ಹ್ಯಾಂಗ್‌ಝೂ: ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತವನ್ನು ಸಂಘಟಿತ ಬೌಲಿಂಗ್ ದಾಳಿಯ ಮೂಲಕ ನಿಯಂತ್ರಿಸಿ ಲಂಕಾ ವಿರುದ್ಧ ರೋಚಕ 19 ರನ್ಗಳ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 16 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಾರ್ಡ್ ಹಿಟ್ಟರ್ ಶಫಾಲಿ ವರ್ಮ 9 ರನ್ಗೆ ಆಟ ಮುಗಿಸಿದರು. ಆದರೆ ದ್ವಿತೀಯ ವಿಕೆಟ್ಗೆ ಆಡಲಿಳಿದ ಜೆಮಿಮಾ ರೋಡ್ರಿಗಸ್ ಅವರು ಸ್ಮೃತಿ ಮಂಧಾನ ಜತೆ ಸೇರಿಕೊಂಡು ತಾಳ್ಮೆಯುತ ಆಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮಂಧಾನ ಮತ್ತು ರೋಡ್ರಿಗಸ್ ದ್ವಿತೀಯ ವಿಕೆಟ್ಗೆ 73 ರನ್ಗಳ ಜತೆಯಾಟ ನಡೆಸಿತು. ಉಭಯ ಆಟಗಾರ್ತಿಯರ ಈ ಅತ್ಯಮೂಲ್ಯ ಜತೆಯಾಟದ ನೆರೆವಿನಿಂದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 116 ರನ್ ಬಾರಿಸಿತು.
ಸುಲಭ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾಗೆ ಟಿಟಾಸ್ ಸಾಧು ತಾನೆಸೆದ ಮೊದಲ ಓವರ್ನಲ್ಲಿಯೇ ಅವಳಿ ಆಘಾತವಿಕ್ಕಿದರು. ಬ್ಯಾಕ್ಟು ಬ್ಯಾಕ್ 2 ವಿಕೆಟ್ ಕೆಡವಿ ಲಂಕಾಗೆ ಶಾಕ್ ನೀಡಿದರು. ಇದು ಮೇಡನ್ ಓವರ್ ಕೂಡ ಆಯಿತು. ಇಲ್ಲಿಗೆ ಸುಮ್ಮನಾಗದ ಅವರು ಮುಂದಿನ ಓವರ್ನಲ್ಲಿ ನಾಯಕಿ ಚಾಮರಿ ಅಟಪಟ್ಟು ವಿಕೆಟ್ ಕಿಳುವಲ್ಲಿ ಯಶಸ್ವಿಯಾದರು. ಲಂಕಾ 14 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರೋಚಕ ಗೆಲುವು ಸಾಧಿಸಿದ ಭಾರತ
ಲಂಕಾ ಆರಂಭಿಕ ಆಘಾತ ಕಂಡರೂ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಹಾಸಿನಿ ಪೆರೇರಾ(25) ಮತ್ತು ನೀಲಾಕ್ಷಿ ಡಿ ಸಿಲ್ವಾ(23) ಉತ್ತಮ ಹೋರಾಟವೊಂದನ್ನು ಸಂಘಟಿಸಿ ಒಂದು ಹಂತದಲ್ಲಿ ಭಾರತದ ಗೆಲುವನ್ನು ಕಸಿಯುವ ಸೂಚನೆ ನೀಡಿದರು. ಇನ್ನೇನು ಲಂಕಾ ಗೆದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂಜಾ ವಸ್ತ್ರಾಕರ್ ಉಭಯ ಆಟಗಾರ್ತಿಯರ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಇಲ್ಲಿಂದ ಭಾರತದ ಕೈ ಮೇಲಾಯಿತು. 2 ವಿಕೆಟ್ ಕೈಯಲ್ಲಿದ್ದರೂ ಲಂಕಾಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 97 ರನ್ ಗಳಿಶಲಷ್ಟೇ ಶಕ್ತವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕೌರ್ ಪಡೆ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಬಾಂಗ್ಲಾದೇಶ ಕಂಚು ಗೆದಿತು. ಸೋಮವಾರ ಭಾರತಕ್ಕೆ ಲಭಿಸಿದ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಶೂಟಿಂಗ್ನಲ್ಲಿ ಪುರುಷರ ತಂಡ ಚಿನ್ನದ ಪದಕ ಖಾತೆಯನ್ನು ತೆರೆದಿತ್ತು.
ಇದನ್ನೂ ಓದಿ Asian Games 2023: ಏಷ್ಯನ್ ಗೇಮ್ಸ್ನಲ್ಲಿ ಮುಂದುವರಿದ ಶೂಟರ್ಗಳ ಪದಕ ಬೇಟೆ
ಮೂರನೇ ಬಾರಿ ಕ್ರಿಕೆಟ್ ಸ್ಪರ್ಧೆ
ಕ್ರಿಕೆಟ್ ಸ್ಪರ್ಧೆ ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಪದಕ ಸ್ಪರ್ಧೆಯಾಗಿ ಕೇವಲ ಎರಡು ಸಲ ಮಾತ್ರ ನಡೆದಿತ್ತು. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ನಡೆದಿದ್ದ ಟೂರ್ನಿಯಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಪುರುಷರ ತಂಡ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು. ಮೂರನೇ ಬಾರಿ ನಡೆದ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ತನ್ನ ಚೊಚ್ಚಲ ಪ್ರಯತ್ನದಲ್ಲೇ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
INDIA WOMEN'S TEAM HAVE WON THE GOLD MEDAL IN ASIAN GAMES 2023…!!!!🇮🇳
— CricketMAN2 (@ImTanujSingh) September 25, 2023
What a Historic Moment, India won the Gold medal in Cricket in Asian Games – TEAM INDIA CREATED HISTORY. pic.twitter.com/9kcKFTFrKo
ಹರ್ಮನ್‌ಪ್ರೀತ್ ಕೌರ್ ವಿಫಲ
ಭಾರತ ಪರ ಸ್ಮೃತಿ ಮಂಧಾನ (46) ಮತ್ತು ಜೆಮಿಮಾ ರೋಡ್ರಿಗಸ್(42) ಹೊರತುಪಡಿಸಿ ಉಳಿದ ಯಾವುದೇ ಆಟಗಾರ್ತಿಯರು ಕೂಡ ಎರಡಂಕಿ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಎಲ್ಲರದ್ದು ಸಿಂಗಲ್ ಡಿಜಿಡ್. ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಅಂಪೈರ್ಗಳ ಗುಣಮಟ್ಟದ ಬಗ್ಗೆ ಬಹಿರಂಗವಾಗಿಯೇ ಟೀಕೆ ವ್ಯಕ್ತಪಡಿಸಿ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಕೇವಲ 2 ರನ್ ಗಳಿಸಿ ನಿರಾಸೆ ಮೂಡಿಸಿದರು.