Site icon Vistara News

ತಂಪು ಪಾನೀಯದ ಬಾಟಲಿಗಳಲ್ಲಿ ಗಾಳಿಗೇಕೆ ಜಾಗ?

soft drinks

ಕಾಲ-ದೇಶಗಳ ಹಂಗಿಲ್ಲದಂತೆ ಜನರಿಗೆ ಮೆಚ್ಚುಗೆಯಾಗುವ ಸಾಫ್ಟ್‌ಡ್ರಿಂಕ್‌ ಅಥವಾ ತಂಪು ಪಾನೀಯದ ಬಾಟಲಿಗಳಲ್ಲಿ ಪೇಯವನ್ನು ತುಂಬಿದ ಮೇಲೂ ಒಂದಿಷ್ಟು ಜಾಗವನ್ನು ಉಳಿಸಿರುತ್ತಾರಲ್ಲಾ, ಯಾಕಾಗಿ ಎಂಬ ಪ್ರಶ್ನೆ ಹಲವರು ಮನದಲ್ಲಿ ಬಂದಿರಬಹುದು. ಅದಕ್ಕೆ ಇಲ್ಲಿದೆ ಉತ್ತರ…

ಪ್ಲಾಸ್ಟಿಕ್‌ ಅಥವಾ ಗಾಜಿನ ಬಾಟಲಿಗಳಲ್ಲಿ ತುಂಬಿಕೊಂಡು ಬರುವ ಈ ಪಾನೀಯಗಳನ್ನು ಸಾಮಾನ್ಯವಾಗಿ ಸ್ಟಲ್ಪ ತಣ್ಣಗೇ ಇಡುವುದು ವಾಡಿಕೆ. ಬಾಯಾರಿಕೆಯ ಸಂದರ್ಭದಲ್ಲಿ ಇವುಗಳಿಗೆ ಕೈಚಾಚುವ ಗ್ರಾಹಕರು ತಣ್ಣಗಿನ ಪಾನೀಯವನ್ನೇ ಬಯಸುತ್ತಾರೆ. ಆದರೆ ಉತ್ಪಾದನಾ ಘಟಕದಿಂದ ಗ್ರಾಹಕರ ಕೈಗೆ ಬರುವಲ್ಲಿಯವರೆಗೆ ನಾನಾ ರೀತಿಯ ದಾರಿಗಳನ್ನು, ಬಿಸಿಲು-ಮಳೆ-ಚಳಿ-ಗಾಳಿಗಳನ್ನೂ ಈ ಬಾಟಲಿಗಳು ದಾಟಬೇಕು.

ಇಷ್ಟೇ ಅಲ್ಲ, ಈ ಪಾನೀಯಗಳ ರುಚಿಯನ್ನು ಹದ ಮಾಡಲು ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಕೆಫೇನ್‌, ಸಕ್ಕರೆ ಮತ್ತು ಇಂಗಾಲದ ಡೈ ಆಕ್ಸೈಡ್‌ ಬಳಕೆಯಾಗಿರುತ್ತದೆ. ಹೆಚ್ಚಿನ ಸೆಖೆ ಅಥವಾ ಶಾಖಕ್ಕೆ ಈ ಬಾಟಲಿಗಳು ತೆರೆದುಕೊಂಡರೆ, ಒಳಗಿರುವ ಇಂಗಾಲದ ಡೈ ಆಕ್ಸೈಡ್‌ ಹಿಗ್ಗುತ್ತದೆ. ಆಗ ಬಾಟಲಿಯೊಳಗಿನ ಪಾನೀಯಕ್ಕೆ ಹೆಚ್ಚಿನ ಜಾಗ ಬೇಕು. ಈ ಕಥೆಯ ಇನ್ನೊಂದು ಮಗ್ಗುಲಿಗೆ ಬಂದರೆ, ಕೆಲವೊಮ್ಮೆ ಶೂನ್ಯದ ತಾಪಮಾನದಲ್ಲೂ ಈ ಬಾಟಲಿಗಳನ್ನು ಇಡಲಾಗುತ್ತದೆ. ಆಗ ಒಳಗಿರುವ ನೀರು ಘನೀಭವಿಸಿ, ಇರುವುದಕ್ಕಿಂತ ಹೆಚ್ಚಿನ ಜಾಗ ತೆಗೆದುಕೊಳ್ಳುತ್ತದೆ. ತಾಪಮಾನ ಹೆಚ್ಚಾದರೂ ಅಥವಾ ತೀರಾ ಕಡಿಮೆಯಾದರೂ ಈ ಬಾಟಲಿಯ ಒಳಗಿನ ಪಾನೀಯ ಹಿಗ್ಗಿ ಹೆಚ್ಚಿನ ಜಾಗ ತೆಗೆದುಕೊಳ್ಳುತ್ತದೆ.

ಪಾನೀಯವನ್ನು ತುಂಬುವಾಗಲೇ ಬಾಟಲಿಯ ಕಂಠಮಟ್ಟ ತುಂಬಿದರೆ, ವಿಕಸಿಸುವುದಕ್ಕೆ ಒಳಗೆ ಜಾಗ ಬೇಡವೇ? ಅದಿಲ್ಲದಿದ್ದರೆ, ಬಾಟಲಿ ಒಡೆದು, ಚೆಲ್ಲಿ… ಅಯ್ಯೋ, ರಂಪ! ಹಾಗಾಗಿಯೇ ತಂಪು ಪಾನೀಯಗಳ ಬಾಟಲಿಗಳಲ್ಲಿ ಒಂದಿಷ್ಟು ಹೆಚ್ಚುವರಿ ಜಾಗವನ್ನು ಉತ್ಪಾದಕರು ಬಿಟ್ಟಿರುತ್ತಾರೆ.

ಇದನ್ನೂ ಓದಿ: ಸುನಾಮಿ ಬಂದರೂ ಜಗ್ಗದ ತೇಲುವ ಮನೆ ನೋಡಿದಿರಾ?

Exit mobile version