Site icon Vistara News

Taali Review: ತಾಲಿ ವೆಬ್‌ ಸಿರೀಸ್; ಗಣೇಶ ಗೌರಿಯಾಗುವ ಕತೆ, ಹೋರಾಟದ ಜತೆ ಮಂಗಳಮುಖಿಯರ ವ್ಯಥೆ

Sushmita Sen In Taali Web Series

Taali Review: Sushmita Sen Again Shines In Web Series In Transgenders Struggle Story

| ಬಿ. ಸೋಮಶೇಖರ್‌, ಬೆಂಗಳೂರು

ಅಪ್ಪ ಪೊಲೀಸ್‌ ಅಧಿಕಾರಿ. ಕಡಲಷ್ಟು ಪ್ರೀತಿ ತೋರುವ ಅಮ್ಮ. ಮಮತೆಯಿಂದ ಕಾಣುವ ಅಕ್ಕ. ಇವರೆಲ್ಲರ ಅಕ್ಕರೆಯ ಮಧ್ಯೆ ಗಣೇಶ್‌ ಸಾವಂತ್‌ ಎಂಬ ಪೋರನ ಬಾಲ್ಯವು ಸುಖಮಯವಾಗಿಯೇ ಇರುತ್ತದೆ. ಆದರೆ, ಒಡಲಾಳದಲ್ಲಿರುವ ಹೆಣ್ಣು, ತಾನೂ ತಾಯಿಯಾಗಬೇಕು ಎನ್ನುವ ಆಸೆ, ಅದಕ್ಕೆ ತಕ್ಕಂತೆ ವರ್ತಿಸುವ ದೇಹದ ಭಾಷೆಯು ಇಡೀ ಕುಟುಂಬದಲ್ಲಿ ಕಿಚ್ಚು ಹಚ್ಚುತ್ತದೆ. ನನ್ನ ಮಗ ಮಗನಾಗಿ ಇರಬೇಕು ಎನ್ನುವ ಪೊಲೀಸ್‌ ಅಧಿಕಾರಿ, ಮಗನಲ್ಲೇ ತಾಯಿಯನ್ನು ಕಂಡರೂ ಸಮಾಜದ ಕಟ್ಟಳೆಗಳಿಗೆ ಹೆದರುವ ಗಣೇಶನ ತಾಯಿ, ಅಕ್ಕನ ಆತಂಕದ ಮಧ್ಯೆಯೂ ಹೇಗೆ ಗಣೇಶ್‌ ಸಾವಂತ್‌ ಎಂಬ ಬಾಲಕನು ತನ್ನೊಳಗಿನ ಹೆಣ್ತನವನ್ನು ಹುಡುಕಿಕೊಂಡು ಹೇಗೆ ಹೆಣ್ಣಾಗಿ ಬದಲಾಗುತ್ತಾನೆ, Sorry ಬದಲಾಗುತ್ತಾಳೆ, ಆಕೆ (Sushmita Sen) ಹೇಗೆ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡುತ್ತಾಳೆ, ಹೋರಾಟದಲ್ಲಿ ಏನೆಲ್ಲ ಅನುಭವಿಸುತ್ತಾಳೆ, ಯಾವೆಲ್ಲ ಮಾತುಗಳನ್ನು ಬಾಣಗಳಂತೆ ಚುಚ್ಚಿಸಿಕೊಳ್ಳುತ್ತಾಳೆ ಎಂಬುದರ ಕತೆಯೇ ತಾಲಿ (ಚಪ್ಪಾಳೆ) (Taali Review) ವೆಬ್‌ ಸಿರೀಸ್‌ನ ಒಂದು ವಾಕ್ಯದ ಸಾರ.

ವೆಬ್‌ ಸಿರೀಸ್:‌ ತಾಲಿ
– ನಿರ್ದೇಶನ: ರವಿ ಜಾಧವ್
– ತಾರಾಗಣ: ಸುಶ್ಮಿತಾ ಸೇನ್‌, ಅಂಕುರ್‌ ಭಾಟಿಯಾ, ಸುವ್ರತ್‌ ಜೋಶಿ, ನಿತಿನ್‌ ರಾಥೋಡ್
– ನಿರ್ಮಾಣ: GSEAMS ಬ್ಯಾನರ್‌ನ ಕಾರ್ತಿಕ್‌ ನಿಶಂದರ್‌, ಅರ್ಜುನ್‌ ಸಿಂಗ್‌ ಬಾರನ್‌, ಅಫೀಫಾ ಸುಲೇಮಾನ್ ನದೈದ್ವಾಲಾ, ಟ್ರಿಪಲ್‌ ಏಸ್‌ ಎಂಟರ್‌ಟೇನ್‌ಮೆಂಟ್ ಹಾಗೂ ಜಿಯೋ ಸ್ಟುಡಿಯೋಸ್
– OTT ಪ್ಲಾಟ್‌ಫಾರ್ಮ್‌: ಜಿಯೋ ಸಿನಿಮಾ
– ರಿಲೀಸ್‌ ಡೇಟ್:‌ 2023, ಆಗಸ್ಟ್‌ 15

ಮುಂಬೈನಲ್ಲಿ ಮಂಗಳಮುಖಿಯರ ಹಕ್ಕುಗಳಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್‌ ಎಂಬ ದಿಟ್ಟ ಮಂಗಳಮುಖಿಯ ನೈಜ ಕತೆ ಮಾತ್ರವಲ್ಲ ಹೋರಾಟದ ಹಾದಿ, ವ್ಯಥ್ಯೆಯನ್ನು ಎಳೆಎಳೆಯಾಗಿ, ಮುನ್ನಡೆ, ಹಿನ್ನಡೆ, ಮಂಗಳಮುಖಿಯರಿಂದಲೇ ಎದುರಾಗುವ ಅಡೆತಡೆಗಳನ್ನು ಕಣ್ಣಿಗೆ ಕಟ್ಟುವಂತೆ ಹೆಣೆಯಲಾಗಿದೆ. ಶ್ರೀಗೌರಿ ಸಾವಂತ್‌ ಹೆಣ್ತನವನ್ನೇ ಹೊತ್ತುಕೊಂಡ ಮಂಗಳಮುಖಿಯು ಸಮಾಜದಲ್ಲಿ ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರವರೆಗೆ ಹೇಗೆ ಮಂಗಳಮುಖಿಯರನ್ನು ಅವಮಾನಿಸಲಾಗುತ್ತದೆ, ಕೆಲ ಮಂಗಳಮುಖಿಯರನ್ನೂ ಸೇರಿ ಎಲ್ಲರನ್ನೂ ಎದುರು ಹಾಕಿಕೊಂಡು ಕೊನೆಗೆ ಮಂಗಳಮುಖಿಯರಿಗೆ ‘ತೃತೀಯ ಲಿಂಗಿ’ ಸ್ಥಾನಮಾನ ಕೊಡಿಸುತ್ತಾಳೆ ಎಂಬುದನ್ನು ವೆಬ್‌ ಸಿರೀಸ್‌ ಕಣ್ಣಮುಂದೆ ತಂದಿಡುತ್ತದೆ.

ತಾಲಿ ಟ್ರೈಲರ್‌

ಮನೆಯೇ ಮೊದಲ ‘ಹಠ’ ಶಾಲೆ

Charity Begins At Home ಎಂಬ ಮಾತಿದೆ. ಆದರೆ, ಗಣೇಶ್‌ ಸಾವಂತ್‌ ಬಾಲ್ಯದಲ್ಲಿ ಮನೆಯೇ ಮೊದಲ ಅವಮಾನ, ಹಠದ ಶಾಲೆಯಾಗಿ ಪರಿವರ್ತನೆಯಾಗುತ್ತದೆ. ನನ್ನ ಮಗ ಮಗನಾಗೇ ಇರಬೇಕು ಎಂದು ಪೊಲೀಸ್‌ ಅಧಿಕಾರಿಯಾದ ಅಪ್ಪ ಬಯಸುತ್ತಾನೆ. ಅಮ್ಮ ನಡುದಾರಿಯಲ್ಲಿ ಕೈಬಿಟ್ಟು ಹೋಗುತ್ತಾಳೆ. ಅಕ್ಕ ಸಮಾಜದ ಕಟ್ಟುಪಾಡುಗಳನ್ನೂ ಮೀರಿ ತುಸು ಸಹಾಯ ಮಾಡುತ್ತಾಳೆ. ಗಣೇಶ್‌ ಸಾವಂತ್‌ ಎಂಬ ಬಾಲಕ ಶ್ರೀಗೌರಿ ಸಾವಂತ್‌ ಆಗಿ ಮನೆಯಿಂದ ಹೊರಬಿದ್ದು ಮುಂಬೈ ಸೇರುವ ಆಕೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹಣಕ್ಕಾಗಿ ಕೈಯನ್ನೂ ಚಾಚುತ್ತಾಳೆ, ಕೊನೆಗೆ ಹಠ ತೊಟ್ಟು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮನವಿಯನ್ನೂ ಮಾಡುತ್ತಾಳೆ.

ರಾಹಿ ಎಂಬ ಎನ್‌ಜಿಒ ಮುನ್ನಡೆಸುವ ನವೀನ್‌ (ಸಲಿಂಗಿ) ಶ್ರೀಗೌರಿಗೆ ನೆರವಾಗುತ್ತಾರೆ. ಅಮಂಡಾ ಎಂಬ ವಿದೇಶಿ ಮಹಿಳೆ ಅರಿವಿನ ದಾರಿ ತೋರಿಸುತ್ತಾರೆ. ಶ್ರೀಗೌರಿಯ ಛಲವು ಅಕ್ಷರ ಕಲಿಸುತ್ತದೆ, ಹಾರಾಟಕ್ಕಿಂತ ಹೋರಾಟ ಮುಖ್ಯ, ಮಂಗಳಮುಖಿಯರಿಗೆ ಶಿಕ್ಷಣ ಮುಖ್ಯ, ಅವರಿಗೆ ಹಕ್ಕುಗಳು ಮುಖ್ಯ ಎಂಬುದನ್ನು ಮನಗಂಡು ಕಾನೂನಿನ ಹೆದ್ದಾರಿ ಹಿಡಿಯುತ್ತಾಳೆ. ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತೆಯರು, ಅನಾಥ ಮಕ್ಕಳ ಪೋಷಣೆಯಲ್ಲಿ ತೊಡಗುವ ಶ್ರೀಗೌರಿ, ಶೋಷಣೆಯ ವಿರುದ್ಧವೂ ಹೋರಾಡುತ್ತಾಳೆ. ಜನರ ಮನಸ್ಸಿನಲ್ಲಿದ್ದ ‘ಪಾಷಾಣ’ವನ್ನೂ ತೊಲಗಿಸುತ್ತಾಳೆ. ಹೋರಾಟದ ತಿರುಳನ್ನು ಮಾತ್ರ ತೆರೆಯ ಮೇಲೆ ಉರುಳು ಉರುಳಾಗಿ ತೋರಿಸದೆ, ಪ್ರೇಕ್ಷಕರು ಮರುಗುವಂತೆ ತೋರಿಸಲಾಗಿದೆ ಎಂಬುದೇ ವೆಬ್‌ ಸಿರೀಸ್‌ ನಿರ್ದೇಶಕನ ಹೆಗ್ಗಳಿಕೆ.

ನಿಜ ಜೀವನದ ಹೋರಾಟಗಾರ್ತಿ ಗೌರಿ ಸಾವಂತ್.

ಹಿಡಿದಿಡುವ ಸಂಭಾಷಣೆ

ಮಂಗಳಮುಖಿಯರ ಹೋರಾಟದ ಕತೆ ಎಂದ ಮಾತ್ರಕ್ಕೆ ಅತಿಯಾದ ವೈಭವೀಕರಣ ಇಲ್ಲ. ಕತೆಯ ‘ಓಘ’ ಅಲ್ಲಲ್ಲಿ ಜಾರಿದರೂ ಹೋರಾಟ, ಸಾಮಾಜಿಕ ಕಟ್ಟುಪಾಡುಗಳು, ಕುತ್ಸಿತ ಮನಸ್ಸುಗಳ ಪ್ರದರ್ಶನದ ‘ಓಟ’ ನಿಲ್ಲುವುದಿಲ್ಲ. ಸುಶ್ಮಿತಾ ಸೇನ್‌ ಅವರನ್ನು ಆಧರಿಸಿ ಕತೆಯನ್ನು ಹೆಣೆದಿದೆ ಎನಿಸಿದರೂ ಬೇರೆ ಪಾತ್ರಗಳನ್ನು ‘ಹಣಿ’ಯಲಾಗಿದೆ ಎನಿಸುವುದಿಲ್ಲ. ಅದರಲ್ಲೂ, ಸಂಭಾಷಣೆಗಳು ನೈಜತೆಯನ್ನು ಹೊಂದಿವೆ. ‘ಮೇಲ್‌, ಫೀಮೇಲ್‌ ಜತೆಗೆ ಇ-ಮೇಲ್‌ ಬಂದರೂ ಜನರ ಮನಸ್ಥಿತಿ ಬದಲಾಗಿಲ್ಲ’, ‘ಪೊಲೀಸರು ಇಷ್ಟು ದಿನ ಓಡಿಸಲು ಬರುತ್ತಿದ್ದರು, ಈಗ ರಕ್ಷಿಸಲು ಬರುತ್ತಿದ್ದಾರೆ’, ‘ಹೊರಗಡೆ ಕಹಿ ತುಂಬಿದರೂ, ದೇಹದ ಒಳಗೆ ಸಿಹಿ (ಶುಗರ್)‌ ತುಂಬಿದೆ’, ‘ನನ್ನ ಜೀವನದ ಈ ಅಧ್ಯಾಯದ ಹೆಸರು ಫೀಲಿಂಗ್’‌ ಎಂಬ ಡೈಲಾಗ್‌ಗಳು ಆಯಾ ಸನ್ನಿವೇಶಗಳ ಜೀವಾಳವಾಗಿವೆ. ಆದರೆ, ಯಾವ ಸನ್ನಿವೇಶ ಎಂಬುದಕ್ಕೆ ವೆಬ್‌ ಸಿರೀಸ್‌ಅನ್ನು ನೋಡುವುದು ಅನಿವಾರ್ಯ.

ಸುಶ್ಮಿತಾ ಸೇನ್‌ ಕಮ್‌ಬ್ಯಾಕ್

2020ರಲ್ಲಿ ಆರ್ಯ ಎಂಬ ವೆಬ್‌ ಸಿರೀಸ್‌ ಮೂಲಕ ನಟನೆಗೆ ಮರಳಿದ್ದ ಸುಶ್ಮಿತಾ ಸೇನ್‌ ಅವರು ಅಭಿಮಾನಿಗಳನ್ನು ಮನೋಜ್ಞ ನಟನೆ ಮೂಲಕ ಅಭಿಮಾನಿಗಳ ಮನತಣಿಸಿದ್ದರು. ಇನ್ನು, ತಾಲಿ ವೆಬ್‌ ಸಿರೀಸ್‌ನಲ್ಲಿ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ ಅವರಿಗೆ ಮಂಗಳಮುಖಿ ಪಾತ್ರ ನೀಡಿದ್ದಕ್ಕೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ತಾಲಿ ವೆಬ್‌ ಸಿರೀಸ್‌ ನೋಡಿದ ಬಳಿಕ ಸುಶ್ಮಿತಾ ಸೇನ್‌ ನಟನೆ ಬಗ್ಗೆ ಅಭಿಮಾನಿಗಳು ಮಾತ್ರವಲ್ಲ, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಷ್ಟರಮಟ್ಟಿಗೆ ಮಂಗಳಮುಖಿಯರ ತಳಮಳಗಳು, ನೋವು-ಅವಮಾನಗಳಿಗೆ ಸುಶ್ಮಿತಾ ಸೇನ್‌ ಕನ್ನಡಿ ಹಿಡಿದಂತೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: Blind Movie Review: ಸೋನಂ ಕಪೂರ್‌ ನಟನೆಯ ಬ್ಲೈಂಡ್; ‘ಕಾಡುವ’ ಸಿನಿಮಾ ಅಲ್ಲದಿದ್ದರೂ ‘ನೋಡುವ’ ಫಿಲಂ

ಒಟ್ಟಿನಲ್ಲಿ, ಮಂಗಳಮುಖಿಯರ ಜೀವನವೇ ‘ಖಾಲಿ’ ಎಂಬ ಮನಸ್ಥಿತಿಯು ಬದಲಾಗಿ, ಅವರಿಗೂ ತಾಲಿ (ಚಪ್ಪಾಳೆ) ಹೊಡೆಯುವ ‘ಕಾಲ’ ಹೇಗೆ ಬರುತ್ತದೆ, ಹೋರಾಟಕ್ಕೆ ಹೇಗೆ ಕುತ್ಸಿತ ಮನಸ್ಸುಗಳು ನ್ಯಾಯದ ‘ಕಾಲು’ ಹಿಡಿಯುತ್ತವೆ, ಆಧುನಿಕ ಕಾಲದಲ್ಲೂ ಸಮಾಜದಲ್ಲಿ ಮಂಗಳಮುಖಿಯರನ್ನು ಹೇಗೆ ‘ತೃತೀಯ ದರ್ಜೆ’ ಪ್ರಜೆಗಳನ್ನಾಗಿ ಕಾಣಲಾಗುತ್ತದೆ ಎಂಬ ಅಂಶಗಳು ವೆಬ್‌ ಸಿರೀಸ್‌ಅನ್ನು ಸೂಕ್ಷ್ಮ ಮನಸ್ಸುಗಳು ನೋಡುವಂತೆ ಮಾಡುತ್ತದೆ.

Exit mobile version