ಮುಂಬೈ: ಭಾರತೀಯರ ಅಚ್ಚುಮೆಚ್ಚಿನ ಕಾಮಿಡಿ ಶೋ ʼದಿ ಕಪಿಲ್ ಶರ್ಮಾ ಶೋʼ (The Kapil Sharma Show). ಈ ಶೋ ಮೂಲಕ ಹಾಸ್ಯ, ಮನರಂಜನೆಯ ರಸದೌತಣ ನೀಡಿ ದೇಶದ ಮನೆಮಾತಾಗಿರುವ ಕಪಿಲ್ ಶರ್ಮಾ (Kapil Sharma) ಹಾಗೂ ಸುನಿಲ್ ಗ್ರೋವರ್ (Sunil Grover) ಮತ್ತೆ ಒಂದಾಗಿದ್ದಾರೆ. ಸುಮಾರು ಆರು ವರ್ಷಗಳ ಮುನಿಸಿನ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್ಫ್ಲಿಕ್ಸ್ (Netflix)ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ (The Great Indian Kapil Show)ದಲ್ಲಿ ಈ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ. ಈ ಮೂಲಕ ಟಿವಿಯಲ್ಲಿ ಜನಪ್ರಿಯವಾದ ಶೋ ಒಟಿಟಿಗೂ ಕಾಲಿಟ್ಟಿದೆ. ಶನಿವಾರ (ಮಾರ್ಚ್ 23) ಈ ಶೋದ ಟ್ರೇಲರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.
ಬಾಲಿವುಡ್, ಕ್ರಿಕೆಟ್ ಲೋಕದ ಭಾರಿ ದೊಡ್ಡ ಸೆಲೆಬ್ರಿಟಿಗಳು ಕಪಿಲ್ ಅವರ ಶೋಗೆ ಬಂದಿರುವುದು ಟ್ರೇಲರ್ನಲ್ಲಿ ಕಂಡು ಬಂದಿದೆ. ಮತ್ತೊಂದು ವಿಶೇಷ ಎಂದರೆ ಕಪಿಲ್ ಶರ್ಮಾ ಅವರ ಹಳೆಯ ಗೆಳೆಯರೆಲ್ಲ ಮತ್ತೆ ಶೋಗೆ ಬಂದಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇನ್ನು ನಗುವಿಗೆ ಕೊರತೆ ಇಲ್ಲ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.
ಯಾವಾಗ ಪ್ರಸಾರ ?
ಸುನಿಲ್ ಗ್ರೋವರ್ ಜತೆಗೆ ಅರ್ಚನಾ ಪೂರನ್ ಸಿಂಗ್, ಕಿಕು ಶಾರದಾ, ರಾಜೀವ್ ಠಾಕೂರ್ ಮತ್ತು ಕೃಷ್ಣ ಅಭಿಷೇಕ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ದ ಭಾಗವಾಗಲಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಹೊಸ ಈ ಶೋ ಪ್ರಸಾರವಾಗಲಿದೆ.
ಟ್ರೇಲರ್ನಲ್ಲಿ ಏನಿದೆ?
ಶೋ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನುವುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು ಈ ಬಾರಿ ಶೋಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಸ್ತುತ ಬಿಡುಗಡೆ ಆಗಿರುವ ಟ್ರೇಲರ್ನಲ್ಲಿ ಬಾಲಿವುಡ್ ಸ್ಟಾರ್ ನಟ ರಣ್ಬೀರ್ ಕಪೂರ್, ತಮ್ಮ ತಾಯಿ ಹಾಗೂ ಸಹೋದರಿ ಜತೆಗೆ ಶೋದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಯಾವುದೇ ಶೋಗೆ ಹೋಗದ ಆಮೀರ್ ಖಾನ್ ಸಹ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ಟೀಂನ ನಾಯಕ ರೋಹಿತ್ ಶರ್ಮಾ, ಕ್ರಿಕೆಟಿಗ ಶ್ರೆಯಸ್ ಐಯ್ಯರ್ ಮತ್ತಿತರರು ಆಗಮಿಸಿದ್ದಾರೆ. ಹೀಗಾಗಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ನಾರಾಯಣಮೂರ್ತಿ ಬಸ್ ಕಂಡಕ್ಟರ್ ಹೈ ಕ್ಯಾ? ಭೇಟಿ ಕುರಿತು ಕಪಿಲ್ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?
ಇಬ್ಬರ ಮಧ್ಯೆ ಏಕೆ ಜಗಳ?
ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್ ಶರ್ಮಾ ಅವರು ಸುನಿಲ್ ಗ್ರೋವರ್ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ. ನಂತರ ಸುನಿಲ್ ಗ್ರೋವರ್ ಅವರು ʼದಿ ಕಪಿಲ್ ಶರ್ಮಾ ಶೋʼ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್ ಶರ್ಮಾ, “ನಾನು ಎಂದಿಗೂ ಸುನಿಲ್ ಗ್ರೋವರ್ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್ ಗ್ರೋವರ್ ಕೂಡ ಒಬ್ಬರು” ಎಂದು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ