Site icon Vistara News

Asian Games 2023: 2 ಅಂಕ ಹಿನ್ನಡೆಯಿಂದ ಐತಿಹಾಸಿಕ ಚಿನ್ನ ಕಳೆದುಕೊಂಡ ಅನಂತ್​ಜೀತ್; 60 ವರ್ಷದ ಅಲ್ರಾಶಿದಿಗೆ ಚಿನ್ನ

Anant Singh Naruka

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​ನ​ಲ್ಲಿ (Asian Games 2023) ಬುಧವಾರ ಭಾರತ ಶೂಟಿಂಗ್​ನಲ್ಲಿ ಶ್ರೇಷ್ಠ ಸಾಧನೆ ಮಾಡಿದೆ. ಒಂದೇ ದಿನ ಏಳು ಪದಕ ಗೆದ್ದ ಸಾಧನೆ ಮಾಡಿದೆ. ಪುರುಷರ ಶೂಟಿಂಗ್​ ಸ್ಕೀಟ್​ ಈವೆಂಟ್​ನಲ್ಲಿ(skeet event) ಅನಂತ್​ಜೀತ್ ಸಿಂಗ್ ನರುಕಾ(Anant Singh Naruka) ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಏಷ್ಯನ್​ ಗೇಮ್ಸ್​ ಇತಿಹಾಸದ ಈ ಈವೆಂಟ್​ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕವಾಗಿದೆ.

ಬುಧವಾರ ನಡೆದ ಪುರುಷರ ಶೂಟಿಂಗ್​ ಸ್ಕೀಟ್​ ಈವೆಂಟ್​ ಫೈನಲ್​ನಲ್ಲಿ 25ರ ಹರೆಯದ ಅನಂತ್ ಜೀತ್ ಸಿಂಗ್ ನರುಕಾ ಅವರಿಗೆ ಕೇವಲ 2 ಅಂಕಗಳ ಹಿನ್ನಡೆಯಿಂದ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿತು. ಒಲಂಪಿಕ್ ಪದಕ ವಿಜೇತ 60 ವರ್ಷದ ಕುವೈತ್‌ನ ಅಬ್ದುಲ್ಲಾ ಅಲ್ರಾಶಿದಿ(Abdullah Alrashidi) ಅವರು 60 ಅಂಕ ಪಡೆದು ಚಿನ್ನದ ಪದಕ ಗೆದ್ದರು. ಅನಂತ್ ಜೀತ್ ಸಿಂಗ್ 58 ಅಂಕ ಸಂಪಾದಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಸ್ಕೀಟ್-50 ತಂಡ ಪುರುಷರ ವಿಭಾಗ ಸ್ಫರ್ದೆಯಲ್ಲಿಯೂ ಅನಂತ್ ಜೀತ್ ಸಿಂಗ್ ಭಾಗವಹಿಸಿ ಕಂಚು ಗೆದ್ದಿದ್ದರು.

ಇದನ್ನೂ ಓದಿ Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

ಚಿನ್ನ ಗೆದ್ದ ಸಿಫ್ಟ್ ಕೌರ್ ಸಮ್ರಾ

ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್​ ವಿಭಾಗದ ಫೈನಲ್​ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಭಾರತಕ್ಕೆ ಐದನೇ ಚಿನ್ನದ ಪದಕವನ್ನು ತಂದುಕೊಟ್ಟರು. ಈ ಮೂಲಕ ಈ ವರ್ಷದ ಆರಂಭದಲ್ಲಿ ಬಾಕುವಿನಲ್ಲಿ ಗ್ರೇಟ್ ಬ್ರಿಟನ್​​ನ ಸಿಯೋನೈಡ್ ಮೆಕಿಂತೋಷ್ (467) ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದರು. ಸಿಫ್ಟ್ ಅವರು ಏಷ್ಯನ್ ದಾಖಲೆ ಮತ್ತು ಏಷ್ಯನ್ ಗೇಮ್ಸ್ ದಾಖಲೆಯನ್ನೂ ಮುರಿದಿದ್ದಾರೆ.

ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡದಿಂದ ಚಿನ್ನದ ಸಾಧನೆ

ಮುಂಜಾನೆ ವೇಳೆ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅದ್ಭುತ ಪ್ರದರ್ಶನ ನೀಡಿ ಎದುರಾಳಿಗಳನ್ನು ಅಚ್ಚರಿಗೊಳಿಸಿ ಭಾರತ ಚಿನ್ನ ಗೆದ್ದುಕೊಂಡಿದ್ದಾರೆ. ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಕರ್ ಅಗ್ರಸ್ಥಾನ ಪಡೆದರೆ ಇಶಾ ಐದನೇ ಸ್ಥಾನ ಮತ್ತು ರಿದಮ್ ಏಳನೇ ಸ್ಥಾನ ಪಡೆದುಕೊಂಡದರು.

ಭಾರತದ ಮಹಿಳಾ ಶೂಟಿಂಗ್ ತ್ರಿವಳಿಗಳಾದ ಸಿಫ್ಟ್ ಕೌರ್ ಸಾಮ್ರಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಅವರು 50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಏಷ್ಯನ್ ಗೇಮ್ಸ್ ನ ಈ ಆವೃತ್ತಿಯಲ್ಲಿ ಶೂಟಿಂಗ್​​ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಮತ್ತು ಒಟ್ಟಾರೆ 15ನೇ ಪದಕವಾಗಿದೆ. 

4ನೇ ದಿನದಾಟದಲ್ಲಿ ಭಾರತದ ಫಲಿತಾಂಶ ಪ್ರಕಟ

ವುಶು: ಪುರುಷರ ದಾವೋಶು ಫೈನಲ್​​ನಲ್ಲಿ ರೋಹಿತ್ ಜಾಧವ್ 8ನೇ ಸ್ಥಾನ

ಈಜು: ಮಹಿಳೆಯರ 100 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ನೀನಾ ವೆಂಕಟೇಶ್ 1:03:89 ಸಮಯದೊಂದಿಗೆ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು

ಮಹಿಳೆಯರ 100 ಮೀಟರ್ ಬ್ಯಾಕ್​ಸ್ಟ್ರೋಕ್​ ಹೀಟ್ಸ್​​ನಲ್ಲಿ ಮಾನಾ ಪಟೇಲ್ 13ನೇ ಸ್ಥಾನ ಪಡೆದರು.

ಫೆನ್ಸಿಂಗ್: 16ನೇ ಸುತ್ತಿನಲ್ಲಿ ಸಿಂಗಾಪುರ ವಿರುದ್ಧ 30-45 ಅಂತರದಲ್ಲಿ ಸೋತ ಭಾರತ ಪುರುಷರ ತಂಡ

ಸೈಕ್ಲಿಂಗ್: ರೊನಾಲ್ಡೊ ಸಿಂಗ್ 16ನೇ ಸುತ್ತಿನಲ್ಲಿ ಜಪಾನ್​​ನ ಶಿಂಜಿ ನಕಾನೊ ವಿರುದ್ಧ ಸೋತರು

ಸ್ಕ್ವಾಷ್: ಕುವೈತ್ ವಿರುದ್ಧ ಭಾರತಕ್ಕೆ 3-0 ಅಂತರದ ಗೆಲುವು.

Exit mobile version