ಬೆಂಗಳೂರು: ಕ್ರಿಕೆಟ್ ಅನ್ನು ಅತ್ಯಂತ ಸುಲಭವಾಗಿ ಆಡಬಹುದು ಎಂದು ತೋರಿಸಿಕೊಟ್ಟವರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿಡಿ ವಿಲಿಯರ್ಸ್ ಅಗ್ರಗಣ್ಯರು. ಅವರನ್ನು ಈ ಪೀಳಿಗೆಯ ಅಸಾಮಾನ್ಯ ಪ್ರತಿಭೆ ಎಂದೇ ಪರಿಗಣಿಸಲಾಗಿದೆ. 2004-2018ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಕಳುಹಿಸಬಲ್ಲ ಅವರ ಸಾಮರ್ಥ್ಯದಿಂದಾಗಿ ಅವರನ್ನು ಮಿಸ್ಟರ್ 360 ಎಂದೂ ಕರೆಯಲಾಗುತ್ತದೆ.
ಎಬಿಡಿ ವಿಲಿಯನ್ಸ್ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ವಿಶೇಷವಾಗಿ 2015 ರ ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಅಲ್ಲಿ ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿತು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಕಾರಣವಾದ ಹಲವು ಅಂಶಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.
ಅವರು 2019 ರ ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲು ಪ್ರಯತ್ನಿಸಿದರೂ, ವಿಷಯಗಳು ಕಾರ್ಯರೂಪಕ್ಕೆ ಬರಲಿಲ್ಲ. ಐಪಿಎಲ್ 2021 ರ ನಂತರ ಎಲ್ಲಾ ಕ್ರಿಕೆಟ್ನಿಂದ ನಿವೃತ್ತರಾಗುವ ಮೊದಲು ಅವರು ಈ ಮಧ್ಯೆ ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸಿದರು. ತಮ್ಮ ಕೊನೆಯ ವೃತ್ತಿಪರ ಪಂದ್ಯಗಳ ಎರಡು ವರ್ಷಗಳ ಕರಾಳ ದಿನವನ್ನು ಅವರು ಇದೀಗ ಬಹಿರಂಗಗೊಳಿಸಿದ್ದಾರೆ. ತಮ್ಮ ಬಲ ಕಣ್ಣು ಬಲ ದೃಷ್ಟಿ ಕಳೆದುಕೊಳ್ಳುತ್ತಿದ್ದ ಕಾರಣ ಒಂದೇ ಕಣ್ಣಿನಲ್ಲಿ ಆಡಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಏನಾಗಿತ್ತು ಅವರಿಗೆ?
ಮಗು ಒದ್ದ ಕಾರಣ ಕಣ್ಣಿಗೆ ಪೆಟ್ಟು ಬಿದ್ದು ಹಾನಿಯಾಗಿತ್ತು. ಅದರಿಂದ ವರ್ಷದಿಂದ ವರ್ಷಕ್ಕೆ ಕಣ್ಣಿನ ದೃಷ್ಟಿ ಕಳೆದುಕೊಳ್ಳಲು ಆರಂಭಿಸಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. “ನನ್ನ ಮಗ ಆಕಸ್ಮಿಕವಾಗಿ ತನ್ನ ಹಿಮ್ಮಡಿಯಿಂದ ನನ್ನ ಕಣ್ಣಿಗೆ ಒದೆದಿದ್ದ. ನಾನು ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ನಾನು ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ನನ್ನನ್ನು ಕೇಳಿದರು, ‘ನೀವು ಇಷ್ಟು ಈ ರೀತಿ ಕ್ರಿಕೆಟ್ ಆಡಿದ್ದು ಹೇಗೆ?’. ಅದೃಷ್ಟವಶಾತ್ ನನ್ನ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ನನ್ನ ಎಡಗಣ್ಣು ಉತ್ತಮ ಕೆಲಸ ಮಾಡಿದೆ. ಹೀಗಾಗಿ ಒಂದೇ ಕಣ್ಣಿನಲ್ಲಿ ಆಡಲು ಸಾಧ್ಯವಾಯಿತು ಎಂದು ಎಬಿಡಿ ವಿಲಿಯರ್ಸ್ ಹೇಳಿಕೊಂಡಿದ್ದಾರೆ.
ಡಿವಿಲಿಯರ್ಸ್ ಅವರು 2019 ರ ವಿಶ್ವಕಪ್ಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೇಗೆ ಮರಳಲು ಬಯಸಿದ್ದರು ಎಂಬುದರ ಬಗ್ಗೆಯೂ ಮಾತನಾಡಿದರು. ಆದರೆ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಏಕೆ ಹಿಂತೆಗೆದುಕೊಳ್ಳಲಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದರು.
“ಕೋವಿಡ್ ಖಂಡಿತವಾಗಿಯೂ ನಮ್ಮೆಲ್ಲರ ಬದುಕಿನಲ್ಲಿ ಒಂದು ಪಾತ್ರವನ್ನು ವಹಿಸಿದೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅಂತಾರರಾಷ್ಟ್ರೀಯ ದೃಷ್ಟಿಕೋನದಿಂದ, ಹೇಳುವುದಾದರೆ 2015ರ ವಿಶ್ವಕಪ್ ವೇಳೆ ಆಘಾತ ಉಂಟಾಗಿತ್ತು. ಅದರಿಂದ ಹೊರಬರಲು ನನಗೆ ಸ್ವಲ್ಪ ಸಮಯ ಹಿಡಿಯಿತು. ನಂತರ,ನಾನು ತಂಡಕ್ಕೆ ಮರಳಿದಾಗ ಮತ್ತು ನಾನು ಬದ್ಧನಾಗಲು ಸಿದ್ಧಗೊಂಡಿದ್ದೆ. ಆದರೆ, ಆ ಸಮಯದಲ್ಲಿ ನನಗೆ ನಿಜವಾಗಿಯೂ ಅಗತ್ಯವಿರುವ ಅದೇ ಮಾದರಿ ತಂಡದಲ್ಲಿ ಇರಲಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ನನ್ನ ಹೃದಯ ಆರ್ಸಿಬಿಯಲ್ಲೇ ಇದೆ ಎಂದ ಮಿಸ್ಟರ್ 360
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಮರಳಲು ಬಯಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ. 11 ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿದ ಡಿವಿಲಿಯರ್ಸ್ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಆದರೂ ಅವರಿಗೆ ಆರ್ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ.
ಇದನ್ನೂ ಓದಿ : Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ
ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.
“ನಾನು ಹಾಗೆ ಭಾವಿಸುತ್ತೇನೆ. ನನ್ನ ಹೃದಯವು ಆರ್ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.