Site icon Vistara News

Anjali Jaiswal: ಯುಪಿ ಮೂಲದವರಾದರೂ ಕರ್ನಾಟಕದಲ್ಲಿ ಮಿಂಚುತ್ತಿರುವ ಟೇಕ್ವಾಂಡೊ ಚಾಂಪಿಯನ್ ಅಂಜಲಿ ಜೈಸ್ವಾಲ್

Anjali Jaiswal Taekwondo Martial arts

ಬೆಂಗಳೂರು: ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗುತ್ತದೆ, ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ. ಈ ಮಾತಿನಂತೆಯೇ ಸಾಧನೆ ಮಾಡಿದ ಗಟ್ಟಿಗಿತ್ತಿ ಅಂಜಲಿ ಜೈಸ್ವಾಲ್(Anjali Jaiswal)​. ಟೇಕ್ವಾಂಡೊ(Taekwondo) ಚಾಂಪಿಯನ್‌ಷಿಪ್‌ನಲ್ಲಿ ಇವರು ಈಗಾಗಲೇ ವಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಮಿಂಚಿದ್ದಾರೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸ್ಪರ್ಧಿ ಇರಾದೆಯಲ್ಲಿದ್ದಾರೆ. ಇವರ ಸಾಧನೆಯ ಕಥೆಯನ್ನು ವಿಸ್ತಾರ ನ್ಯೂಸ್​ ಜತೆ ಹಂಚಿಕೊಂಡಿದ್ದಾರೆ.


ಉತ್ತರ ಪ್ರದೇಶ ಮೂಲದವರು…


ಅಂಜಲಿ ಜೈಸ್ವಾಲ್​ ಅವರು ಉತ್ತರ ಪ್ರದೇಶ ಬನಾರಸ್​ ಮೂಲದವರು. ಕ್ರೀಡಾ ಕುಟುಂಬದ ಹಿನ್ನೆಲೆಯಿಂದಲೇ ಬೆಳೆದು ಬಂದ ಇವರು ಟೇಕ್ವಾಂಡೊ ಮಾರ್ಷಲ್ ಆರ್ಟ್ಸ್‌ನಲ್ಲಿ(Taekwondo Martial arts) ಮಿಂಚಿದ್ದು ಕರ್ನಾಟಕದಲ್ಲಿ. ಅಲ್ಲದೆ ಇವರು ಕರ್ನಾಟಕ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ. 18 ವರ್ಷದಲ್ಲಿ ಈ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು. 2019ರಲ್ಲಿ ಕರ್ನಾಟಕಕ್ಕೆ ವಲಸೆ ಬಂದರು. ಇಲ್ಲಿ ಮಾಸ್ಟರ್​ ಪ್ರದೀಪ್ ಜನಾರ್ದನ್ ಅವರ ಮಾರ್ಗದರ್ಶನದಲ್ಲಿ ಪಳಗಿದರು.


ಪದಕ ಸಾಧನೆ


52 ಕೆಜಿ ವೈಯಕ್ತಿಕ ವಿಭಾಗದಲ್ಲಿ ಕಣಕ್ಕಿಳಿಯುವ ಇವರು ರಾಷ್ಟ್ರಮಟ್ಟದಲ್ಲಿ ಬೆಳ್ಳಿ, ರಾಜ್ಯ ಮಟ್ಟದಲ್ಲಿ ಚಿನ್ನ ಮತ್ತು ಕಂಚು ಗೆದ್ದ ಸಾಧನೆ ಮಾಡಿದ್ದಾರೆ. ಜತೆಗೆ ಕರ್ನಾಟಕ ರಾಜ್ಯ ಮಟ್ಟದ ‘ಬೆಸ್ಟ್​ ಮಹಿಳಾ ಫೈಟರ್’​ ಎಂಬ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡಿದ್ದಾರೆ. ವಲಯ ಮಟ್ಟದ ಟೂರ್ನಿಗಳಲ್ಲಿಯೂ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ Rohit Sharma: ಶತಕದ ಮೂಲಕ ಬರೋಬ್ಬರಿ 4 ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​


ವೃತ್ತಿಯಲ್ಲಿ ಶಿಕ್ಷಕಿ…


ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನ ಜೆಸಿಪಿಆರ್​ಒ ಅಕಾಡೆಮಿ ಸ್ಕೂಲ್​ನಲ್ಲಿ (JCPRO Academy) ವಿಜ್ಞಾನ ವಿಭಾಗದ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಸಸ್ಯಶಾಸ್ತ್ರದಲ್ಲಿ ಸಂಶೋಧನೆಯನ್ನೂ ಕೂಡ ಮಾಡುತ್ತಿದ್ದಾರೆ. ಇದರ ಜತೆಗೆ ಟೇಕ್ವಾಂಡೊದಲ್ಲಿಯೂ ಮಿಂಚುತ್ತಿದ್ದಾರೆ. ವೃತ್ತಿಯ ಜತೆಗೆ ಟೇಕ್ವಾಂಡೊದಲ್ಲಿ ಹೇಗೆ ತೊಡಗಿಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲಸ ಮುಗಿಸಿ ಬಂದ ಬಳಿಕ ಪ್ರತಿ ಸಂಜೆ ಕನಿಷ್ಠ 3 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತೇನೆ ಎಂದರು.


ಕರ್ನಾಟಕ ಮತ್ತು ಕನ್ನಡದ ಬಗ್ಗೆಯೂ ಅಭಿಮಾನ ವ್ಯಕ್ತಪಡಿಸಿದ ಇವರು, ಇಂದು ನನ್ನ ಹೆಸರು ನಾಲ್ಕು ಮಂದಿಗೆ ಪರಿಚಿತವಾಗಲು ಕರ್ನಾಟಕವೇ ಕಾರಣ. ಇಲ್ಲಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಮುಂದೆಯೂ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಈ ರಾಜ್ಯವನ್ನೇ ಪ್ರತಿನಿಧಿಸಿ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವೆ ಎಂದರು.

Exit mobile version