ಬೆಂಗಳೂರು: ಅಮೆರಿಕದ ಮೂಲದ ಒಟಿಟಿ ಫ್ಲ್ಯಾಟ್ಫಾರ್ಮ್ ಅಮೆಜಾನ್ ಪ್ರೈಮ್ (Amazon Prime) ಭಾರತದಲ್ಲೂ ಸಿಕ್ಕಾಪಟ್ಟೆ ಜನಪ್ರಿಯ. ಇಕಾಮರ್ಸ್ ಸಂಸ್ಥೆಯೂ ಇದರಲ್ಲಿ ಸೇರಿಕೊಂಡಿರುವ ಕಾರಣ ಅತಿ ಹೆಚ್ಚು ಮಂದಿ ಇದರ ಸಬ್ಸ್ಕ್ರೈಬ್ ಆಗಿದ್ದಾರೆ. ಈ ಒಟಿಟಿ ವೇದಿಕೆ ಇದೀಗ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನೂ ಮಾಡಲು ಮುಂದಾಗಿದೆ. ಹೀಗಾಗಿ ಮುಂದಿನ 2024ರ ಟಿ20 ವಿಶ್ವ ಕಪ್ ಸೇರಿದಂತೆ 2024ರಿಂದ 2027ರವರೆಗಿನ ಐಸಿಸಿ ಕ್ರಿಕೆಟ್ ಪಂದ್ಯಗಳು ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗಲಿದೆ. ಪ್ರೈಮ್ ಆ್ಯಪ್ ಇದ್ದವರು ಯಾವುದೇ ಅಡೆತಡೆಗಳು ಇಲ್ಲದೆ ಪಂದ್ಯಗಳನ್ನು ವೀಕ್ಷಿಸಬಹುದು. ವಿಷಯ ತಿಳಿದ ತಕ್ಷಣ ನಾವು ಸಂಭ್ರಮ ಪಡುವ ಅಗತ್ಯವಿಲ್ಲ. ಯಾಕೆಂದರೆ ನೇರ ಪ್ರಸಾರದ ಹಕ್ಕನ್ನು ಅಮಜಾನ್ ಕಂಪನಿ ಪಡೆದುಕೊಂಡಿರುವುದು ಆಸ್ಟ್ರೇಲಿಯಾದಲ್ಲಿ ಪ್ರಸಾರ ಮಾಡಲು ಮಾತ್ರ. ಹೀಗಾಗಿ ಭಾರತೀಯರಿಗೆ ಇದರ ಅನುಕೂಲವಿಲ್ಲ.
2024ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಟೂರ್ನಿಯಿಂದ ಮುಂದಿನ ನಾಲ್ಕು ವರ್ಷಗಳ ಕಾಲ ನಡೆಯಲಿರುವ ಎಲ್ಲಾ ಐಸಿಸಿ ಟೂರ್ನಿಗಳನ್ನು ಆಸ್ಟ್ರೇಲಿಯಾದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಈ ಒಪ್ಪಂದದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಅಂಡರ್ 19 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶೀಪ್ ಫೈನಲ್ ಪಂದ್ಯಗಳು ಸೇರಿಕೊಂಡಿವೆ. ಈ ಒಪ್ಪಂದವು ಎಲ್ಲಾ ಐಸಿಸಿ ಕ್ವಾಲಿಫೈಯರ್ ಮತ್ತು ಅಂಡರ್ 19 ವಿಶ್ವಕಪ್ ಟೂರ್ನಿಗಳನ್ನೂ ಒಳಗೊಂಡಿದೆ. ಹೊಸ ಪಾಲುದಾರಿಕೆಯು ಉಚಿತವಲ್ಲ ಎಂಬುದಾಗಿ ತಿಳಿಸಲಾಗಿದೆ
ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಹಕ್ಕುಗಳನ್ನು ಪಡೆದುಕೊಂಡಿರುವುದು ಇದೇ ಮೊದಲು ಮತ್ತು ಭಾರತದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯಗಳನ್ನು ಸ್ಟ್ರೀಮಿಂಗ್ ಮಾಡಿದ ನಂತರ ಜಾಗತಿಕವಾಗಿ ಕ್ರೀಡೆಗೆ ಕಾಲಿಟ್ಟಿರುವುದು ಇದು ಎರಡನೇ ಬಾರಿ.
ಕ್ರಿಕೆಟ್ ಪ್ರಸಾರ ಹಕ್ಕುಗಳ ಗಳಿಕೆಯಲ್ಲಿ ಆರ್ಥಿಕ ನಷ್ಟ ಎದುರಿಸುತ್ತಿರುವ ಫಾಕ್ಸ್ ಸ್ಪೋರ್ಟ್ಸ್ ಮತ್ತು ಸೆವೆನ್ ನೆಟ್ವರ್ಕ್ಗೆ ಇದು ಸವಾಲೆನಿಸಿದೆ. ಅಮೆಜಾನ್ ಪ್ರೈಮ್ ಪ್ರವೇಶದಿಂದ ಅಲ್ಲಿನ ನೇರ ಪ್ರಸಾರದ ಚಿತ್ರಣ ಬದಲಾಗಲಿದೆ.
ಯಾವೆಲ್ಲ ಟೂರ್ನಿಗಳ ನೇರ ಪ್ರಸಾರ
- ಪುರುಷರ ಟಿ 20 ವಿಶ್ವಕಪ್: ಯುಎಸ್ಎ / ವೆಸ್ಟ್ ಇಂಡೀಸ್ (ಜೂನ್ 2024)
- ಮಹಿಳಾ ಟಿ 20 ವಿಶ್ವಕಪ್: ಬಾಂಗ್ಲಾದೇಶ (ಸೆಪ್ಟೆಂಬರ್ 2024)
- ಪುರುಷರ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ (ಫೆಬ್ರವರಿ 2025)
- ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಇಂಗ್ಲೆಂಡ್ (ಜೂನ್ 2025)
- ಮಹಿಳಾ ಏಕದಿನ ವಿಶ್ವಕಪ್: ಭಾರತ (ಸೆಪ್ಟೆಂಬರ್ 2025)
- ಪುರುಷರ ಟಿ 20 ವಿಶ್ವಕಪ್: ಭಾರತ-ಶ್ರೀಲಂಕಾ (ಸೆಪ್ಟೆಂಬರ್ 2026)
- ಮಹಿಳಾ ಟಿ 20 ವಿಶ್ವಕಪ್: ಇಂಗ್ಲೆಂಡ್ (ಜೂನ್ 2026)
- ಮಹಿಳಾ ಚಾಂಪಿಯನ್ಸ್ ಟ್ರೋಫಿ: ಶ್ರೀಲಂಕಾ (ಫೆಬ್ರವರಿ 2027)
- ಪುರುಷರ ಏಕದಿನ ವಿಶ್ವಕಪ್: ದಕ್ಷಿಣ ಆಫ್ರಿಕಾ/ನಮೀಬಿಯಾ (ಅಕ್ಟೋಬರ್ 2027)
ಈ ಒಪ್ಪಂದವು ಸ್ಟ್ರೀಮಿಂಗ್ ಸೇವೆಗೆ ವಿಚಾರದಲ್ಲಿ ಹೊಸ ಮೈಲುಗಲ್ಲು ಮತ್ತು ಇದು ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ಅಭೂತಪೂರ್ವ ಅವಕಾಶ ಎಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಅಮೆಜಾನ್ ಪ್ರೈಮ್ ಮುಖ್ಯಸ್ಥ ಹುಶಿದಾರ್ ಖರಾಸ್ ಹೇಳಿದ್ದಾರೆ.
ಇದನ್ನೂ ಓದಿ : Ind vs SA : ಭಾರತ ವಿರುದ್ಧ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ
ಕ್ರಿಕೆಟ್ ವಿಶ್ವಕಪ್ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆವೃತ್ತಿಯನ್ನು ನೂರಾರು ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆಸ್ಟ್ರೇಲಿಯಾದ ಪ್ರೈಮ್ ಸದಸ್ಯರು ತಮ್ಮ ನೆಚ್ಚಿನ ಕ್ರಿಕೆಟ್ ತಂಡಗಳು ಮತ್ತು ಆಟಗಾರರು ಕ್ರಿಕೆಟ್ನ ಅತಿದೊಡ್ಡ ಬಹುಮಾನಕ್ಕಾಗಿ ಸ್ಪರ್ಧಿಸುವುದನ್ನು ಪ್ರೈಮ್ ವೀಡಿಯೊದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ ” ಎಂದು ಖರಾಸ್ ಹೇಳಿದ್ದಾರೆ.
ಅಮೆಜಾನ್ 2024 ರಲ್ಲಿ ಬಿಡುಗಡೆಯಾಗಲಿರುವ ಟೆಸ್ಟ್ ಸಾಕ್ಷ್ಯಚಿತ್ರದ ಮೂರನೇ ಸೀಸನ್ ಅನ್ನು ಘೋಷಿಸಿದೆ. ದಿ ಟೆಸ್ಟ್: ಎ ನ್ಯೂ ಎರಾ ಫಾರ್ ಆಸ್ಟ್ರೇಲಿಯಾ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಸಹ-ನಿರ್ಮಾಣದ ಸರಣಿಯಾಗಿದೆ. ಮೂರನೇ ಆವೃತ್ತಿಯು ಈ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಆಶಸ್ ಸರಣಿಯಲ್ಲಿ 2-2 ರಿಂದ ಕೊನೆಗೊಂಡಿತು.