ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್ ಸೋಲು ಕಂಡಿದೆ. ಬೃಹತ್ ಮೊತ್ತದ ಈ ಪಂದ್ಯದಲ್ಲಿ ಅತ್ತಿಂದಿತ್ತ ಓಲಾಡಿದ ವಿಜಯಲಕ್ಷ್ಮಿ ಕೊನೆಗೆ ಲಕ್ನೊ ಸೂಪರ್ ಜಯಂಟ್ಸ್ ಪಾಲಾಗಿದೆ. ಕೊನೇ ಎಸೆತದಲ್ಲಿ ಲಕ್ನೊ ತಂಡದ ವಿಜಯಕ್ಕೆ ಒಂದು ರನ್ ಬೇಕಾಗಿತ್ತು. ಹರ್ಷಲ್ ಪಟೇಲ್ ಎಸೆದ ಚೆಂಡು ಬ್ಯಾಟರ್ ಆವೇಶ್ ಖಾನ್ಗೆ ಬ್ಯಾಟ್ಗೆ ತಗುಲದೇ ಹಿಂದಕ್ಕೆ ಹೋಯಿತು. ಆದರೆ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಯಲ್ಲಿ ಪುಟಿಯಿತು. ಒಂದು ವೇಳೆ ಅವರ ಕೈಗೆ ಸರಿಯಾಗಿ ಸಿಕ್ಕಿದ್ದರೆ ಲಕ್ನೊ ಬ್ಯಾಟರ್ ರನ್ ಔಟ್ ಆಗುತ್ತಿದ್ದರು. ಪಂದ್ಯ ಟೈ ಆಗುತ್ತಿತ್ತು. ಇಲ್ಲಿ ಅದೃಷ್ಟ ಆರ್ಸಿಬಿ ಕೈ ಹಿಡಿಯಲಿಲ್ಲ. ಲಕ್ನೊ ತಂಡದ ಬ್ಯಾಟರ್ಗಳಾದ ನಿಕೋಲಸ್ ಪೂರನ್ (62 ರನ್, 19 ಎಸೆತ, 7 ಸಿಕ್ಸರ್, 4 ಪೋರ್), ಮಾರ್ಕಸ್ ಸ್ಟೋಯ್ನಿಸ್ (65 ರನ್, 30 ಎಸೆತ, 5 ಸಿಕ್ಸರ್) ಗೆಲುವಿನ ರೂವಾರಿಗಳೆನಿಸಿಕೊಂಡರು. ಈ ಪಂದ್ಯವೂ ಹಾಲಿ ಆವೃತ್ತಿಯ ಮತ್ತೊಂದು ಅತ್ಯಂತ ರೋಚಕ ಪಂದ್ಯ ಎನಿಸಿಕೊಂಡಿತು. ಇದೇ ವೇಳೆ ಆರ್ಸಿಬಿ ಬಳಗಕ್ಕೆ ಸತತ ಎರಡು ಸೋಲು ಎದುರಾಯಿತು. ಪ್ರಮುಖವಾಗಿ ತವರಿನ ಅಭಿಮಾನಿಗಳ ಎದುರೇ ಸೋಲಿನ ನಿರಾಸೆ ಅನುಭವಿಸಿತು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ಸಿಬಿ ಬಳಗ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಕೊನೇ ಎಸೆತದಲ್ಲಿ ಒಂದು ರನ್ ಬಾರಿಸುವ ಮೂಲಕ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಬಾರಿಸಿ ಗೆಲುವು ಸಾಧಿಸಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡದ ಆರಂಭ ಉತ್ತಮವಾಗಿರಲಿಲ್ಲ. ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಪತನಗೊಂಡಿತು. ರಾಹುಲ್ ಮತ್ತು 18 ರನ್ ಬಾರಿಸಿದರೆ ದೀಪಕ್ ಹೂಡಾ 9 ರನ್ ಬಾರಿಸಿದರು. ಕೃಣಾಲ್ ಪಾಂಡ್ಯ ಕೂಡ ಶೂನ್ಯ ಸುತ್ತಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಟೊಯ್ನಿಸ್ ಹಾಗೂ ಪೂರನ್ ಸಿಡಿಲಬ್ಬರದ ಪ್ರದರ್ಶನ ನೀಡಿದರು. ಮೊದಲು ಮೂರು ವಿಕೆಟ್ಗಳನ್ನು 23 ರನ್ಗಳಿಗೆ ಕಳೆದುಕೊಂಡ ಲಕ್ನೊ ತಂಡ ಬಾರಿ ಹಿನ್ನಡೆಗೆ ಒಳಗಾಯಿತು. ಆದರೆ, ಸ್ಪೋಯ್ನಿಸ್ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧ ಶತಕ ಬಾರಿಸುವ ಜತೆಗೆ ಗೆಲುವಿನ ಆಸೆ ಮೂಡಿಸಿದರು. ತಂಡದ ಮೊತ್ತ 99 ಆಗುವಷ್ಟರಲ್ಲಿ ಸ್ಪೊಯ್ನಿಸ್ ಔಟಾದರೆ 105 ರನ್ ಆಗುವಷ್ಟರಲ್ಲಿ ಕೆ. ಎಲ್ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು.
ನಿಕೋಲಸ್ ಅಬ್ಬರ
ಆರನೇ ವಿಕೆಟ್ ಜತೆಯಾದ ಆಯುಷ್ ಬದೋನಿ ಹಾಗೂ ನಿಕೋಲಸ್ ಪೂರನ್ ಆರ್ಸಿಬಿ ಬೌಲರ್ಗಳನ್ನು ಬೆಂಡೆತ್ತಿದರು. ಆಯುಷ್ ನಿಧಾನಗತಿಯಲ್ಲಿ ಆಡಿ 30 ರನ್ ಬಾರಿಸಿದರೆ ವಿಂಡೀಸ್ ಆಟಗಾರ ಮೈದಾನ ಮೂಲೆ ಮೂಲೆ ಮೂಲೆಗೆ ಚೆಂಡನ್ನು ಕಳುಹಿಸಿ ಆರ್ಸಿಬಿ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. 15 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಅವರು 19 ಎಸೆತದಲ್ಲಿ 62 ರನ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅವರ ವಿಕೆಟ್ ಪತನಗೊಂಡ ಬಳಿಕ ಪಂದ್ಯ ರೋಚಕ ಘಟ್ಟ ತಲುಪಿತು. ಕೊನೇ ಎಸೆತದ ತನಕ ಈ ರೋಚಕತೆ ಮುಂದುವರಿಯಿತು. ಕೊನೆಯಲ್ಲಿ ವಿಕೆಟ್ಕೀಪರ್ ದಿನೇಶ್ ಕಾರ್ತಿಕ್ ಕೈಜಾರದೇ ಹೋಗಿದ್ದೆ ಟೈ ಫಲಿತಾಂಶ ಪ್ರಕವಾಗುತ್ತಿತ್ತು.
ಆರ್ಸಿಬಿಯ ಅಬ್ಬರದ ಬ್ಯಾಟಿಂಗ್
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (62), ಫಾಫ್ ಡು ಪ್ಲೆಸಿಸ್ (ಅಜೇಯ 79) ಹಾಗೂ ಮ್ಯಾಕ್ಸ್ವೆಲ್ (59) ತ್ರಿವಳಿ ಅರ್ಧ ಶತಕಗಳನ್ನು ಬಾರಿಸಿದರು. ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ವಿಕೆಟ್ ಪತನಗೊಳ್ಳದಂತೆ ನೋಡಿಕೊಂಡರು. ಏತನ್ಮಧ್ಯೆ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಗಳಿಕೆಗೆ ವೇಗ ಕೊಟ್ಟು 35 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಬಳಿಕ ರನ್ ಗಳಿಕೆಯ ವೇಗವನ್ನು ಹೆಚ್ಚಿಸುವ ವೇಳೆ ಅಮಿತ್ ಮಿಶ್ರಾ ಅವರ ಸ್ಪಿನ್ ಬೌಲಿಂಗ್ನಲ್ಲಿ ಸ್ಟೋಯ್ನಿಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಆರ್ಸಿಬಿ ಸ್ಕೋರ್ 96.
ಇದನ್ನೂ ಓದಿ : IPL 2023 : ಗಾಯದ ಸಮಸ್ಯೆ ಕುರಿತು ರವಿ ಶಾಸ್ತ್ರಿ ಹೇಳಿಕೆಗೆ ಬಿಸಿಸಿಐ ತಿರುಗೇಟು!
ವಿರಾಟ್ ಕೊಹ್ಲಿ ಔಟಾದ ಬಳಿಕ ಜತೆಯಾದ ಮ್ಯಾಕ್ಸ್ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಎದುರಾಳಿ ಲಕ್ನೊ ತಂಡದ ಬೌಲರ್ಗಳನ್ನು ಚೆಂಡಾಡಿದರು. ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದ ಈ ಜೋಡಿ 105 ರನ್ಗಳ ಜತೆಯಾಟ ನೀಡಿತು. ಮ್ಯಾಕ್ಸ್ವೆಲ್ 29 ಎಸೆತಗಳಲ್ಲಿ 59 ರನ್ ಬಾರಿಸಿದರೆ ಫಾಫ್ ಡು ಪ್ಲೆಸಿಸ್ 46 ಎಸೆತಗಳಲ್ಲಿ 79 ರನ್ ಬಾರಿಸಿದರು. ಆರ್ಸಿಬಿ ತಂಡ 15 ಸಿಕ್ಸರ್ ಬಾರಿಸಿದೆ 12 ಫೋರ್ಗಳ ಮೂಲಕ ದೊಡ್ಡ ಮೊತ್ತ ಗಳಿಸಿತು.
ಲಕ್ನೊ ಸೂಪರ್ ಜಯಂಟ್ಸ್ ತಂಡ ಪರ ಅಮಿತ್ ಮಿಶ್ರಾ ತಮ್ಮ ಎರಡು ಓವರ್ಗಳ ಸ್ಪೆಲ್ನಲ್ಲಿ 18 ರನ್ ನೀಡಿ ಒಂದು ವಿಕೆಟ್ ಪಡೆದರೆ, ಮಾರ್ಕ್ವುಡ್ 4 ಓವರ್ಗಳಲ್ಲಿ 32 ರನ್ ನೀಡಿ ಕೊನೆಯಲ್ಲೊಂದು ವಿಕೆಟ್ ತಮ್ಮದಾಗಿಸಿಕೊಂಡರು.