ನ್ಯೂಯಾರ್ಕ್: ಕಾಲು, ಕೈ ಮತ್ತಿತರ ಅಂಗಗಳನ್ನು ಕೃತಕವಾಗಿ ನಿರ್ಮಿಸಿಕೊಟ್ಟು ಸಂಕಷ್ಟದಲ್ಲಿರುವವರಿಗೆ ಹೊಸ ಬದುಕು ನೀಡುವುದನ್ನು ಕೇಳಿದ್ದೇವೆ. ಆದರೆ, ಅಮೆರಿಕದ ವಿಜ್ಞಾನಿಗಳು ಮಹಿಳೆಯೊಬ್ಬರ ಕಿವಿಯನ್ನೇ ಮರು ನಿರ್ಮಾಣ ಮಾಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಇದು ಸಾಮಾನ್ಯ ಪ್ಲಾಸ್ಟಿಕ್ ಕಿವಿಯೇನೂ ಅಲ್ಲ, ಅಂಗಾಂಶ ಕಸಿ ತಂತ್ರಜ್ಞಾನದ ಮೂಲಕ ಸಜೀವ ಅಂಗಾಂಶಗಳನ್ನೇ ಬಳಸಿ 3ಡಿ ಪ್ರಿಂಟಿಂಗ್ ಮೂಲಕ ಈ ಕಿವಿಯನ್ನು ರೂಪಿಸಲಾಗಿದೆ. ಈ ಕಿವಿಯನ್ನು ಕಸಿ ಮಾಡಲಾಗಿದ್ದು, ದೇಹ ಅದಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಇದನ್ನು ಒಂದು ಲೆಕ್ಕಾಚಾರದಲ್ಲಿ ಒರಿಜಿನಲ್ ಕೃತಕ ಕಿವಿ ಎನ್ನಬಹುದೇನೋ.. ಯಾಕೆಂದರೆ, ಅವರದೇ ಅಂಗಾಂಶಗಳನ್ನು ಬಳಸಿಕೊಂಡು ಮಾಡಿರುವ ಕೃತಕ ಕಿವಿ ಇದು.
ಹೊಸ ಕಿವಿ ಹುಟ್ಟಿದ್ದು ಹೇಗೆ?
ಮೆಕ್ಸಿಕೊ ಮೂಲದ 20 ವರ್ಷ ವಯಸ್ಸಿನ ಈ ಮಹಿಳೆಗೆ ಹುಟ್ಟುವಾಗಲೇ ಮೈಕ್ರೋಷಿಯ ಸಮಸ್ಯೆಯಿತ್ತು. ಅಂದರೆ, ಹುಟ್ಟುವಾಗಲೇ ಒಂದು ಅಥವಾ ಎರಡೂ ಕಿವಿಗಳ ಹೊರಭಾಗ, ಪೂರ್ಣವಾಗಿ ಅಥವಾ ಭಾಗಶಃ ರಚನೆಯಾಗಿರುವುದಿಲ್ಲ. ಕಳೆದ ಮಾರ್ಚ್‌ನಲ್ಲಿ ಅಮೆರಿಕದಲ್ಲಿ ಈ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಉತ್ತಮವಾಗಿ ಸ್ಪಂದಿಸಿದ್ದು, ಕಸಿ ಮಾಡಿರುವ ಕಿವಿಯ ಬೆಳವಣಿಗೆಯೂ ತೃಪ್ತಿದಾಯಕವಾಗಿದೆ ಎಂದು ಈ ಕಸಿ ತಂತ್ರಜ್ಞಾನದ ಹಿಂದಿರುವ 3ಡಿ-ಬಯೋ ಥೆರಪೆಟಿಕ್ಸ್ ಸಂಸ್ಥೆ ತಿಳಿಸಿದೆ. ʻಆಕೆಯ ಆರೋಗ್ಯವಾಗಿರುವ ಇನ್ನೊಂದು ಕಿವಿಗೆ ಹೊಂದುವ ರೀತಿಯಲ್ಲಿ ಕಸಿ ಮಾಡಿರುವ ಕಿವಿಯನ್ನು ವಿನ್ಯಾಸಗೊಳಿಸಲಾಗಿದೆʼ ಎಂದಿರುವ ಈ ಸಂಸ್ಥೆ, ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ಆದರೆ ಮೈಕ್ರೋಟಿಯ ಸಮಸ್ಯೆಯಿಂದ ಬಳಲುತ್ತಿರುವ ಇನ್ನೂ 11 ರೋಗಿಗಳಿಗೆ ಈ ಕುರಿತಾದ ಕ್ಲಿನಿಕಲ್ ಟ್ರಯಲ್ ಆರಂಭಿಸಲಾಗುವುದು. ಇದರ ವಿವರಗಳನ್ನು ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಗುವುದು ಎಂದು ಆ ಸಂಸ್ಥೆ ಹೇಳಿದೆ. ಈ ಕಸಿಯಿಂದ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ತಲೆದೋರುವ ಆತಂಕ ಇನ್ನೂ ದೂರವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಸ್ಥೆ, ರೋಗಿಯದೇ ಕಿವಿಯ ಅಂಗಾಂಶಗಳನ್ನು ಬಳಸಿ ರಚನೆಯಾಗಿರುವ ಈ ಹೊಸ ಕಿವಿಯನ್ನು ದೇಹ ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.
ಕಂಪ್ಯೂಟರ್ ನಿರ್ದೇಶಿತ 3ಡಿ ಪ್ರಿಂಟರ್ ಮೂಲಕ ಅಂಗಗಳ ವಿನ್ಯಾಸಗಳನ್ನು ಬೇಕಾದ ರೀತಿಯಲ್ಲಿ ಮುದ್ರಿಸಿ, ಅದನ್ನು ಚಿಕಿತ್ಸೆಗಳಿಗೆ ಬಳಸುವ ಈ ತಂತ್ರಜ್ಞಾನ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕೃತಕ ಕಾಲುಗಳನ್ನು ರೋಗಿಗಳಿಗೆ ಅಳವಡಿಸುವಲ್ಲಿ ಈ ತಂತ್ರಜ್ಞಾನ ಈವರೆಗೆ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಆದರೆ ಈಗ ಇದೇ ತಂತ್ರಜ್ಞಾನವನ್ನು ಬಳಸಿ, ಸಜೀವ ಅಂಗಾಂಶಗಳನ್ನು ಮುದ್ರಿಸಿ, ಅದನ್ನು ಕಸಿ ಮಾಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಮುನ್ನಡೆಯಾಗಿದೆ. ಮಾನವರ ಸಹಜ ಕಿವಿಯಂತೆಯೇ ಈ ಕಸಿ ನಿರ್ಮಿತ ಹೊಸ ಕಿವಿಯೂ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ರಕ್ತನಾಳಗಳನ್ನು ಒಳಗೊಳ್ಳದ ಹೊರಕಿವಿಯಂಥ ಅಂಗಗಳ ಮೇಲಿನ ಈ ಪ್ರಯೋಗ ಯಶಸ್ವಿಯಾಗಿದ್ದು ನಿಜ. ಆದರೆ ದೇಹದ ಆಂತರಿಕ ಅಂಗಗಳ ಮೇಲೆ ಇಂಥ ಪ್ರಯೋಗಗಳು ಹೇಗಿರಬಹುದು ಮತ್ತು ಏನಾಗಬಹುದು ಎಂಬ ಆತಂಕ ಮತ್ತು ಕುತೂಹಲ ವೈದ್ಯವಿಜ್ಞಾನ ಕ್ಷೇತ್ರದಲ್ಲಿ ವ್ಯಕ್ತವಾಗಿದೆ. ಇದೇ ತಂತ್ರಜ್ಞಾನ ಮುಂದುವರೆದು, ಮೈಕ್ರೋಟಿಯ ರೋಗಿಗಳಿಗೆ ಮಾತ್ರವಲ್ಲದೆ, ಮೂತ್ರಕೋಶಗಳು, ಯಕೃತ್ತಿನಂತಹ ಪ್ರಮುಖ ಅಂಗಗಳ ಚಿಕಿತ್ಸೆ ಮತ್ತು ಕಸಿಯಲ್ಲಿ ನೆರವಾಗುವುದೋ ಎಂಬ ಕುತೂಹಲ ತಜ್ಞರಲ್ಲಿ ಸಹಜವಾಗಿ ಮೂಡಿದೆ. ಇದಲ್ಲದೆ, ಮಾರಣಾಂತಿಕ ರೋಗಗಳಲ್ಲಿ ಅಂಗಗಳನ್ನು ಕಳೆದುಕೊಂಡ ರೋಗಿಗಳಿಗೂ ಇಂಥ ತಂತ್ರಜ್ಞಾನ ವರವಾಗಬಹುದೇ ಎಂಬ ಜಿಜ್ಞಾಸೆ ವಿಜ್ಞಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ | ಎಲಾನ್ ಮಸ್ಕ್‌ನ Starlink ಉಪಗ್ರಹಗಳ ಮೇಲೆ ಚೀನಾ ಮಿಲಿಟರಿ ಕಣ್ಣು