Site icon Vistara News

ವಿಸ್ತಾರ Explainer | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ 61 ಪದಕಗಳು, ಇದು ಸಾಕೊ ಇನ್ನೂ ಬೇಕೋ?

V

ಬೆಂಗಳೂರು : ಆಗಸ್ಟ್‌ ೮ರಂದು ಮುಕ್ತಾಯಗೊಂಡ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ೨೨ ಬಂಗಾರದ ಪದಕದೊಂದಿಗೆ ಒಟ್ಟಾರೆ ೬೧ ಪದಕಗಳನ್ನು ಗೆದ್ದಿದೆ. ೨೦೧೮ರ ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ಹೋಲಿಕೆ ಮಾಡಿದರೆ ಮೂರು ಪದಕಗಳ ಕೊರತೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಭಾರತದ ಸಾಧನೆ ಸ್ವಲ್ಪ ಮಂಕಾಗಿದೆ ಎಂಬುದು ಮೇಲ್ನೋಟದ ವಿಶ್ಲೇಷಣೆ. ಅದರಲ್ಲೂ ಜಗತ್ತಿನ ಬಹುತೇಕ ದೇಶಗಳು ಪಾಲ್ಗೊಂಡಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಬಂಗಾರ ಸೇರಿದಂತೆ ಒಟ್ಟಾರೆ ಏಳು ಪದಕಗಳನ್ನು ಬಾಚಿಕೊಂಡಿದ್ದ ಭಾರತ, ೭೨ ದೇಶಗಳು ಮಾತ್ರ ಭಾಗಿಯಾಗಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಲಭಿಸಿರುವುದು ಕಡಿಮೆ ಎಂದೇ ಹೇಳಲಾಗುತ್ತಿದೆ. ಸರಕಾರಗಳು ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿರುವ ಹಾಗೂ ಖಾಸಗಿ ಕಂಪನಿಗಳು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವ ಹೊರತಾಗಿಯೂ ಕಳೆದ ಬಾರಿಗಿಂತ ಕಡಿಮೆ ಪದಕ ಬಂದಿರುವುದು ಸರಿಯೇ? ಕೊರತೆ ಎಂದಾದರೆ ಸಮಸ್ಯೆ ಆಗಿದ್ದು ಎಲ್ಲಿ? ಇಂಥ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಈ ಬಾರಿಯ ಸಾಧನೆಗಳೇನು? ಕೊರತೆಯೇನು?

ಕುಸ್ತಿ ಹಾಗೂ ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿದೆ. ಅದೇ ರೀತಿ ಈ ಬಾರಿಯೂ ಆಶಾದಾಯಕವಾಗಿದೆ. ಕುಸ್ತಿಯಲ್ಲಿ ಆರು ಚಿನ್ನ ಸೇರಿ ೧೨ ಪದಕಗಳು ಬಂದಿದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ೩ ಚಿನ್ನದ ಪದಕಗಳನ್ನು ಒಳಗೊಂಡಂತೆ ೧೦ ಪದಕಗಳು ಬಂದಿವೆ. ಮೂರನೇ ಸ್ಥಾನ ಟೇಬಲ್‌ ಟೆನಿಸ್‌ಗಿದೆ. ಇದರಲ್ಲಿ ನಾಲ್ಕು ಬಂಗಾರ ಸೇರಿ ೭ ಪದಕಗಳು ಬಂದಿವೆ. ಹೀಗಾಗಿ ಈ ಮೂರು ವಿಭಾಗದಲ್ಲಿ ಭಾರತ ತನ್ನ ಪಾರಮ್ಯವನ್ನು ಬಿಟ್ಟುಕೊಟ್ಟಿಲ್ಲ ಎಂದು ಹೇಳಬಹುದು. ಆದರೆ, ಬಾಕ್ಸಿಂಗ್‌ ಸಾಧನೆ ಕಡಿಮೆಯಾಗಿದೆ. ಈ ವಿಭಾಗದಲ್ಲಿ ೩ ಬಂಗಾರ ಹಾಗೂ ೩ ಕಂಚು ಹಾಗೂ ೧ ಕಂಚಿನ ಪದಕ ಬಂದಿದೆ. ಇದರಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಚಿನ್ನದ ಪದಕಗಳನ್ನಾಗಿ ಪರಿವರ್ತಿಸುವ ಅವಕಾಶಗಳು ಇದ್ದವು. ಇನ್ನು ಪುರುಷರ ಹಾಕಿ ತಂಡದ ಫೈನಲ್‌ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ೦-೭ ಗೋಲ್‌ಗಳಿಂದ ಸೋಲುವ ಮೂಲಕ ಭಾರೀ ಹಿನ್ನಡೆ ಅನುಭವಿಸಿತ್ತು. ಅಂತೆಯೇ ಮಹಿಳೆಯರ ಕ್ರಿಕೆಟ್‌ ತಂಡದ ಟಿ೨೦ ಫೈನಲ್ ಪಂದ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಕೊನೇ ಕ್ಷಣದಲ್ಲಿ ಮುಗ್ಗರಿಸಿ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು.

ಎಲ್ದೋಸ್‌ ಪಾಸ

ಇವೆಲ್ಲದರ ನಡುವೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಪ್ರಮುಖವಾಗಿ ಟ್ರಿಪಲ್‌ ಜಂಪ್‌ನಲ್ಲಿ ಎಲ್ದೋಸ್‌ ಪಾಲ್‌ ಚಿನ್ನ ಗೆದ್ದಿದ್ದರೆ, ಅಬ್ದುಲ್ಲಾ ಅಬೂಬಕರ್‌ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದರು. ಸಂದೀಪ್‌ ೧೦ ಸಾವಿರ ಮೀಟರ್‌ ರೇಸ್‌ವಾಕ್‌ನಲ್ಲಿ ಕಂಚು ಗೆದ್ದಿರುವುದು, ಅವಿನಾಶ್‌ ಸಾಬ್ಲೆ ೩೦೦೦ ಮೀಟರ್‌ ಸ್ಟೀಪಲ್‌ ಚೇಸ್‌ನಲ್ಲಿ ಜೀವನ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿಯ ಪದಕ ಗೆದ್ದಿರುವುದು ಹಾಗೂ ಪ್ರಿಯಾಂಕ ಗೋಸ್ವಾಮಿ ಮಹಿಳೆಯರ ೧೦ ಸಾವಿರ ಮೀಟರ್‌ ರೇಸ್‌ವಾಕ್‌ನಲ್ಲಿ ಕಂಚಿನ ಪದಕಕ್ಕೆ ಭಾಜನವಾಗಿರುವುದು ಭಾರತದ ಕ್ರೀಡಾ ಕ್ಷೇತ್ರದ ಪಾಲಿಗೆ ಶುಭ ಸುದ್ದಿ. ಇವೆಲ್ಲದಕ್ಕಿಂತ ಪ್ರಮುಖವಾಗಿ ಭಾರತ ಬಹುತೇಕರಿಗೆ ಪರಿಚಯವೇ ಇಲ್ಲದ ಲಾನ್‌ ಬೌಲ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ತಂಡ ಅನುಕ್ರಮವಾಗಿ ಬೆಳ್ಳಿ ಹಾಗೂ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.

ಹಿನ್ನಡೆಗೆ ಮೂಲ ಕಾರಣ ಇಲ್ಲಿದೆ

೨೦೧೮ರ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ಗಿಂತ ಬರ್ಮಿಂಗ್ಹಮ್‌ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳು ಕಡಿಮೆಯಾಗಲು ಕಾರಣ ನಮ್ಮ ಫೇವರಿಟ್‌ ಸ್ಪರ್ಧೆಯನ್ನು ಕೂಟದಿಂದ ಹೊರಗಿಟ್ಟಿರುವುದು. ಅದುವೇ ಶೂಟಿಂಗ್‌. ಸ್ಥಳಾವಕಾಶದ ಕೊರತೆ ಎಂಬ ಕಾರಣ ಕೊಟ್ಟು ಬರ್ಮಿಂಗ್ಹಮ್‌ ಅಯೋಜಕರು ಶೂಟಿಂಗ್‌ ಸ್ಪರ್ಧೆಯನ್ನೇ ಕೈಬಿಟ್ಟಿತು. ಆಯೋಜಕರಿಗೆ ಸ್ಪರ್ಧೆಗಳ ಸೇರ್ಪಡೆ ಮಾಡುವ ಹಾಗೂ ಕೈಬಿಡುವ ಅಧಿಕಾರ ಇದೆ. ಅದನ್ನವರು ಬಳಸಿಕೊಂಡಿದ್ದಾರೆ. ಆದರೆ, ಭಾರತಕ್ಕೆ ಈ ನಿರ್ಧಾರದಿಂದ ಭಾರೀ ಹಿನ್ನಡೆಯಾಗಿದೆ. ಆರಂಭದಲ್ಲಿ ಇದಕ್ಕೆ ಭಾರತೀಯ ಶೂಟಿಂಗ್‌ ಒಕ್ಕೂಟ ವಿರೋಧ ವ್ಯಕ್ತಪಡಿಸಿ, ಬಹಿಷ್ಕಾರದ ಮಾತುಗಳನ್ನು ಆಡಿದರೂ ಭಾರತ ಸರಕಾರದ ಮಧ್ಯಪ್ರವೇಶದಿಂದ ಆಕ್ರೋಶ ತಣ್ಣಗಾಗಿತ್ತು. ಆದರೆ, ಶೂಟಿಂಗ್‌ ಇಲ್ಲದೇ ಆಗಿರುವ ನಷ್ಟ ಈ ಬಾರಿಯ ಪದಕ ಪಟ್ಟಿಯಲ್ಲಿ ಪ್ರತಿಫಲನಗೊಂಡಿದೆ. ಯಾಕೆಂದರೆ, ೨೦೧೮ರ ಗೋಲ್ಡ್‌ಕೋಸ್ಟ್‌ನಲ್ಲಿ ಭಾರತ ಗೆದ್ದಿರುವ ೬೪ ಪದಕಗಳಲ್ಲಿ ೧೬ ಪದಕಗಳು ಶೂಟಿಂಗ್‌ನಿಂದ ಬಂದಿರುವುದಾಗಿತ್ತು. ೭ ಚಿನ್ನ, ೪ ಬೆಳ್ಳಿ ಹಾಗೂ ೫ ಕಂಚಿನ ಪದಕಗಳು ಇದರಲ್ಲಿ ಸೇರಿಕೊಂಡಿದ್ದವು. ಭಾರತೀಯ ಶೂಟರ್‌ಗಳು ಕಾಮನ್ವೆಲ್ತ್‌ ಮಟ್ಟದಲ್ಲಿ ಬಲಿಷ್ಠರಾಗಿದ್ದಾರೆ. ಒಂದು ವೇಳೆ ಬರ್ಮಿಂಗ್ಹಮ್‌ನಲ್ಲಿಯೂ ಈ ಕ್ರೀಡೆ ಇದ್ದಿದ್ದರೆ ಭಾರತದ ಒಟ್ಟು ಪದಕಗಳ ಸಂಖ್ಯೆ ೮೦ ಸಮೀಪವಿರುತ್ತಿತ್ತು.

ಆರ್ಚರಿಯನ್ನೂ ಈ ಬಾರಿಯ ಕಾಮನ್ವೆಲ್ತ್‌ ಗೇಮ್ಸ್‌ನ ಸ್ಪರ್ಧೆಗಳ ಪಟ್ಟಿಗೆ ಸೇರಿಸಿಕೊಂಡಿಲ್ಲ. ಇದರಿಂದಲೂ ಭಾರತಕ್ಕೆ ಹಿನ್ನಡೆಯಾಗಿದೆ ಎಂದು ಹೇಳಬಹುದು. ೨೦೧೦ರ ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಒಟ್ಟು ೧೦೧ ಪದಕಗಳನ್ನು ಗೆದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಇತಿಹಾಸ. ಈ ಕೂಟದಲ್ಲಿ ಭಾರತದ ಬಿಲ್ಲುಗಾರರು ೮ ಪದಕಗಳನ್ನು ಗೆದ್ದಿದ್ದರು. ಆ ಆವೃತ್ತಿಯಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ೩೦ ಪದಕಗಳು ಬಂದಿದ್ದವು. ಇನ್ನೂ ಗ್ರೀಕೋ ರೋಮನ್‌ ಕುಸ್ತಿ ಸ್ಪರ್ಧೆಯಲ್ಲಿ ಏಳು ಪದಕಗಳು ಬಂದಿದ್ದವು. ಅಲ್ಲದೆ, ಟೆನಿಸ್‌ನಲ್ಲಿಯೂ ನಾಲ್ಕು ಪದಕಗಳು ಬಂದಿದ್ದವು. ಒಟ್ಟಾರೆ ೫೨ ಪದಕಗಳು ಈ ಬಾರಿಯ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ಪಟ್ಟಿಯಲ್ಲಿ ಇಲ್ಲದ ಕ್ರೀಡೆಗಳಿಂದ ಬಂದಿದ್ದವು. ಇದನ್ನೇ ಆಧಾರವಾಗಿ ಇಟ್ಟುಕೊಂಡರೆ ಹಾಲಿ ಆವೃತ್ತಿಯಲ್ಲಿ ಭಾರತದ ಸಾಧನೆ ಕಡಿಮೇನೂ ಅಲ್ಲ ಎಂದು ಹೇಳಲಾಗುತ್ತಿದೆ.

ನಿರೀಕ್ಷೆ ಪೂರೈಸಿತೇ?

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕ್ರೀಡಾಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಪ್ರಾಮುಖ್ಯತೆ ಕೊಡುತ್ತಿದೆ. ಕ್ರೀಡಾಪಟುಗಳ ತರಬೇತಿ ಹಾಗೂ ಸೌಕರ್ಯಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸು ನೆರವು ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಎಲೆ ಮರೆ ಕಾಯಿಗಳಂತೆ ಇರುವ ಪ್ರತಿಭಾನ್ವಿತರನ್ನು ಹುಡುಕಲೂ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಅದರಲ್ಲೂ ಕಳೆದ ಟೋಕಿಯೊ ಒಲಿಂಪಿಕ್ಸ್‌ ಬಳಿಕ ಕೇಂದ್ರ ಸರಕಾರ ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇಷ್ಟೆಲ್ಲ ಅಬ್ಬರವನ್ನು ಗಮನಿಸಿದಾಗ ಈ ಬಾರಿಯ ಪದಕಗಳು ನಿರೀಕ್ಷೆ ಪೂರೈಸಿಲ್ಲ ಎಂದು ಹೇಳಲಾಗುತ್ತದೆ.

ಕ್ರೀಡಾ ಕ್ಷೇತ್ರಕ್ಕೆ ಸರಕಾರದ ಯೋಜನೆಗಳೇನು?

ಭಾರತದಲ್ಲಿ ಕ್ರೀಡೆಯ ಸಂಸ್ಕೃತಿಯನ್ನು ಸಮೃದ್ಧಿಗೊಳಿಸಲು ಕೇಂದ್ರ ಸರಕಾರ ಪ್ರಮುಖವಾಗಿ ಐದು ಯೋಜನೆಗಳನ್ನು ಚಾಲ್ತಿಗೆ ತಂದಿದೆ. ಮೊದಲನೆಯದ್ದು ಖೇಲೋ ಇಂಡಿಯಾ. ತಳಮಟ್ಟದಲ್ಲಿ ಕ್ರೀಡಾಪಟುಗಳನ್ನು ಪತ್ತೆ ಹಚ್ಚಿ ಅಲ್ಲಿಂದಲೇ ತರಬೇತಿ ಆರಂಭಿಸುವುದು ಇದರ ಉದ್ದೇಶ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌, ಖೇಲೋ ಇಂಡಿಯಾ ಯೂತ್‌ ಗೇಮ್ಸ್‌, ಖೇಲೋ ಇಂಡಿಯಾ ಗೇಮ್ಸ್‌ಗಳು ಈ ಯೋಜನೆಯಡಿ ನಡೆಯುವ ಕ್ರೀಡಾಕೂಟಗಳಾಗಿವೆ. ವಿವಿಧ ಸ್ತರಗಳಲ್ಲಿ ಕ್ರೀಡಾಪ್ರತಿಭೆಗಳನ್ನು ಪೋಷಿಸುವುದೇ ಇದರ ಉದ್ದೇಶ. ಇದರಡಿ ೫೨೩ ಖೇಲೋ ಇಂಡಿಯಾ ಜಿಲ್ಲಾ ಕೇಂದ್ರಗಳು, ೨೪೭ ಖೇಲೋ ಇಂಡಿಯಾ ಅಕಾಡೆಮಿಗಳು, ೨೯ ರಾಜ್ಯ ಮಟ್ಟದ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ನ್ಯಾಷನಲ್‌ ಸ್ಪೋರ್ಟ್‌ ಟ್ಯಾಲೆಂಟ್‌ ಐಡೆಂಟಿಫಿಕೇಷನ್‌ ಆಂಡ್‌ ಡೆವಲಪ್‌ಮೆಂಟ್ ಪೋರ್ಟಲ್‌ ಸರಕಾರದ ಎರಡನೇ ಯೋಜನೆ. ಈ ವೆಬ್‌ಸೈಟ್‌ ಮೂಲಕ ೪ರಿಂದ ಆರನೇ ತರಗತಿಗೆ (೮ರಿಂದ೧೨ ವರ್ಷ) ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಪಡೆಯಬಹುದಾದ ನಾನಾ ಸವಲತ್ತುಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.

ಶಾಲೆಗಳ ಪಠ್ಯದಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸುವ ಉದ್ದೇಶವನ್ನೂ ಕೇಂದ್ರ ಸರಕಾರ ಹೊಂದಿದೆ.

ಮಿಷನ್‌ ಒಲಿಂಪಿಕ್ಸ್‌ ೨೦೨೪. ಪ್ಯಾರಿಸ್‌ನಲ್ಲಿ ೨೦೨೪ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ೫೦ ಅಥವಾ ಅದಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಸರಕಾರ ನೀತಿ ಅಯೋಗದ ಮೂಲಕ ಕಾರ್ಯಯೋಜನೆ ರೂಪಿಸಿದೆ. ಇದರ ಮೂಲಕ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ.

ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಮ್‌ ಸ್ಕೀಮ್‌ (ಟಾಪ್ಸ್‌) ಇದರ ಮೂಲಕ ಮುಂಬರುವ ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಿಗೆ ಎಲ್ಲ ಸೌಕರ್ಯಗಳನ್ನು ನೀಡಲಾಗುತ್ತಿದೆ. ವಿದೇಶಿ ಕೋಚ್‌ಗಳ ನೇಮಕ, ವಿದೇಶದಲ್ಲಿ ತರಬೇತಿ ಸೇರಿದಂತೆ ನಾನಾ ರೀತಿಯ ಸೌಲಭ್ಯಗಳನ್ನು ಉನ್ನತ ಮಟ್ಟದ ಕ್ರೀಡಾಪಟಗಳು ಈ ಯೋಜನೆಯಿಂದ ಪಡೆದುಕೊಳ್ಳುತ್ತಿದ್ದಾರೆ. ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಸೇರಿದಂತೆ ಸಾಕಷ್ಟು ಕ್ರೀಡಾಪಟುಗಳು ಈ ಯೋಜನೆಯ ಫಲಾನುಭವಿಗಳು.

ಮುಂದಿನ ಕ್ರೀಡಾಕೂಟಗಳು ಯಾವುವು?

ಮುಂದಿನ ಎರಡು ವರ್ಷದಲ್ಲಿ ಭಾರತಕ್ಕೆ ಎರಡು ಪ್ರಮುಖ ಕ್ರೀಡಾಕೂಟಗಳು ಎದುರಾಗಲಿವೆ. ಅದಕ್ಕಾಗಿ ಭಾರತ ಸಿದ್ಧತೆ ನಡೆಸಿಕೊಳ್ಳಬೇಕಾಗಿದೆ. ಏಷ್ಯನ್‌ ಗೇಮ್ಸ್‌ ೨೦೨೨ನೇ ಆವೃತ್ತಿ ೨೦೨೩ಕ್ಕೆ ಮುಂದೂಡಿಕೆಯಾಗಿದೆ. ಮುಂದಿನ ವರ್ಷ ಸೆಪ್ಟೆಂಬರ್‌ ೨೩ರಿಂದ ಅಕ್ಟೋಬರ್‌ ೮ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವುದೇ ಭಾರತದ ಗುರಿಯಾಗಿದೆ. ೨೦೧೪ ಇಂಚಿಯಾನ್‌ ಗೇಮ್ಸ್‌ನಲ್ಲಿ ಭಾರತ ೧೧ ಚಿನ್ನದೊಂದಿಗೆ ೫೭ ಪದಕಗಳನ್ನು ಗೆದ್ದಿತ್ತು. ಹೀಗಾಗಿ ಪ್ರದರ್ಶನ ಸುಧಾರಣೆ ಮಾಡಬೇಕಾಗಿದೆ.

೨೦೨೪ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಅಲ್ಲಿ ೫೦ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯನ್ನು ಮಿಷನ್‌ ಒಲಿಂಪಿಕ್ಸ್‌-೨೦೨೪ ಮೂಲಕ ಭಾರತ ಹೊಂದಿದೆ. ಈ ಸ್ಪರ್ಧೆಯಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ | CWG- 2022 | ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?

Exit mobile version