ದುಬೈ: ಬಿಸಿಸಿಐ(BCCI) ಮತ್ತು ಪಿಸಿಬಿ(PCB) ಮಧ್ಯೆ ನಡೆಯುತ್ತಿದ್ದ ಪ್ರತಿಷ್ಠಿತ ಏಷ್ಯಾ ಕಪ್(Asia Cup 2023) ಆತಿಥ್ಯ ವಿವಾದ ಇದೀಗ ಬಹುತೇಕ ಅಂತ್ಯಗೊಂಡಂತೆ ಕಾಣುತ್ತಿದೆ. ಎಸಿಸಿ(Asian Cricket Council) ಮಂಡಳಿಯ ಅಧಿಕಾರಿಯಬ್ಬರು ಪಿಟಿಐಗೆ ನೀಡಿದ ಮಾಹಿತಿ ಪ್ರಕಾರ ಪಾಕಿಸ್ತಾನ ಪಟ್ಟು ಹಿಡಿದಿದ್ದ ಹೈಬ್ರಿಡ್ ಮಾಡೆಲ್ಗೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ಮೂಲಕ ಪಾಕ್ ಮೇಲುಗೈ ಸಾಧಿಸಿದಂತಾಗಿದೆ. ಸದ್ಯದ ಪ್ರಕಾರ ಟೂರ್ನಿಯ ನಾಲ್ಕು ಪಂದ್ಯಗಳು ಪಾಕಿಸ್ತಾನ ನಡೆಸಿ ಬಳಿಕದ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಏಷ್ಯಾ ಕಪ್ ಆರಂಭಕ್ಕೆ ಸರಿ ಸುಮಾರು ಒಂದು ವರ್ಷ ಬಾಕಿ ಇರುವಾಗಲೇ ಭಾರತ ಮತ್ತು ಪಾಕ್ ಕ್ರಿಕೆಟ್ ಕಂಡಳಿ ನಡುವೆ ಕಿತ್ತಾಟ ಆರಂಭವಾಗಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಇದರಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು ಬಿಸಿಸಿಐ ವಾದವಾಗಿದರೆ, ಪಂದ್ಯಗಳು ನಡೆದರೆ ಅದು ಪಾಕ್ ನೆಲದಲ್ಲಿಯೇ ನಡೆಯಬೇಕು ಇಲ್ಲವಾದಲ್ಲಿ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಬಹಿಷ್ಕರಿಸುತ್ತೇಬವೆ ಎನ್ನುವುದು ಪಾಕ್ ಕ್ರಿಕೆಟ್ ಮಂಡಳಿಯ ಹಠವಾಗಿತ್ತು. ಇದೇ ವಿಚಾರವಾಗಿ ಉಭಯ ದೇಶಗಳ ಕ್ರಿಕೆಟ್ ಮಂಡಳಿ ತಿಕ್ಕಾಟ ನಡೆಸುಸುತ್ತಲೇ ಇತ್ತು.
ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಜತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಲವು ಸಭೆಗಳನ್ನು ನಡೆಸಿದರೂ ಯಾವುದೂ ಫಲಪ್ರದವಾಗಿರಲಿಲ್ಲ. ಅಂತಿಮವಾಗಿ ಪಾಕ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವ ಪ್ರಸ್ತಾವವನ್ನು ಐಸಿಸಿ ಮತ್ತು ಎಸಿಸಿ ಮಂಡಳಿ ಮುಂದಿಟ್ಟಿತ್ತು. ಆದರೆ ಇದಕ್ಕೂ ಬಿಸಿಸಿಐ ಕಟ್ಟಿ ಮುರಿದಂತೆ ನೋ ಎಂದಿತ್ತು. ಇದೇ ವೇಳೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೂ ಹೈಬ್ರಿಡ್ ಮಾದರಿಯನ್ನು ನಿರಾಕರಿಸಿತ್ತು. ಆದರೆ ಪಾಕ್ ಮಾತ್ರ ಇದ್ಯಾವುದಕ್ಕೂ ತಲೆಕಡೆಸಿಕೊಳ್ಳದೆ ಹೈಬ್ರಿಡ್ ಮಾದರಿಯ ಹೊರತು ನಾವು ಟೂರ್ನಿಯನ್ನು ಆಡುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ Asia Cup 2023 : ಪಾಕಿಸ್ತಾನ ತಂಡವನ್ನು ಹೊರಗಿಟ್ಟು ಏಷ್ಯಾ ಕಪ್ ಆಯೋಜಿಸಲು ಜಯ್ ಶಾ ಯೋಜನೆ
ಇದೀಗ ಬಂದ ಮಾಹಿತಿ ಪ್ರಕಾರ ಭಾರತ ಹೊರತುಪಡಿಸಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಸಿಸಿ ಅಧ್ಯಕ್ಷ ಜಯ್ ಶಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಒಮಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ, ಎಸಿಸಿ ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಪಂಕಜ್ ಖಿಮ್ಜಿ ಅವರಿಗೆ ಹೆಚ್ಚಿನ ದೇಶಗಳು ಹೈಬ್ರಿಡ್ ಮಾದರಿಯನ್ನು ನಿರಾಕರಿಸಿದ ಕಾರಣ ಇದಕ್ಕೆ ಸೂಕ್ತ ಪರಿಹಾರವನ್ನು ಹುಡುಕಿ ಕೊಡುವ ಜವಾಬ್ದಾರಿಯನ್ನು ವಹಿಸಲಾಯಿತು. ಇದೀಗ ನಾಲ್ಕು ಪಂದ್ಯಗಳು (ಪಾಕಿಸ್ತಾನ vs ನೇಪಾಳ, ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಅಫ್ಘಾನಿಸ್ತಾನ vs ಶ್ರೀಲಂಕಾ ಮತ್ತು ಶ್ರೀಲಂಕಾ vs ಬಾಂಗ್ಲಾದೇಶ) ಪಾಕಿಸ್ತಾನದ ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ಮತ್ತು ಪಾಕ್ ವಿರುದ್ದದ ಪಂದ್ಯಗಳು ಮತ್ತು ಉಳಿದ ಎಲ್ಲ ಸೂಪರ್ ಫೋರ್ ಪಂದ್ಯಗಳು ಲಂಕಾದ ಪಲ್ಲೆಕೆಲೆ ಅಥವಾ ಗಾಲೆಯಲ್ಲಿ ನಡೆಯಲಿದೆ ಎಂದು ಎಸಿಸಿ ಮಂಡಳಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ
ವಿಶ್ವ ಕಪ್ಗೆ ಯಾವುದೇ ಷರತ್ತು ಇಲ್ಲ
ಐಸಿಸಿ ಸಿಇಒ ಜೆಫ್ ಅಲಾರ್ಡೈಸ್ ಮತ್ತು ಚೇರ್ಮನ್ ಗ್ರೆಗ್ ಬಾರ್ಕ್ಲೇ ಕರಾಚಿಯಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರನ್ನು ಭೇಟಿ ಮಾಡಿದ ವೇಳೆ ಪಾಕಿಸ್ತಾನವು ವಿಶ್ವಕಪ್ಗೆ ಬರಲು ಯಾವುದೇ ಷರತ್ತುಗಳನ್ನು ಹಾಕುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.