Site icon Vistara News

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Thailand Open 2024

Satwiksairaj Rankireddy-Chirag Shetty

ಬ್ಯಾಂಕಾಕ್‌: ಭಾರತದ ಸ್ಟಾರ್‌ ಡಬಲ್ಸ್‌ ಬ್ಯಾಡ್ಮಿಂಟನ್​ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy-Chirag Shetty) ಪ್ಯಾರಿಸ್​ ಒಲಿಂಪಿಕ್ಸ್​ ಟೂರ್ನಿ ಆರಂಭಕ್ಕೂ ಮುನ್ನವೇ ಶ್ರೇಷ್ಠ ಪ್ರದರ್ಶನವೊಂದನ್ನು ನೀಡಿದ್ದಾರೆ. ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಏಕಪಕ್ಷೀಯವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಏಷ್ಯಾಡ್‌ ಚಾಂಪಿಯನ್‌ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ ಬೊ ಯಾಂಗ್‌-ಲಿಯು ಯಿ(Chen Bo Yang-Liu Yi) ವಿರುದ್ಧ 21-15, 21-15 ನೇರ ಗೇಮ್​ಗಳಿಂದ ಹಿಮ್ಮೆಟಿಸಿದರು. ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್‌- ಸಾತ್ವಿಕ್‌ ಜೋಡಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ-ಟಾಂಗ್‌ ಕೈ ವೀ ವಿರುದ್ಧವೂ 21-11, 21-12 ಅಂತರದ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಕೆಲವು ವಾರಗಳ ಹಿಂದೆ ನಡೆದಿದ್ದ ಥಾಮಸ್‌ ಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದ ಚಿರಾಗ್​-ಸಾತ್ವಿಕ್​ ಜೋಡಿ ಇದೀಗ ಮರಳಿ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪದಕವೊಂದನ್ನು ಗೆಲ್ಲುವ ನೆಚ್ಚಿನ ಜೋಡಿಯಾಗಿ ಭರವಸೆ ಮೂಡಿಸಿದೆ.

ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಕರ್ನಾಟಕ ಮೂಲದ ಚಿರಾಗ್‌ ಶೆಟ್ಟಿ ಜೋಡಿಗೆ ಇದೇ ವರ್ಷ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಈ ಜೋಡಿಯದ್ದಾಗಿದೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಆದರೆ, ಚಿರಾಗ್‌-ಸಾತ್ವಿಕ್‌ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದರು.

ಇದನ್ನೂ ಓದಿ Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಡಕ್ಕೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು(PV Sindhu) ಸೇರಿ 7 ಭಾರತೀಯ ಶಟ್ಲರ್​ಗಳು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೂ ಒಲಿಂಪಿಕ್ಸ್​ ಟಿಕೆಟ್​ ಲಭಿಸಿದೆ.

ಅರ್ಹತೆ ಪಡೆದ ಶಟ್ಲರ್​ಗಳು

ಪಿವಿ ಸಿಂಧು, ಲಕ್ಷ್ಯ ಸೇನ್, ಎಚ್ ಎಸ್ ಪ್ರಣಯ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Exit mobile version