ಹೈದರಾಬಾದ್: ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಹೈದರಾಬಾದ್ಗೆ ಬಂದಿಳಿದಿದೆ. ಆದರೆ ಪಾಕಿಸ್ತಾನ(Pakistan Team) ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು ಇದೀಗ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಕೇಸರಿ ಸಾಲು ಹಾಕಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಭಾರಿ ಬಿಗಿ ಭದ್ರತೆಯೂ ಮಾಡಲಾಗಿತ್ತು. ಪಾಕ್ ಆಟಗಾರರು ಕೇಸರಿ ಶಾಲು ಧರಿಸಿದ ಫೋಟೊ ಮತ್ತು ವಿಡಿಯೊ ಇದೀಗ ವೈರಲ್ ಆಗಿದೆ. ಪಾಕ್ ತಂಡದ ನಾಯಕ ಬಾಬರ್ ಅಜಂ ಅವರನ್ನು ನೆಟ್ಟಿಗರು ತೆಲಂಗಾಣದ ಯುವ ಬಿಜೆಪಿ ಯುವ ಘಟಕದ ನಾಯಕ ಎಂದು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ ICC World Cup: ವಿಶ್ವ ಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ; ಭಾರತಕ್ಕೆ ಇಂಗ್ಲೆಂಡ್ ಮೊದಲ ಎದುರಾಳಿ
ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿತು. 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ವೀಸಾ ಸಮಸ್ಯೆ ಎದುರಿಸಿದ್ದ ಪಾಕ್
ಪಾಕಿಸ್ತಾನ ತಂಡ ಕೆಲವು ದಿನಗಳ ಹಿಂದೆಯೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದ ಪ್ರಯಾಣ ಅಸಾಧ್ಯವಾಗಿತ್ತು. ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ವಿಶ್ವಕಪ್ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಸೋಮವಾರ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡುವ ವ್ಯವಸ್ಥೆ ಮಾಡಿತ್ತು.
Babar Azam gets a warm welcome in Hyderabad. pic.twitter.com/AZBCLPToH8
— Mufaddal Vohra (@mufaddal_vohra) September 27, 2023
ಭಾರತ-ಪಾಕ್ ಮುಖಾಮುಖಿ
ಈ ಮಹತ್ವದ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್ ಪಂದ್ಯಗಳೆರಡು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತ ಮತ್ತು ಪಾಕ್ ನಡುವಣ ಹೈವೋಲ್ಟೇಜ್ ಕದನ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಖಾಲಿ ಸ್ಟೇಡಿಯಂನಲ್ಲಿ ಪಾಕ್ ಅಭ್ಯಾಸ ಪಂದ್ಯ
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಶುಕ್ರವಾರ (ಸೆಪ್ಟೆಂಬರ್ 29) ಕಿವೀಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ಈಗಾಗಲೇ ತಿಳಿಸಿದೆ. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿದ್ದರು .ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.