Site icon Vistara News

IPL 2023 : ಫೈನಲ್​ ಪಂದ್ಯಕ್ಕೆ ಮೊದಲೇ ನಿವೃತ್ತಿ ಘೋಷಿಸಿದ ಸಿಎಸ್​ಕೆ ಬ್ಯಾಟರ್​!

Ambati Rayudu announces IPL retirement

#image_title

ಅಹಮದಾಬಾದ್​: ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಂಬಾಟಿ ರಾಯುಡು ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ನಿವೃತ್ತಿ ಘೋಷಿಸಿದ್ದಾರೆ. 2023ರ ಆವೃತ್ತಿಯ ಫೈನಲ್ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯಾವಳಿಯಲ್ಲಿ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಖಚಿತಪಡಿಸಿದ್ದಾರೆ. 2018 ರಿಂದ ಸಿಎಸ್ಕೆ ತಂಡದ ಭಾಗವಾಗಿರುವ ರಾಯುಡು ಫ್ರಾಂಚೈಸಿಯೊಂದಿಗೆ ಎರಡು ಟ್ರೋಫಿಗಳನ್ನು ಗೆದ್ದಿದ್ದಾರೆ. ಅವರು 2010ರಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದ್ದರು.

ಎರಡು ತಂಡಗಳು ಮುಂಬೈ ಮತ್ತು ಸಿಎಸ್ಕೆ. ಒಟ್ಟು 204 ಪಂದ್ಯಗಳು. 14 ಋತುಗಳು, 11 ಪ್ಲೇಆಫ್​ಗಳು, 8 ಫೈನಲ್​ ಪಂದ್ಯಗಳು. 5 ಟ್ರೋಫಿಗಳು. ಇದು ಸುಮಧುರ ಪ್ರಯಾಣವಾಗಿದೆ. ಐಪಿಎಲ್​​ನ ಫೈನಲ್ ಪಂದ್ಯ ನನ್ನ ಕೊನೆಯ ಪಂದ್ಯವಾಗಲಿದೆ ಎಂದು ನಾನು ನಿರ್ಧರಿಸಿದ್ದೇನೆ. ಈ ಟೂರ್ನಿಯಲ್ಲಿ ಆಡುವುದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಈ ವಿಚಾರದಲ್ಲಿ ಮರು ನಿರ್ಧಾರವಲ್ಲ ಎಂದು ಅಂಬಾಟಿ ರಾಯುಡು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

ರಾಯುಡು 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮೊದಲ ಪ್ರಶಸ್ತಿ ಗೆದ್ದಿದ್ದರು. ಇದು ಫ್ರಾಂಚೈಸಿಗೆ ಮೊದಲ ಪ್ರಶಸ್ತಿಯೂ ಆಗಿತ್ತು. ಆ ಋತುವಿನ ಎಲ್ಲ ಪಂದ್ಯಗಳಲ್ಲಿ ಅವರು ಆಡಿದ್ದರು. ಅಂತೆಯೇ 2015 ಮತ್ತು 2017 ರಲ್ಲಿ ಇನ್ನೂ ಎರಡು ಪ್ರಶಸ್ತಿಗಳನ್ನು ಆ ತಂಡದ ಪರವಾಗಿ ಗೆದ್ದಿದ್ದರು.

ಸಿಎಸ್​ಕೆ ತಂಡದಲ್ಲಿಯೂ ರಾಯುಡು ಪವರ್ ಹಿಟ್ಟರ್ ಆಗಿ ತಮ್ಮ ಖ್ಯಾತಿ ಬೆಳೆಸಿಕೊಂಡಿದ್ದರು. 2018ರಲ್ಲಿ ಚೆನ್ನೈ ತಂಡವು ಪ್ರಶಸ್ತಿಯನ್ನು ಎತ್ತಿಹಿಡಿದಾಗ ಸಿಎಸ್​ಕೆ ಜತೆ ಚೊಚ್ಚಲ ಋತುವಿನಲ್ಲಿ 16 ಪಂದ್ಯಗಳಲ್ಲಿ 602 ರನ್ ಗಳಿಸಿದ್ದಾರೆ. 149. 75 ಸ್ಟ್ರೈಕ್​​ರೇಟ್​​ನಲ್ಲಿ ಅವರು ರನ್​ ಗಳಿಸಿದ್ದ ಅವರಿಗೆ ಅದು ಸ್ಮರಣೀಯ ಋತು.

ಅವರು 2021 ರಲ್ಲಿ ವಿಜೇತ ತಂಡದ ಭಾಗವಾಗಿದ್ದರು, ಇದರಲ್ಲಿ ರಾಯುಡು 16 ಪಂದ್ಯಗಳಲ್ಲಿ 151.17 ಸ್ಟ್ರೈಕ್ ರೇಟ್ನಲ್ಲಿ ಹೊಡೆದರು.

ನಿವೃತ್ತಿ ವಾಪಸ್​ ಪಡೆದಿದ್ದರು

2022ನೇ ಆವೃತ್ತಿಗೆ ರಾಯುಡುಗೆ ಮರೆಯಲಾಗದ ವರ್ಷವಾಗಿತ್ತು. ಆ ವರ್ಷ ಸಿಎಸ್​ಕೆ 9ನೇ ಸ್ಥಾನ ಪಡೆದುಕೊಂಡು ಅವಮಾನ ಎದುರಿಸಿತ್ತು. ಇದೇ ಸಂದರ್ಭದಲ್ಲಿ ರಾಯುಡು ನಿವೃತ್ತಿ ಕೂಡ ಘೋಷಿಸಿದ್ದರು. ಬಳಿಕ ಯೂ ಟರ್ನ್​ ಹೊಡೆದ ಅವರು ಮತ್ತೆ ಸಿಎಸ್​ಕೆ ತಂಡವನ್ನು ಪ್ರತಿನಿಧಿಸುವುದಾಗಿ ಹೇಳಿದ್ದರು. ಈ ಬಾರಿ ಮತ್ತೆ ಹೇಳಿಕೆ ವಾಪಸ್ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

2023ರಲ್ಲಿ ರಾಯುಡು ಪ್ರದರ್ಶನ ಉತ್ತಮವಾಗಿರಲಿಲ್ಲ. ಇಂಪ್ಯಾಕ್ಟ್​ ಪ್ಲೇಯರ್​ ಆಗಿ 15 ಪಂದ್ಯಗಳಲ್ಲಿ ಆಡಿದ್ದಾರೆ. ಆದೆರ, 132.28 ಸ್ಟ್ರೈಕ್ ರೇಟ್ನೊಂದಿಗೆ 139 ರನ್ ಮಾತ್ರ ಗಳಿಸಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಕೆಲವೇ ಕೆಲವು ಆಟಗಾರರಲ್ಲಿ ರಾಯುಡು ಕೂಡ ಒಬ್ಬರು. ಅವರು 4239 ರನ್ ಗಳಿಸಿರುವ ರಾಯುಡು ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

Exit mobile version