Site icon Vistara News

Asian Games 2023: ಶೂಟಿಂಗ್​ನಲ್ಲಿ ಚಿನ್ನ, ವುಶು ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತ

Shooters Win Sixth Gold

ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಗುರುವಾರ ಬೆಳಗ್ಗೆಯೇ ಭಾರತ ಚಿನ್ನ ಮತ್ತು ಬೆಳ್ಳಿ ಪದಕದ ಖಾತೆ ತೆರೆದಿದೆ. ಮೊದಲು ನಡೆದ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕವನ್ನು ಗೆದ್ದರೆ, ಆ ಬಳಿಕ ನಡೆದ ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಅರ್ಜುನ್‌ ಸಿಂಗ್‌ ಚೀಮಾ, ಸರಬ್‌ಜೋತ್‌ ಸಿಂಗ್‌, ಶಿವ ನರ್ವಾಲ್‌ ಚಿನ್ನ ಗೆದ್ದರು.

ಬುಧವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ರೋಶಿಬಿನಾ ದೇವಿ ವಿಯೆಟ್ನಾನ್‌ ಥಿ ತು ಎನ್‌ಗುಯೆನ್ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಫೈನಲ್‌ನಲ್ಲಿ ಚೀನಾದ ಕ್ಸಿಯಾವೊವಿ ವಿರುದ್ಧ ಪ್ರಬಲ ಪೈಪೋಟಿ ನೀಡಿದರೂ ಅಂತಿಮ ಹಂತದಲ್ಲಿ ಮಾಡಿದ ಕೆಲ ತಪ್ಪುಗಳಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟರು. ಸಂಧ್ಯಾರಾಣಿ ದೇವಿ ಅವರ ಬಳಿಕ ವುಶು ಸ್ಪ‍ರ್ಧೆಯಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ರೋಶಿಬಿನಾ ಪಾತ್ರರಾಗಿದ್ದರು. 2018ರಲ್ಲಿ ನಡೆದ ಜಕಾರ್ತಾ ಏಷ್ಯನ್ ಕ್ರೀಡಾಕೂಟದ 60 ಕೆ.ಜಿ ವಿಭಾಗದಲ್ಲಿ ರೊಶಿಬಿನಾ ಕಂಚಿನ ಪದಕವನ್ನು ಗೆದ್ದಿದ್ದರು. ಈ ಬಾರಿ ಬೆಳ್ಳಿ ಗೆದ್ದ ಸಾಧನೆ ಮಾಡಿದರು.

ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಒಟ್ಟು 1734 ಅಂಕಗಳಿಸಿ ಚಿನ್ನ ಗೆದ್ದಿತು. ಇದರಲ್ಲಿ ಸರಬ್‌ಜೋತ್‌ ಸಿಂಗ್‌ ವೈಯಕ್ತಿ ವಿಭಾಗದಲ್ಲಿ 580 ಅಂಕಗಳಿಸಿ ಮೊದಲ ಸ್ಥಾನಿಯಾದರು. ಅರ್ಜುನ್​ 578 ಅಂಕ ಸಂಪಾದಿಸಿದರು. ಒಟ್ಟಾರೆ ಭಾರತಕ್ಕೆ ಶೂಟಿಂಗ್​ನಲ್ಲಿ ಒಲಿದ ನಾಲ್ಕನೇ ಚಿನ್ನದ ಪದಕ ಇದಾಗಿದೆ. ಸದ್ಯ ಭಾರತದ ಪದಕ ಖಾತೆಯಲ್ಲಿ 24 ಪದಕಗಳು ಇವೆ.

ಇದನ್ನೂ ಓದಿ Asian Games 2023: ಕೇವಲ ಒಂದು ಅಂಕದ ಅಂತರದಲ್ಲಿ ವಿಷ್ಣು​ಗೆ ಕೈತಪ್ಪಿದ ಬೆಳ್ಳಿ ಪದಕ

ಬುಧವಾರ 8 ಪದಕ ಒಲಿದಿತ್ತು

ಬುಧವಾರ ನಡೆದ ಸ್ಪರ್ಧೆಯಲ್ಲಿ ಭಾರತ ಒಟ್ಟು 8 ಪದಕವನ್ನು ಜಯಿಸಿತ್ತು. ಇದರಲ್ಲಿ ಬಹುಪಾಲು ಪದಕ ಶೂಟಿಂಗ್​ ವಿಭಾದಗಿಂದಲೇ ಬಂದಿದ್ದವು. ಪುರುಷರ ಶೂಟಿಂಗ್​ ಸ್ಕೀಟ್​ ಈವೆಂಟ್​ನಲ್ಲಿ(skeet event) ಅನಂತ್​ಜೀತ್ ಸಿಂಗ್ ನರುಕಾ(Anant Singh Naruka) ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್​ ವಿಭಾಗದ ಫೈನಲ್​ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಚಿನ್ನ, ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಚಿನ್ನ ಗೆದ್ದ ಸಾಧನೆ ಮಾಡಿದರು.  50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ  ಮಹಿಳಾ ಶೂಟಿಂಗ್ ತ್ರಿವಳಿಗಳಾದ ಸಿಫ್ಟ್ ಕೌರ್ ಸಾಮ್ರಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು.

ಪುರುಷರ ಡಿಂಗಿ ಐಎಲ್‌ಸಿಎ-7(ಸೈಲಿಂಗ್​) ಸ್ಪರ್ಧೆಯಲ್ಲಿ ಭಾರತದ ನಾವಿಕ ವಿಷ್ಣು ಸರವಣನ್(Vishnu Saravanan) ಕಂಚಿನ ಪದಕ ಗೆದ್ದಿದ್ದರು.

Exit mobile version