Site icon Vistara News

Asian Games 2023: ಚಿನ್ನದ ಖಾತೆ ತೆರೆದ ಭಾರತ; ಶೂಟಿಂಗ್​ನಲ್ಲಿ ವಿಶ್ವ ದಾಖಲೆ

India 10m Men's Rifle Team

ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್(Asian Games 2023)​ ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಜಯಿಸಿದೆ. ಸೋಮವಾರ ನಡೆದ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಪುರುಷರ ತಂಡವು(India 10m Men’s Rifle Team) ಚಿನ್ನದ ಪದಕಕ್ಕೆ ಗುರಿ ಇರಿಸಿತು. ಜತೆಗೆ ವಿಶ್ವ ದಾಖಲೆಯನ್ನು ನಿರ್ಮಿಸಿದ ಸಾಧನೆ ಮಾಡಿದೆ.

ಫೈನಲ್​ನಲ್ಲಿ ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌(Rudrankksh Patil), ಒಲಿಂಪಿಯನ್ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ಭಾರತ ತಂಡವು 1893.7 ಅಂಕ ಸಂಪಾದಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಚೀನಾದ ವಿಶ್ವ ದಾಖಲೆ ಪತನ

ಇದೇ ವೇಳೆ ಭಾರತ ತಂಡ ಅರ್ಹತಾ ಸುತ್ತಿನಲ್ಲಿ 1893.7 ಅಂಕ ಪಡೆಯುವ ಮೂಲಕ ಚೀನಾ ಹೆಸರಿನಲ್ಲಿದ್ದ (1893.3 ಅಂಕ) ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಭಾರತದ ಈ ಸಾಧನೆ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಪದಕ ಬರವಸೆಯೊಂದನ್ನು ಮೂಡಿಸಿದೆ.

ಇದನ್ನೂ ಓದಿ Asian Games 2023: ಏಷ್ಯನ್‌ ಗೇಮ್ಸ್;‌ ಮೊದಲ ದಿನವೇ ಭಾರತ 5 ಪದಕ ಬೇಟೆ, ಇಲ್ಲಿದೆ ವಿಜೇತರ ಮಾಹಿತಿ

ರೋಯಿಂಗ್​ನಲ್ಲಿ ಕಂಚು

ಏತನ್ಮಧ್ಯೆ, ದಿನನ ಮತ್ತೊಂದು ಸ್ಪರ್ಧೆಯಾದ ಪುರುಷರ ನಾಲ್ಕು ರೋಯಿಂಗ್ ಸ್ಪರ್ಧೆಯಲ್ಲಿ ಭಾರತವು ಕಂಚಿನ ಪದಕವನ್ನು ಖಚಿತಪಡಿಸಿತು, ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ ಅವರು ಕ್ವಾರ್ಟೆಟ್ 6:10.81 ಸಮಯವನ್ನು ದಾಖಲಿಸಿ ಕಂಚಿನ ಪದಕ್ಕೆ ತೃಪ್ತಿಪಟ್ಟಿತು. ಭಾನುವಾರ ಭಾರತ 5 ಪದಕಗಳನ್ನು ಗೆದ್ದಿತ್ತು. ಸದ್ಯ ಭಾರತ ಒಟ್ಟು 7 ಪದಕ ಪಡೆದು ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆದಿದೆ.

ಭಾರತದ ಅಗ್ರ ಬಾಕ್ಸರ್‌ ನಿಖತ್‌ ಜರೀನ್‌ ವಿಯೆಟ್ನಾಂನ ಥಿ ಟಾಮ್‌ ಎನ್‌ಗುಯೆನ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಬಾಕ್ಸಿಂಗ್‌ ಸ್ಫರ್ಧೆಯಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್‌ ಕೂಡ ಕ್ವಾರ್ಟರ್‌ಫೈನಲ್‌ ಪ್ರವೇಶ ಪಡೆದಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಜರೀನ್‌ ಎರಡು ಬಾರಿಯ ಏಷ್ಯನ್‌ ಚಾಂಪಿಯನ್‌ ಆಗಿರುವ ಎನ್‌ಗುಯೆನ್‌ ಅವರನ್ನು ಸುಲಭವಾಗಿ ಮಣಿಸಿದರು. ಅಂತಿಮ 16ರ ಸುತ್ತಿನಲ್ಲಿ ಜರೀನ್‌ ಅವರು ದಕ್ಷಿಣ ಕೊರಿಯದ ಚೊರೋಂಗ್‌ ಬ್ಯಾಕ್‌ ಅವರ ಸವಾಲು ಎದುರಿಸಲಿದ್ದರೆ. ಪ್ರೀತಿ ಅವರ ಮುಂದಿನ ಎದುರಾಳಿ ಮೂರು ಬಾರಿ ವಿಶ್ವ ಪದಕ ವಿಜೇತೆ ಝೈನಾ ಶೇಖರ್‌ಬೆಕೋವಾ.

Exit mobile version