ಬೆಂಗಳೂರು: ಜಾತಿ ನಿಂದನೆ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಆಕ್ಷೇಪಾರ್ಹ ಪದ ಬಳಸಿರುವ ತನಿಷಾ ಕುಪ್ಪಂಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇದಕ್ಕೂ ಮೊದಲು ಭೋವಿ ಸಮಾಜದ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಅವರು ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ತನಿಷಾ ಕುಪ್ಪಂಡ ವಿರುದ್ಧ ದಲಿತ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ದಲಿತ್ ಸಂತೋಷ್ ದೂರು ದಾಖಲಿಸಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಿಗೆ (BBK Season 10) ಅದ್ಯಾಕೋ ಕಂಟಕ ತಪ್ಪುವಂತೆ ಕಾಣುತ್ತಿಲ್ಲ. ಹುಲಿ ಉಗುರಿನ ವಿಚಾರಕ್ಕೆ ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಜೈಲುಪಾಲಾಗಿ, ಬಳಿಕ ದೊಡ್ಡ ಮನೆಯನ್ನು ಸೇರಿದ್ದರು. ಇದೀಗ ಮತ್ತೊಬ್ಬ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ | BBK Season 10 : ಬಿಗ್ ಬಾಸ್ ಸೆಟ್‌ಗೆ ಪೊಲೀಸರ ಎಂಟ್ರಿ; ತನಿಷಾ, ಡ್ರೋನ್ ಪ್ರತಾಪ್ ವಿಚಾರಣೆ
ವಡ್ಡ ಎಂಬ ಪದ ಬಳಕೆ ಮಾಡಿ ಭೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ತನಿಷಾ ಕುಪ್ಪಂಡರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಎಸ್‌ಸಿ ಎಸ್‌ಟಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಬೋವಿ ಸಮಾಜ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹಿಸಿವೆ.
ಈಗಾಗಲೇ ಮಾಗಡಿ ಡಿವೈಎಸ್ಪಿ ಪ್ರವೀಣ್, ಕುಂಬಳಗೋಡು ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ತಂಡ ರಾಜರಾಜೇಶ್ವರಿ ನಗರದ ಹೊರವಲಯದಲ್ಲಿರುವ ಬಿಗ್ ಬಾಸ್ ಸೆಟ್‌ಗೆ ಭೇಟಿ ನೀಡಿ, ತನಿಷಾ ಕುಪ್ಪಂಡ ಮತ್ತು ಡ್ರೋನ್ ಪ್ರತಾಪ್ ಅವರಿಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ತನಿಷಾ ಅವರ ಧ್ವನಿಯ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ಪ್ರೋಮೋದಲ್ಲಿರುವ ಧ್ವನಿಗೂ ದೂರುದಾರರು ನೀಡಿರುವ ಧ್ವನಿಗೂ ಸಂಬಂಧವಿದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ಸಂಭಾಷಣೆ ಕುರಿತಂತೆ ಪ್ರತಾಪ್ ಅವರನ್ನೂ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ | BBK Season 10: ಚರ್ಚೆ ಹುಟ್ಟು ಹಾಕಿದೆ ವರ್ತೂರು ಸಂತೋಷ್ ಮದುವೆ ವಿಚಾರ; ಅಸಲಿಯತ್ತೇನು?
ಇಷ್ಟಕ್ಕೂ ತನಿಷಾ ಏನಂದ್ರು?
ಬಿಗ್‌ಬಾಸ್ ಮನೆಯಲ್ಲಿ ತನಿಷಾ ಹಾಗೂ ಡ್ರೋನ್ ಪ್ರತಾಪ್ ನಡುವಿನ ಸಂಭಾಷಣೆಯಲ್ಲಿ ವಡ್ಡರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಷಾ ಪ್ರತಾಪ್‌ಗೆ ವಡ್ಡನೋ ನೀನು ವಡ್ಡನ ತರಹ ಆಕ್ಟ್ ಮಾಡ್ತೀಯಾ ಎಂದು ಪದ ಬಳಕೆ ಮಾಡಿದ್ದಾರೆ. ಇದು ಬೋವಿ ಜನಾಂಗಕ್ಕೆ ಅವಮಾನ ಮಾಡಿದಂತೆ. ಜಾತಿ ಹಾಗೂ ಜನಾಂಗದ ಬಗ್ಗೆ ಮಾತಾಡಿರುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿಯೇ ವಡ್ಡರ ಜನಾಂಗದ ಬಗ್ಗೆ ಅವಮಾನಕರವಾಗಿ ಮಾತನಾಡಿದ್ದಾರೆ. ಇವರನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಹಾಕಬೇಕು ಜತೆಗೆ ಬಂಧಿಸಬೇಕೆಂದು ಭೋವಿ ಸಮಾಜ ಆಗ್ರಹಿಸಿದೆ.