Site icon Vistara News

Ashes 2023 : ಸತತ ಎರಡನೇ ಟೆಸ್ಟ್‌ ಪಂದ್ಯ ಗೆದ್ದ ಆಸ್ಟ್ರೇಲಿಯಾ

Ashes 2023

ಲಂಡನ್​: ಆ್ಯಶಸ್​ ಸರಣಿಯ (Ashes 2023) ಎರಡನೇ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್ ತಂಡ 43 ರನ್​ಗಳ ಸೋಲಿಗೆ ಒಳಗಾಗಿದೆ. ಬೆನ್​ಸ್ಟೋಕ್ಸ್ ಅವರ ವಿರೋಚಿತ ಶತಕದ (155 ರನ್​) ನಡುವೆಯೂ ಉಳಿದ ಆಟಗಾರರ ನೆರವು ಸಿಗದ ಕಾರಣ ಸೋಲಿನ ಸುಳಿಗೆ ಸಿಲುಕಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2-0 ಮುನ್ನಡೆಯನ್ನು ಪಡೆದುಕೊಂಡಿದೆ. ಎರಡನೇ ಪಂದ್ಯದ ಕೊನೇ ದಿನವಾದ ಭಾನುವಾರ ಇಂಗ್ಲೆಂಡ್ ಬಳಗದ ಗೆಲುವಿಗೆ 257 ರನ್​ಗಳ ಅವಶ್ಯಕತೆ ಇತ್ತು. ಆದರೆ, ಗುರಿ ಮೀರಲು ಇಂಗ್ಲೆಂಡ್​ ತಂಡಕ್ಕೆ ಸಾಧ್ಯವಾಗಲಿಲ್ಲ. ಇದರೊಂದಿಗೆ ಸರಣಿಗೆ ಗೆಲ್ಲುವುದಕ್ಕಾಗಿ ಇಂಗ್ಲೆಂಡ್​ ತಂಡ ಮಾಡಿದ್ದ ಬಜ್​ಬಾಲ್​ ತಂತ್ರ ಎರಡನೇ ಬಾರಿಯೂ ಕೈಕೊಟ್ಟಿತು.

ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಎರಡನೇ ಇನಿಂಗ್ಸ್​ನಲ್ಲಿ 371 ರನ್​ಗಳ ಅಗತ್ಯವಿತ್ತು. ಆದರೆ, 81 ಓವರ್​ಗಳನ್ನು ಎದುರಿಸಿದ ಆಂಗ್ಲರ ಪಡೆ 327 ರನ್​ಗೆ ಆಲ್ಔಟ್​ ಅಯಿತು. ಬೆನ್​ಸ್ಟೋಕ್ಸ್ ಹಾಗೂ ಬೆನ್​ ಡೆಕೆಟ್​ (83) ಉತ್ತಮ ಜತೆಯಾಟ ನೀಡುವ ಮೂಲಕ ಗೆಲುವಿನ ಅವಕಾಶ ಸೃಷ್ಟಿಸಿದ್ದರೂ ಉಳಿದ ಆಟಗಾರರಿಗೆ ಅಗತ್ಯ ನೆರವು ದೊರೆಯಲಿಲ್ಲ. ಹೀಗಾಗಿ ಮತ್ತೊಂದು ಪರಾಭವಕ್ಕೆ ಒಳಗಾಗಬೇಕಾಯಿತು.

ಬರ್ಮಿಂಗ್ಹಮ್​ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಇಂಗ್ಲೆಂಡ್​ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ಅತ್ಯಂತ ವಿರೋಚಿತವಾಗಿ ನಡೆದಿದ್ದ ಆ ಹಣಾಹಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2 ವಿಕೆಟ್​ ಗೆಲುವು ಸಾಧಿಸಿತ್ತು.

ಪಂದ್ಯದಲ್ಲಿ ಟಾಸ್​ ಗೆದ್ದಿದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಮಾಡಿತ್ತು. ಅದರೆ, ಸ್ಟಾರ್ ಬ್ಯಾಟರ್​ ಸ್ಟೀವ್ ಸ್ಮಿತ್ ಅವರ ಅಮೋಘ ಶತಕದ (110 ರನ್) ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್​​ನಲ್ಲಿ 416 ರನ್​ ಗಳಿಸಿತ್ತು. ಪ್ರತಿಯಾಗಿ ಬ್ಯಾಟ್​ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್​ಗಳು ಮಿಂಚಲು ವಿಫಲಗೊಂಡರು. ಬೆನ್​ ಡಕೆಟ್​ 98 ರನ್ ಬಾರಿಸಿದ ಹೊರತಾಗಿಯೂ 325 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ : Ashes 2023 : ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಟ್ಟಿಗೆದ್ದು ಶತಕ ಬಾರಿಸಿದ ಇಂಗ್ಲೆಂಡ್​ ನಾಯಕ ಬೆನ್​ಸ್ಟೋಕ್ಸ್​!

90 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟ್​ ಮಾಡಿದ ಆಸ್ಟ್ತೇಲಿಯಾ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಲಿಲ್ಲ. ಆರಂಭಿಕ ಆಟಗಾರ ಉಸ್ಮಾನ್​ ಖ್ವಾಜಾ (77) ರನ್ ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಕಠಿಣ 371 ರನ್​ಗಳ ಗುರಿಯನ್ನು ಒಡ್ಡಲು ನೆರವಾದರು. ಎರಡನೇ ಇನಿಂಗ್ಸ್​ನಲ್ಲಿಯೂ ಇಂಗ್ಲೆಂಡ್​ನ ಪ್ರಮುಖ ಆಟಗಾರರು ವೈಫಲ್ಯ ಕಂಡರು. ಡಕೆಟ್​ ಹಾಗೂ ಸ್ಟೋಕ್ಸ್​ ಪೈಪೋಟಿ ಒಡಿದ್ದರೂ ಆಸೀಸ್​ ವೇಗಿಗಳು ಅವರಿಗೆ ಪೆವಿಲಿಯನ್​ ಹಾದಿ ತೋರಿಸಿ ಗೆಲುವಿಗೆ ವೇದಿಕೆ ಸೃಷ್ಟಿಸಿಕೊಟ್ಟರು.

ವಿವಾದಗಳ ಸುಳಿ

ಪಂದ್ಯದ ಕೊನೇ ದಿನದ ಆಟ ಮತ್ತೊಂದು ಬಾರಿ ವಿವಾದಕ್ಕೆ ಕಾರಣವಾಯಿತು. ಇಂಗ್ಲೆಂಡ್​ ಬ್ಯಾಟರ್ ಜಾನಿ ಬೇರ್​ಸ್ಟೋವ್​ ಅವರ ರನ್​ಔಟ್​ ಈ ವಿವಾದಕ್ಕೆ ಕಾರಣ. ಕ್ಯಾಮೆರಾನ್ ಗ್ರೀನ್ ಅವರ ಎಸೆತಕ್ಕೆ ಆಡಲು ಪ್ರಯತ್ನಿಸದೇ ಹಾಗೆಯೇ ಬಿಟ್ಟಿದ್ದರೆ ಬೇರ್​ಸ್ಟೋವ್. ಅದು ಸೀದಾ ವಿಕೆಟ್​ ಕೀಪರ್ ಅಲೆಕ್ಸ್ ಕ್ಯೇರಿ ಅವರ ಗ್ಲವ್ಸ್​ನೊಳಗೆ ಸೇರಿಕೊಂಡಿತ್ತು. ಎಸೆತ ಮುಗಿಯಿತು ಎಂದುಕೊಂಡ ಬೇರ್​ಸ್ಟೋವ್ ಕ್ರೀಸ್ ಬಿಟ್ಟು ನಾನ್​ ಸ್ಟ್ರೈಕ್ ಎಂಡ್​ನಲ್ಲಿದ್ದ ಬೆನ್​ಸ್ಟೋಕ್ಸ್ ಅವರ ಬಳಿಗೆ ಹೋಗಲು ಮುಂದಾದರು. ಆದರೆ, ಕೀಪರ್​ ಕ್ಯೇರಿ ಚೆಂಡನ್ನು ವಿಕೆಟ್​ಗೆ ಎಸೆದು ಅಪೀಲ್ ಮಾಡಿದರು. ಮೂರನೇ ಅಂಪೈರ್​ ಔಟ್ ತೀರ್ಪು ಕೊಟ್ಟರು. ಇದು ಇಂಗ್ಲೆಂಡ್​ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಕೆರಳಿಸಿತು. ನಿಯಮದ ಪ್ರಕಾರ ಅದು ಔಟ್​ ಆಗಿದ್ದರೂ ಕ್ರೀಡಾ ಸ್ಫೂರ್ತಿಯ ವಿಚಾರಕ್ಕೆ ಬಂದಾಗ ಔಟ್ ಮಾಡಬಾರದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತಗೊಂಡವು. ಸಾಮಾಜಿಕ ಜಾಲತಾಣಗಳಲ್ಲಿ ಅದೇ ವಿಚಾರದ ಬಗ್ಗೆ ಜೋರು ಚರ್ಚೆಗಳು ನಡೆದವು.

Exit mobile version