ವಾಷಿಂಗ್ಟನ್: ಸಣ್ಣವರಿರುಗಾಗ ಅಮ್ಮನ ಮಾತನ್ನು ಗಮನವಿಟ್ಟು ಕೇಳುತ್ತಿದ್ದ ಮಕ್ಕಳು ಹರೆಯಕ್ಕೆ ಕಾಲಿಟ್ಟ ಕೂಡಲೇ ರೆಬೆಲ್ ಆಗುತ್ತಾರೆ ಎನ್ನುವುದು ಎಲ್ಲ ಕಡೆ ಕೇಳಿಬರುವ ಮಾತು. ಆದರೆ, ಯಾಕೆ ಹೀಗೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಬರಬರುತ್ತಾ ರಾಯರ ಕುದುರೆ ಕತ್ತೆಯಾಯ್ತು ಅಂತಾನೋ, ದೊಡ್ಡವರಾದ ಮೇಲೆ ಅಮ್ಮನ ಮಾತು ಎಲ್ಲಿ ಕೇಳ್ತಾರೆ ಅಂತಾನೋ ಅಂದುಕೊಂಡು ತಣ್ಣಗಾಗುತ್ತಾರೆ.
ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯೊಂದರ ಪ್ರಕಾರ, ಬಾಲ್ಯಾವಸ್ಥೆಯಲ್ಲಿ ಪರಿಚಿತ ಪರಿಸರ ಮತ್ತು ತಾಯಿಯ ಧ್ವನಿಗೆ ಅತಿ ಹೆಚ್ಚು ಪ್ರತಿಕ್ರಿಯೆ ತೋರುವ ಮಕ್ಕಳು, ಬೆಳೆಯುತ್ತಾ ಹದಿಹರೆಯಕ್ಕೆ ಬಂದಂತೆ ಅಪರಿಚಿತ ಧ್ವನಿಗಳಿಗೆ ಹೆಚ್ಚಿನ ಸ್ಪಂದನೆ ತೋರುತ್ತಾರೆ ಎಂದು ಹೇಳಿದೆ. ಹದಿಹರೆಯದ ಮಕ್ಕಳಿರುವ ಅಪ್ಪ-ಅಮ್ಮಂದಿರು ʻಇದಕ್ಕೆ ಸಂಶೋಧನೆ ಬೇರೆ ಬೇಕೆ!ʼ ಎಂದು ನಗಬಹುದು. ಆದರೆ ಇದಕ್ಕೆ ಮೇಲ್ನೋಟಕ್ಕೆ ಕಾಣುವಷ್ಟೇ ಅಲ್ಲದೆ, ಧ್ವನ್ಯಾರ್ಥಗಳೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು.
ʻಮಗುವೊಂದು ತನ್ನಮ್ಮನಿಗೆ ಮಾತ್ರವೇ ಸ್ಪಂದಿಸಿದರೆ ತನ್ನ ಜಗತ್ತನ್ನು ಶೋಧಿಸಬಲ್ಲದು. ಆದರೆ ಅದೇ ಮಗು ಬೆಳೆಯುತ್ತಾ ಹೋದಂತೆ, ಹೊರಜಗತ್ತಿಗೆ ತೆರೆದುಕೊಳ್ಳಲೇಬೇಕಾಗುತ್ತದೆ. ಹೆಚ್ಚಿನ ಭಾಷೆ, ಭಾವ, ಧ್ವನಿ, ಸಂಕೇತಗಳಿಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಸಾಮಾಜಿಕ ಸಂಪರ್ಕಗಳು ಹೆಚ್ಚಾದಂತೆ ಕುಟುಂಬದ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ತಾಯಿಯ ಧ್ವನಿಗೆ ನೀಡುವ ಸ್ಪಂದನೆ ಸಹಜವಾಗಿ ಕಡಿಮೆಯಾಗುತ್ತದೆʼ ಎಂದು ಹೇಳುತ್ತಾರೆ ಸ್ಟ್ಯಾನ್‌ಫರ್ಡ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ನರವಿಜ್ಞಾನಿ ಡೇನಿಯಲ್ ಅಬ್ರಹಾಮ್ಸ್.
7ರಿಂದ 16 ವರ್ಷ ವಯಸ್ಸಿನ ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಮಕ್ಕಳ ತಾಯಂದಿರ ಧ್ವನಿಯ ಜೊತೆಗೆ ಅಪರಿಚಿತ ಮಹಿಳೆಯರ ಧ್ವನಿಯನ್ನು ಅವರಿಗೆ ಕೇಳಿಸಿ, ಮೆದುಳಿನ ಪ್ರತಿಕ್ರಿಯೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಅರ್ಥವಿಲ್ಲದ ಕೆಲವು ಲೊಳಲೊಟ್ಟೆಯ ಶಬ್ದಗಳನ್ನು ಪ್ರಯೋಗಕ್ಕಾಗಿ ಮಕ್ಕಳಿಗೆ ಕೇಳಿಸಲಾಗಿತ್ತು. 7ರಿಂದ 12 ವರ್ಷ ವಯಸ್ಸಿನ ಮಕ್ಕಳ ಮೆದುಳುಗಳು ತಮ್ಮ ತಾಯಿಯ ಧ್ವನಿಗೆ ಹೆಚ್ಚಿನ ಪ್ರತಿಕ್ರಿಯೆ ದಾಖಲಿಸಿದರೆ, ಹದಿಹರೆಯದ ಮಕ್ಕಳು ಅಪರಿಚಿತ ಧ್ವನಿಗೆ ಹೆಚ್ಚಿನ ಸ್ಪಂದನೆ ತೋರಿದರು. ʻಹಾಗೆಂದು 13 ವರ್ಷದ ಮೇಲಿನ ಮಕ್ಕಳು ಅಮ್ಮಂದಿರ ಧ್ವನಿಗೆ ಸ್ಪಂದನೆ ತೋರಲಿಲ್ಲ ಎಂದಲ್ಲ. ಇತರರ ಧ್ವನಿಗೆ ಅದಕ್ಕಿಂತ ಹೆಚ್ಚಿನ ಸ್ಪಂದನೆ ತೋರಿದರು. ಹೊಸ ಜನ, ಜಗತ್ತು, ಸನ್ನಿವೇಶ… ಗಳನ್ನೆಲ್ಲಾ ಶೋಧಿಸುವುದು ಹದಿಹರೆಯದ ಮುಖ್ಯ ಲಕ್ಷಣ. ಇದನ್ನೇ ಈ ಅಧ್ಯಯನ ಪುಷ್ಟೀಕರಿಸುತ್ತದೆʼ ಎಂದು ಅಬ್ರಹಾಮ್ಸ್ ಹೇಳುತ್ತಾರೆ.
ಈ ಅಧ್ಯಯನದ ವರದಿಯನ್ನು ಸಾರ್ವತ್ರಿಕಗೊಳಿಸಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ ಹೇಗಿದೆ, ಮಕ್ಕಳನ್ನು ಬೆಳೆಸಿದ ಬಗೆ ಹೇಗೆ ಇಂಥ ಕೆಲವು ಅಂಶಗಳು ಈ ವರದಿಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಇದನ್ನೂ ಓದಿ| ಟೆಕ್ಸಾಸ್ ಶೂಟೌಟ್; ಮಕ್ಕಳು ಬೇಡಿ ಕೊಳ್ಳುತ್ತಿದ್ದರೂ 45 ನಿಮಿಷ ಹೊರಗೇ ನಿಂತಿದ್ದರು ಪೊಲೀಸ್