್ಸು ಏರುತ್ತಾ ಹೋಗಿದೆ. 1910ರಿಂದ 1950ರ ವರೆಗಿನ ಅವಧಿಯಲ್ಲಿ ಹುಟ್ಟಿದ ಮಂದಿಯಲ್ಲಿ ಮರಣದ ಅವಧಿ ಮುಂದೂಡಲ್ಪಡುತ್ತಾ ಬಂದಿದೆ. ಮುಂದಿನ ದಿನಗಳಲ್ಲೂ ಇದು ಹಾಗೆಯೇ ಮುಂದುವರಿಯಲಿದ್ದು 120 ವರ್ಷಗಳವರೆಗೆ ಮನುಷ್ಯ ಬದುಕುವ ಸಾಧ್ಯತೆಗಳು ಹೆಚ್ಚಾಗಲಿವೆ ಎಂದಿದೆ. ಕೇವಲ ಇದಷ್ಟೇ ಅಲ್ಲದೆ, ಹಲವು ದಾಖಲೆಗಳನ್ನು ಗಮನಿಸಿ ಮುಂದೊಂದು ದಿನ ಮಹಿಳೆಯರು ಪುರುಷರು ಹೆಚ್ಚೆಂದರೆ ಇಷ್ಟು ಕಾಲ ಬದುಕುವ ಸಾಧ್ಯತೆಗಳಿವೆ ಎಂದಿದೆ.
ಜೀವಿತಾವಧಿಯ ಏರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದುದಕ್ಕೆ ದಾಖಲೆಗಳಿವೆ ಎಂದಿರುವ ಈ ಸಂಶೋಧನೆ, ಇದಕ್ಕೆ ಕಾರಣ ವೈದ್ಯ ಜಗತ್ತಿನಲ್ಲಾದ ಸಂಶೋಧನೆಗಳು ಹಾಗೂ ಔಷಧಿಗಳ ಆವಿಷ್ಕಾರವೂ ಆಗಿರಬಹುದು ಎಂದೂ ಲೆಕ್ಕಾಚಾರ ಹಾಕಿದೆ.
ಈವರೆಗೆ ಅತ್ಯಂತ ಹೆಚ್ಚು ಕಾಲ ಬದುಕಿದ ದಾಖಲೆಯಿರುವುದು ಫ್ರೆಂಚ್ ಮಹಿಳೆಯೊಬ್ಬರ ಹೆಸರಿನಲ್ಲಿ. ಈಕೆಯ ಹೆಸರು ಜೇನ್ ಕಾಲ್ಮೆಂಟ್ ಎಂದಾಗಿದ್ದು ಈಕೆ 1875ರಲ್ಲಿ ಜನಿಸಿದ್ದರು. ಬಿಬಿಸಿಯ ವರದಿಯ ಪ್ರಕಾರ ಈಕೆ ಎರಡು ವಿಶ್ವಯುದ್ಧಗಳಿಗೆ ಸಾಕ್ಷಿಯಾಗಿದ್ದು, ಕುಖ್ಯಾತ ಸ್ಪಾನಿಶ್ ಫ್ಲೂ ಸಮಯದಲ್ಲೂ ಬದುಕಿ ಉಳಿದಿದ್ದು ವಿಶೇಷ. ಈಕೆ ಖ್ಯಾತ ಕಲಾವಿದ ವಿನ್ಸೆಂಟ್ ವ್ಯಾನ್ ಗೋ ಅವರನ್ನು 1888ರಲ್ಲಿ ಭೇಟಿಯಾಗಿದ್ದರು. 1997ರಲ್ಲಿ ತನ್ನ 122ನೇ ವಯಸ್ಸಿನಲ್ಲಿ ಈಕೆ ಇಹಲೋಕ ತ್ಯಜಿಸಿದ್ದರು. ಈಕೆ ತನ್ನ ಬದುಕಿನ ರಹಸ್ಯ, ಒತ್ತಡವನ್ನು ಮಾಡಿಕೊಳ್ಳದೇ ಇದ್ದುದರಲ್ಲಿ ಅಡಗಿದೆ ಎಂದಿದ್ದರು. ʻನಿಮ್ಮ ಕೈಯಲ್ಲಿ ಹುಲ್ಲು ಕಡ್ಡಿಯನ್ನೂ ಅಲುಗಾಡಿಸಲು ಸಾಧ್ಯವಾಗದಂತಹ ವಿಷಯಕ್ಕೆ ತೆಲೆಕೆಡಿಸಿಕೊಂಡು ಪ್ರಯೋಜನವಿಲ್ಲ ಎಂದಾದ ಮೇಲೆ ತಲೆ ಕೆಡಿಸುವುದನ್ನು ಬಿಡಬೇಕು. ಅದಷ್ಟೇ ಆರೋಗ್ಯಕರ ಬದುಕಿನ ರಹಸ್ಯʼ ಎಂದಿದ್ದರು.
ಇದನ್ನೂ ಓದಿ: Albert Einstein Birthday : ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್