ಬರ್ಮಿಂಗ್‌ಹ್ಯಾಮ್: ಮಂಗಳವಾರದಿಂದ(ಮಾರ್ಚ್ 14) ಇಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ(All England Badminton) ಭಾರತದ ಬ್ಯಾಡ್ಮಿಂಟನ್ ಪಟುಗಳು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 22 ವರ್ಷಗಳ ಭಾರತದ ಪ್ರಶಸ್ತಿ ಬರ ನೀಗಿತೇ ಎಂಬುವುದು ಈ ಟೂರ್ನಿಯ ಕುತೂಹಲವಾಗಿದೆ.
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು, ಯುವ ಆಟಗಾರ ಲಕ್ಷ್ಯ ಸೇನ್(Lakshya Sen), ಸೈನಾ ನೆಹ್ವಾಲ್(Saina Nehwal) ಅವರು ಈ ಟೂರ್ನಿಯಲ್ಲಿ ಭಾರತದ ಪದಕ ಭರವಸೆ ಎನಿಸಿದ್ದಾರೆ. ಭಾರತದ ಪುಲ್ಲೇಲ ಗೋಪಿಚಂದ್ (2001) ಮತ್ತು ಪ್ರಕಾಶ್ ಪಡುಕೋಣೆ (1980) ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿತ್ತು. 2015ರಲ್ಲಿ ಸೈನಾ ನೆಹ್ವಾಲ್, 2022ರಲ್ಲಿ ಲಕ್ಷ್ಯ ಸೇನ್ ಫೈನಲ್ ಪ್ರವೇಶಿಸಿದ್ದರೂ ಇಲ್ಲಿ ಮೇಲುಗೈ ಸಾಧಿಸಲಾಗದೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಳೆದ ಬಾರಿ ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ಲಕ್ಷ್ಯ ಸೇನ್ ಗೆಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ.
ಗಾಯದಿಂದ ಬಳಲಿ ಬಹಳ ದಿನಗಳ ಬಳಿಕ ಕಣಕ್ಕೆ ಇಳಿಯುತ್ತಿರುವ ಸಿಂಧು ಮತ್ತು ಲಕ್ಷ್ಯ ಅವರಿಗೆ ಮಲೇಷ್ಯಾ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸಂಪೂರ್ಣ ಚೇತರಿಕೆ ಕಂಡಿರುವ ಇವರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಅವರು ಚೀನಾ ತೈಪೆಯ ಚೊ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಿಂಧು ಅವರು ಚೀನಾದ ಜಾಂಗ್ ಯಿ ಮನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು ಚೀನಾದ ಹಾನ್ ಯು ಎದುರು ಸೆಣಸಾಟ ನಡೆಸಲಿದ್ದಾರೆ. ಉಳಿದಂತೆ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಂಡೊನೇಷ್ಯಾದ ಮಾರ್ಕಸ್ ಫರ್ನಾಲ್ಡಿ ಗಿಡಿಯೊನ್-ಕೆವಿನ್ ಸಂಜಯ ಸುಕಮುಲ್ಜೊ ಸವಾಲು ಎದುರಿಸಲಿದ್ದಾರೆ.