ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಅತ್ಯಂತ ರೋಚಕವಾಗಿ ಸಾಗಿದ, ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಸಣ್ಣ ಮೊತ್ತದ ಮೇಲಾಟದಲ್ಲಿ ಕೊನೆಗೂ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ 8 ರನ್ ಅಂತರ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರೇವೇಶಿಸಿದೆ. ಆಫ್ಘಾನ್ ಗೆಲುವಿನಿಂದ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಒಂದೊಮ್ಮೆ ಬಾಂಗ್ಲಾ ಗೆಲ್ಲುತ್ತಿದ್ದರೆ ರನ್ರೇಟ್ ಆಧಾರದಲ್ಲಿ ಮುಂದಿದ್ದ ಆಸೀಸ್ಗೆ ಸೆಮಿ ಟಿಕೆಟ್ ಲಭಿಸುತ್ತಿತ್ತು.
ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್ ಹೋರಾಟದ ನೆರವಿನಿಂದ 5 ವಿಕೆಟ್ಗೆ 115 ರನ್ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್ ಕಡಿತಗೊಳಿಸಿ 19 ಓವರ್ಗೆ 114 ರನ್ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್ನಲ್ಲಿ 105 ರನ್ಗೆ ಸರ್ವಪತನ ಕಂಡಿತು.
ಕಳೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಅಫಫಾನಿಸ್ತಾದ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ. ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಸೋಲು ಕಂಡ ಪರಿಣಾಮ ಆಫ್ಘಾನ್ಗೆ ಸೆಮಿಫೈನಲ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸಾಕಿತ್ತು. ಅದರಂತೆ ಆಫ್ಘನ್ ಈ ಪಂದ್ಯ ಗೆದ್ದು ಸೆಮಿಗೆ ಅರ್ಹತೆ ಪಡೆಯಿತು. ಜೂನ್ 26ರಂದು ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘನ್ ತಂಡ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ.
ಇದನ್ನೂ ಓದಿ Rohit Sharma: ಬಾಬರ್ ಅಜಂ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮ
ಲಿಟ್ಟನ್ ದಾಸ್ ಅರ್ಧಶತಕ ವ್ಯರ್ಥ
ಚೇಸಿಂಗ್ ವೇಳೆ ಬಾಂಗ್ಲಾದೇಶ ಕೂಡ ಆಫ್ಘನ್ ತಂಡದಂತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಆರಂಭಕಾರ ಲಿಟ್ಟನ್ ದಾಸ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಸಾಥ್ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ದಾಸ್ ಕೊನೆಯ ತನಕ ಬ್ಯಾಟಿಂಗ್ ನಡೆಸಿ ಅಜೇಯ 54 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್ ಹೋರಾಟ ವ್ಯರ್ಥಗೊಂಡಿತು. ಸಣ್ಣ ಮೊತ್ತ ಬಾರಿಸಿದರೂ ಕೂಡ ಆಫ್ಘನ್ ಬೌಲರ್ಗಳು ಶಕ್ತಿ ಮೀರಿ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ನಾಯಕ ರಶೀದ್ ಖಾನ್ ಮತ್ತು ನವೀನ್ ಉಲ್ ಹಕ್ ತಲಾ 4 ವಿಕೆಟ್ ಬೇಟೆಯಾಡಿ ಬಾಂಗ್ಲಾ ಬ್ಯಾಟರ್ಗಳ ಸೊಕ್ಕಡಗಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೊರತುಪಡಿಸಿ ಉಳಿದ ಯಾವ ಬ್ಯಾಟರ್ಗಳು ಕೂಡ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಇಬ್ರಾಹಿಂ ಜದ್ರಾನ್(18),ಅಜ್ಮತುಲ್ಲಾ(10), ನಬಿ(1) ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ರಹಮಾನುಲ್ಲಾ ಗುರ್ಬಾಜ್ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿದರು. ಇವರ ಈ ಬ್ಯಾಟಿಂಗ್ ಹೋರಾಟದಿಂದ ತಂಡ 100ರ ಗಡಿ ದಾಟಿತು. ಬಾಂಗ್ಲಾ ಪರ ರಿಶಾದ್ ಹೊಸೈನ್ 26 ರನ್ಗೆ 3 ವಿಕೆಟ್ ಕಿತ್ತು ಮಿಂಚಿದರು.