ಮುಂಬಯಿ: ಶುಭ್ಮನ್ ಗಿಲ್ (56) ಬಾರಿಸಿದ ಅರ್ಧ ಶತಕದ ನೆರವು ಪಡೆದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 35ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 207 ರನ್ ಪೇರಿಸಿದೆ. ಇದರೊಂದಿಗೆ ಆತಿಥೇಯ ಮುಂಬಯಿ ಬಳಗಕ್ಕೆ 208 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಡೇವಿಡ್ ಮಿಲ್ಲರ್ (46) ಹಾಗೂ ಅಭಿನವ್ ಮುಕುಂದ್ (42) ಕೂಡ ಗುಜರಾತ್ ಜೈಂಟ್ಸ್ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಗುಜರಾತ್ ಬಳಗ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು.
ಬ್ಯಾಟ್ ಮಾಡಲು ಆರಂಭಿಸಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹ (4) ಬೇಗನೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಆದರೆ ಶುಭ್ಮನ್ ಗಿಲ್ ಮತ್ತೊಂದು ತುದಿಯಲ್ಲಿ ತಳವೂರಿ ನಿಂತು ಬ್ಯಾಟ್ ಮಾಡಿದರು. 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಅವರು 56 ರನ್ ಮಾಡಿದ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ನಾಯಕ ಹಾರ್ದಿಕ್ ಪಾಂಡ್ಯ 13 ರನ್ಗಳಿಗೆ ಔಟಾದರು. ವಿಜಯ್ ಶಂಕರ್ (19) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
12. 1 ಓವರ್ಗಳಲ್ಲಿ 100 ರನ್ ಬಾರಿಸಿದ ಗುಜರಾತ್ ತಂಡ ಬಳಿಕ ರನ್ ಗಳಿಕೆಯಲ್ಲಿ ವೇಗ ಹೆಚ್ಚಿಸಿಕೊಂಡಿತು. ಬಳಿಕ ಜತೆಯಾದ ಡೇವಿಡ್ ಮಿಲ್ಲರ್ (46) ಹಾಗೂ ಅಭಿನವ್ ಮುಕುಂದ್ (42) ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ 5ನೇ ವಿಕೆಟ್ಗೆ 71 ರನ್ ಗಳಿಸಿದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ರಾಹುಲ್ ತೆವಟಿಯಾ ಕೂಡ 5 ಎಸೆತಗಳಿಗೆ 20 ರನ್ ಬಾರಿಸಿ ಮಿಂಚಿದರು.
ಮುಂಬಯಿ ಇಂಡಿಯನ್ಸ್ ಬೌಲಿಂಗ್ನಲ್ಲಿ ಪಿಯೂಷ್ ಚಾವ್ಲಾ 2 ವಿಕೆಟ್ ಉರುಳಿಸಿದರೆ, ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆನ್ಡಾರ್ಫ್, ರೀಲಿ ಮೆರಿಡಿತ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದು ವಿಕೆಟ್ ಕಬಳಿಸಿದರು.