ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಮಂಗಳವಾರ ನಡೆದ ಮಳೆ ಪೀಡಿತ ಬಾಂಗ್ಲಾದೇಶ(AFG vs BAN) ವಿರುದ್ಧದ ಸೂಪರ್-8 ಪಂದ್ಯದಲ್ಲಿ ಡಕ್ವರ್ತ್ ಯೂಯಿಸ್ ನಿಯಮದನ್ವಯ ಅಫಘಾನಿಸ್ತಾನ 8 ರನ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ಆಘ್ಫನ್ ತಂಡದ ಕೋಚ್ ಜೊನಾಥನ್ ಟ್ರಾಟ್(Jonathan Trott) ಅವರು ಆಟಗಾರರಿಗೆ ನೀಡಿದ ಸಲಹೆಯೊಂದರ ವಿಡಿಯೊ ವೈರಲ್ ಆಗಿದೆ.
ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್ ಹೋರಾಟದ ನೆರವಿನಿಂದ 5 ವಿಕೆಟ್ಗೆ 115 ರನ್ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್ ಕಡಿತಗೊಳಿಸಿ 19 ಓವರ್ಗೆ 114 ರನ್ ಗೆಲುವಿನ ಗುರಿ ನೀಡಲಾಯಿತು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟ ಮಾತ್ರ ಆಗಾಗ ಕಂಡು ಬರುತ್ತಿತ್ತು.
ಡಕ್ವರ್ತ್ ಲೂಯಿಸ್ ನಿಯದ ಪ್ರಕಾರ ಅಫಘಾನಿಸ್ತಾನ ತಂಡ ಮುಂದೆ ಇದ್ದ ವೇಳೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡುಬಂತು. ಈ ವೇಳೆ ಡಗೌಟ್ನಲ್ಲಿದ್ದ ಕೋಚ್ ಜೊನಾಥನ್ ಟ್ರಾಟ್ ಅವರು ನಿಧಾನವಾಗಿ ಆಡಿ… ಕೊಂಚ ಸಮಯ ವ್ಯರ್ಥ ಮಾಡುವಂತೆ ಸೂಚನೆ ನೀಡಿದರು. ಕೋಚ್ ಸಲಹೆಯಂತೆ ಸ್ಲಿಪ್ನಲ್ಲಿ ನಿಂತಿದ್ದ ಗುಲ್ಬದಿನ್ ನೈಬ್ ಅವರು ಏಕಾಏಕಿ ಕಾಲು ನೋವಿನಂತೆ ಕುಸಿದು ಬಿದ್ದರು. ಬಳಿಕ ಫಿಸಿಯೊ ಬಂದು ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವಿಡಿಯೊ ಇದೀಗ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ಕಂಡು ಗುಲ್ಬದಿನ್ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ಕಮೆಂಟ್ ಮಾಡಿದ್ದಾರೆ. ಸಣ್ಣ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್ನಲ್ಲಿ 105 ರನ್ಗೆ ಸರ್ವಪತನ ಕಂಡಿತು.
ಇದನ್ನೂ ಓದಿ AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟ ಆಫ್ಘನ್; ಟೂರ್ನಿಯಿಂದ ಹೊರಬಿದ್ದ ಆಸೀಸ್
ಚೇಸಿಂಗ್ ವೇಳೆ ಬಾಂಗ್ಲಾದೇಶ ಕೂಡ ಆಫ್ಘನ್ ತಂಡದಂತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಆರಂಭಕಾರ ಲಿಟ್ಟನ್ ದಾಸ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಸಾಥ್ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ದಾಸ್ ಕೊನೆಯ ತನಕ ಬ್ಯಾಟಿಂಗ್ ನಡೆಸಿ ಅಜೇಯ 54 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್ ಹೋರಾಟ ವ್ಯರ್ಥಗೊಂಡಿತು. ಸಣ್ಣ ಮೊತ್ತ ಬಾರಿಸಿದರೂ ಕೂಡ ಆಫ್ಘನ್ ಬೌಲರ್ಗಳು ಶಕ್ತಿ ಮೀರಿ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ನಾಯಕ ರಶೀದ್ ಖಾನ್ ಮತ್ತು ನವೀನ್ ಉಲ್ ಹಕ್ ತಲಾ 4 ವಿಕೆಟ್ ಬೇಟೆಯಾಡಿ ಬಾಂಗ್ಲಾ ಬ್ಯಾಟರ್ಗಳ ಸೊಕ್ಕಡಗಿಸಿದರು.