Site icon Vistara News

Asian Games 2023 : ಏಷ್ಯನ್​ ಗೇಮ್ಸ್​​​ಗೆ ಅರುಣಾಚಲ ಪ್ರದೇಶದ ಅಥ್ಲಿಟ್​ಗೆ ಚೀನಾ ಪ್ರವೇಶ ನಿರಾಕರಣೆ, ಭಾರತದ ಖಂಡನೆ; ಏನಿದು ಹೊಸ ವಿವಾದ?

Anurag Tahakur

ನವ ದೆಹಲಿ: ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್​ ಗೇಮ್ಸ್​ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್​ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಿವಾದವಿದೆ. ಹೀಗಾಗಿ ವುಶು ಸ್ಪರ್ಧಿಗಳಿಗೆ ಅಲ್ಲಿನ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಅವರಿಗೆ ಮಾನ್ಯತಾ ಪತ್ರಗಳನ್ನು ಡೌನ್​ಲೋಡ್​ ಮಾಡಲು ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಉಳಿದಿದ್ದಾರೆ. ಚೀನಾದ ಈ ನೀತಿಗೆ ಭಾರತ ಖಂಡನೆ ವ್ಯಕ್ತಪಡಿಸಿದ್ದು, ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆತಿಥೇಯರ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.

ಚೀನಾ ತಾರತಮ್ಯವನ್ನು ವಿರೋಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.

ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟಕ್ಕೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಪೂರ್ವನಿಯೋಜಿತ ತಾರತಮ್ಯ ಎಸಗಿದೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ ಎಂದು ಗೃಹ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ವಾಸಸ್ಥಳ ಅಥವಾ ಜನಾಂಗೀಯತೆಯ ಆಧಾರದ ಮೇಲೆ ಭಾರತೀಯ ನಾಗರಿಕರನ್ನು ವಿಭಿನ್ನವಾಗಿ ಪರಿಗಣಿಸುವುದನ್ನು ಭಾರತ ವಿರೋಧಿಸುತ್ತದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಭಾರತವು ಕುರಿತು ತಮ್ಮ ಬಲವಾದ ಪ್ರತಿಭಟನೆ ದಾಖಲಿಸಿದೆ. ಏಷ್ಯನ್ ಕ್ರೀಡಾಕೂಟದ ಸ್ಫೂರ್ತಿ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಭಾರತ ಹೇಳಿದೆ.

ಚೀನಾದ ಕ್ರಮದ ವಿರುದ್ಧ ನಮ್ಮ ಪ್ರತಿಭಟನೆಯ ಸಂಕೇತವಾಗಿ, ಭಾರತದ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಚೀನಾಕ್ಕೆ ನಿಗದಿಯಾಗಿದ್ದ ಭೇಟಿಯನ್ನು ರದ್ದುಗೊಳಿಸಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಸರ್ಕಾರ ಕಾಯ್ದಿರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಡೀ ಅರುಣಾಚಲ ಪ್ರದೇಶ ಚೀನಾದ ವಾದವನ್ನು ತಿರಸ್ಕರಿಸಿದೆ: ಕೇಂದ್ರ ಸಚಿವ ಕಿರಣ್ ರಿಜಿಜು

ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸುವ ಚೀನಾದ ನಿರ್ಧಾರವನ್ನು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ರಾಜ್ಯದ ಜನರು ತಮ್ಮ ಭೂಮಿಯ ಮೇಲಿನ ಚೀನಾದ ಹಕ್ಕನ್ನು ದೃಢವಾಗಿ ವಿರೋಧಿಸುತ್ತದೆ. ಹೀಗಾಗಿ ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಕರೆ ನೀಡಿದರು.

ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ಅರುಣಾಚಲ ಪ್ರದೇಶದ ನಮ್ಮ ವುಶು ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿದ ಚೀನಾದ ಈ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಕ್ರೀಡಾ ಸ್ಫೂರ್ತಿ ಮತ್ತು ಏಷ್ಯನ್ ಕ್ರೀಡಾಕೂಟದ ನಡವಳಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸುತ್ತದೆ, ಇದು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ” ಎಂದು ಅವರು ರಿಜಿಜು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಅರುಣಾಚಲ ಪ್ರದೇಶವು ವಿವಾದಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಸಂಪೂರ್ಣ ಜನರು ತನ್ನ ಭೂಮಿ ಮತ್ತು ಜನರ ಮೇಲೆ ಚೀನಾದ ಯಾವುದೇ ಕಾನೂನುಬಾಹಿರ ಹಕ್ಕನ್ನು ದೃಢವಾಗಿ ವಿರೋಧಿಸುತ್ತಾರೆ. ಚೀನಾದ ಕಾನೂನುಬಾಹಿರ ಕ್ರಮವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಂತ್ರಿಸಬೇಕು ಎಂದು ಅವರು ಹೇಳಿದರು.

ಈ ವಿಷಯವನ್ನು ಎರಡೂ ಸರ್ಕಾರಗಳೊಂದಿಗೆ ತೆಗೆದುಕೊಳ್ಳಲಾಗುತ್ತಿದೆ: ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಆಯೋಜಕರ ಕಾರ್ಯಕಾರಿ ಗುಂಪಿನೊಂದಿಗೆ ಚರ್ಚಿಸಲಾಗುವುದು. ಎರಡೂ ದೇಶಗಳ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ನಾವು ನಿನ್ನೆ ಕಾರ್ಯಕಾರಿ ಗುಂಪಿನೊಂದಿಗೆ ಸಭೆ ನಡೆಸಿದ್ದೇವೆ. ಅವರು ಇದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಇದು ನಮ್ಮೊಳಗೂ ಚರ್ಚೆಯಲ್ಲಿದೆ. ನಾವು ಅದರ ಒಸಿಎ ಕಡೆಯಿಂದ ಬಂದಿದ್ದೇವೆ. ನಾವು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಏನಿದು ವಿವಾದ?

ಅರುಣಾಚಲ ಪ್ರದೇಶದ ವುಶು ಅಥ್ಲೀಟ್​​ಗಳು ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ಗಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಮ್ಗು ಅವರನ್ನೊಳಗೊಂಡ ಮೂವರು ತಂಡದ ಸದಸ್ಯರಿಗೆ ಚೀನಾ ಪ್ರವೇಶಕ್ಕೆ ಅವಕಾಶ ಸಿಗಲಿರಲಿಲ್ಲ. ಅವರು ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ

ವರದಿಗಳ ಪ್ರಕಾರ, ಹ್ಯಾಂಗ್ಝೌ ​ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯು ಮೂವರು ಕ್ರೀಡಾಪಟುಗಳಿಗೆ ಮಾನ್ಯತಾ ಪತ್ರ ನೀಡಿದೆ. ಆದರೆ ಅವರ ಪತ್ರಗಳನ್ನು ಮೌಲ್ಯಮಾಪನಕ್ಕಾಗಿ ಡೌನ್ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಇತರ ಕ್ರೀಡಾಪಟುಗಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಐಜಿಐ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಚೀನಾಕ್ಕೆ ತೆರಳಲು ಸಜ್ಜಾಗಿದ್ದ 11 ಸದಸ್ಯರ ವುಶು ತಂಡದ ಭಾಗವಾಗಿದ್ದರು ಅವರೆಲ್ಲರೂ.

ಏಷ್ಯನ್ ಗೇಮ್ಸ್ ಗಾಗಿ ಭಾರತದ ಚೆಫ್-ಡಿ-ಮಿಷನ್ ಭೂಪೇಂದ್ರ ಸಿಂಗ್ ಬಜ್ವಾ ಈ ವಿಷಯವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಮತ್ತು ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯ ಗಮನಕ್ಕೆ ತಂದರು. ಇದಕ್ಕೂ ಮುನ್ನ ಚೆಂಗ್ಡುವಿನಲ್ಲಿ ನಡೆಯಲಿರುವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 12 ಸದಸ್ಯರ ತಂಡ ಪ್ರಯಾಣಿಸುತ್ತಿದ್ದಾಗ ದೆಹಲಿಯ ಚೀನಾದ ರಾಯಭಾರ ಕಚೇರಿ ಮೂವರು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾಗಳನ್ನು (ಅಧಿಕೃತ ಮುದ್ರೆಯೊತ್ತದ ಅನುಮತಿ ಪತ್ರ) ನೀಡಿತ್ತು. ಆ ಸಮಯದಲ್ಲಿ ಭಾರತವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ ನಂತರ ಪ್ರವಾಸ ರದ್ದುಗೊಳಿಸಲಾಯಿತು.

ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ಹಿಂದೆಯೂ ಸ್ಟಾಂಪ್ ವೀಸಾ ನೀಡಲು ಚೀನಾ ನಿರಾಕರಿಸಿದೆ . 2011ರಲ್ಲಿ ಅರುಣಾಚಲ ಪ್ರದೇಶದ ಐವರು ಕರಾಟೆ ಪಟುಗಳಿಗೆ ಕ್ವಾನ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾ ನೀಡಲಾಗಿತ್ತು. ಏಪ್ರಿಲ್​​ನಲ್ಲಿ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಮರುನಾಮಕರಣವನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿತ್ತು.

ಚೀನಾದ ಹೊಸ ‘ಕಾನೂನುಬಾಹಿರ’ ನಕ್ಷೆ

ಈ ತಿಂಗಳ ಆರಂಭದಲ್ಲಿ, ಚೀನಾ ತನ್ನ ದೇಶದ ಹೊಸ ನಕ್ಷೆಯನ್ನು ಪ್ರಕಟಿಸಿ ಅರುಣಾಚಲ ಪ್ರದೇಶ ತನ್ನ ಭಾಗವೆಂದು ಹೇಳಿತ್ತು. ಇದು ಭಾರತವನ್ನು ಕೆರಳಿಸಿತ್ತು. ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್​ಸೈಟ್​ ಮತ್ತು ಅಲ್ಲಿನ ಗ್ಲೋಬಲ್ ಟೈಮ್ಸ್​ ಹೊಸ ನಕ್ಷೆಯನ್ನು ಹಂಚಿಕೊಂಡಿತ್ತು. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಗಳನ್ನು ತಮ್ಮ ಭೂಪ್ರದೇಶದ ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ.

ಈ ನಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್, ತೈವಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ವ್ಯಾಪಕವಾಗಿ ಟೀಕಿಸಿದವು. ಹಲವಾರು ಪ್ರತಿಭಟನೆಗಳ ಹೊರತಾಗಿಯೂ, ಚೀನಾ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಧಾರರಹಿತ ಪ್ರಾದೇಶಿಕ ಹಕ್ಕುಗಳನ್ನು ಸ್ಥಾಪಿಸುವುದನ್ನು ಮುಂದುವರಿಸಿದೆ.

ಇದನ್ನೂ ಓದಿ : G20 Summit 2023: ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ; ಆಫ್ರಿಕನ್ ಯೂನಿಯನ್ ಶ್ಲಾಘನೆ

ಏಪ್ರಿಲ್​ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಪ್ರಮಾಣೀಕರಿಸುವುದಾಗಿ ಚೀನಾ ಸರ್ಕಾರ ಹೇಳಿತ್ತು. ಆ ಸಮಯದಲ್ಲಿ, ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್​ ಎಂದಿತ್ತು. ಅಲ್ಲಿನ ಸರ್ಕಾರವು ಜಾಂಗ್ನಾನ್ ಎಂದು ಹೇಳಿಕೊಂಡಿತ್ತು. ಇದಲ್ಲದೆ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಹತ್ತಿರ ಪಟ್ಟಣವೊಂದನ್ನು ನಿರ್ಮಿಸಿದೆ.

ಇತ್ತ , ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತ ಅವಿಭಾಜ್ಯ ಅಂಗ ಎಂದು ಹೇಳಿದೆ ನವದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಜಿ 20 ಶೃಂಗಸಭೆಗೆ ಸುಮಾರು ಹತ್ತು ದಿನಗಳ ಮೊದಲು ಭಾರತ ಮತ್ತೊಂದು ಬಾರಿ ಇದನ್ನು ದೃಢಪಡಿಸಿತ್ತು.

Exit mobile version