ನವ ದೆಹಲಿ: ಶಕೀಬ್ ಅಲ್ ಹಸನ್ ಮೇಲೆ ಏಂಜೆಲೊ ಮ್ಯಾಥ್ಯೂಸ್ ಸೇಡು ತೀರಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತಮ್ಮ ವಿಶ್ವ ಕಪ್ ಪಂದ್ಯದಲ್ಲಿ (ICC World Cup 2023) ಮೊದಲ ಇನ್ನಿಂಗ್ಸ್ನಲ್ಲಿ ಶಕೀಬ್ ಅವರ ಮನವಿಯಿಂದಾಗಿ ಮ್ಯಾಥ್ಯೂಸ್ ಅವರನ್ನು ಟೈಮ್ಡ್ ಔಟ್ ಎಂದು ಘೋಷಿಸಲಾಗಿತ್ತು. ಇದು ಶ್ರೀಲಂಕಾ ತಂಡದ ಮಾಜಿ ಆಟಗಾರನನ್ನು ಕೆರಳಿಸಿತ್ತು. ಅನವಶ್ಯಕವಾಗಿ ಔಟ್ ಮಾಡಿದ್ದಾರೆ ಎಂಬ ಕೋಪ ವ್ಯಕ್ತಪಡಿಸಿದ್ದರು. ಅಂತೆಯೇ ಬಾಂಗ್ಲಾದೇಶ ಇನಿಂಗ್ಸ್ನಲ್ಲಿ ಶಕೀಬ್ ಅವರನ್ನು ಏಂಜೆಲೋ ಮ್ಯಾಥ್ಯೂಸ್ ಪೆವಿಲಿಯನ್ಗೆ ಕಳುಹಿಸಿದ್ದಾರೆ. ಈ ವೇಳೆ ಅವರು ಟೈಮ್ ಆಯಿತು ಹೋಗು ಎನ್ನುವಂತೆ ಸನ್ನೆ ಮಾಡುವ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.
ನಾಯಕ ಶಕಿಬ್ ಅಲ್ ಹಸನ್ ಪಂದ್ಯದಲ್ಲಿ 82 ರನ್ ಬಾರಿಸುವ ಮೂಲಕ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟಿದ್ದಾರೆ. ಆದರೆ ಮ್ಯಾಥ್ಯೂಸ್ ಎಸೆತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಅವರು ಅನವಶ್ಯಕವಾಗಿ ಟ್ರೋಲ್ ಆಗುವಂತಾಯಿತು.
ಮ್ಯಾಥ್ಯೂಸ್ ಯಾಕೆ ಔಟ್?
ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್(Angelo Mathews) ಅವರು ಬ್ಯಾಟಿಂಗ್ ನಡೆಸದೆಯೇ ಔಟ್ ಆಗಿರುವುದು ಭಾರಿ ಚರ್ಚೆಗೆ ಕಾರಣವಾಯಿತು. ಬ್ಯಾಟಿಂಗ್ ಆರಂಭಿಸಲು ತಡ ಮಾಡಿದ ಕಾರಣದಿಂದ ಅವರು ಟೈಮ್ಡ್ ಔಟ್(timed out) ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
ಅಸಲಿಗೆ ಔಟ್ ಆಗಲು ಕಾರಣವೇನು?
ನಾಲ್ಕನೇ ವಿಕೆಟ್ ಬಿದ್ದ ಬಳಿಕ ಆಡಲಿಳಿದ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್‌ಗೆ ಬಂದಾಗ ಹೆಲ್ಮೆಟ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅವರು ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್ ಮಾಡಿದ್ದಾರೆ. ಇದನ್ನು ಅಂಪೈರ್ ಕೂಡ ಮಾನ್ಯ ಮಾಡಿ ಓಟ್ ಎಂದು ತೀರ್ಪು ನೀಡಿದರು. ಆದರೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಎಲ್ಲರೂ ಅಚ್ಚರಿಯಿಂದ ಚರ್ಚಿಸತೊಡಗಿದರು.
ಔಟ್ ನೀಡಿದ ಬಳಿಕ ಮ್ಯಾಥ್ಯೂಸ್ ಕೂಡ ಅಂಪೈರ್ ಬಳಿಕ ಚರ್ಚೆ ನಡೆಸಿದರು. ನಾನು ಉದ್ದೇಶ ಪೂರ್ವಕವಾಗಿ ಈ ರೀತಿ ಸಮಯ ವ್ಯರ್ಥ ಮಾಡಿಲ್ಲ. ಎಂದು ಮನವರಿಕೆ ಮಾಡಿದರು. ಅಲ್ಲದೆ ಬಾಂಗ್ಲಾದೇಶ ನಾಯಕ ಶಕೀಬ್ ಅವರರಿಗೂ ತಮ್ಮ ಸಮಸ್ಯೆಯನ್ನು ತಿಳಿಸಿದರೂ ಆದರೆ ಇದಕ್ಕೆ ಶಕೀಬ್, ರೂಲ್ಸ್ ಪ್ರಕಾರ ನಾವು ಅಫೀಲ್ ಮಾಡಿದ್ದೇವೆ ಎಂದು ಹೇಳಿ ಸುಮ್ಮನಾದರು.
ಇದನ್ನೂ ಓದಿ: ICC World Cup 2023 : ಶ್ರೀಲಂಕಾ ವಿರುದ್ಧ ಬಾಂಗ್ಲಾ ತಂಡಕ್ಕೆ 3 ವಿಕೆಟ್ ವಿಜಯ
ಮ್ಯಾಥ್ಯೂಸ್ ಪೆವಿಲಿಯನ್ ಕಡೆ ಸಾಗುವ ವೇಳೆಯೂ ಬೇಸರಿಂದಲೇ ಹೆಜ್ಜೆ ಹಾಕಿದರು. ಅಲ್ಲದೆ ತಂಡದ ಸಿಬ್ಬಂದಿ ಬಳಿಯೂ ಇದೇ ವಿಚಾರವನ್ನು ಚರ್ಚಿಸಿದರು. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹಂಚಿಕೊಂಡಿದೆ. ಎಂಸಿಸಿ ಪ್ರಕಾರ, ಈ ಕೆಳಗಿನ ಸಂದರ್ಭಗಳಲ್ಲಿ ಬ್ಯಾಟರ್ ಅನ್ನು ಸಮಯ ಮೀರಿದ ಔಟ್ ಎಂದು ಪರಿಗಣಿಸಲಾಗುತ್ತದೆ.
ಐಸಿಸಿ ನಿಯಮ ಏನು ಹೇಳುತ್ತದೆ?
ಆರ್ಟಿಕಲ್ 40.1.1 ನಿಯಮದ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಕ್ರೀಸ್‌ಗೆ ಬರುವ ಆಟಗಾರ ನಿಗದಿತ ಸಮಯದಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅಂದರೆ 3 ನಿಮಿಷಗಳ ಒಳಗೆ ಚೆಂಡನ್ನು ಎದುರಿಸಬೇಕು. ಒಂದು ವೇಳೆ ಈ ಪ್ರಕ್ರಿಯೆಯನ್ನು ಬ್ಯಾಟರ್ ಪೂರೈಸದಿದ್ದರೆ, ಆಗ ಸಮಯ ಮೀರಿದ (ಟೈಮ್ಡ್ ಔಟ್) ಎಂದು ತೀರ್ಪು ನೀಡಲಾಗುತ್ತದೆ.
40.1.2 ನಿಯಮದ ಪ್ರಕಾರ, ಯಾವುದೇ ಬ್ಯಾಟರ್ ಹೆಚ್ಚಿನ ವಿಳಂಬದ ಬಳಿಕ ಕ್ರೀಸ್‌ಗೆ ಬಂದರೆ, ಸ್ಟ್ಯಾಂಡಿಂಗ್ ಅಂಪೈರ್‌ಗಳು 16.3ರ ಕಾರ್ಯವಿಧಾನದ ಅಡಿಯಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ಎದುರಾಳಿ ತಂಡದ ಆಟಗಾರರು ಔಟ್ಗೆ ಮನವಿ ಮಾಡಿದರೆ ಮಾತ್ರ. ಅಂಪೈರ್ ಅವರೇ ಸ್ವ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ಟೈಮ್ಡ್ ಔಟ್ ವಿಕೆಟ್ ಬೌಲಿಂಗ್ ನಡೆಸುತ್ತಿದ್ದ ಬೌಲರ್ಗೆ ಸಿಗುವುದಿಲ್ಲ. ಇದು ತಂಡಕ್ಕೆ ಸಿಗುತ್ತದೆ.