Site icon Vistara News

Badminton Championship : 58 ವರ್ಷದ ಬಳಿಕ ಭಾರತಕ್ಕೆ ಸಿಕ್ಕಿತು ಚಿನ್ನದ ಪದಕ, ಗೆದ್ದವರು ಯಾರು?

after-58-years-india-got-the-gold-medal-who-won-it

#image_title

ದುಬೈ: ಭಾರತದ ಬ್ಯಾಡ್ಮಿಂಟನ್ ತಾರೆಗಳಿಬ್ಬರು ದೊಡ್ಡ ಸಾಧನೆ ಮಾಡಿದ್ದಾರೆ. 58 ವರ್ಷದ ಬಳಿಕ ಭಾರತಕ್ಕೆ ಬ್ಯಾಡ್ಮಿಂಟನ್ ಟೂರ್ನಿಯೊಂದಲ್ಲಿ (Badminton Championship) ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಅವರು ಆಧುನಿಕ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತ ಪರ ದೊಡ್ಡ ಸಾಧನೆ ಮಾಡಿದ್ದಾರೆ. ಅವರೇ ಭಾರತೀಯ ಯುವ ತಾರೆಗಳಾದ ಸಾತ್ವಿಕ್‌ ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ. ದುಬೈನಲ್ಲಿ ನಡೆದಿದ್ದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್​ನ ಪುರುಷರ ಡಬಲ್ಸ್​ನಲ್ಲಿ ಅವರು ಚಾಂಪಿಯನ್ ಆಗಿದ್ದಾರೆ.

ಭಾನುವಾರ ನಡೆದಿದ್ದ ಪುರುಷರ ಡಬಲ್ಸ್‌ ವಿಭಾಗದ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಒಂಗ್ ಯೂ ಸಿನ್ ಮತ್ತು ಟಿಯೋ ಈ ಯಿ ಜೋಡಿಯ ವಿರುದ್ಧ ಭಾರತದ ಜೋಡಿ 16-21, 21-17, 21-19 ಗೇಮ್​ಗಳಿಂದ ಜಯ ಸಾಧಿಸಿದ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮೊದಲ ಗೇಮ್‌ನಲ್ಲಿ 16-21 ಅಂತರದಲ್ಲಿ ಸಾತ್ವಿಕ್​ ಮತ್ತು ಚಿರಾಗ್​ ಸೋತು ಹಿನ್ನಡೆ ಅನುಭವಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿ 21-17 ಹಾಗೂ ಮೂರನೇ ಗೇಮ್‌ನಲ್ಲಿ 21-19 ಅಂತರದಲ್ಲಿ ಜಯ ಸಾಧಿಸಿ ಸಂಭ್ರಮಿಸಿದರು.

ಹಿಂದೆ ಯಾರು ಗೆದ್ದಿದ್ದರು?

1965ರಲ್ಲಿ ಭಾರತದ ದಿನೇಶ್ ಖನ್ನಾ ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್ಸ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಅದುವೇ ಈ ಟೂರ್ನಿಯಲ್ಲಿ ಭಾರತದ ಪಾಲಿಗೆ ಕೊನೇ ಚಿನ್ನವಾಗಿದೆ. ಇದೀಗ ಐದು ದಶಕದ ಬಳಿಕ ಸಾತ್ವಿಕ್‌ ಹಾಗೂ ಚಿರಾಗ್ ಜೋಡಿಯು ಚಾಂಪಿನ್​ ಆಗಿದ್ದಾರೆ. ಇದು . ಏಷ್ಯಾ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತಕ್ಕೆ ಬಂದ ಎರಡನೇ ಚಿನ್ನದ ಪದಕ. ಇದೇ ಟೂರ್ನಿಯ 1971ರ ಆವೃತ್ತಿಯಲ್ಲಿ ದೀಪು ಘೋಷ್​ ಹಾಗೂ ರಮಣ್ ಘೋಷ್​ ಜೋಡಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಇದು ಮೂರನೇ ಪ್ರಶಸ್ತಿ ಎನಿಸಿಕೊಂಡಿದೆ.

ಐದು ದಶಕಗಳ ಬಳಿಕ ಚಿನ್ನದ ಪದಕ ಗೆದ್ದ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆಗಳನ್ನು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಹಿಮಂತ ಬಿಸ್ವಾ ಅವರು ಶ್ಲಾಘಿಸಿದ್ದು, 20 ಲಕ್ಷ ರೂ. ಬಹುಮಾನವನ್ನು ಪ್ರಕಟಿಸಿದ್ದಾರೆ.

ಮೋದಿಯಿಂದ ಗುಣಗಾನ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಸಾತ್ವಿಕ್‌ ಹಾಗೂ ಚಿರಾಗ್ ಜೋಡಿಯ ಸಾಧನೆಯನ್ನು ಟ್ವಿಟರ್ ಮೂಲಕ ಕೊಂಡಾಡಿದ್ದಾರೆ. “ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್ಸ್‌ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಉತ್ತುಂಗಕಕ್ಕೇರಿಸಿರುವ ಸಾತ್ವಿಕ್‌ ಹಾಗೂ ಚಿರಾಗ್ ಜೋಡಿಯ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಈ ಇಬ್ಬರಿಗೂ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಈ ಜೋಡಿಯು ಬ್ಯಾಡ್ಮಿಂಟನ್ ಜೀವನದಲ್ಲಿ ಇನ್ನು ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮತ್ತಷ್ಟು ಎತ್ತರಕ್ಕೇರಲಿ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : IPL 2023 : 1000ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್​​ ತಂಡಕ್ಕೆ ಜಯ, ಜೈಸ್ವಾಲ್​ ಶತಕ ವ್ಯರ್ಥ

ಚಿರಾಗ್ ಹಾಗೂ ಸಾತ್ವಿಕ್ ಜೋಡಿಯು 2022ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು. ಅದೇ ರೀತಿ 2018ರಲ್ಲಿ ಜರುಗಿದ್ದ ಕಾಮನ್‌ವೆಲ್ತ್ ಗೇಮ್ಸ್​, ಬರ್ಮಿಂಗ್ಹಮ್​ನಲ್ಲಿ 2022ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಜೋಡಿ ಇತ್ತೀಚೆಗೆ ಬಾಸೆಲ್​ನಲ್ಲಿ ಸ್ವಿಸ್​ ಓಪನ್​ ಸೂಪರ್​ 300 ಟೂರ್ನಿಯಲ್ಲೂ ಚಿನ್ನದ ಪದಕ ಗೆದ್ದಿದ್ದರು.

Exit mobile version